ಕರಾಚಿ : ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಶುಕ್ರವಾರ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಪಾಕಿಸ್ತಾನಿ ಸೇನಾ ಅಧಿಕಾರಿಗಳು ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಪ್ರಾಂತ್ಯದ ಕೊಹ್ಲು ಪ್ರದೇಶದಲ್ಲಿರುವ ಭದ್ರತಾ ಘಟಕದ ಸಮೀಪದಲ್ಲಿ ಐಇಡಿ ಸ್ಫೋಟಗೊಂಡಿದ್ದು, ಸೇನೆಯ ಸೇವೆಯಲ್ಲಿರುವ ಮೇಜರ್ ಮತ್ತು ಕ್ಯಾಪ್ಟನ್ ಸಾವಿಗೀಡಾಗಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಉಗ್ರ ಸಂಘಟನೆ ಕಳೆದ ವರ್ಷ ಸರ್ಕಾರದೊಂದಿಗೆ ಕದನ ವಿರಾಮವನ್ನು ರದ್ದುಗೊಳಿಸಿದ ನಂತರ ಬಲೂಚಿಸ್ತಾನ್ ಮತ್ತು ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳು ಗಣನೀಯವಾಗಿ ಏರಿಕೆಯಾಗಿವೆ.
ಅಧಿಕೃತ ವರದಿ ಪ್ರಕಾರ, 2023ರ ಜನವರಿಯಲ್ಲಿ ಪಾಕಿಸ್ತಾನದಲ್ಲಿ ಉಗ್ರರ ದಾಳಿಯಿಂದ ಗರಿಷ್ಠ ಸಾವು ನೋವು ಸಂಭವಿಸಿದೆ. 2018ರಿಂದ ಈವರೆಗೆ ಕನಿಷ್ಠ 134 ಜನರು ಸಾವಿಗೀಡಾಗಿದ್ದು, 44 ಭಯೋತ್ಪಾದಕ ದಾಳಿಗಳು ನಡೆದಿವೆ.
ಕಳೆದ ವಾರ, ಗ್ವಾದರ್ ಜಿಲ್ಲೆಯ ಜಿವಾನಿ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಉಗ್ರಗಾಮಿಗಳು ನಡೆಸಿದ್ದ ದಾಳಿಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಸಾವಿಗೀಡಾಗಿದ್ದು, ಏಳು ಮಂದಿ ಗಾಯಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.