ಸೋಮವಾರ, ನವೆಂಬರ್ 30, 2020
21 °C
ಅಮೆರಿಕ

ವೀಸಾ ನೀತಿ ಉದಾರ: 5 ಲಕ್ಷ ಭಾರತೀಯರಿಗೆ ಪೌರತ್ವ ನೀಡಲು ಜೋ ಬೈಡನ್‌ ಚಿಂತನೆ

ಪಿಟಿಐ Updated:

ಅಕ್ಷರ ಗಾತ್ರ : | |

ಕಮಲಾ ಮತ್ತು ಬೈಡನ್‌ ಜನರನ್ನು ಉದ್ದೇಶಿಸಿ ಮಾತನಾಡಿದರು –ಎಎಫ್‌ಪಿ ಚಿತ್ರ

ವಾಷಿಂಗ್ಟನ್‌: ಐದು ಲಕ್ಷ ಭಾರತೀಯರು ಸೇರಿದಂತೆ 1.1 ಕೋಟಿ ವಲಸಿಗರಿಗೆ ಪೌರತ್ವ ನೀಡುವ ಬಗ್ಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಜೋ ಬೈಡನ್‌ ಚಿಂತಿಸುತ್ತಿದ್ದಾರೆ. ಪ್ರತಿ ವರ್ಷವೂ ಕನಿಷ್ಠ 95 ಸಾವಿರ ನಿರಾಶ್ರಿತರಿಗೆ ಆಶ್ರಯ ನೀಡುವ ಸಾಧ್ಯತೆಯೂ ಇದೆ ಎಂದು ಬೈಡನ್‌ ಚುನಾವಣಾ ಪ್ರಚಾರ ಸಮಿತಿಯು ಬಿಡುಗಡೆ ಮಾಡಿರುವ ಮುನ್ನೋಟ ಪತ್ರದಲ್ಲಿ ಹೇಳಲಾಗಿದೆ. 

‘ವಲಸೆ ನೀತಿ ಸುಧಾರಣೆಯ ಕಾನೂನು ಅಂಗೀಕರಿಸಲು ಅಗತ್ಯ ಕ್ರಮವನ್ನು ಬೈಡನ್‌ ತಕ್ಷಣವೇ ಕೈಗೊಳ್ಳಲಿದ್ದಾರೆ’ ಎಂದು ಮುನ್ನೋಟದಲ್ಲಿ ವಿವರಿಸಲಾಗಿದೆ.  ಗ್ರೀನ್‌ ಕಾರ್ಡ್‌ ಎಂದು ಕರೆಯಲಾಗುವ ಉದ್ಯೋಗ ಆಧಾರಿತ ವೀಸಾ ಹೊಂದಿರುವವರಿಗೆ ಪೌರತ್ವ ನೀಡಿಕೆಯ ನೀತಿಯೂ ಮರಳಿ ಜಾರಿ ಆಗಲಿದೆ.   

ಇರಾನ್‌, ಸಿರಿಯಾ ಸೇರಿದಂತೆ ಕೆಲವು ರಾಷ್ಟ್ರಗಳ ಮುಸ್ಲಿಮರು ಅಮೆರಿಕ ಪ್ರವೇಶಿಸುವುದನ್ನು ಟ್ರಂಪ್‌ ಅವರು ನಿಷೇಧಿಸಿದ್ದರು. ಈ ನಿಷೇಧವೂ ತೆರವಾಗಲಿದೆ.

ಎಚ್‌1ಬಿ ವೀಸಾ ಸಂಖ್ಯೆ ಏರಿಕೆ

ಎಚ್‌1ಬಿ ವೀಸಾ ಸೇರಿದಂತೆ ಪರಿಣತ ವೃತ್ತಿಪರರಿಗೆ ನೀಡಲಾಗುವ ವೀಸಾಗಳ ಸಂಖ್ಯೆ ಹೆಚ್ಚಳ ಆಗಲಿದೆ.

ಆಯಾ ದೇಶಕ್ಕೆ ನೀಡುವವೀಸಾ ಸಂಖ್ಯೆ ಮೇಲಿನ ಮಿತಿಯನ್ನು ರದ್ದು ಮಾಡಲಾಗುವುದು. ಈ ಎರಡು ನಿರ್ಧಾರಗಳಿಂದ ಭಾರತದ ಮಾಹಿತಿ ತಂತ್ರಜ್ಞಾನ ಪರಿಣತರಿಗೆ ಭಾರಿ ಅನುಕೂಲ ಆಗಲಿದೆ.

ಎಚ್‌1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ (ಗಂಡ ಅಥವಾ ಹೆಂಡತಿ) ನೀಡಿದ್ದ ವೀಸಾವನ್ನು ಟ್ರಂಪ್‌ ಅವರು ರದ್ದು ಮಾಡಿದ್ದರು. ಈ ರದ್ದತಿ ತೆರವಾಗುವ ಸಾಧ್ಯತೆ ಇದೆ. 

ಅಮೆರಿಕದ ಕೆಲಸಗಾರರ ಹಿತರಕ್ಷಣೆಯ ಉದ್ದೇಶದಿಂದ ಇತರ ವಿದೇಶಿ ವೀಸಾ ನೀಡಿಕೆ ಕೂಡ ರದ್ದಾಗಿತ್ತು. 

ಕಮಲಾಗೆ ಭಾರತಕ್ಕೆ ಆಹ್ವಾನ

(ನವದೆಹಲಿ ವರದಿ): ಬೈಡನ್‌ ನೇತೃತ್ವದ ಸರ್ಕಾರದ ಜತೆಗೆ ಆರಂಭದಿಂದಲೇ ಸಮನ್ವಯದಿಂದ ಕೆಲಸ ಮಾಡಲು ಕೇಂದ್ರ ಸರ್ಕಾರ ಯೋಜಿಸಿದೆ. ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿರುವ ಕಮಲಾ ಹ್ಯಾರಿಸ್‌ ಅವರು 2021ರ ಜನವರಿ 20ರಂದು ಅಧಿಕಾರ ವಹಿಸಿಕೊಂಡ ಬಳಿಕ ಅವರನ್ನು ಭಾರತಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಪ್ರಮಾಣ ವಚನ ಸ್ವೀಕಾರದ ನಂತರ, ಜಗತ್ತಿನ ಪ್ರಜಾತಂತ್ರ ದೇಶಗಳ ಮುಖ್ಯಸ್ಥರ ಸಮಾವೇಶಕ್ಕೆ ಬೈಡನ್‌ ಸಿದ್ಧತೆ ನಡೆಸಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ದೊರೆಯುವ ನಿರೀಕ್ಷೆ ಇದೆ. ಆಹ್ವಾನ ಬಂದರೆ ಅಮೆರಿಕದ ಹೊಸ ಅಧ್ಯಕ್ಷ ಮತ್ತು ಪ್ರಧಾನಿ ಮೋದಿಯ ಭೇಟಿಗೂ ಇದು ವೇದಿಕೆ ಒದಗಿಸಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು