ಔಷಧ ಕ್ಷೇತ್ರಕ್ಕೆ ಪ್ರತ್ಯೇಕ ನೀತಿ: ಅಮೆರಿಕದ ಸಂಸ್ಥೆಗಳ ಮನವಿ

ವಾಷಿಂಗ್ಟನ್: ಔಷಧ ಉತ್ಪಾದನಾ ವಲಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಸಂಶೋಧನಾ ಮತ್ತು ಅಭಿವೃದ್ಧಿ ನೀತಿಯನ್ನು ರೂಪಿಸಬೇಕು ಎಂದು ಅಮೆರಿಕದ ಔಷದ ಉತ್ಪಾದಕ ಸಂಸ್ಥೆಗಳು ಬಯಸಿವೆ.
ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು 2023– 24ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿರುವಂತೆಯೇ ಈ ಕುರಿತ ಬೇಡಿಕೆ ಹೊರಬಿದ್ದಿದೆ. ಕೇಂದ್ರ ಬಜೆಟ್ ಫೆ. 1ರಂದು ಮಂಡನೆಯಾಲಿದೆ.
ಅಮೆರಿಕ –ಭಾರತ ವಾಣಿಜ್ಯ ಸಂಸ್ಥೆಗಳ ಒಕ್ಕೂಟದ (ಯುಎಸ್‌ಎಐಸಿ) ಅಧ್ಯಕ್ಷ ಕರುಣ್ ರಿಷಿ ಈ ಕುರಿತು ಹೇಳಿಕೆ ನೀಡಿದ್ದಾರೆ. ಯುಎಸ್‌ಎಐಸಿ 16 ವರ್ಷಗಳಿಂದ ಭಾರತ–ಅಮೆರಿಕ ಆರೋಗ್ಯ ಶೃಂಗಸಭೆ ಆಯೋಜಿಸುತ್ತಿದೆ.
ಬಯೊಫಾರ್ಮಾ ವಲಯಕ್ಕೆ ಅನ್ವಯಿಸಿ ಬಜೆಟ್ ಸಂಶೋಧನೆ ಮತ್ತು ಅಭಿವೃದ್ಧಿ ಆಧರಿತ ಬೆಳವಣಿಗೆಗೆ ಒತ್ತು ನೀಡಬೇಕು. ಸಮರ್ಪಕ ನೀತಿಯು ಭಾರತವು ಈ ಕ್ಷೇತ್ರದಲ್ಲಿ ವಿಶ್ವದಲ್ಲೇ ಮುಂಚೂಣಿಗೆ ಬರಲು ನೆರವಾಗಬಹುದು ಎಂದು ಕರುಣ್ ರಿಷಿ ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಭದ್ರತೆ ಹಾಗೂ ಜಾಗತಿಕ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸಲು ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪಾದನೆ, ಮುಖ್ಯವಾಗಿ ಎಪಿಐ (ಉಪ ಔಷಧ ವಸ್ತುಗಳು) ಉತ್ಪಾದನೆಗೆ ಒತ್ತು ನೀಡಬೇಕಿದೆ. ಇದೊಂದು ಸವಾಲಿನ ಕೆಲಸವಾದರೂ ಹಣಕಾಸು ಸಚಿವರು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.