ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟ್ಯಾನ್‌ ಸ್ವಾಮಿ ಸಾವು 'ಮಹಾ ದುರಂತ': ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ಕಳವಳ

Last Updated 6 ಜುಲೈ 2021, 15:31 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಭಾರತದ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಸ್ಟ್ಯಾನ್‌ ಸ್ವಾಮಿ ಅವರ ಸಾವು ‘ಮಹಾ ದುರಂತ’ ಎಂದು ವಿಶ್ವಸಂಸ್ಥೆ ಹಾಗೂ ಐರೋಪ್ಯ ಒಕ್ಕೂಟದ ಮಾನವ ಹಕ್ಕುಗಳ ಸಂಘಟನೆ ಕಳವಳ ವ್ಯಕ್ತಪಡಿಸಿವೆ.

‘84 ವರ್ಷದ ಅವರ ವಿರುದ್ಧ ಭಯೋತ್ಪಾದನೆಗೆ ಪ್ರಚೋದನೆ ನೀಡಿದ ಸುಳ್ಳು ಆರೋಪಗಳನ್ನು ಹೊರಿಸಿ, ಸೆರೆಯಲ್ಲಿರಿಸಲಾಗಿತ್ತು’ ಎಂದೂ ಈ ಜಾಗತಿಕ ಸಂಸ್ಥೆಗಳು ಹೇಳಿವೆ.

‘ಭಾರತದಲ್ಲಿ ಮಾನವ ಹಕ್ಕುಗಳ ಹೋರಾಟಗಾರ, ಫಾದರ್ ಸ್ಟ್ಯಾನ್‌ ಸ್ವಾಮಿ ಅವರು ಸೆರೆಯಲ್ಲಿರುವಾಗಲೇ ಮೃತಪಟ್ಟಿದ್ದಾರೆ ಎಂಬ ಸುದ್ದಿ ಬಹಳ ದುಃಖಕರ. ಇದು ಮಹಾದುರಂತವೂ ಹೌದು. ಮಾನವ ಹಕ್ಕುಗಳಿಗಾಗಿ ಹೋರಾಡುವ ವ್ಯಕ್ತಿಯನ್ನು ಜೈಲಿಗೆ ಅಟ್ಟಿದ್ದು ಅಕ್ಷಮ್ಯ’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಕ್ಷಣೆ ವಿಭಾಗದ ವಿಶೇಷ ವರದಿಗಾರರಾದ ಮೇರಿ ಲಾಲರ್‌ ಅಸಮಾಧಾನ ಹೊರಹಾಕಿದ್ದಾರೆ.

ಈ ಮೊದಲು ಸಹ ಅವರು ಸ್ಟ್ಯಾನ್‌ ಸ್ವಾಮಿ ವಿರುದ್ಧದ ಆರೋಪಗಳು ಆಧಾರರಹಿತ ಎಂದು ಹೇಳಿದ್ದರು. ಅವರ ಆರೋಗ್ಯ ಹದಗಟ್ಟ ಸಂದರ್ಭದಲ್ಲಿ, ಅವರಿಗೆ ಉತ್ತಮ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದರು.

ಮಾನವ ಹಕ್ಕುಗಳಿಗೆ ಸಂಬಂಧಿಸಿದ ಐರೋಪ್ಯ ಒಕ್ಕೂಟದ ವಿಶೇಷ ಪ್ರತಿನಿಧಿ ಇಮೋನ್‌ ಗಿಲ್‌ಮೋರ್‌ ಅವರು, ಲಾಲರ್‌ ಅವರ ಟ್ವೀಟ್‌ಗಳನ್ನು ಹಂಚಿಕೊಂಡಿದ್ದಾರೆ.

‘ಕಳೆದ ಒಂಬತ್ತು ತಿಂಗಳಿನಿಂದ ಸ್ವಾಮಿ ಅವರನ್ನು ಜೈಲಿನಲ್ಲಿರಿಸಲಾಗಿತ್ತು. ಅವರ ಪರವಾಗಿ ಐರೋಪ್ಯ ಒಕ್ಕೂಟ ಧ್ವನಿ ಎತ್ತುತ್ತಲೇ ಬಂದಿತ್ತು. ಅವರ ಸಾವು ಬಹಳ ದುಃಖ ತರಿಸಿದೆ’ ಎಂದು ಗಿಲ್‌ಮೋರ್‌ ಟ್ವೀಟ್‌ ಮಾಡಿದ್ದಾರೆ.

ಪಾರ್ಕಿನ್‌ಸನ್ಸ್‌ ಕಾಯಿಲೆಯಿಂದ ಬಳಲುತ್ತಿದ್ದ ಸ್ಟ್ಯಾನ್‌ ಸ್ವಾಮಿ ಅವರ ಆರೋಗ್ಯ ಮತ್ತಷ್ಟೂ ಹದಗೆಟ್ಟ ಕಾರಣ ಅವರನ್ನು ಮೇ 29ರಂದು ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ವೆಂಟಿಲೇಟರ್‌ ಸಹ ಅಳವಡಿಸಲಾಗಿತ್ತು. ಈ ವೇಳೆ ಅವರಿಗೆ ಕೋವಿಡ್‌–19 ತಗುಲಿತ್ತು. ಆದರೆ, ತೀವ್ರ ಹೃದಯಾಘಾತದಿಂದಾಗಿ ಸೋಮವಾರ ಅವರು ನಿಧನರಾದರು.

ನಿಷೇಧಿತ ಸಿಪಿಎಂ (ಮಾವೊವಾದಿ) ಸಂಘಟನೆಯ ಸದಸ್ಯರಿಗೆ ಬೆಂಬಲ ನೀಡಿದ ಆರೋಪ ಸ್ಟ್ಯಾನ್‌ ಸ್ವಾಮಿ ಅವರ ಮೇಲಿತ್ತು. ‘ಕೇಂದ್ರದ ಫ್ಯಾಸಿಸ್ಟ್‌ ಸರ್ಕಾರದ ವಿರುದ್ಧ ದೇಶದ ದಲಿತರು ಮತ್ತು ಮುಸ್ಲಿಮರನ್ನು ಸಂಘಟಿಸಬೇಕು ಎಂದು ಸ್ಟ್ಯಾನ್‌ ಸ್ವಾಮಿ ಅವರು ಸಿಪಿಎಂ ನಾಯಕರಿಗೆ ಪತ್ರ ಬರೆದಿದ್ದರು’ ಎಂದು ಎನ್ಐಎ ಆರೋಪಿಸಿತ್ತು.

ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ವಿರೋಧ ಪಕ್ಷಗಳ ಒತ್ತಾಯ
ನವದೆಹಲಿ:
ಸೆರೆಯಲ್ಲಿ ಇರುವಾಗಲೇ ಫಾದರ್ ಸ್ಟ್ಯಾನ್‌ ಸ್ವಾಮಿ ಅವರು ಸಾವನ್ನಪ್ಪಿದ ಘಟನೆ ಬಗ್ಗೆ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಸೇರಿದಂತೆ 10 ವಿರೋಧ ಪಕ್ಷಗಳ ಮುಖಂಡರು ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸ್ವಾಮಿ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಅವರನ್ನು ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳಲಾಗಿತ್ತು. ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸಿ, ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡಬೇಕು‘ ಎಂದು ಒತ್ತಾಯಿಸಿ ವಿರೋಧ ಪಕ್ಷಗಳ ಮುಖಂಡರು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದಾರೆ.

ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌, ಜೆಡಿಎಸ್‌ ಮುಖ್ಯಸ್ಥ ಎಚ್‌.ಡಿ.ದೇವೇಗೌಡ, ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಫಾರೂಕ್‌ ಅಬ್ದುಲ್ಲಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಜಾರ್ಖಂಡ್‌ ಸಿ.ಎಂ ಹೇಮಂತ್‌ ಸೊರೇನ್‌, ಸಿಪಿಐ ನಾಯಕ ಡಿ.ರಾಜಾ, ಸಿಪಿಎಂನ ಸೀತಾರಾಂ ಯೆಚೂರಿ, ಆರ್‌ಜೆಡಿಯ ತೇಜಸ್ವಿ ಯಾದವ್‌ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

‘ಫಾದರ್ ಸ್ಟ್ಯಾನ್‌ ಸ್ವಾಮಿ ಅವರ ಸಾವು ತೀವ್ರ ದುಃಖ ತರಿಸಿದೆ. ಅವರ ಸಾವಿಗೆ ಹೊಣೆಗಾರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸುತ್ತೇವೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

‘ಭೀಮಾ–ಕೋರೆಗಾಂವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಿರುವವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಬಂಧಿತರ ವಿರುದ್ಧ ಯುಎಪಿಎ, ದೇಶದ್ರೋಹ ಮತ್ತಿತರ ಕರಾಳ ಕಾನೂನುಗಳಡಿ ಪ್ರಕರಣ ದಾಖಲಿಸಿದ್ದು, ಇವು ರಾಜಕೀಯ ಪ್ರೇರಿತ ಪ್ರಕರಣಗಳಾಗಿವೆ’ ಎಂದು ವಿರೋಧ ಪಕ್ಷಗಳ ಮುಖಂಡರು ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT