ಬುಧವಾರ, ಮೇ 25, 2022
29 °C

Valentine Day: ಅದೇ ಪ್ರೀತಿ, ಹೊಸ ಪುರಾಣ!

ಪವಿತ್ರಾ ರಾಘವೇಂದ್ರ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಪ್ರೀತಿ ಎಂಬ ಹೆಸರು ಕಿವಿಗೆ ಬಿದ್ದೊಡನೆ ಮೈ ಮನದಲ್ಲಿ ಒಂದು ರೀತಿಯ ಪುಳಕ. ಎದೆಯಲ್ಲಿ ನವಿರು ನವಿರಾದ ಮಧುರ ಭಾವನೆಗಳು. ಅದಕ್ಕೆ ಇರುವ ಶಕ್ತಿಯೇ ಅಂಥದ್ದು. ಪ್ರತಿಯೊಬ್ಬರಿಗೂ ತನ್ನನ್ನು ಪ್ರೀತಿಸುವ ಒಂದು ಜೀವ ಬೇಕು ಎಂಬ ಆಸೆ, ಕನಸು ಇರುತ್ತದೆ. ಇದೆಲ್ಲದರ ಜತೆಗೆ ನಿರೀಕ್ಷೆಯೂ ಕೂಡ ಒಂದು ಪಾಲು ಹೆಚ್ಚಿರುತ್ತದೆ. ಕೆಲವೊಂದು ನಿರೀಕ್ಷೆಗಳೇ ಅವರೊಳಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆಯೂ ಇದೆ. ಈ ಪ್ರೀತಿ, ಪ್ರೇಮದ ಬೇರು ಮೊದಲಿನಷ್ಟು ಗಟ್ಟಿಯಾಗಿದೆಯಾ, ಟೊಳ್ಳಾಗಿದೆಯಾ ಎಂಬ ಪ್ರಶ್ನೆ ಕೂಡ ಕಾಡುತ್ತದೆ.

ಪಕ್ಕದ ಮನೆಯಲ್ಲಿದ್ದ ಹುಡುಗನೊಬ್ಬ ದಿನವೂ ಮೊಬೈಲ್‌ ಅನ್ನು ಕಿವಿಗಾನಿಸಿಕೊಂಡೇ ತನ್ನೆಲ್ಲಾ ದಿನಚರಿಯನ್ನು ಆ  ಬದಿಯ ಜೀವಕ್ಕೆ ಅಪಡೇಟ್ ಮಾಡುತ್ತಿದ್ದ. ಆದರೆ ಇದ್ದಕ್ಕಿದ್ದ ಹಾಗೇ ಹುಡುಗ ಸೈಲೆಂಟಾಗಿ ಬಿಟ್ಟ. ಯಾವುದೋ ಕಾರಣಕ್ಕೆ ಅವರಿಬ್ಬರ ನಡುವೆ ಬ್ರೇಕ್‌ಅಪ್ ಆಗಿದೆಯಂತೆ. ಹುಡುಗನಿಗೆ ಮನೆಯಲ್ಲಿ ಹುಡುಗಿ ನೋಡಿದರು. ಇನ್ನೆರಡೇ ತಿಂಗಳಲ್ಲಿ ಮದುವೆ ಕೂಡ ನಡೆಯಲಿದೆ. ಆತ ಕೂಡ ಖುಷಿಯಿಂದ ಒಪ್ಪಿಕೊಂಡು, ಈಗ ಬೇರೊಂದು ಹುಡುಗಿಯ ಜತೆ ಹೊಸ ಜೀವನ ಶುರುಮಾಡುವುದಕ್ಕೆ ಸಜ್ಜಾಗಿದ್ದಾನೆ.

ಸಂಬಂಧದಿಂದ ಹೊರಬರಲು ಹುಡುಕಾಟ!

ಅದೇ ಹುಡುಗಿಯನ್ನು ನಂಬಿಕೊಂಡು ಕೊರಗುತ್ತಾ ಕೂರಬೇಕು ಎಂದೇನಿಲ್ಲಾ. ಆದರೆ ಈಗಿನವರ ಪ್ರೀತಿ ಎಷ್ಟು ಬೇಗ ಕಮರಿ ಹೋಗುತ್ತದೆ ಎಂಬುದೇ ಆಶ್ಚರ್ಯ! ಬೆರಳಣಿಕೆಯಷ್ಟು ಜನ ತಾವು ನೆಚ್ಚಿಕೊಂಡ ಪ್ರೀತಿಯನ್ನು ಪಡೆಯುವವರೆಗೆ ಬಿಡದೇ ಕಾಪಾಡಿಕೊಳ್ಳುತ್ತಾರೆ. ಇನ್ನು ಕೆಲವರು ಪ್ರೀತಿಸಿ, ಬ್ರೇಕ್‌ಅಪ್ ಆಗಿ ಮತ್ತೊಂದು ಹೊಸ ಜೀವನಕ್ಕೆ ತೆರೆದುಕೊಳ್ಳುತ್ತಿದ್ದಾರೆ. ನೀನೇ ಜೀವ, ನೀನೇ ಚಿನ್ನ ಎನ್ನುತ್ತಿದ್ದವರು, ತಮ್ಮೆಲ್ಲಾ ದಿನಚರಿಯನ್ನು ಚಾಚೂ ತಪ್ಪದೇ ಹೇಳಿಕೊಳ್ಳುತ್ತಿದ್ದವರು ಕೊನೆಗೆ ಆ ಸಂಬಂಧದಿಂದ ಹೊರಬರುವುದಕ್ಕೆ ದಾರಿ ಹುಡುಕುತ್ತಾರೆ.

ತನಗೊಂದು ಸಂಗಾತಿ ಬೇಕು, ಆ ಪ್ರೀತಿಯನ್ನು ಕೊನೆತನಕ ಕಾಪಾಡಿಕೊಳ್ಳಬೇಕು ಎಂಬ ಆಸೆ, ಕನಸುಗಳು ಆಧುನಿಕ ಪ್ರೇಮಿಗಳಲ್ಲಿ ಕಡಿಮೆಯೇ ಎನ್ನಬಹುದೇನೋ. ಯಾವುದೋ ಆಕರ್ಷಣೆಗೆ ಪ್ರೀತಿಯ ಹೆಸರನ್ನಿಟ್ಟು ಕೊನೆಗೆ ಅದು ಬ್ರೇಕ್‌ಅಪ್ ಹಂತಕ್ಕೆ ತಲುಪುತ್ತದೆ.

ಇನ್ನು ಆರ್ಥಿಕ ಅಭದ್ರತೆಗಳು ಕೂಡ ಈಗಿನ ಯುವಜನರಲ್ಲಿ ಪ್ರೀತಿಯ ಮೇಲಿನ ನಂಬಿಕೆಯನ್ನು ಅಲ್ಲಾಡಿಸಿದೆ ಎಂದರೆ ತಪ್ಪಾಗಲಾರದೇನೋ. ಲಾಕ್‌ಡೌನ್ ಸಮಯದಲ್ಲಿ ಈ ಬ್ರೇಕ್‌ಅಪ್‌ಗಳ ಸಂಖ್ಯೆ ತುಸು ಹೆಚ್ಚು ಎನ್ನಬಹುದು. ಸಮೀಕ್ಷೆಯೊಂದರ ಪ್ರಕಾರ ಕಳೆದ ವರ್ಷದ ಲಾಕ್‌ಡೌನ್ ಅವಧಿಯಲ್ಲಿ ಶೇ 28 ರಷ್ಟು ಪ್ರೇಮಿಗಳು ಪರಸ್ಪರ ದೂರವಾಗಿದ್ದಾರಂತೆ. ಇತರ ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಅತೀ ಹೆಚ್ಚು ಬ್ರೇಕ್‌ಅಪ್‌ ಪ್ರಕರಣಗಳು ಸಂಭವಿಸಿವೆ ಎಂದು ವಿಮೆನ್ –ಫಸ್ಟ್ ಸೋಷಿಯಲ್ ನೆಟ್‌ವರ್ಕಿಂಗ್ ಆ್ಯಪ್ ತಿಳಿಸಿದೆ. ಇದಕ್ಕೆ ಕೋವಿಡ್ ಕೂಡ ಒಂದು ಕಾರಣವಂತೆ. ಹಾಗೇ ‘ಬಂಬಲ್’ ಡೇಟಿಂಗ್‌ ಆ್ಯಪ್‌ ಸಮೀಕ್ಷೆಯು ಹೊಸ ‘ಡೌನ್ ಡೇಟರ್‌’ಗಳ ಏರಿಕೆಯ ಕುರಿತು  ಬಹಿರಂಗಪಡಿಸಿದೆ. ಆ್ಯಪ್‌ನಲ್ಲಿರುವವರಲ್ಲಿ ಶೇ 46ರಲ್ಲಿ ಒಬ್ಬರು ಅಥವಾ ಇಬ್ಬರು ಈ ‘ನ್ಯೂ ಡೌನ್ ಡೇಟರ್ಸ್’ ಆಗಿರುತ್ತಾರಂತೆ. ಡೌನ್ ಡೇಟರ್ಸ್ ಎಂದರೆ  ಬ್ರೇಕ್‌ಅಪ್ ಆಗಿ ಒಂಟಿಯಾಗಿರುವವರು.

ಈಗಿನವರಿಗೆ ತಮ್ಮ ಜೀವನ ಹೀಗೇ ಇರಬೇಕು, ಹಾಗೇ ಇರಬೇಕು ಎಂಬ ಹಪಾಹಪಿ. ಜೊತೆಗೆ ತಮ್ಮ ಜೀವನದ ಸಂಗಾತಿಯಾದವರು ಎಲ್ಲ ರೀತಿಯಲ್ಲೂ ಪರಿಪೂರ್ಣರಾಗಿಬೇಕು ಎಂಬುದು ಕೂಡ ಇರುತ್ತದೆ. ಸಂಗಾತಿಯಲ್ಲಿನ ಸಣ್ಣ ಕೊರತೆ ಕೂಡ ದೊಡ್ಡದಾಗಿ ಕಾಣಿಸಿಕೊಂಡು ಪ್ರೀತಿ ಕಮರಿಹೋಗುತ್ತದೆ.

ಬೆಳಿಗ್ಗೆ ಹುಟ್ಟಿ ಸಂಜೆ ಕಮರುವ ಪ್ರೀತಿ

ಮೊದಲೆಲ್ಲಾ ಪ್ರೀತಿಸಿದ ಜೀವವನ್ನು ಒಲಿಸಿಕೊಳ್ಳಲು  ವರ್ಷಾನುಗಟ್ಟಲೆ  ಪರದಾಡುತ್ತಿದ್ದರು. ದಕ್ಕಿದ ಪ್ರೀತಿಯನ್ನು ಕೊನೆತನಕ ಕಾಪಿಟ್ಟುಕೊಳ್ಳಬೇಕು ಎಂಬ ತುಡಿತವಿತ್ತು. ಆದರೆ ಈಗ ಬೆಳಿಗ್ಗೆ ಪ್ರಪೋಸ್ ಮಾಡಿ ಸಂಜೆಯೊಳಗೆ ಆ ಸಂಬಂಧದಿಂದ ಹೊರಬರುವವರೆ ಜಾಸ್ತಿ.

ಇನ್ನು ಈ ಡೇಟಿಂಗ್ ಆ್ಯಪ್‌ಗಳು ಸಿಕ್ಕಾಪಟ್ಟೆ ಇರುವುದರಿಂದ ತಮಗಿಷ್ಟವಾದ ಸಂಗಾತಿಯನ್ನು ಹುಡುಕಿಕೊಳ್ಳುವುದು ಕೂಡ ಈಗ ಕಷ್ಟವೇನೆಲ್ಲ. ಆ್ಯಪ್‌ಗಳ ಮೂಲಕವೇ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಡೇಟಿಂಗ್, ಲಿವಿಂಗ್ ರಿಲೇಷನ್‌ ಎಂದೆಲ್ಲಾ ಕೊನೆಗೆ ಮದುವೆ ಹಂತಕ್ಕೆ ಬಂದಾಗ ಮುರಿದುಕೊಳ್ಳುವವರೇ ಹೆಚ್ಚು.

ಮನದ ಒಂಟಿತನ, ದುಃಖವನ್ನು ಹಗುರಗೊಳಿಸಿ ಒಂದು ಗಂಡು-ಒಂದು ಹೆಣ್ಣಿನ ಮನಸ್ಸನ್ನು ಬೆಸೆಯುವ ಈ ಪ್ರೇಮಕ್ಕೆ ಎರಡಕ್ಷರಕ್ಕಿಂತ ಹೆಚ್ಚಿನದೇನೋ ಮಹತ್ವ ಇದೆ ಅಲ್ಲವೇ?

***

ಕೋವಿಡ್‌ ಆರಂಭವಾದ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದು ವರ್ಚುವಲ್‌ ಡೇಟಿಂಗ್‌. ವಿಡಿಯೊ ಕಾಲ್‌ನಲ್ಲಿ ಮಾತುಕತೆ ನಡೆಸುತ್ತ ಪರಸ್ಪರ ಅರಿತುಕೊಂಡು, ಪ್ರೀತಿ– ಪ್ರೇಮದ ಕಚಗುಳಿ ಸಂಭಾಷಣೆಗೆ ಇಳಿದವರೇ ಜಾಸ್ತಿ. ಸೋಂಕಿನ ಪ್ರಕರಣಗಳು ಕಡಿಮೆಯಾದರೂ ಕೂಡ ಮೊದಲು ಫೋನ್‌ನಲ್ಲಿ ಮಾತುಕತೆ ನಡೆಸಿ, ನಂತರ ಮುಖಾಮುಖಿ ಭೇಟಿಗೆ ಹೆಚ್ಚು ಮಂದಿ ಒಲವು ತೋರಿಸುತ್ತಿದ್ದಾರೆ ಎನ್ನುತ್ತದೆ ಡೇಟಿಂಗ್‌ ಆ್ಯಪ್‌ ಬಂಬಲ್‌ನ ಸಮೀಕ್ಷೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು