ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿಯಾದಿಂದಲೂ ಸೇನೆ ಹಿಂದಕ್ಕೆ: ರಷ್ಯಾ

ಉಕ್ರೇನ್‌ನಿಂದ ’ಏಕತಾ ದಿನ’; ರ‍್ಯಾಲಿಗಳ ಆಯೋಜನೆ
Last Updated 16 ಫೆಬ್ರುವರಿ 2022, 11:18 IST
ಅಕ್ಷರ ಗಾತ್ರ

ಕೀವ್‌: ಕ್ರಿಮಿಯಾದಲ್ಲಿ ಕೈಗೊಂಡಿದ್ದ ಯುದ್ಧ ತಾಲೀಮು ಮುಕ್ತಾಯವಾಗಿದ್ದು, ಸೇನಾ ತುಕಡಿಗಳು ತಮ್ಮ ನೆಲೆಗಳಿಗೆ ವಾಪಸ್‌ ಆಗುತ್ತಿವೆ ಎಂದು ರಷ್ಯಾ ಬುಧವಾರ ಹೇಳಿದೆ.

‘ನ್ಯಾಟೊ ಪಡೆಗಳನ್ನು ಸೇರಬೇಕು ಎಂಬ ತನ್ನ ಮಹತ್ವಾಕಾಂಕ್ಷೆಯಿಂದ ಉಕ್ರೇನ್‌ ಹಿಂದೆ ಸರಿಯಬೇಕು’ ಎಂದುರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ.

ಪೂರ್ವ ಯುರೋಪ್‌ನ ಭದ್ರತೆಯು ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಭಾವದಿಂದ ಮುಕ್ತವಾಗಬೇಕು ಎಂಬ ತಮ್ಮ ನಿಲುವನ್ನು ಸಹ ಅವರು ಪುನರುಚ್ಚರಿಸಿದ್ದಾರೆ.

ಟ್ಯಾಂಕ್‌ಗಳು, ಸೇನಾ ವಾಹನಗಳು ಹಾಗೂ ಶಸ್ತ್ರಾಸ್ತ್ರಗಳನ್ನು ರೈಲು ಮೂಲಕ ಕ್ರಿಮಿಯಾದಿಂದ ಸಾಗಿಸಲಾಗುತ್ತಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

ಆದರೆ, ರಷ್ಯಾದ ದಾಳಿ ಬೆದರಿಕೆಗೆ ಬಗ್ಗುವುದಿಲ್ಲ ಎಂದಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ದೇಶದಾದ್ಯಂತ ‘ಏಕತಾ ದಿನ’ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ. ರಾಷ್ಟ್ರ ಧ್ವಜದೊಂದಿಗೆ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಜನರು, ರಾಷ್ಡ್ರಗೀತೆ ಹಾಡಿ ಒಗ್ಗಟ್ಟು ಪ್ರದರ್ಶಿಸಿದರು.

ರಷ್ಯಾದ ಈ ನಡೆಯಿಂದಾಗಿ ಉಕ್ರೇನ್‌ ಗಡಿಯಲ್ಲಿ ಸೃಷ್ಟಿಯಾಗಿದ್ದ ಉದ್ವಿಗ್ನತೆ ಮತ್ತಷ್ಟೂ ತಗ್ಗಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 2014ರಲ್ಲಿ ಉಕ್ರೇನ್‌ನ ಕ್ರಿಮಿಯಾ ಪ್ರದೇಶವನ್ನು ರಷ್ಯಾ ಆಕ್ರಮಿಸಿಕೊಂಡಿದೆ.

ರಷ್ಯಾಕ್ಕೆ ತಕ್ಕ ಉತ್ತರ: ಬೈಡನ್‌

ವಾಷಿಂಗ್ಟನ್(ಪಿಟಿಐ): ಉಕ್ರೇನ್‌ ಗಡಿಯಿಂದ ತನ್ನ ಸೇನಾ ತುಕಡಿಗಳನ್ನು ವಾಪಸ್‌ ಕರೆಸಿಕೊಂಡಿರುವ ರಷ್ಯಾದ ಹೇಳಿಕೆಗಳನ್ನು ಪರಿಶೀಲನೆಗೆ ಒಳಪಡಿಸಲು ಸಾಧ್ಯವಿರುವ ಮತ್ತಷ್ಟು ಸಾಕ್ಷ್ಯಗಳ ಅಗತ್ಯವಿದೆ ಎಂದು ಅಮೆರಿಕ ಪ್ರತಿಕ್ರಿಯಿಸಿದೆ.

‘ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸುವ ಅಪಾಯ ಇನ್ನೂ ಕೊನೆಯಾಗಿಲ್ಲ. ದಾಳಿಯ ಸಾಧ್ಯತೆಗಳು ಇನ್ನೂ ಇವೆ ಎಂಬುದಾಗಿ ನಮ್ಮ ತಜ್ಞರು ಹೇಳಿದ್ದಾರೆ. ಹೀಗಾಗಿ ಉಕ್ರೇನ್‌ ಮೇಲೆ ನಡೆಯುವ ಯಾವುದೇ ದಾಳಿಗೆ ತಕ್ಕ ಉತ್ತರ ನೀಡಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT