ಮೃತ ಮಹಿಳೆಯ ಗರ್ಭಕೋಶ ಕಸಿ ಯಶಸ್ವಿ: ಮಗು ಜನನ

7
ಮಗುವಿಗೆ ಜನ್ಮ ನೀಡಿದ ಮಹಿಳೆ

ಮೃತ ಮಹಿಳೆಯ ಗರ್ಭಕೋಶ ಕಸಿ ಯಶಸ್ವಿ: ಮಗು ಜನನ

Published:
Updated:
Deccan Herald

ವಾಷಿಂಗ್ಟನ್: ಮೃತ ಮಹಿಳೆಯಿಂದ ಪಡೆದ ಗರ್ಭಕೋಶವನ್ನು ಬ್ರೆಜಿಲ್‌ನ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದ್ದು, ಅವರು ಮಗುವಿಗೆ ಜನ್ಮನೀಡಿದ್ದಾರೆ. ಈ ವಿಧಾನ ಜಗತ್ತಿನಲ್ಲಿ ಮೊದಲು ಎಂದು ಲ್ಯಾನ್ಸೆಟ್ ಪತ್ರಿಕೆಯು ಸಂಶೋಧನಾ ವರದಿ ಪ್ರಕಟಿಸಿದೆ. 

ಬಂಜೆತನ ಎದುರಿಸುತ್ತಿರುವ ಮಹಿಳೆಯರಿಗೆ ಜೀವಂತ ಮಹಿಳೆಯ (ದಾನಿಯ) ಗರ್ಭಾಶಯವನ್ನೇ ಕಸಿ ಮಾಡಬೇಕಿಲ್ಲ. ಮೃತ ಮಹಿಳೆಯ ಗರ್ಭಾಶಯದ ಕಸಿ ವಿಧಾನವೂ ಕಾರ್ಯಸಾಧ್ಯ ಎಂಬುದನ್ನು ವರದಿ ತೋರಿಸಿದೆ. 

‘ನಮ್ಮ ಫಲಿತಾಂಶವು ಹೊಸ ಪರಿಕಲ್ಪನೆಗೆ ಪುರಾವೆಯನ್ನೂ ಒದಗಿಸಿದ್ದು, ಫಲವತ್ತತೆ ಕೊರತೆಯಿರುವ ಮಹಿಳೆಯರಿಗೆ ಹೊಸ ಆಯ್ಕೆಯಾಗಿದೆ’ ಎಂದು ಸಂಶೋಧನೆಯ ನೇತೃತ್ವ ವಹಿಸಿರುವ ಸಾವೊ ಪೌಲ್ ವಿಶ್ವವಿದ್ಯಾಲಯದ ಡಾನಿ ಎಝೆನ್‌ಬರ್ಗ್ ಹೇಳಿದ್ದಾರೆ. ಇದು ಲ್ಯಾಟಿನ್ ಅಮೆರಿಕದಲ್ಲಿ ನಡೆದ ಮೊದಲ ಗ‌ರ್ಭಕೋಶ ಕಸಿ ಶಸ್ತ್ರಚಿಕಿತ್ಸೆಯಾಗಿದೆ.

ಹಿಂದೆಯೂ ನಡೆದಿತ್ತು ಯತ್ನ: ಅಮೆರಿಕ, ಜೆಕ್ ಗಣರಾಜ್ಯ ಮತ್ತು ಟರ್ಕಿ ದೇಶಗಳಲ್ಲಿ ಮೃತ ಮಹಿಳೆಯ ಗರ್ಭಾಶಯ ಕಸಿ ಮಾಡುವ ಯತ್ನಗಳು ಈವರೆಗೆ ಹತ್ತು ಬಾರಿ ನಡೆದಿದ್ದರೂ, ಯಶ ಕಂಡಿದ್ದು ಇದೇ ಮೊದಲು. 

2013ರಲ್ಲಿ ಮೊದಲ ಬಾರಿಗೆ ಜೀವಂತ ಮಹಿಳೆಯ ಗರ್ಭಕೋಶವನ್ನು ಕಸಿ ಮಾಡಲಾಗಿತ್ತು. ಇಂತಹ 39 ಯತ್ನಗಳಲ್ಲಿ 11 ಪ್ರಕರಣಗಳು ಮಾತ್ರ ಫಲ ಕಟ್ಟಿವೆ. ಗರ್ಭಕೋಶ ದಾನಿ ಮಹಿಳೆಯರ ಸಂಖ್ಯೆ ಕಡಿಮೆ ಇರುವುದು ಇದಕ್ಕಿರುವ ಮಿತಿ. 

ಜೀವಂತವಿದ್ದಾಗ ಅಂಗಾಂಗಳನ್ನು ದಾನ ನೀಡುವವರಿಗೆ ಹೋಲಿಸಿದರೆ, ಮೃತಪಟ್ಟ ಬಳಿಕ ಅಂಗಾಗ ದಾನ ನೀಡುವುದಾಗಿ ಘೋಷಿಸುವವರ ಸಂಖ್ಯೆ ಅಧಿಕ. ಹೀಗಾಗಿ ಮೃತ ವ್ಯಕ್ತಿಯ ಗರ್ಭಕೋಶ ಕಸಿ ವಿಧಾನ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !