ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಮಟ್ಟದ ಸಭೆಯಲ್ಲಿ ಚೀನಾ–ಅಮೆರಿಕ ರಾಜತಾಂತ್ರಿಕರ ನಡುವೆ ವಾಗ್ಯುದ್ಧ

ಅಲಾಸ್ಕದ ಅಕರೇಂಜ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆ
Last Updated 19 ಮಾರ್ಚ್ 2021, 10:44 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜಾಗತಿಕ ಸ್ಥಿರತೆ ಸೇರಿದಂತೆ ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಚರ್ಚಿಸಲು ಶುಕ್ರವಾರ ನಡೆದ ಉನ್ನತ ಸಭೆಯಲ್ಲಿ ಅಮೆರಿಕ ಹಾಗೂ ಚೀನಾದ ರಾಜತಾಂತ್ರಿಕರ ನಡುವೆ ವಾಗ್ವಾದ ನಡೆಯಿತು.

ಚೀನಾದ ನಡೆಗಳಿಂದ ಜಾಗತಿಕ ಶಾಂತಿ–ಸ್ಥಿರತೆಗೆ ಬೆದರಿಕೆವೊಡ್ಡುತ್ತಿವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್‌ ಅವರು ಚೀನಾದ ರಾಜತಾಂತ್ರಿಕರಿಗೆ ಕಟು ಮಾತುಗಳಲ್ಲಿ ಹೇಳಿದ ಘಟನೆಗೂ ಈ ಸಭೆ ಸಾಕ್ಷಿಯಾಯಿತು.

ಈ ಮಾತಿಗೆ ಚೀನಾದ ನಿಯೋಗವೂ ಖಡಕ್‌ ಮಾತುಗಳಲ್ಲಿ ತಿರುಗೇಟು ನೀಡಿತು.

ಜೋ ಬೈಡನ್‌ ಅವರು ಅಧ್ಯಕ್ಷರಾದ ನಂತರ, ಅಲಾಸ್ಕದ ಅಂಕರೇಜ್‌ನಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಹಾಗೂ ಚೀನಾದ ಉನ್ನತ ರಾಜತಾಂತ್ರಿಕರು ಮುಖಾಮುಖಿಯಾಗಿದ್ದಾರೆ.

ಚೀನಾದ ಕಮ್ಯುನಿಸ್ಟ್‌ ಪಾರ್ಟಿಯ ವಿದೇಶಾಂಗ ವ್ಯವಹಾರಗಳ ಆಯೋಗದ ನಿರ್ದೇಶಕ ಯಾಂಗ್‌ ಜಿಯೆಚಿ, ವಿದೇಶಾಂಗ ಸಚಿವ ವಾಂಗ್‌ ಯಿ ಚೀನಾ ನಿಯೋಗದ ನೇತೃತ್ವ ವಹಿಸಿದ್ದಾರೆ.

‘ಈ ಸಭೆಯಲ್ಲಿ ಅಮೆರಿಕ ಪ್ರಸ್ತಾಪಿಸುವ ವಿಷಯಗಳು ಕೇವಲ ಅಮೆರಿಕ ಹಾಗೂ ಚೀನಾಕ್ಕೆ ಮಾತ್ರ ಸಂಬಂಧಪಡುವುದಿಲ್ಲ. ನಮ್ಮ ನೆರಹೊರೆಯ ರಾಷ್ಟ್ರಗಳು ಸೇರಿದಂತೆ ಇಡೀ ವಿಶ್ವಕ್ಕೇ ಪ್ರಸ್ತುತವಾಗಲಿವೆ’ ಎಂದು ಬ್ಲಿಂಕೆನ್‌ ಖಡಕ್ಕಾಗಿ ಹೇಳಿದರು.

‘ಎಲ್ಲ ದೇಶಗಳು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಶಾಂತಿ–ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಅಮೆರಿಕ ಬಯಸುತ್ತದೆ. ಈ ಮಾರ್ಗ ಅನುಸರಿಸಿದರೆ ಜಾಗತಿಕ ಶಾಂತಿ–ಸ್ಥಿರತೆ ಸಾಧ್ಯ. ಆದರೆ, ಈ ಮಾರ್ಗ ಬಿಟ್ಟು ಬೇರೆ ದಾರಿಯಲ್ಲಿ ಸಾಗಿದರೆ ಈ ಜಗತ್ತು ಹಿಂಸೆ, ಅಸ್ಥಿರತೆಯಿಂದ ನಲುಗುವುದು ಖಚಿತ’ ಎಂದು ಬ್ಲಿಂಕೆನ್‌ ಅವರು ಚೀನಾ ನಿಯೋಗವನ್ನು ಉದ್ಧೇಶಿಸಿ ಹೇಳಿದರು.

‘ದೇಶೀಯವಾಗಿ, ಜಾಗತಿಕವಾಗಿ ಆದ್ಯತೆಯ ವಿಷಯಗಳು ಕುರಿತು ಚರ್ಚಿಸಲು ಈ ಸಭೆ ಉತ್ತಮ ಅವಕಾಶ ಒದಗಿಸಿದೆ. ಈ ವಿಷಯದಲ್ಲಿ ಬೈಡನ್‌ ಆಡಳಿತದ ಉದ್ದೇಶ ಹಾಗೂ ಅನುಸರಿಸುವ ಮಾರ್ಗ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ’ ಎಂದೂ ಹೇಳಿದರು.

ಈ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಯಾಂಗ್‌, ‘ಕೈಬೆರಳೆಣಿಕೆಯಷ್ಟು ದೇಶಗಳು ರೂಪಿಸಿರುವ ನಿಯಮಗಳನ್ನು ಅನುಸರಿಸಲು ಚೀನಾ ಸಿದ್ಧವಿಲ್ಲ’ ಎಂದರು.

‘ವಿಶ್ವಸಂಸ್ಥೆ ರೂಪಿಸಿದ ನಿಯಮಗಳನ್ನು ಕೇಂದ್ರವಾಗಿರಿಸಿಕೊಂಡಿರುವ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಚೀನಾ ಅನುಸರಿಸುತ್ತದೆ. ವಿಶ್ವ ಸಮುದಾಯವೂ ಇದನ್ನೇ ಗೌರವಿಸುತ್ತದೆ’ ಎಂದು ಬ್ಲಿಂಕೆನ್‌ ಅವರಿಗೆ ತಿರುಗೇಟು ನೀಡಿದರು.

‘ಅಮೆರಿಕ ಹಾಗೂ ಚೀನಾ ತಮ್ಮದೇ ಶೈಲಿಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿವೆ. ಆದರೆ, ಅಮೆರಿಕ ಎಷ್ಟರ ಮಟ್ಟಿಗೆ ಪ್ರಜಾತಾಂತ್ರಿಕ ಮೌಲ್ಯಗಳನ್ನು ಪಾಲಿಸುತ್ತಿದೆ ಎಂಬುದನ್ನು ಜಗತ್ತು ಈಗ ಮೌಲ್ಯಮಾಪನ ಮಾಡಬೇಕಾಗಿದೆ’ ಎಂದೂ ಯಾಂಗ್‌ ಕಟುವಾದ ಪದಗಳಲ್ಲಿ ಹೇಳಿದರು.

‘ಅಮೆರಿಕ ತನ್ನ ಕಾರ್ಯವೈಖರಿಯನ್ನು ಬದಲಿಸಿಕೊಳ್ಳುವುದು ಅಗತ್ಯ’ ಎಂದೂ ಯಾಂಗ್‌ ಹೇಳಿದರು.

ಈ ಮಾತಿಗೆ ಪ್ರತಿಕ್ರಿಯಿಸಿದ, ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸಲ್ಲಿವನ್‌, ‘ಚೀನಾದೊಂದಿಗೆ ಸಂಘರ್ಷವನ್ನು ಅಮೆರಿಕ ಬಯಸುವುದಿಲ್ಲ. ನಮ್ಮ ಜನರಿಗಾಗಿ, ನಮ್ಮ ಮಿತ್ರರಾಷ್ಟ್ರಗಳ ಹಿತಾಸಕ್ತಿ ಕಾಪಾಡಲು ನಾವು ಹೋರಾಡುತ್ತೇವೆ’ ಎಂದರು.

‘ಕೇವಲ ತನ್ನ ಮಿತ್ರ ರಾಷ್ಟ್ರ ಎಂಬ ಕಾರಣಕ್ಕೆ ಅಮೆರಿಕ ಕೆಲವು ದೇಶಗಳ ಪರವಾಗಿ ಮಾತನಾಡಲು ಆರಂಭಿಸಿದರೆ, ಪ್ರತಿರೋಧ ಒಡ್ಡಲು ಶುರುಮಾಡಿದರೆ, ಅಂತರರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆ ತಪ್ಪಿದ್ದಲ್ಲ’ ಎಂದು ಯಾಂಗ್ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT