ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ಸೋಂಕಿಗಿಂತ ಶಾಲೆ ತಪ್ಪಿಸುವುದು ಹೆಚ್ಚು ಅಪಾಯ

ಬ್ರಿಟನ್ ಸರ್ಕಾರದ ಆರೋಗ್ಯ ಸಲಹೆಗಾರರ ಅಭಿಮತ
Last Updated 23 ಆಗಸ್ಟ್ 2020, 10:55 IST
ಅಕ್ಷರ ಗಾತ್ರ

ಲಂಡನ್:‘ಮಕ್ಕಳಿಗೆ ಕೋವಿಡ್‌ ಸೋಂಕಿನಿಂದಾಗುವ ಪರಿಣಾಮಕ್ಕಿಂತ, ಶಿಕ್ಷಣದಿಂದ ವಂಚಿತರಾದರೆ ಆಗುವ ಪರಿಣಾಮ ಬಹಳ ದೊಡ್ಡದು ಎಂದು ಎಚ್ಚರಿಸಿರುವ ಬ್ರಿಟನ್‌ನ ಮುಖ್ಯ ವೈದ್ಯಾಧಿಕಾರಿಗಳು, ಬೇಸಿಗೆ ರಜೆ ಮುಗಿದ ಕೂಡಲೇ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹೋಗುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ ಇಂಗ್ಲೆಂಡ್‌, ಸ್ಕಾಟ್‌ಲೆಂಟ್‌, ವೇಲ್ಸ್‌ ಮತ್ತು ಉತ್ತರ ಐರ್ಲೆಂಡ್‌ ರಾಷ್ಟ್ರಗಳ ಪ್ರಮುಖ ಆರೋಗ್ಯ ಸಲಹೆಗಾರರು ಬ್ರಿಟನ್‌ ಸರ್ಕಾರಕ್ಕೆ ನೀಡಿರುವ ಜಂಟಿ ಸಲಹೆಯಿಂದ ಉತ್ತೇಜನಗೊಂಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌, ’ಮಕ್ಕಳು ಶಾಲೆಗೆ ಹೋಗುವುದು ಒಂದು ರಾಷ್ಟ್ರೀಯ ಆದ್ಯತೆಯಾಗಬೇಕು’ ಎಂದು ಪ್ರತಿಪಾದಿಸಿದ್ದಾರೆ.

‘ಕೋವಿಡ್ 19 ಸೋಂಕಿನ ಕಾರಣಕ್ಕಾಗಿ ಬೆರಳೆಣಿಕೆಯಷ್ಟು ಬಾಲಕರು ಅಥವಾ ಯುವಕ–ಯುವತಿಯರು ಶಾಲೆಯಿಂದ ಹೊರಗುಳಿಯಬಹುದು. ಇದರಿಂದ ದೊಡ್ಡ ಪರಿಣಾಮವಾಗುವುದಿಲ್ಲ. ಆದರೆ, ಶಾಲೆ ಮುಚ್ಚುವುದರಿಂದ ಬಹುಸಂಖ್ಯಾತ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ದೀರ್ಘಕಾಲಿಕ ಪರಿಣಾಮ ಎದುರಿಸುವುದನ್ನು ತಪ್ಪಿಸಬೇಕಾಗಿದೆ’ ಎಂದು ಮುಖ್ಯ ವೈದ್ಯಾಧಿಕಾರಿಗಳು ನೀಡಿರುವ ಸಲಹೆಯಲ್ಲಿ ಉಲ್ಲೇಖಿಸಿದ್ದಾರೆ.

ಈಗಾಗಲೇ ಲಭ್ಯವಿರುವ ವೈದ್ಯಕೀಯ ಪುರಾವೆಗಳ ಪ್ರಕಾರ ಮಕ್ಕಳು ಮತ್ತು ಯುವ ಜನತೆ ಶಾಲೆ–ಕಾಲೇಜಿಗೆ ಹೋಗದಿರುವುದರಿಂದ ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತಿದೆ. ಅವಕಾಶಗಳೂ ಕಡಿಮೆಯಾಗುತ್ತಿವೆ. ಇದರಿಂದ ಮಕ್ಕಳು ಮತ್ತು ಯುವಜನತೆಯಲ್ಲಿ ಭೌತಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಇಲ್ಲಿಯವರೆಗಿನ ಮಾಹಿತಿ ಪ್ರಕಾರ,ಕೋವಿಡ್‌ ಸೋಂಕಿತರಾಗುವ ಮಕ್ಕಳ ಸಂಖ್ಯೆ ತುಂಬಾ ಕಡಿಮೆ. ಒಂದೊಮ್ಮೆ ಮಕ್ಕಳು ಕೋವಿಡ್‌ ಸೋಂಕಿಗೆ ತುತ್ತಾಗಿದ್ದರೂ ಸಾವಿನ ಪ್ರಮಾಣವೂ ಅತಿ ಕಡಿಮೆ ಇದೆ.

‘ಹೀಗಾಗಿಸೆಪ್ಟೆಂಬರ್ ತಿಂಗಳಲ್ಲಿ ಶಾಲೆಗಳನ್ನು ಪುನರಾರಂಭ ಮಾಡುವುದರಿಂದ ಸಾಮಾಜಿಕ, ಆರ್ಥಿಕ ಮತ್ತು ನೈತಿಕವಾಗಿ ಒಳ್ಳೆಯದು’ ಎಂದು ಹೇಳಿರುವ ಪ್ರಧಾನಿ ಜಾನ್ಸನ್‌, ‘ಇದರಿಂದ ಸಾಂಕ್ರಾಮಿಕ ರೋಗದ ನಡುವೆಯೂ ಸುರಕ್ಷಿತವಾಗಿ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT