ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್‌ ಟ್ರಂಪ್‌ ವಿರುದ್ಧದ ಮಹಾಭಿಯೋಗ ಪ್ರಕ್ರಿಯೆ ಆರಂಭ

Last Updated 12 ಜನವರಿ 2021, 2:26 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಕ್ಯಾಪಿಟಲ್‌ ಮೇಲಿನ ದಾಳಿ ಮತ್ತು ಹಿಂಸಾಚಾರಕ್ಕೆ ತನ್ನ ಬೆಂಬಲಿಗರಿಗೆ ಪ್ರಚೋದಿಸಿದ ಆರೋಪದ ಮೇಲೆ ಡೆಮಾಕ್ರಟಿಕ್ ಪಕ್ಷದ ಮೂವರು ಸಂಸದರು ಸೋಮವಾರ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣಾ (ಮಹಾಭಿಯೋಗ) ಕರಡನ್ನು ಸಂಸತ್‌ನಲ್ಲಿ ಮಂಗಳವಾರ ಪರಿಚಯಿಸಿದ್ದಾರೆ.

ಅಮೆರಿಕದ ಕಾಂಗ್ರೆಸ್‌ನ ಡೆಮಾಕ್ರಟಿಕ್‌ ಪಕ್ಷದ ಜೇಮೀ ರಾಸ್ಕಿನ್, ಡೇವಿಡ್ ಸಿಸಿಲಿನ್ ಮತ್ತು ಟೆಡ್ ಲಿಯು ಅವರು ದೋಷಾರೋಪಣೆ ಕರಡವನ್ನು ರಚಿಸಿದ್ದರೆ, ಅಮೆರಿಕದ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನ 211 ಸದಸ್ಯರು ಕರಡುವಿಗೆ ಬೆಂಬಲ ಸೂಚಿಸಿದ್ದಾರೆ.

ಅಮೆರಿಕದ ನೂತನ ಅಧ್ಯಕ್ಷರ ಆಯ್ಕೆಯನ್ನು ಖಚಿತಪಡಿಸುವ ಎಲೆಕ್ಟ್ರಾಲ್‌ ಮತ ಎಣಿಕೆ ಪ್ರಕ್ರಿಯೆಗೆ ತಡೆಯೊಡ್ಡಿದ, ಪೊಲೀಸ್‌ ಅಧಿಕಾರಿಯೂ ಸೇರಿ ಐವರ ಸಾವಿಗೆ ಕಾರಣವಾಗಿದ್ದ, ಅಮೆರಿಕ ಕ್ಯಾಪಿಟಲ್‌ ಮೇಲಿನ ತಮ್ಮ ಬೆಂಬಲಿಗರ ದಾಳಿಗೆ ಟ್ರಂಪ್‌ ಅವರನ್ನು ಕರಡುವಿನಲ್ಲಿ ಹೊಣೆಗಾರರನ್ನಾಗಿಸಲಾಗಿದೆ. ದಂಗೆಗೆ ಪ್ರಚೋದಿಸಿದ ಆರೋಪವನ್ನು ಹೊರಿಸಲಾಗಿದೆ.

'ಕಳೆದ ಬುಧವಾರ ದೇಶದ ಇತಿಹಾಸದ ಕರಾಳ ದಿನವಾಗಿತ್ತು. 2020 ರ ಚುನಾವಣೆಯ ಫಲಿತಾಂಶಗಳ ವಿರುದ್ಧ ತಿಂಗಳಕಾಲ ಅಪಪ್ರಚಾರ ನಡೆಸಿದ ನಂತರ, ಅಧ್ಯಕ್ಷ ಟ್ರಂಪ್ ಅವರ ಬೆಂಬಲಿಗರು ಪ್ರಜಾಪ್ರಭುತ್ವದ ಕೋಟೆಯಾದ ಕ್ಯಾಪಿಟಲ್ ಮೇಲೆ ದಾಳಿ ನಡೆಸಿದರು. ಈ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳನ್ನು ತಲೆಕೆಳಗು ಮಾಡುವ ಪ್ರಯತ್ನ ನಡೆಸಿದರು,' ಎಂದು ದೋಷಾರೋಪಣೆಯ ಕರಡುವಿನಲ್ಲಿ ಹೇಳಲಾಗಿದೆ. ಕರಡು ರಚಿಸಿದ ಅಮೆರಿಕ ಕಾಂಗ್ರೆಸ್‌ನ ಸದಸ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

'ಈ ದಾಳಿಯ ಪ್ರಚೋದನೆಗೆ ಉತ್ತರಿಸದೆ ಹೋಗಲು ನಾವು ಬಿಡುವುದಿಲ್ಲ. ದಾಳಿಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಜವಾಬ್ದಾರರಾಗಬೇಕು. ಅದಕ್ಕೆ ಹೆಚ್ಚು ಜವಾಬ್ದಾರಿಯುತ ವ್ಯಕ್ತಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಆಂತರಿಕ ಮತ್ತು ಬಾಹ್ಯ ಶತ್ರುಗಳಿಗೆ ಶೀಘ್ರವಾಗಿ ದಂಡನೆ ನೀಡದೇ, ನಾವು ಈ ದೇಶದ ಆತ್ಮಕ್ಕೆ ಮದ್ದು ನೀಡಲು ಸಾಧ್ಯವಿಲ್ಲ,' ಎಂದು ಕರಡು ರಚನಾ ತಂಡದ ಸದಸ್ಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT