ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಹುಡುಗರು ಹಾಗೆಲ್ಲ ಅಳಬಾರದು!’

Published 6 ಜುಲೈ 2024, 4:15 IST
Last Updated 6 ಜುಲೈ 2024, 4:15 IST
ಅಕ್ಷರ ಗಾತ್ರ

“ಕಾಣೆಯಾಗಿದ್ದಾರೆ” ಎಂದು ದೊಡ್ಡ ಅಕ್ಷರಗಳಲ್ಲಿ ಕಾರ್ತಿಕ್ ನ ಫೋಟೋವುಳ್ಳ ಕರಪತ್ರವೊಂದನ್ನು ನಗರದ ಬಸ್ ಸ್ಟ್ಯಾಂಡಿನಲ್ಲಿ ಹಚ್ಚಲಾಗಿತ್ತು. 28 ವಯಸ್ಸಿನ, ಇತ್ತೀಚಿಗಷ್ಟೇ ಮದುವೆಯಾಗಿದ್ದ ಸ್ಪುರದ್ರೂಪಿ ಯುವಕ. ಕಳೆದ ಹಲವು ದಿನಗಳ ಹಿಂದೆ ತನ್ನ ಖಾಸಗಿ ಕಂಪನಿಯ ಕೆಲಸವೊಂದಕ್ಕೆ ತೆರಳಿ, ಹಿಂದಿರುಗಿ ಬಂದಿರಲಿಲ್ಲ. “ನನ್ನನ್ನು ಹುಡುಕಬೇಡಿ…” ಎಂಬ ಕಾಗದ ಮಾತ್ರ ಮನೆಯಲ್ಲಿನ ಅವನ ಮೇಜಿನ ಮೇಲಿತ್ತು.

ಹಲವು ದಿನಗಳಿಂದ ಏನೋ ಪರಧ್ಯಾನ, ರಾತ್ರಿ ಒಂದು ಗಂಟೆಯಾದರೂ ಮಲಗುತ್ತಿರಲಿಲ್ಲ. ಕಾರ್ತಿಕ್ ತಾನು ಕಾಣೆಯಾದ ಹಿಂದಿನ ರಾತ್ರಿ ಮಾತ್ರ ಊಟ ಮುಗಿಸಿ ಟಿ.ವಿ ಯ ಮುಂದೆ ಕುಳಿತು ಏನನ್ನೋ ಯೋಚಿಸುತ್ತ ಮೆಲ್ಲನೇ ತನಗರಿವಿಲ್ಲದೆಯೇ ಕಾರ್ತಿಕ್ ಕಣ್ಣೀರು ಹಾಕುತ್ತಿದ್ದ. ಇದನ್ನು ಗಮನಿಸಿದ ಅವನ ತಾಯಿ “ಏನಾಯ್ತು?” ಎಂದು ಗಾಬರಿಯಿಂದ ಕೇಳಿದರು. “ಏನಿಲ್ಲ ಅಮ್ಮ, ಆಫೀಸಿನಲ್ಲಿ ಏನೋ ತೊಂದರೆ. ಅಷ್ಟೇ!” ಎಂದ ಕಾರ್ತಿಕ್. “ಅಯ್ಯೋ!, ಗಂಡು ಮಕ್ಕಳು ಕಣ್ಣೀರು ಹಾಕಬಾರದು. ಎಲ್ಲ ಸರಿಹೋಗುತ್ತೆ. ಕಣ್ಣೊರೆಸಿಕೋ” ಎಂದರು ಅವನ ತಾಯಿ. ಅವನ ಮಡದಿ ಅವನ ಕೈ ಹಿಡಿದು “ ಹೆದರಬೇಡಿ, ನೀವೇ ಹೆದರಿದರೆ ನಮ್ಮಿಬ್ಬರ ಪರಿಸ್ಥಿತಿ ಏನು” ಎಂದು ಅವನನ್ನು ಅಪ್ಪಿದಳು. ಕಾರ್ತಿಕ್ ಧೈರ್ಯ ತಂದುಕೊಂಡವನಂತೆ ಕಣ್ಣೊರೆಸಿಕೊಂಡು ತನ್ನ ಮೊಬೈಲ್ ನೋಡುತ್ತಾ ನಿದ್ರೆಗೆ ಜಾರಿದ…

ಜೂನ್ ತಿಂಗಳನ್ನು ಪುರುಷರ ಮಾನಸಿಕ ಅರೋಗ್ಯದ ಅರಿವು ಮೂಡಿಸುವ ಮಾಸ ಎಂದು ವಿಶೇಷವಾಗಿ ಆಚರಿಸುತ್ತಾರೆ. ಸಾಧಾರಣವಾಗಿ ತಮ್ಮದೇ ಹುಟ್ಟು ಹಬ್ಬವನ್ನೋ, ವಿವಾಹ ವಾರ್ಷಿಕೋತ್ಸವವನ್ನೂ ಮರೆಯುವ ಪುರುಷರು ತಮಗಾಗಿ ಮೀಸಲಿಟ್ಟ ಮಾನಸಿಕ ಆರೋಗ್ಯದ ಮಾಸವನ್ನು ನೆನಪಿಟ್ಟುಕೊಂಡು ಆಚರಿಸುವುದೆಲ್ಲಿ?! ಪರಿಸ್ಥಿತಿ ಹೀಗಿರುವಾಗ, ಪುರುಷರ ಮಾನಸಿಕ ಅರೋಗ್ಯ ಮಾಸವು ಅದೆಷ್ಟು ಪ್ರಸ್ತುತ ಮತ್ತು ಸಮರ್ಪಕ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬಹುದು. ಪುರುಷರೆಂದರೆ ಯಾವುದೇ ಭಾವನೆಗಳಿಲ್ಲದ, ಯಾವ ವಿಚಾರವನ್ನೂ ಮನಸ್ಸಿಗೆ ಹಚ್ಚಿಕೊಳ್ಳದ ಬಂಡತನದ ವ್ಯಕ್ತಿಗಳಾಗಿ ಎಲ್ಲರಿಗೂ ಪರಿಚಿತರು. ಸಮಾಜವೂ ಸಹ ಪುರುಷರು ಹಾಗೆಯೇ ಇರಬೇಕೆಂಬ ನಿಯಮವನ್ನು ಅವರ ಮೇಲೆ ಹಾಕಿದೆ. ಆದರೆ, ಈ ಭಾವನಾರಹಿತ ಜೀವಗಳ ಹಿಂದಿರುವ ಮೃದುತ್ವದ ಸ್ವಭಾವವನ್ನು ಸಮೀಕ್ಷೆಗಳು ಮತ್ತು ಅಧ್ಯಯನಗಳು ಬೇರೆಯದೇ ಬೆಳಕಿನಲ್ಲಿ ತಿಳಿಸುತ್ತವೆ.

ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ದ ಪ್ರಕಾರ ದೇಶದಲ್ಲಿ 2022 ರಲ್ಲಿ 1,70,924 ಆತ್ಮಹತ್ಯಾ ಪ್ರಕರಣಗಳು ನಡೆದಿವೆ. ಇವುಗಳಲ್ಲಿ 48,172 ಮಹಿಳೆಯರು ಮತ್ತು 28 ಮಂದಿ ತೃತೀಯ ಲಿಂಗಿಗಳಾದರೆ , ಉಳಿದ ಪೂರ್ಣ 1,22,724 ಜನ ಪುರುಷರು. ಅಂದರೆ, ಪುರುಷರ ಆತ್ಮಹತ್ಯೆಗಳು ಮಹಿಳೆಯರಿಗಿಂತ ಎರಡೂವರೆ ಪಟ್ಟು ಹೆಚ್ಚು. ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಅಪ್ ಪಾಪುಲೇಷನ್ ಸೈನ್ಸಸ್ ನ 2014-21 ರ ಅಧ್ಯಯನದ ಪ್ರಕಾರ, ಪುರುಷರ ಆತ್ಮಹತ್ಯೆ ಪ್ರಕರಣಗಳು ಮಹಿಳೆಯರ ಪ್ರಕರಣಗಳ ದುಪ್ಪಟ್ಟಿಗಿಂತಲೂ ಹೆಚ್ಚು.

ಆರ್ಥಿಕ, ಸಾಮಾಜಿಕ, ವೈವಾಹಿಕ, ಕೌಟುಂಬಿಕ, ಪ್ರೇಮ ಪ್ರಕರಣ, ಅರೋಗ್ಯ ಇತ್ಯಾದಿ ಹಲವಾರು ಕಾರಣಗಳಿಗೆ ನಡೆಯುವ ಈ ಆತ್ಮಹತ್ಯೆಗಳನ್ನು ತಪ್ಪಿಸಬಹುದಾಗಿದೆ. ಪುರುಷರು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಅತೀತರು ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಆದರೆ, ನಿಮ್ಹಾನ್ಸ್ ಸಂಸ್ಥೆ ಕೈಗೊಂಡ ರಾಷ್ಟ್ರೀಯ ಮಾನಸಿಕ ಅರೋಗ್ಯ ಸಮೀಕ್ಷೆಯ ಪ್ರಕಾರ ಪುರುಷರಲ್ಲಿ ಮಾನಸಿಕ ಅಸ್ವಸ್ಥತೆಯ, ತೀವ್ರ ಮಾನಸಿಕ ಸಮಸ್ಯೆಗಳ ಸಾಧ್ಯತೆ ಮಹಿಳೆಯರಷ್ಟೇ ಹೆಚ್ಚು. ಅಂತೆಯೇ, ಒತ್ತಡ, ಖಿನ್ನತೆ, ಆತಂಕ ಇತ್ಯಾದಿ ಮಾನಸಿಕ ಅರೋಗ್ಯ ಸಮಸ್ಯೆಗಳು ಮಹಿಳೆಯರಲ್ಲಿ ಸ್ವಲ್ಪ ಹೆಚ್ಚಿಗೆಯಿದ್ದರೂ, ಪುರುಷರೂ ಸಹ ಅವುಗಳಿಂದ ಮಹಿಳೆಯರಷ್ಟೇ ತೊಂದರೆಗೀಡಾಗುತ್ತಾರೆ. ಪುರುಷರಲ್ಲಿ ವ್ಯಸನ ಸಮಸ್ಯೆ ಮಹಿಳೆಯರಿಗಿಂತ ಬಹುಪಾಲು ಹೆಚ್ಚಿದ್ದು, ಇದೂ ಸಹ ಮಾನಸಿಕ ಅರೋಗ್ಯ ಸಮಸ್ಯೆಗಳ ಅವಕಾಶವನ್ನು ಹೆಚ್ಚಿಸುತ್ತದೆ. ಈ ಮಾಹಿತಿಯನ್ನು ತಿಳಿದ ಮೇಲೆ ಮಾನಸಿಕ ಅರೋಗ್ಯದ ಜಾಗೃತಿ ಪುರುಷರಲ್ಲೂ ಅತ್ಯವಶ್ಯಕ ಮತ್ತು ಈ ಕುರಿತಾದ ಜಾಗೃತಿ ಹಲವು ಕುಟುಂಬಗಳ ಸಂತೋಷವನ್ನು ಕಾಪಾಡಬಹುದು ಎಂಬುದನ್ನು ನಾವು ಅರಿಯಬಹುದು.

ಪುರುಷರನ್ನು ಅಷ್ಟಾಗಿ ಬಾಧಿಸಬಹುದಾದ ಸಮಸ್ಯೆಗಳಾದರೂ ಯಾವುವು?

ಅನೇಕ ಬಾರಿ ನಿರುದ್ಯೋಗ, ಆರ್ಥಿಕ ಸ್ಥಿತಿಗತಿಗಳು ಪುರುಷರನ್ನು ಹೆಚ್ಚಾಗಿ ಬಾಧಿಸಬಹುದು. ಅಂತೆಯೇ, ವೈವಾಹಿಕ ಸಮಸ್ಯೆಗಳು, ಉದ್ಯೋಗ, ಕೃಷಿ, ವ್ಯಾಪಾರಗಳಲ್ಲಿನ ತೊಂದರೆಗಳು ಅವರಲ್ಲಿ ಖಿನ್ನತೆ, ಒತ್ತಡವನ್ನು ತಂದೊಡ್ಡಬಹುದು. ವ್ಯಸನ ಸಮಸ್ಯೆಯು ಸಹ ಪುರುಷರ ಮಾನಸಿಕ ಅರೋಗ್ಯ ಹದಗೆಡುವುದರಲ್ಲಿ ಬಹುದೊಡ್ಡ ಪಾತ್ರವನ್ನು ಹೊಂದಿದೆ. ಕೌಟುಂಬಿಕ, ವೈವಾಹಿಕ ಸಮಸ್ಯೆಗಳು, ಪ್ರೇಮ ಪ್ರಕರಣಗಳೂ ಸಹ ಪುರುಷರಲ್ಲಿ ಮಾನಸಿಕ ಅರೋಗ್ಯ ಸಮಸ್ಯೆಗಳು ಉಲ್ಬಣವಾಗುವಂತೆ ಮಾಡಿದ ಪ್ರಸಂಗಗಳನ್ನೂ ನಾವು ಕಾಣಬಹುದು. ತಮ್ಮ ನೆಚ್ಚಿನ ನಟರು, ನಾಯಕರು ಮರಣಿಸಿದಾಗ ಉತ್ಪ್ರೇಕ್ಷೆಗೊಳಗಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡವರಲ್ಲೂ ಪುರುಷರ ಸಂಖ್ಯೆಯೇ ಹೆಚ್ಚು. ಅನೇಕ ಬಾರಿ ಮಾರಕ ಅರೋಗ್ಯ ಸಮಸ್ಯೆಗಳ ಕಾರಣವಾಗಿಯೂ ಪುರುಷರಲ್ಲಿ ಮಾನಸಿಕ ಅರೋಗ್ಯ ಹದಗೆಡಬಹುದು.

ಮಾನಸಿಕವಾಗಿ ಬಳಲಿದ ಪುರುಷರು ಸಹಾಯವನ್ನು ಕೇಳುವುದಿಲ್ಲವೇಕೆ?

“ಗಂಡು ಮಕ್ಕಳು ಹೆದರಬಾರದು” “ಹುಡುಗರು ಹಾಗೆಲ್ಲ ಅಳಬಾರದು” ಎಂಬ ರೂಡಿಯ ಮಾತುಗಳನ್ನು ನಾವೆಲ್ಲ ಕೇಳಿದ್ದೇವೆ. ಸಾಮಾಜಿಕವಾಗಿ ಪುರುಷರು ತಮ್ಮ ಅಳಲನ್ನು ಹೊರಹಾಕಲಾರದ ಒತ್ತಡಕ್ಕೆ, ಸಂಕಟಕ್ಕೆ ತುತ್ತಾಗುತ್ತಾರೆ. ತಾವು ಎಷ್ಟೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅದನ್ನು ಇತರರ ಮುಂದೆ ಹೇಳಿಕೊಳ್ಳಲಾರದೆ, ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲಾಗದೆ ಅವಿತಿಟ್ಟುಕೊಂಡು ತಮ್ಮ ಮಾನಸಿಕ ಒತ್ತಡ, ಭಯ ಆತಂಕಗಳು ಹೆಚ್ಚಿಸಿಕೊಳ್ಳುವ ಪುರುಷರು ಪ್ರತಿ ಮನೆಯ್ಲಲೂ ಇದ್ದಾರೆ. ಸಹಾಯವನ್ನು ಯಾಚಿಸುವುದು ಹೇಡಿತನ ಎಂಬ ಭಾವನೆಯು ಅನೇಕ ಪುರುಷರನ್ನು ಸರಿಯಾದ ಮನೋವೈದ್ಯ ಸಹಾಯವನ್ನು ಪಡೆಯುವುದರಿಂದ ದೂರ ಸರಿಸುತ್ತದೆ.

ಪುರುಷರ ಮಾನಸಿಕ ಅರೋಗ್ಯ ಸುಧಾರಿಸಲು ಏನೆಲ್ಲಾ ಮಾಡಬಹುದು?

ಮೊಟ್ಟಮೊದಲು ಪುರುಷರಲ್ಲೂ ಮಾನಸಿಕ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಮುಕ್ತವಾಗಿ ಒಪ್ಪಿಕೊಳ್ಳೋಣ. ನಮ್ಮ ಮನೆಯ ಪುರುಷರು ತಮ್ಮ ಅಳಲನ್ನು ವ್ಯಕ್ತಪಡಿಸಲು ಮುಕ್ತವಾದ ವಾತಾವರಣವನ್ನು ಕಲ್ಪಿಸೋಣ. ಅವರು ಭಾವನಾತ್ಮಕವಾಗಿ ಕುಗ್ಗಿದಾಗ ಅವರ ಭಾವನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುವುದು ಬೇಡ.

ಒಂದುವೇಳೆ ಔದ್ಯೋಗಿಕ ಒತ್ತಡ, ಕೌಟುಂಬಿಕ ಸಮಸ್ಯೆಗಳ ಕಾರಣವಾಗಿ ಅಥವಾ ಅಕಾರಣವಾಗಿಯಾದರೂ ಅವರ ದಿನ ನಿತ್ಯದ ಆಸಕ್ತಿ ಮತ್ತು ಚಟುವಟಿಕೆಗಳಲ್ಲಿ , ಊಟ, ನಿದ್ರೆ ಇತ್ಯಾದಿಗಳಲ್ಲಿ ವ್ಯತ್ಯಾಸವನ್ನು ಕಂಡರೆ ಅವರಿಗೆ ಬೆಂಬಲ ನೀಡಿ ಮತ್ತು ಅವರನ್ನು ಆಪ್ತಸಮಾಲೋಚಕರ ಬಳಿ ಮಾತನಾಡಲು ಪ್ರೋತ್ಸಾಹಿಸಿ. ಜಿಲ್ಲಾ ಆಸ್ಪತ್ರೆಯಲ್ಲಿ ಮನಶಾಸ್ತ್ರಜ್ಞರನ್ನು ಅಥವಾ ಅಂತಹ ಸೌಲಭ್ಯವಿರುವ ಯಾವುದೇ ಆಸ್ಪತ್ರೆಗೆ ಭೇಟಿ ನೀಡಿ. ಅಗತ್ಯವೆನಿಸಿದಾಗ ಮಾನಸಿಕ ಸ್ವಾಸ್ಥ್ಯಕ್ಕಾಗಿ ರಾಷ್ಟೀಯ ಟೆಲಿ ಮನಸ್ ಸೇವೆ 14416 ಸಂಖ್ಯೆಗೆ ಕರೆ ಮಾಡಿ ಆಪ್ತಸಮಾಲೋಚಕರೊಂದಿಗೆ ಯಾವುದೇ ಸಮಯದಲ್ಲಿ ಮಾತನಾಡಿ.

ಜೂನ್ ಮಾಸ ಮುಕ್ತಾಯವಾಯಿತು. ಪುರುಷರ ಮಾನಸಿಕ ಆರೋಗ್ಯಕ್ಕೆ ಕೇವಲ ಜೂನ್ ಮಾಸವನ್ನಲ್ಲದೇ, ಅಗತ್ಯಬಿದ್ದ ಪ್ರತಿಯೊಂದು ದಿನವನ್ನೂ ಜಾಗೃತಿಯಿಂದ ಮೀಸಲಿಡೋಣ. ಜೂನ್ ಮುಗಿಯಲಿ, ಜಾಗೃತಿ ಮುಂದುವರಿಯಲಿ…

ಲೇಖಕರು: ಸುಭಾಷ್ ಹೆಚ್ ಜೆ, ಡಾ. ಮೀನಾ ಕೆ ಎಸ್, ಡಾ.ಲತಾ ಕೆ, ಡಾ. ದರ್ಶನ್ ಎಸ್
ನಮನ್ ಕಾರ್ಯಕ್ರಮ, ನಿಮ್ಹಾನ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT