ಇಂಡೋನೇಷ್ಯಾದಲ್ಲಿ 5.6 ತೀವ್ರತೆಯ ಭೂಕಂಪ: 20 ಮಂದಿ ಸಾವು

ಜಕಾರ್ತ: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರದೇಶದಲ್ಲಿ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ 20 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿ ತಿಳಿಸಿದ್ದಾರೆ.
ಪಶ್ಚಿಮ ಜಾವಾದಲ್ಲೇ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, 20 ಮಂದಿ ಮೃತಪಟ್ಟು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸಿಯಾಂಜುರ್ ಪಟ್ಟಣದ ಸರ್ಕಾರಿ ಅಧಿಕಾರಿ ಹರ್ಮನ್ ಸುಹರ್‌ಮನ್ ತಿಳಿಸಿರುವುದಾಗಿ ಮೆಟ್ರೊ ಟಿ.ವಿ ಸುದ್ದಿವಾಹಿನಿ ವರದಿ ಮಾಡಿದೆ.
‘ಇದು ಸಿಯಾಂಜುರ್‌ನ ಒಂದು ಆಸ್ಪತ್ರೆಯ ಮಾಹಿತಿಯಾಗಿದ್ದು, ಇಲ್ಲಿ ಇನ್ನೂ 4 ಆಸ್ಪತ್ರೆಗಳು ಇರುವುದರಿಂದ ಅಲ್ಲಿ ಎಷ್ಟು ಮಂದಿ ದಾಖಲಾಗಿದ್ದಾರೆ ಎಂಬ ಮಾಹಿತಿ ಇನ್ನಷ್ಟೆ ಸಿಗಬೇಕಿದೆ. ಹಾಗಾಗಿ, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ’ಎಂದು ಅವರು ತಿಳಿಸಿದ್ದಾರೆ.
ಭೂಕಂಪದಿಂದ 14 ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ.
ರಾಜಧಾನಿ ಜಕಾರ್ತದಿಂದ 75 ಕಿ.ಮೀ ದೂರದ ಸಿಯಾಂಜುರ್‌ನ ಭೂಮಿಯ 10 ಕಿ.ಮೀ(6.2 ಮೈಲಿ) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಮತ್ತು ಭೂಭೌತಶಾಸ್ತರ ಸಂಸ್ಥೆ ತಿಳಿಸಿದೆ. ಸುನಾಮಿ ಸಾಧ್ಯತೆ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಹಲವು ಮನೆಗಳು ಮತ್ತು ಇಸ್ಲಾಮಿಕ್ ವಸತಿ ಶಾಲೆಗೆ ಹಾನಿಯಾಗಿದೆ. ಅಧಿಕಾರಿಗಳು ಹಾನಿಯ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
‘ದೊಡ್ಡ ಕಂಪನದ ಅನುಭವವಾಯಿತು. ನನ್ನ ಕಚೇರಿಯ ಗೋಡೆ ಮತ್ತು ಛಾವಣೆಗೆ ಹಾನಿಯಾಗಿವೆ’ಎಂದು ಸಿಯಾಂಜುರ್‌ನ ನಿವಾಸಿ ಮುಚ್ಲೀಸ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.