ಚೀನಾ: ಅತಿ ಉದ್ದದ ಸೇತುವೆ ಬಳಕೆಗೆ ಮುಕ್ತ

7

ಚೀನಾ: ಅತಿ ಉದ್ದದ ಸೇತುವೆ ಬಳಕೆಗೆ ಮುಕ್ತ

Published:
Updated:
Deccan Herald

ಬೀಜಿಂಗ್: ಜಗತ್ತಿನ ಅತಿ ಉದ್ದದ ಸಮುದ್ರ ಮೇಲ್ಸೇತುವೆ ಚೀನಾದಲ್ಲಿ ನಿರ್ಮಾಣವಾಗಿದೆ. ಅಧ್ಯಕ್ಷ ಷಿ ಜಿನ್‌ಪಿಂಗ್ ಮಂಗಳವಾರ ಸೇತುವೆಯನ್ನು ಬಳಕೆಗೆ ಮುಕ್ತಗೊಳಿಸಿದರು. 

* 55 ಕಿ.ಮೀ ಸೇತುವೆ ಉದ್ದ (ನೀರಿನಡಿ ಸುರಂಗ ಸೇರಿ)

* ₹1.5 ಲಕ್ಷ ಕೋಟಿ ಸೇತುವೆ ನಿರ್ಮಾಣ ವೆಚ್ಚ

* 30 ನಿಮಿಷ ಮೂರು ಭೂ ಪ್ರದೇಶಗಳನ್ನು ಸಂಪರ್ಕಿಸಲು ತೆಗೆದುಕೊಳ್ಳುವ ಸಮಯ (ಈ ಮೊದಲು 3 ಗಂಟೆ ಸಮಯ ಬೇಕಿತ್ತು)

* 10 ಲಕ್ಷ ಚದರ ಅಡಿ ಕೃತಕವಾಗಿ ನಿರ್ಮಿಸಿರುವ ಎರಡು ಭೂಭಾಗಗಳ ವಿಸ್ತೀರ್ಣ

ಎಲ್ಲಿ ಸಂಪರ್ಕಿಸುತ್ತೆ? 

ಹಾಂಕಾಂಗ್– ಮಕಾವ್–ಚೀನಾದ ಜುಹೈ

ಮುಖ್ಯಾಂಶಗಳು: 

*ಪರ್ಲ್ ನದಿಯ ನೀರಿನ ಮೇಲೆ ನಿರ್ಮಾಣ

*ಸೇತುವೆಯುದ್ದಕ್ಕೂ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ

*ಭಯೋತ್ಪಾದನಾ ತಡೆ ಪೊಲೀಸ್ ಪಡೆಯಿಂದ ಸೇತುವೆ ನಿಗಾ

*2009ರಲ್ಲಿ ಆರಂಭ; 2016ರಲ್ಲಿ ಮುಗಿಯಬೇಕಿತ್ತು

*ನಿರ್ಮಾಣದ ಅವಧಿಯಲ್ಲಿ 18 ಕಾರ್ಮಿಕರ ಸಾವು

*ಕಳೆದ ತಿಂಗಳು ಹಾಂಕಾಂಗ್–ಚೀನಾ ಮಧ್ಯೆ ಹೈಸ್ಪೀಡ್ ರೈಲು ಶುರುವಾಗಿತ್ತು

ಮಹತ್ವ ಏನು?

*ಸೇತುವೆ ನಿರ್ಮಾಣಕ್ಕೆ 4 ಲಕ್ಷ ಟನ್ ಉಕ್ಕು ಬಳಸಲಾಗಿದೆ. ಇಷ್ಟು ಪ್ರಮಾಣದ ಉಕ್ಕು ಬಳಸಿ ಸುಮಾರು 60 ಐಫೆಲ್ ಟವರ್ ನಿರ್ಮಿಸಬಹುದಾಗಿದೆ. 

*ಭೂಕಂಪ ಮತ್ತು ಚಂಡಮಾರುತಗಳ ಹೊಡೆತ ತಾಳಿಕೊಳ್ಳುವ ಸಾಮರ್ಥ್ಯ ಈ ಸೇತುವೆಗೆ ಇದೆ

*2030ರ ಹೊತ್ತಿಗೆ ಈ ಸೇತುವೆಯನ್ನು ನಿತ್ಯವೂ 29 ಸಾವಿರ ವಾಹನಗಳು ಹಾಗೂ 1.26 ಲಕ್ಷ ಜನರು ಬಳಕೆ ಮಾಡುವ ಅಂದಾಜು ಇದೆ.

* ಹಾಂಕಾಂಗ್‌, ಮಕಾವ್ ಜತೆ ಚೀನಾದ 9 ನಗರಗಳನ್ನು ಸಂಪರ್ಕಿಸುವ ಮೂಲಕ ‘ಗ್ರೇಟರ್ ಬೇ ಏರಿಯಾ’ ನಿರ್ಮಾಣ  ಚೀನಾದ ಉದ್ದೇಶ.

ಕೃತಕ ಭೂಭಾಗ ಮತ್ತು ನೀರಿನಡಿ ಸುರಂಗ: 

ನೀರಿನಲ್ಲಿ ಎರಡು ಕೃತಕ ಭೂ ಭಾಗಗಳನ್ನು ನಿರ್ಮಿಸಲಾಗಿದೆ. ರಸ್ತೆಯು ಒಂದು ಕಡೆಯ ಭೂಭಾಗದ ಮೂಲಕವಾಗಿ ನೀರಿನಡಿ ನಿರ್ಮಿಸಿರುವ ಸುರಂಗವನ್ನು ಪ್ರವೇಶಿಸುತ್ತದೆ. 6.7 ಕಿ.ಮೀ ನೀರಿನಾಳದಲ್ಲಿ ಸಂಚರಿಸಿ ಮತ್ತೊಂದು ಬದಿಯಲ್ಲಿ ನಿರ್ಮಿಸಿರುವ ಕೃತಕ ಭೂ ಭಾಗದ ಮೂಲಕ ಹೊರಬಂದು ಮೇಲ್ಸೇತುವೆಗೆ ಸಂಪರ್ಕಿಸುತ್ತದೆ. ಹಡಗು ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನೀರಿನಡಿ ಸುರಂಗ ಮಾರ್ಗ ನಿರ್ಮಿಸಲಾಗಿದೆ. 

ಆಕಳಿಸಿದರೆ ಎಚ್ಚರಿಕೆ: 

ಸೇತುವೆಯ ಇಕ್ಕೆಲಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳು ಚಾಲಕನ ಮೇಲೆ ನಿಗಾ ವಹಿಸುತ್ತವೆ. ವಾಹನದ ಚಾಲಕ 20 ಸೆಕೆಂಡ್ ಅವಧಿಯಲ್ಲಿ ಮೂರು ಬಾರಿ ಆಕಳಿಸಿದರೆ, ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. 

 ಚೀನಾ ಮಹತ್ವಾಕಾಂಕ್ಷೆ: 

ಈ ಮೇಲ್ಸೇತುವೆಯು ರಾಜಕೀಯ ಮತ್ತು ಆರ್ಥಿಕವಾಗಿ ಚೀನಾಕ್ಕೆ ಮಹತ್ವದ್ದು. ಅರೆಸ್ವಾಯತ್ತ ಪ್ರದೇಶಗಳ ಮೇಲೆ ಬಿಗಿ ಹಿಡಿತ ಸಾಧಿಸುವುದು ಈ ಬೃಹತ್ ಯೋಜನೆ ಹಿಂದಿರುವ ಉದ್ದೇಶ. ಏಷ್ಯಾದ ಆರ್ಥಿಕ ಕೇಂದ್ರ ಹಾಂಕಾಂಗ್, ಚೀನಾದ ಆಧುನಿಕ ನಗರ ಜುಹೈ ಹಾಗೂ ಮಕಾವ್ ದ್ವೀಪವನ್ನು ಸಂಪರ್ಕಿಸುವ ಮೂಲಕ ಚೀನಾ ಆಧಿಪತ್ಯ ಸಾಧಿಸಲಿದೆ. ಇದು ಎಂಜಿನಿಯರಿಂಗ್ ಅದ್ಭುತ ಎಂದು ಬಣ್ಣಿಸಲಾಗಿದ್ದರೂ, ಹಾಂಕಾಂಗ್‌ನ ಸ್ವಾತಂತ್ರ್ಯದ ಮೇಲೆ ಚೀನಾ ಸವಾರಿ ಮಾಡಲಿದೆ ಎಂಬ ಭೀತಿ ಆವರಿಸಿದೆ ಎಂದು ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. 

ಬಿಳಿ ಆನೆ ಎಂಬ ಟೀಕೆ: 

ಪ್ರಯಾಣದ ಸಮಯ ಕಡಿತಗೊಳಿಸಿ ವ್ಯಾಪಾರ ಅಭಿವೃದ್ಧಿಗೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗಿದ್ದರೂ ಈ ಯೋಜನೆಯನ್ನು ಬಿಳಿಯಾನೆಗೆ ಹೋಲಿಸಲಾಗಿದೆ. ಜೊತೆಗೆ ಕಾಮಗಾರಿ ಪೂರ್ಣಗೊಳ್ಳುವಲ್ಲಿ ವಿಪರೀತಿ ವಿಳಂಬವೂ ಆಯಿತು. ಮಿತಿಮೀರಿದ ಬಜೆಟ್‌, ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ, ನಿರ್ಮಾಣ ಕಾರ್ಮಿಕರ ಸಾವು ಮೊದಲಾದ ಅಡೆತಡೆಗಳನ್ನು ದಾಟಿ 9 ವರ್ಷಗಳ ಬಳಿಕ ಸೇತುವೆ ಕೊನೆಗೂ ಬಳಕೆಗೆ ಮುಕ್ತವಾಗಿದೆ. 

ಇನ್ನೆರಡು ಬೃಹತ್ ಯೋಜನೆ:

ಗುವಾಂಗ್‌ಝೌ–ಶೆನ್‌ಝೆನ್–ಹಾಂಕಾಂಗ್ ಎಕ್ಸ್‌ಪ್ರೆಸ್ ರೈಲ್ ಲಿಂಕ್

ಲಿಯಾಂತಾಂಗ್/ಹುಯೆಂಗ್ ಯುಯೆನ್ ವೈ ಬೌಂಡರಿ ಕಂಟ್ರೋಲ್ ಪಾಯಿಂಟ್

(ಮುಂದಿನ ವರ್ಷಾರಂಭದಲ್ಲಿ ಇವೆರಡೂ ಯೋಜನೆಗಳಿಗೆ ಚಾಲನೆ ಸಿಗಲಿದೆ)

ಆಧಾರ: ಪಿಟಿಐ ಹಾಗೂ ವಿವಿಧ ಮೂಲಗಳು

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !