ಗುರುವಾರ , ಸೆಪ್ಟೆಂಬರ್ 23, 2021
22 °C

'ಟಿಬೆಟಿಯನ್ ನೀತಿ ಮತ್ತು ಬೆಂಬಲ ಕಾಯ್ದೆ 2020'ಕ್ಕೆ ಡೊನಾಲ್ಡ್ ಟ್ರಂಪ್ ಸಹಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಟಿಬಿಟ್‌ನಲ್ಲಿ ಅಮೆರಿಕದ ದೂತಾವಾಸ ಕಚೇರಿ ಸ್ಥಾಪನೆ ಹಾಗೂ ಚೀನಾದ ಹಸ್ತಕ್ಷೇಪವಿಲ್ಲದೆ ದಲೈ ಲಾಮಾ ಅವರ ಉತ್ತರಾಧಿಕಾರಿಯನ್ನು ಟಿಬೆಟ್‌ನ ಬೌದ್ಧ ಸಮುದಾಯವೇ ನೇಮಕ ಮಾಡಿಕೊಳ್ಳುವಂತೆ ಖಾತ್ರಿಪಡಿಸುವ ಮಸೂದೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ.

ಟಿಬೆಟ್‌ ನೀತಿ ಮತ್ತು ಬೆಂಬಲ ಕಾಯ್ದೆ 2020ರಲ್ಲಿ ಟಿಬೆಟ್‌ಗೆ ಸಂಬಂಧಿಸಿದ ಹಲವು ಯೋಜನೆ ಮತ್ತು ನಿಬಂಧನೆಗಳಿಗೆ ತಿದ್ದುಪಡಿ ತರಲಾಗಿದೆ. ಚೀನಾ ವಿರೋಧದ ಹೊರತಾಗಿಯೂ, ಕಳೆದ ವಾರ ಅಮೆರಿಕದ ಸೆನೆಟ್‌ ಈ ಮಸೂದೆಗೆ ಸರ್ವಾನುಮತದ ಒಪ್ಪಿಗೆ ನೀಡಿತ್ತು. ಇದು ₹169.09 ಲಕ್ಷ ಕೋಟಿ ಮೊತ್ತದ ಕೋವಿಡ್‌–19 ಪರಿಹಾರ ಪ್ಯಾಕೆಜ್‌ನ ಭಾಗವಾಗಿದೆ.

ಟಿಬೆಟ್‌ನಲ್ಲಿ ಟಿಬೆಟ್‌ ಸಮುದಾಯದ ಬೆಂಬಲವಾಗಿರುವ ಸರ್ಕಾರೇತರ ಸಂಸ್ಥೆಗಳಿಗೆ ನೆರವು ನೀಡಲು ಈ ಕಾಯ್ದೆಯು ಅಧಿಕಾರವನ್ನು ನೀಡಲಿದೆ. ಜೊತೆಗೆ, ಟಿಬೆಟ್‌ನಲ್ಲಿ ಅಮೆರಿಕದ ದೂತಾವಾಸ ಕಚೇರಿ ನಿರ್ಮಾಣಕ್ಕೆ ಚೀನಾ ಅನುಮತಿ ನೀಡುವವರೆಗೂ, ಅಮೆರಿಕದಲ್ಲಿ ಚೀನಾದ ಹೊಸ ದೂತಾವಾಸ ಕಚೇರಿ ಸ್ಥಾಪನೆಗೆ ನಿರ್ಬಂಧವನ್ನು ಹೇರುತ್ತದೆ. ದಲೈ ಲಾಮಾ ಅವರ ಉತ್ತರಾಧಿಕಾರಿಯನ್ನು ಟಿಬೆಟ್‌ನ ಬೌದ್ಧ ಸಮುದಾಯವೇ ನೇಮಕ ಮಾಡಿಕೊಳ್ಳುವಂತೆ ಖಾತ್ರಿಪಡಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನೂ ಟಿಬೆಟ್‌ ವಿಷಯಗಳ ಕುರಿತ ಅಮೆರಿಕದ ವಿಶೇಷ ಸಂಯೋಜಕ ಕಚೇರಿಗೆ ಈ ಕಾನೂನು ನೀಡಿದೆ. ಉತ್ತರಾಧಿಕಾರಿ ನೇಮಕ ವಿಷಯದಲ್ಲಿ ಮಧ್ಯಪ್ರವೇಶಿಸುವ ಚೀನಾದ ಅಧಿಕಾರಿಗಳಿಗೆ ನಿರ್ಬಂಧ ಹೇರುವುದರ ಕುರಿತೂ ಕಾಯ್ದೆಯಲ್ಲಿ ಉಲ್ಲೇಖವಿದೆ.

ಜೊತೆಗೆ ಹಲವು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಈ ಕಚೇರಿಗೆ ₹7 ಕೋಟಿ ಅನುದಾನಕ್ಕೂ ಕಾಯ್ದೆ ಒಪ್ಪಿಗೆ ನೀಡಿದೆ. ವಿದ್ಯಾರ್ಥಿ ವೇತನಕ್ಕಾಗಿ ₹4.96 ಕೋಟಿ, ಚೀನಾದಲ್ಲಿರುವ ಟಿಬೆಟ್‌ ಸ್ವಾಯತ್ತ ಪ್ರದೇಶ ಹಾಗೂ ಸಮುದಾಯಕ್ಕಾಗಿ ₹58.83 ಕೋಟಿ, ಭಾರತದಲ್ಲಿ ವಾಸಿಸುತ್ತಿರುವ ಟಿಬೆಟ್‌ ಜನರಿಗಾಗಿ ₹44.12 ಕೋಟಿ ಹಾಗೂ ಟಿಬೆಟ್‌ ಆಡಳಿತಕ್ಕೆ ₹22.06 ಕೋಟಿ ಅನುದಾನಕ್ಕೆ ಕಾಯ್ದೆ ಒಪ್ಪಿಗೆ ನೀಡಿದೆ.

ತೈವಾನ್‌, ಟಿಬೆಟ್‌ಗೆ ನೆರವು: ಚೀನಾ ಮುನಿಸು

ಬೀಜಿಂಗ್‌: ತೈವಾನ್‌ ಹಾಗೂ ಟಿಬೆಟ್‌ಗೆ ಆರ್ಥಿಕ ನೆರವಿನ ಮುಖಾಂತರ ಮತ್ತಷ್ಟು ಬೆಂಬಲ ನೀಡಿದ ಅಮೆರಿಕದ ನಿರ್ಧಾರಕ್ಕೆ ಚೀನಾ ಕುಪಿತಗೊಂಡಿದೆ. ‘ತೈವಾನ್‌ ಅಶ್ಯುರೆನ್ಸ್‌ ಕಾಯ್ದೆ ಹಾಗೂ ಟಿಬೆಟ್‌ ನೀತಿ ಮತ್ತು ಬೆಂಬಲ ಕಾಯ್ದೆಯನ್ನು ಚೀನಾ ವಿರೋಧಿಸುತ್ತದೆ. ತನ್ನ ರಾಷ್ಟ್ರೀಯ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಚೀನಾ ಸರ್ಕಾರದ ದೃಢಸಂಕಲ್ಪವು ನಿಶ್ಚಲವಾಗಿದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾಓ ಲಿಜಿಯಾನ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು