ಸೋಮವಾರ, ಅಕ್ಟೋಬರ್ 18, 2021
22 °C

ಅಫ್ಗಾನಿಸ್ತಾನದಲ್ಲಿ ಅಸ್ಥಿರತೆ; ಎಸ್‌ಸಿಒ ಸಹಕಾರ ಕೋರಿದ ಅಂಟೊನಿಯೊ ಗುಟೆರಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್:‌ ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿಯ ವಿಚಾರವಾಗಿ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸದಸ್ಯ ರಾಷ್ಟಗಳು ಅಗತ್ಯ ಸಹಕಾರ ನೀಡಬೇಕೆಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಕೋರಿದ್ದಾರೆ.

ತಜಕಿಸ್ತಾನದಲ್ಲಿ ನಡೆಯುತ್ತಿರುವ ಎಸ್‌ಸಿಒ ಶೃಂಗಸಭೆಯನ್ನುದ್ದೇಶಿಸಿ ಶುಕ್ರವಾರ ಮಾತನಾಡಿರುವ ಗುಟೆರಸ್, ಅಫ್ಗಾನಿಸ್ತಾನದಲ್ಲಿನ ಆತಂಕಕಾರಿ ಬೆಳವಣಿಗೆಗಳು ರಾಜಕೀಯ, ಆರ್ಥಿಕ, ಭದ್ರತೆ ಮತ್ತು ಮಾನವೀಯ ಸವಾಲುಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ.

ʼಅಫ್ಗಾನಿಸ್ತಾನದ ಜನರಿಗೆ ನೆರವಾಗಲು ವಿಶ್ವಸಂಸ್ಥೆಯು ಬದ್ದವಾಗಿದೆʼ ಎಂದಿರುವ ಅವರು, ʼಅಫ್ಗನ್ನರಿಗೆ ಬೆಂಬಲ ನೀಡಲು ನಿಮ್ಮೆಲ್ಲರೊಂದಿಗೆ ಸೇರಿ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆʼ ಎಂದು ತಿಳಿಸಿದ್ದಾರೆ.

ಮುಂದುವರಿದು, ʼಅಫ್ಗಾನಿಸ್ತಾನದಲ್ಲಿನ ಆತಂಕಕಾರಿ ಪರಿಸ್ಥಿತಿಯು ವೇಗವಾಗಿ ಬೆಳೆಯುತ್ತಿದ್ದು, ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿದೆ. ಆದರೆ, ಅಲ್ಲಿನ ಜನರು ತೀವ್ರ ಬಡತನವನ್ನು ತೊಡೆದುಹಾಕಲು, ಉದ್ಯೋಗಗಳನ್ನು ಪಡೆದುಕೊಳ್ಳಲು, ಆರೋಗ್ಯ, ಶಿಕ್ಷಣ ಸೇವೆಗಳ ಪುನಃಸ್ಥಾಪನೆ ಹಾಗೂ ಅವರ ಬದುಕು, ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಬಯಸುತ್ತಿದ್ದಾರೆʼ ಎಂದು ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ತಜ್ಞರು ಮತ್ತು ವಿಶ್ವಸಂಸ್ಥೆಯ ವಿವಿಧ ಮಂಡಳಿಗಳು ಈಗಾಗಲೇ ಕಳವಳ ವ್ಯಕ್ತಪಡಿಸಿವೆ. ಆ ದೇಶಕ್ಕೆ ಅಗತ್ಯ ನೆರವು ನೀಡುವಂತೆಯೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿವೆ.

ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್‌ ಪಿಲಿಪ್ಪೊ ಗ್ರಾಂಡಿ ಅವರು ಅಫ್ಗಾನಿಸ್ತಾನದಲ್ಲಿನ ಮಾನವೀಯ ಸನ್ನಿವೇಶವು ʼಅತ್ಯಂತ ಹತಾಶೆʼ ಮೂಡಿಸುತ್ತಿದೆ. ಆಹಾರ, ಔಷಧ, ವಸತಿ ಮತ್ತು ಇತರ ಅಗತ್ಯಗಳನ್ನು ತುರ್ತಾಗಿ ಪೂರೈಸಬೇಕಿದೆ ಎಂದು ಕರೆ ನೀಡಿದ್ದರು.

ಇವನ್ನೂ ಓದಿತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು