ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅತಿದೊಡ್ಡ ವಿಮಾನವನ್ನು ನಾಶ ಮಾಡಿದ ರಷ್ಯಾ ಸೇನೆ

Last Updated 28 ಫೆಬ್ರುವರಿ 2022, 5:23 IST
ಅಕ್ಷರ ಗಾತ್ರ

ಕೀವ್: ‘ವಿಶ್ವದ ಅತಿದೊಡ್ಡ ವಿಮಾನ, ಉಕ್ರೇನ್‌ನ ‘ಆಂಟೊನೊವ್-225’ ಸರಕು ವಿಮಾನವನ್ನು ರಷ್ಯಾದ ಸೇನಾ ಪಡೆಗಳು ಕೀವ್‌ ಹೊರವಲಯದಲ್ಲಿ ಭಾನುವಾರ ನಾಶ ಮಾಡಿವೆ’ ಎಂದು ಉಕ್ರೇನ್‌ನ ಸರ್ಕಾರಿ ಸ್ವಾಮ್ಯದ, ಶಸ್ತ್ರಾಸ್ತ್ರ ತಯಾರಕ ಸಂಸ್ಥೆ ‘ಉಕ್ರೊಬೊರಾನ್‌ಪ್ರೊಮ್’ ಹೇಳಿದೆ.

ಈ ಬೃಹತ್‌ ವಿಮಾನಕ್ಕೆ ಉಕ್ರೇನ್‌ ‘ಮ್ರಿಯಾ’ ಎಂದು ಹೆಸರಿಟ್ಟಿತ್ತು. ಇದರ ಅರ್ಥ, ಉಕ್ರೇನ್‌ ಭಾಷೆಯಲ್ಲಿ ‘ಕನಸು’ ಎಂದು.

‘ಉಕ್ರೇನ್‌ ವಾಯುಯಾನದ ಹೆಗ್ಗುರುತು ಎನಿಸಿಕೊಂಡಿದ್ದ AN-225 ಅನ್ನು ಕೀವ್‌ ಬಳಿಯ ಗೊಸ್ಟೊಮೆಲ್‌ನಲ್ಲಿರುವ ಆಂಟೊನೊವ್ ವಿಮಾನ ನಿಲ್ದಾಣದಲ್ಲಿ ರಷ್ಯಾದ ಆಕ್ರಮಣಕಾರರು ನಾಶಪಡಿಸಿದ್ದಾರೆ’ ಎಂದು ಉಕ್ರೊಬೋರಾನ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜಗತ್ತಿನಲ್ಲೇ ಅತ್ಯಂತ ವಿಶೇಷ ಎನಿಸಿದ್ದ ಈ ವಿಮಾನವು 84 ಮೀಟರ್ ಉದ್ದ (276 ಅಡಿ) ಇತ್ತು. ಗಂಟೆಗೆ 850 ಕಿಲೋಮೀಟರ್ (528 ಎಂಪಿಎಚ್‌) ವೇಗದಲ್ಲಿ 250 ಟನ್‌ಗಳಷ್ಟು (551,000 ಪೌಂಡ್‌ಗಳು) ಸರಕುಗಳನ್ನು ಸಾಗಿಸಬಲ್ಲ ಶಕ್ತಿ ಹೊಂದಿತ್ತು.

‘ಎಎನ್ -225 'ಮ್ರಿಯಾ’ ವಿಶ್ವದ ಅತಿದೊಡ್ಡ ವಿಮಾನವಾಗಿತ್ತು’ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಭಾನುವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ರಷ್ಯಾ ನಮ್ಮ 'ಮ್ರಿಯಾ'ವನ್ನು ನಾಶಪಡಿಸಿರಬಹುದು. ಆದರೆ ಅವರು ಎಂದಿಗೂ ನಮ್ಮ ಬಲವಾದ, ಮುಕ್ತ ಮತ್ತು ಪ್ರಜಾಪ್ರಭುತ್ವವಾದಿ ಯುರೋಪಿಯನ್ ರಾಜ್ಯದ ಕನಸನ್ನು ನಾಶಮಾಡಲು ಸಾಧ್ಯವಿಲ್ಲ. ನಾವು ಮೇಲುಗೈ ಸಾಧಿಸುತ್ತೇವೆ’ ಅವರು ಹೇಳಿದರು.

ರಷ್ಯಾದ ಆಕ್ರಮಣ ಪ್ರಾರಂಭದಿಂದಲೂ ಗೊಸ್ಟೊಮೆಲ್ ವಿಮಾನ ನಿಲ್ದಾಣವು ಹಿಂಸಾತ್ಮಕ ಘರ್ಷಣೆಗೆ ಸಾಕ್ಷಿಯಾಗಿದೆ.

ವ್ಯೂಹಾತ್ಮಕ ಮೂಲಸೌಕರ್ಯವನ್ನು ವಶಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದೆ ಎಂದು ರಷ್ಯಾದ ಸೇನೆ ಹೇಳಿದೆ.

‘ಮ್ರಿಯಾ’ ವಿಮಾನವನ್ನು ರಿಪೇರಿ ಮಾಡಲು 3 ಶತಕೋಟಿ ಡಾಲರ್‌ (₹22,713 ಕೋಟಿ) ವೆಚ್ಚವಾಗಲಿದೆ. ಮತ್ತು, ಐದು ವರ್ಷಗಳಷ್ಟು ಸಮಯ ಬೇಕಾಗುತ್ತದೆ ಎಂದು ‘ಉಕ್ರೊಬೊರೊನ್‌ಪ್ರೊಮ್’ ಅಂದಾಜಿಸಿದೆ.

‘ಉದ್ದೇಶಪೂರ್ವಕವಾಗಿ ಹಾನಿ ಮಾಡಿದ ರಷ್ಯಾವೇ ಈ ವೆಚ್ಚ ಭರಿಸಬೇಕು ಎಂಬುದು ನಮ್ಮ ಆಗ್ರಹ’ ಎಂದು ಅದು ಹೇಳಿದೆ.

‘ಸೋವಿಯತ್ ಏರೋನಾಟಿಕಲ್’ ಕಾರ್ಯಕ್ರಮದ ಭಾಗವಾಗಿ ಈ ವಿಮಾನವನ್ನು ತಯಾರಿಸಲಾಗಿತ್ತು. 1988 ರಲ್ಲಿ ಇದು ತನ್ನ ಮೊದಲ ಹಾರಾಟ ಕೈಗೊಂಡಿತ್ತು.

ಸೋವಿಯತ್ ಒಕ್ಕೂಟದ ಪತನದ ನಂತರ ವಿಮಾನವು ಹಲವು ವರ್ಷಗಳ ಹಾರಾಟವನ್ನೇ ನಡೆಸಿರಲಿಲ್ಲ. 2001 ರಲ್ಲಿ ಕೀವ್‌ನಿಂದ 20 ಕಿಲೋಮೀಟರ್ ದೂರದಲ್ಲಿರುವ ಗೊಸ್ಟೊಮೆಲ್‌ನಲ್ಲಿ ಪರೀಕ್ಷಾ ಹಾರಾಟವನ್ನು ಮಾಡಿತ್ತು.

ಉಕ್ರೇನ್‌ನ ‘ಆಂಟೊನೊವ್ ಏರ್‌ಲೈನ್ಸ್’ ಇದನ್ನು ನಿರ್ವಹಿಸುತ್ತಿದೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಈ ವಿಮಾನಕ್ಕೆ ಹೆಚ್ಚಿನ ಬೇಡಿಕೆಯಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT