ಶನಿವಾರ, ನವೆಂಬರ್ 28, 2020
24 °C

US Election 2020: ಯಾರಾಗಲಿದ್ದಾರೆ ಅಮೆರಿಕ ಅಧ್ಯಕ್ಷ? ನಿರ್ಣಾಯಕ ಅಂಶಗಳೇನು?

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಜೊ ಬೈಡನ್‌ ಮತ್ತು ಡೊನಾಲ್ಡ್ ಟ್ರಂಪ್‌

ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದತ್ತ ಇಡೀ ಜಗತ್ತು ಮುಖ ಮಾಡಿದೆ. ಪ್ರಸ್ತುತ ಡೊನಾಲ್ಡ್ ಟ್ರಂಪ್‌ ಅವರನ್ನು ಹಿಂದಿಕ್ಕಿರುವ ಜೊ ಬೈಡನ್‌ ಮುನ್ನಡೆಯೊಂದಿಗೆ ನಗೆ ಬೀರಿದ್ದಾರೆ. ಆದರೆ, ಪೆನ್ಸಿಲ್ವೇನಿಯಾ  ಮತ್ತು ನೆವಾಡಾ ಸೇರಿದಂತೆ ಐದು ಪ್ರಮುಖ ರಾಜ್ಯಗಳಲ್ಲಿ ಇನ್ನೂ ಮತ ಎಣಿಕೆ ಪೂರ್ಣವಾಗದ ಕಾರಣ ಶ್ವೇತ ಭವನ ಪ್ರವೇಶಿಸುವ ಅವಕಾಶ ಇಬ್ಬರೂ ಅಭ್ಯರ್ಥಿಗಳಿಗೂ ತೆರೆದಿದೆ.

ಈವರೆಗೂ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡನ್‌ ಅವರು 264 ಎಲೆಕ್ಟೋರಲ್‌ ಮತಗಳ ಮುನ್ನೆಡೆ ಸಾಧಿಸಿದ್ದು, ಅಮೆರಿಕದ ಅಧ್ಯಕ್ಷ ಸ್ಥಾನಕ್ಕೇರಲು ಬೇಕಿರುವ 270 ಎಲೆಕ್ಟೋರಲ್‌ ಮತಗಳ ಮ್ಯಾಜಿಕ್‌ ಸಂಖ್ಯೆಗೆ ಸಮೀಪದಲ್ಲಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ನಿರ್ಣಾಯಕ ಹಂತ ತಲುಪಿದ್ದು, ಬೈಡನ್‌ ಪ್ರತಿಸ್ಪರ್ಧಿಯಾಗಿರುವ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ 214 ಮತಗಳ ಮುನ್ನೆಡೆ ಹೊಂದಿದ್ದಾರೆ.

ಐದು ರಾಜ್ಯಗಳ ಫಲಿತಾಂಶವು ಅಮೆರಿಕದ ಅಧ್ಯಕ್ಷರನ್ನು ಅಂತಿಮಗೊಳಿಸಲಿದೆ. ಬೈಡನ್‌ ಒಟ್ಟು 7,21,10,951 ಮತಗಳನ್ನು ಪಡೆದಿದ್ದರೆ, ಟ್ರಂಪ್‌ 6,86,43,544 ಮತಗಳನ್ನು ಗಳಿಸಿದ್ದಾರೆ.

5 ರಾಜ್ಯಗಳು 60 ಎಲೆಕ್ಟೊರಲ್‌ ಮತಗಳು

ಜೊ ಬೈಡನ್‌ ಅವರು ಪ್ರಮುಖ ರಾಜ್ಯಗಳಾದ ಡೆಲವೇರ್‌, ಕ್ಯಾಲಿಫೋರ್ನಿಯಾ, ನ್ಯೂ ಯಾರ್ಕ್‌ ಹಾಗೂ ವಾಷಿಂಗ್ಟನ್‌ನಲ್ಲಿ ಈಗಾಗಲೇ ಗೆಲುವು ಸಾಧಿಸಿದ್ದಾರೆ. ಅಮೆರಿಕ ಮಾಧ್ಯಮಗಳ ಅಂದಾಜಿನ ಪ್ರಕಾರ, ಡೊನಾಲ್ಡ್‌ ಟ್ರಂಪ್‌ ಫ್ಲೋರಿಡಾ, ಟೆಕ್ಸಾಸ್‌, ಇಂಡಿಯಾನಾ ಹಾಗೂ ಓಹಿಯೊ ಸೇರಿದಂತೆ 23 ರಾಜ್ಯಗಳಲ್ಲಿ ಬಹುಮತ ಪಡೆಯಲಿದ್ದಾರೆ. ಆದರೆ, ಅಲಾಸ್ಕಾ (3 ಎಲೆಕ್ಟೊರಲ್‌ ಮತಗಳು), ಜಾರ್ಜಿಯಾ (16), ನೆವಾಡಾ (6), ನಾರ್ಥ್ ಕರೊಲಿನಾ (15) ಹಾಗೂ ಪೆನ್ಸಿಲ್ವೇನಿಯಾ (20 ಎಲೆಕ್ಟೊರಲ್‌ ಮತಗಳು) ರಾಜ್ಯಗಳಲ್ಲಿನ ಫಲಿತಾಂಶ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕವಾಗಲಿವೆ.

ರಿಪಬ್ಲಿಕನ್‌ ಪಕ್ಷಕ್ಕೆ ಹೆಚ್ಚಿನ ಬೆಂಬಲ ಇರುವ ಅಲಾಸ್ಕಾದಲ್ಲಿ ಡೊನಾಲ್ಡ್ ಟ್ರಂಪ್‌ಗೆ ಗೆಲುವು ಬಹುತೇಕ ನಿಶ್ಚಿತ ಎನ್ನಲಾಗಿದೆ. ತಡವಾಗಿ ತಲುಪಿರುವ ಮತಗಳನ್ನು ಎಣಿಕೆ ಪ್ರಕ್ರಿಯೆಗೆ ಒಳಪಡಿಸದಂತೆ ಜಾರ್ಜಿಯಾದಲ್ಲಿ ಕಾನೂನು ಹೋರಾಟ ನಡೆಸಲಾಗುತ್ತಿದೆ. ನೆವಾಡಾದಲ್ಲಿ ನೆವೆಂಬರ್‌ 10ರ ವರೆಗೂ ಅಂಚೆ ಮತಗಳನ್ನು ಸ್ವೀಕರಿಸಲು ಅವಕಾಶವಿದ್ದು, ಮತ ಎಣಿಕೆ ನಡೆಯುತ್ತಿದೆ. ನಾರ್ಥ್‌ ಕರೊಲಿನಾದಲ್ಲಿ ಡೊನಾಲ್ಡ್ ಟ್ರಂಪ್‌ ಅವರು ಬೈಡನ್‌ಗಿಂತ ಅಲ್ಪ ಮತಗಳ ಮುನ್ನಡೆಯಲಿದ್ದಾರೆ. ಇಲ್ಲೂ ಸಹ ಅಂಚೆ ಮತಗಳು ತಲುಪಲು ನವೆಂಬರ್‌ 12ರ ವರೆಗೂ ಅವಕಾಶವಿದೆ.

ಚುನಾವಣಾ ಅವಧಿ ಮೀರಿದ ನಂತರ ಬಂದ ಅಂಚೆ ಮತಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಮತಗಳ ಎಣಿಕೆ ನಡೆಸದಂತೆ ತಡೆ ನೀಡಲು ಟ್ರಂಪ್‌ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಂಚೆ ಮೂಲಕ ಹೆಚ್ಚಿರುವ ಮತದಾನದಿಂದ ಬೃಹತ್‌ ಮೋಸದ ಜಾಲ ಸೃಷ್ಟಿಗೆ ಕಾರಣವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

'ನಾವು ಗೆಲುವು ಸಾಧಿಸಿದ್ದೇವೆ ಎಂದು ಘೋಷಿಸಲು ನಾನು ಇಲ್ಲಿಗೆ ಬಂದಿಲ್ಲ. ಆದರೆ, ಯಾವಾಗ ಮತ ಎಣಿಕೆ ಮುಗಿಯುತ್ತದೆಯೋ, ಆಗ ನಾವು ಗೆಲುವು ಸಾಧಿಸಿರುತ್ತೇವೆಂದು ನಂಬಿಕೆ ಇದೆ' ಎಂದು ಬೈಡನ್‌ ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಜಯಗಳಿಸಿರುವುದಾಗಿ ಹಾಲಿ ಅಧ್ಯಕ್ಷ ಟ್ರಂಪ್ ಅವರು, ಬುಧವಾರವೇ ಘೋಷಿಸಿಕೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು