ಶುಕ್ರವಾರ, ಅಕ್ಟೋಬರ್ 29, 2021
20 °C

ಫೇಸ್‌ಬುಕ್‌ ವಿರುದ್ಧ ಮಾಜಿ ಸಿಬ್ಬಂದಿ ಆಕ್ರೋಶ: ಮೇಲ್ವಿಚಾರಣೆಗೆ ಆಗ್ರಹ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ‘ಸಾಮಾಜಿಕ ಜಾಲತಾಣದ ದೈತ್ಯ ಕಂಪನಿಯಾದ ಫೇಸ್‌ಬುಕ್‌ನ ಉತ್ಪನ್ನಗಳು ಮಕ್ಕಳಿಗೆ ಹಾನಿಕಾರಕವಾಗಿದ್ದು, ನಮ್ಮ ಪ್ರಜಾಪ್ರಭುತ್ವನ್ನೂ ದುರ್ಬಲಗೊಳಿಸುತ್ತವೆ’ ಎಂದು ಫೇಸ್‌ಬಕ್‌ನ ಮಾಜಿ ದತ್ತಾಂಶ ತಜ್ಞೆ ಫ್ರಾನ್ಸಿಸ್‌ ಹೌಗೆನ್‌ ಹೇಳಿದ್ದಾರೆ.

ಗ್ರಾಹಕ ಸಂರಕ್ಷಣೆ ಕುರಿತ ಸೆನೆಟ್‌ ವಾಣಿಜ್ಯ ಉಪಸಮಿತಿ ಮುಂದೆ ಹಾಜರಾಗಿ ಈ ಹೇಳಿಕೆ ದಾಖಲಿಸಿರುವ ಅವರು, ‘ಫೇಸ್‌ಬುಕ್‌ನಿಂದ ಆಗುವ ಅಪಾಯಗಳನ್ನು ತಡೆಗಟ್ಟಲು ಸರ್ಕಾರದ ಕಟ್ಟು ನಿಟ್ಟಿನ ಮೇಲ್ವಿಚಾರಣೆಯ ಅಗತ್ಯವಿದೆ’ ಎಂದು ಆಗ್ರಹಿಸಿದ್ದಾರೆ.

‘ಇನ್‌ಸ್ಟಾಗ್ರಾಂನಿಂದ ಕೆಲ ಹದಿಹರೆಯದವರಿಗೆ ಆಗುತ್ತಿರುವ ಹಾನಿಯ ಬಗ್ಗೆ ಹಾಗೂ ಸಾರ್ವಜನಿಕ ಹೋರಾಟಕ್ಕೆ ಸಂಬಂಧಿಸಿದಂತೆ ತಪ್ಪು ಮತ್ತು ದ್ವೇಷಪೂರಿತ ಮಾಹಿತಿ ಹಂಚಿಕೆ ಆಗಿದ್ದ ಕುರಿತು ಕಂಪನಿಯ ಆಂತರಿಕ ಸಂಶೋಧನೆಯಿಂದ ಸ್ಪಷ್ಟವಾಗಿದ್ದರೂ, ಇನ್‌ಸ್ಟಾಗ್ರಾಮ್‌ನಲ್ಲಿ ಬದಲಾವಣೆಗಳನ್ನು ತರುವಲ್ಲಿ ಕಂಪನಿ ವಿಫಲವಾಗಿದೆ. ಈ ಮೂಲಕ ಅದು ಅಪ್ರಾಮಾಣಿಕತೆ ತೋರಿದೆ’ ಎಂದು ಅವರು ದೂರಿದ್ದಾರೆ.

ಕಂಪನಿಯಲ್ಲಿ ಕೆಲಸ ಬಿಡುವ ಮೊದಲು ಹೌಗೆನ್‌ ಅವರು, ಆಂತರಿಕ ಸಂಶೋಧನೆಗೆ ಸಂಬಂಧಿಸಿದ ಸಹಸ್ರಾರು ಪುಟಗಳ ದಾಖಲೆಗಳನ್ನು ಗೋಪ್ಯವಾಗಿ ನಕಲು ಮಾಡಿಕೊಂಡಿದ್ದರು. ಸೆನೆಟ್‌ನ ಎರಡೂ ಪಕ್ಷಗಳ ಸದಸ್ಯರು ಹಾಗೂ ಹಲವು ಗ್ರಾಹಕ ವಕೀಲರ ಮನವಿಗಳ ಮೇರೆಗೆ ಅವರು ಸಮಿತಿಯ ಮುಂದೆ ಹಾಜರಾಗಿ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಅವರು ಈ ವೇಳೆ ಫೇಸ್‌ಬುಕ್‌ನ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಹೇಗೆ ಸುರಕ್ಷಿತವಾಗಿಸಬಹುದು ಎಂಬುದರ ಮೇಲೂ ಬೆಳಕು ಚೆಲ್ಲಿದ್ದಾರೆ.

37 ವರ್ಷದ ಹೌಗೆನ್‌ ಅವರು 2019ರಲ್ಲಿ ಫೇಸ್‌ಬುಕ್‌ನಲ್ಲಿ ಕೆಲಸಕ್ಕೆ ಸೇರುವ ಮೊದಲು ಗೂಗಲ್‌, ಪಿನ್‌ಟ್ರೆಸ್ಟ್‌ ಮತ್ತು ಯೆಲ್ಪ್‌ ಕಂಪನಿಗಳಲ್ಲಿ 15 ವರ್ಷ ಕೆಲಸ ಮಾಡಿದ್ದರು. ಅವರು ಕಂಪ್ಯೂಟರ್‌ ಎಂಜಿನಿಯರಿಂಗ್‌ ಪದವೀಧರೆಯಾಗಿದ್ದು, ಹಾರ್ವಡ್‌ ವಿಶ್ವವಿದ್ಯಾಲಯದಿಂದ ವ್ಯವಹಾರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

‘ಕಂಪನಿಯ ನಾಯಕತ್ವಕ್ಕೆ ಫೇಸ್‌ಬುಕ್‌ ಮತ್ತು ಇನ್‌ಸ್ಟ್ರಾಗ್ರಾಮ್‌ಗಳನ್ನು ಹೇಗೆ ಸುರಕ್ಷಿತವಾಗಿಸಬಹುದು ಎಂಬುದು ತಿಳಿದಿದೆ. ಆದರೆ ಅವರು ಈ ಅಗತ್ಯ ಬದಲಾವಣೆಗಳನ್ನು ತರಲು ಮುಂದಾಗುತ್ತಿಲ್ಲ. ಇದರ ಹಿಂದೆ ಲಾಭದ ಉದ್ದೇಶ ಇದೆ’ ಎಂದು ಹೌಗೆನ್‌ ದೂರಿದ್ದಾರೆ. ಈ ಸಂಬಂಧ ಸಂಸತ್ತು ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಹಂಚಿಕೆ ವೇದಿಕೆಯ ಕನಿಷ್ಠ ವಯಸ್ಸನ್ನು ಈಗಿನ 13ರ ಬದಲಿಗೆ 16 ಅಥವಾ 18ಕ್ಕೆ ಏರಿಸುವುದು ಸೂಕ್ತ ಎಂದು ಅವರು ಇದೇ ವೇಳೆ ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು