ಮಂಗಳವಾರ, ಜೂನ್ 28, 2022
20 °C

ಜಾಗತಿಕ 200 ಕೋಟಿ ಕೋವಿಡ್‌ ಲಸಿಕೆಯ ಡೋಸ್‌ ಹಂಚಿಕೆಯಾಗಿದೆ: ವಿಶ್ವ ಆರೋಗ್ಯ ಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ‘ವಿಶ್ವದಲ್ಲಿ ಈವರೆಗೆ ಸುಮಾರು 200 ಕೋಟಿ ಕೋವಿಡ್‌ ಲಸಿಕೆಯ ಡೋಸ್‌ಗಳು ವಿತರಣೆಯಾಗಿದ್ದು, ಅವುಗಳಲ್ಲಿ ಅಮೆರಿಕ, ಭಾರತ ಮತ್ತು ಚೀನಾ ಸಿಂಹಪಾಲು ಪಡೆದಿವೆ. ಈ ಮೂರು ರಾಷ್ಟ್ರಗಳು ಒಟ್ಟಾರೆ ಲಸಿಕೆಯ ಶೇ 60ರಷ್ಟು ಪಾಲನ್ನು ಪಡೆದಿವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಹಿರಿಯ ಸಲಹೆಗಾರರೊಬ್ಬರು ತಿಳಿಸಿದರು.

ಶುಕ್ರವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಬ್ಲ್ಯೂಎಚ್‌ಒ ಪ್ರಧಾನ ನಿರ್ದೇಶಕ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸಸ್‌ ಅವರ ಹಿರಿಯ ಸಲಹೆಗಾರ ಬ್ರೂಸ್‌ ಐಲ್ವರ್ಡ್‌ ಅವರು, ‘ಕೋವಿಡ್‌ ಲಸಿಕೆಗಳು ಜಗತ್ತಿನ 212 ರಾಷ್ಟ್ರಗಳಿಗೆ ವಿತರಣೆಯಾಗುತ್ತಿದೆ’ ಎಂದರು.

‘ಜಾಗತಿಕವಾಗಿ ವಿತರಣೆ ಮಾಡಲಾಗಿರುವ ಕೋವಿಡ್‌ ಲಸಿಕೆ ಡೋಸ್‌ಗಳ ಪೈಕಿ 10 ರಾಷ್ಟ್ರಗಳು ಶೇ 75 ರಷ್ಟು ಭಾಗವನ್ನು ಪಡೆದಿವೆ. ಅದರಲ್ಲೂ ಅಮೆರಿಕ, ಭಾರತ ಮತ್ತು ಚೀನಾವು ಶೇಕಡ 60ರಷ್ಟು ಪಾಲನ್ನು ಹಂಚಿಕೊಂಡಿವೆ. ಕೋವ್ಯಾಕ್ಸ್‌ ಲಸಿಕೆಯು ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, 127 ರಾಷ್ಟ್ರಗಳಿಗೆ  ವಿತರಣೆ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

‘ವಿಶ್ವದ ಜನಸಂಖ್ಯೆಯ ಶೇ 10 ರಷ್ಟಿರುವ ಕಡಿಮೆ ಆದಾಯದ ದೇಶಗಳಲ್ಲಿ ಕೇವಲ ಶೇ 0.5 ರಷ್ಟು ಕೋವಿಡ್‌ ಲಸಿಕೆಯು ಲಭ್ಯವಾಗಿದೆ. ಜಾಗತಿಕವಾಗಿ ಕೋವ್ಯಾಕ್ಸ್‌ ಮೂಲಕ 8 ಕೋಟಿ ಡೋಸ್‌ಗಳನ್ನು ವಿತರಣೆ ಮಾಡಲಾಗಿದೆ. ಆದರೆ ಭಾರತದಲ್ಲಿ ಏಕಾಏಕಿ ಕೋವಿಡ್‌ ಏರಿಕೆಯಾದ್ದರಿಂದ ಲಸಿಕೆ ವಿತರಣೆಯಲ್ಲಿ ತೊಂದರೆ ಉಂಟಾಗಿದೆ. ನಾವು ಲಸಿಕೆ ವಿತರಣೆಯಲ್ಲಿ 20 ಕೋಟಿ ಡೋಸ್‌ಗಳಷ್ಟು ಹಿಂದೆ ಉಳಿದಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಕೋವ್ಯಾಕ್ಸ್‌ ಮೂಲಕ 15 ಕೋಟಿ ಡೋಸ್‌ಗಳನ್ನು ಹಂಚಿಕೆ ಮಾಡಬೇಕೆಂಬ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ ಇದಕ್ಕೆ ಎರಡು ಸಮಸ್ಯೆಗಳು ಎದುರಾಗಿವೆ. ಮೊದಲನೇಯದಾಗಿ, ಜೂನ್‌–ಜುಲೈ ಅವಧಿಯಲ್ಲಿ ಬಹಳ ಕಡಿಮೆ ಲಸಿಕೆ ಪೂರೈಕೆಯಾಗಲಿದೆ. ಈ ವರ್ಷ ಜಾಗತಿಕವಾಗಿ ವಿತರಣೆ ಮಾಡಲಾದ ಲಸಿಕೆಯ ಶೇ 30 ರಿಂದ 40 ಭಾಗದಷ್ಟು ಲಸಿಕೆ ಲಭ್ಯವಾದ್ದಲ್ಲಿ, ಸೆಪ್ಟೆಂಬರ್‌ ಅಂತ್ಯದಲ್ಲಿ 25 ಕೋಟಿ ಜನರಿಗೆ ಲಸಿಕೆಯನ್ನು ಒದಗಿಸಬಹುದು’ ಎಂದು ಅವರು ತಿಳಿಸಿದರು.

‘ಎರಡನೇಯದಾಗಿ, ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ನಾಲ್ಕನೇ ತ್ರೈಮಾಸಿಕದಲ್ಲಾದರೂ ಲಸಿಕೆ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಬೇಕು. ಸಂಸ್ಥೆ ಆದಷ್ಟು ಬೇಗ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯನ್ನು ಪೂರೈಸಬೇಕು. ಇಲ್ಲವಾದ್ದಲ್ಲಿ ಹಲವು ರಾಷ್ಟ್ರಗಳು ತೊಂದರೆ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾವು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆಯಾಗಿದೆ. ಭಾರತದಲ್ಲಿ ಎದುರಾಗಿರುವ ಕೋವಿಡ್‌ ಎರಡನೇ ಅಲೆಯಿಂದಾಗಿ ಇತರೆ ರಾಷ್ಟ್ರಗಳ ಲಸಿಕೆ ಹಂಚಿಕೆಯಲ್ಲಿ ಅಡಚಣೆ ಉಂಟಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು