ಮಂಗಳವಾರ, ನವೆಂಬರ್ 24, 2020
26 °C
ಅಧಿಕೃತ ಘೋಷಣೆಯಷ್ಟೇ ಬಾಕಿ

ಜೊ ಬೈಡನ್‌ ಅಮೆರಿಕದ ಹೊಸ ಅಧ್ಯಕ್ಷ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ‘ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದಾರೆ’ ಎಂದು ಅಮೆರಿಕದ ಪ್ರಮುಖ ಸುದ್ದಿ ವಾಹಿನಿ ಗಳು ಶನಿವಾರ ವರದಿ ಮಾಡಿವೆ. ಇವರ ಗೆಲುವಿನ ಅಧಿಕೃತ ಘೋಷಣೆಯಷ್ಟೇ ಇನ್ನು ಬಾಕಿ ಉಳಿದಿದೆ.

ಪೆನ್ಸಿಲ್ವೇನಿಯಾದಲ್ಲಿ ಬೈಡನ್‌ ಅವರ ಗೆಲುವು ಖಚಿತ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರಿಂದಾಗಿ ಡೆಮಾಕ್ರೆಟ್‌ ಪಕ್ಷದ ಪ್ರತಿನಿಧಿಗಳ ಸಂಖ್ಯೆ 273ಕ್ಕೆ ಏರಿಕೆಯಾದಂತಾಗುತ್ತದೆ. ನೆವಾಡ ಮತ್ತು ಜಾರ್ಜಿಯಾದಲ್ಲೂ ಅವರಿಗೆ ಖಚಿತ ಮುನ್ನಡೆ ಇರುವುದರಿಂದ, ಒಟ್ಟು ಪ್ರತಿನಿಧಿಗಳ ಸಂಖ್ಯೆ 290ಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು 270 ಪ್ರತಿನಿಧಿಗಳನ್ನು ಹೊಂದುವುದು ಅಗತ್ಯ. ಎಡಿಸನ್ ರಿಸರ್ಚ್ ಸಂಸ್ಥೆ, ಸಿಎನ್‌ಎನ್‌, ಎನ್‌ಬಿಸಿ ಮೊದಲಾದ ಸುದ್ದಿಸಂಸ್ಥೆಗಳು ಬೈಡನ್‌ ಗೆಲುವಿನ ಸುದ್ದಿಯನ್ನು ಪ್ರಸಾರ ಮಾಡಿವೆ. ಬೈಡನ್ ಅವರು ಬಹುಮತಕ್ಕೆ ಅಗತ್ಯವಿರುವ 270 ಎಲೆಕ್ಟೋರ್ ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆಗಳು ಹೇಳಿದ್ದವು.

77 ವರ್ಷ ವಯಸ್ಸಿನ ಬೈಡನ್‌ ಅವರು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಅತಿ ಹೆಚ್ಚು ವಯಸ್ಸಿನ ವ್ಯಕ್ತಿ ಎನಿಸಲಿದ್ದಾರೆ. ಬರಾಕ್‌ ಒಬಾಮಾ ಅವರ ಅವಧಿಯಲ್ಲಿ ಬೈಡನ್‌ ಅವರು ಉಪಾಧ್ಯಕ್ಷರಾಗಿದ್ದರು. ‘ಟ್ರಂಪ್‌ ಅವರ ಬಲಪಂಥೀಯ ನಿಲುವು ಮತ್ತು ‘ಅಮೆರಿಕ ಮೊದಲು’ ಘೋಷಣೆಗಳನ್ನು ದೇಶದ ಗ್ರಾಮೀಣ ಮತ್ತು ಶ್ವೇತವರ್ಣೀಯ ಕಾರ್ಮಿಕ ವರ್ಗ ತಿರಸ್ಕರಿಸಿದೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಾಧ್ಯಮ ವರದಿಗಳ ಬಳಿಕ ಪ್ರತಿಕ್ರಿಯೆ ನೀಡಿದ ಬೈಡನ್‌, ‘ನಮ್ಮ ಮಹಾನ್‌ ರಾಷ್ಟ್ರವನ್ನು ಮುನ್ನಡೆಸಲು ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಇದು ಅತ್ಯಂತ ಗೌರವದ ವಿಚಾರವಾಗಿದೆ. ನಮ್ಮ ಮುಂದೆ ತುಂಬ ಸವಾಲಿನ ಕೆಲಸವಿದೆ. ನನಗೆ ಮತ ನೀಡಿರಲಿ ಅಥವಾ ನೀಡದಿರಲಿ ನಾನು ಎಲ್ಲಾ ಅಮೆರಿಕನ್ನರಿಗೆ ಅಧ್ಯಕ್ಷನಾಗಿರುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸುತ್ತೇನೆ ಎಂಬ ಭರವಸೆಯನ್ನು ನಾನು ನೀಡಬಲ್ಲೆ’ ಎಂದಿದ್ದಾರೆ. ಶನಿವಾರ ರಾತ್ರಿ (ಭಾರತೀಯ ಕಾಲಮಾನ ಭಾನುವಾರ ಬೆಳಿಗ್ಗೆ) ಬೈಡನ್‌ ಅವರು ಅಮೆರಿಕದ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ.

ವಿಜಯೋತ್ಸವ

ಸುದ್ದಿ ವಾಹಿನಿಗಳಲ್ಲಿ ಬೈಡನ್‌ ಗೆಲುವು ಘೋಷಣೆಯಾಗು ತ್ತಿದ್ದಂತೆ ಅವರ ಬೆಂಬಲಿಗರು ಬೀದಿಗಿಳಿದು ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವ ಆರಂಭಿಸಿದ್ದಾರೆ. ‘ಕೆಟ್ಟ ಕನಸು ಕೊನೆಯಾಗಿದೆ. ನಾವಿನ್ನು ಸಮಾಧಾನವಾಗಿ ಉಸಿರಾಡಬಹುದು. ಫಲಿತಾಂಶಕ್ಕಾಗಿ ಸುದೀರ್ಘ ಕಾಯುವಿಕೆಯಿಂದ ನಷ್ಟವಾಗಿಲ್ಲ’ ಎಂದು ಹಲವು ಬೆಂಬಲಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಸುಳ್ಳು ಘೋಷಣೆ: ಟ್ರಂಪ್‌

ಮಾಧ್ಯಮ ವರದಿಗಳು ಮತ್ತು ಬೈಡನ್‌ ಅವರ ಹೇಳಿಕೆಗೆ ಕೂಡಲೇ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಟ್ರಂಪ್‌, ‘ಬೈಡನ್‌ ಅವರು ತಾನೇ ಮುಂದಿನ ಅಧ್ಯಕ್ಷ ಎಂದು ಸುಳ್ಳು ಘೋಷಣೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಬೈಡನ್‌ ಅವರು ಹಾಗೇಕೆ ಹೇಳುತ್ತಿದ್ದಾರೆ ಮತ್ತು ಅವರ ಮಾಧ್ಯಮ ಮಿತ್ರರು ಅವರಿಗೇಕೆ ಬೆಂಬಲ ನೀಡು ತ್ತಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಸತ್ಯ ಬಹಿರಂಗವಾಗುವುದನ್ನು ಅವರು ಬಯಸುವುದಿಲ್ಲ. ಫಲಿತಾಂಶ ಘೋಷಣೆ ಇನ್ನೂ ತುಂಬಾ ದೂರವಿದೆ’ ಎಂದಿದ್ದಾರೆ.

ಮೊದಲ ಮಹಿಳಾ ಉಪಾಧ್ಯಕ್ಷೆ

ಭಾರತ ಮೂಲಕ ಕಮಲಾ ಹ್ಯಾರಿಸ್‌ ಅವರು ಅಮೆರಿಕದ ಉಪಾಧ್ಯಕ್ಷೆಯಾಗುವುದು ಖಚಿತವಾಗಿದೆ. ಉಪಾಧ್ಯಕ್ಷ ಹುದ್ದೆಗೇರಿದ ಮೊದಲ ಮಹಿಳೆ ಎಂಬ ದಾಖಲೆಯನ್ನೂ ಇವರು ಸೃಷ್ಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು