ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ಮೇಲೆ ಪರಿಣಾಮ ಬೀರುವ ನಿರ್ಧಾರಗಳು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದಿರಲಿ

Last Updated 5 ಡಿಸೆಂಬರ್ 2022, 23:15 IST
ಅಕ್ಷರ ಗಾತ್ರ

ನಿರ್ಧಾರಗಳು ಬದುಕಿನ ಅವಿಭಾಜ್ಯ ಅಂಗ. ಹಲವಾರು ಸಣ್ಣ-ದೊಡ್ಡ ನಿರ್ಧಾರಗಳನ್ನು ದಿನವೂ ಮಾಡುತ್ತಿರುತ್ತೇವೆ. ಯಾವುದು ‘ಸರಿಯಾದ ನಿರ್ಧಾರ’ ಎನ್ನುವುದು ಭವಿಷ್ಯದಲ್ಲಿ ಆಯಾ ಕೆಲಸದ ಪರಿಣಾಮಗಳಿಂದ ತಿಳಿಯುತ್ತದೆ. ಕೆಲಸಕ್ಕೆ ಮುನ್ನವೇ ‘ಸರಿಯಾದ ನಿರ್ಧಾರ’ ಕೈಗೊಳ್ಳಲು ಯಾವ ಸಿದ್ಧಸೂತ್ರವೂ ಇಲ್ಲ. ನಿರ್ಧಾರ ಕೈಗೊಳ್ಳುವ ಮುನ್ನ ಅನೇಕ ಆಯಾಮಗಳನ್ನು ವಿವೇಚಿಸಿ, ಪರಿಣಾಮಗಳನ್ನು ಆಲೋಚಿಸಿ, ಅತ್ಯಂತ ಸೂಕ್ತವೆನಿಸುವ ಆಯ್ಕೆಯನ್ನು ಪಾಲಿಸಬೇಕಾಗುತ್ತದೆ. ನಿರ್ಧಾರಗಳು ಬದುಕಿನ ಹಾದಿಯನ್ನು ಬದಲಿಸಬಲ್ಲವು. ನಿರ್ಧಾರದ ಪ್ರಕ್ರಿಯೆಯನ್ನು ತರ್ಕಬದ್ಧವಾಗಿ ಮಾಡುವುದು ‘ಸರಿಯಾದ ನಿರ್ಧಾರ’ದ ಹಾದಿಯಲ್ಲಿ ಮಹತ್ವದ ಹೆಜ್ಜೆ.
‘ಯಾವುದೇ ನಿರ್ಧಾರದಿಂದ ಆಗಬಹುದಾದ ಅತ್ಯಂತ ದೊಡ್ಡ ಸಮಸ್ಯೆಗೆ ಮನಸ್ಸನ್ನು ಸಜ್ಜುಗೊಳಿಸಬೇಕು’ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ವಿಶ್ವೇಶ್ವರಯ್ಯನವರಂತಹ ಮುತ್ಸದ್ದಿಗಳು ಅಧಿಕಾರಿಗಳೊಂದಿಗಿನ ಸಮಾಲೋಚನೆಗಳಲ್ಲಿ ‘What is the worst?’ ಎಂದು ಕೇಳುತ್ತಿದ್ದರು. ನಿರ್ಧಾರದ ಬಗೆಗಿನ ಭೀತಿಗಳನ್ನು ಬರೆದಿಟ್ಟುಕೊಳ್ಳುವುದು ಉತ್ತಮ. ಹಲವು ಭೀತಿಗಳಿಗೆ ಯಾವ ಆಧಾರವೂ ಇರುವುದಿಲ್ಲ. ಭೀತಿಗಳನ್ನು ಬರವಣಿಗೆಯ ಮೂಲಕ ಸ್ಪಷ್ಟಪಡಿಸುವುದು ಪರಿಣಾಮಗಳ ಕುರಿತಾಗಿ ಆಲೋಚಿಸಲು ಸಹಾಯಕ.

ನಿರ್ಧಾರಗಳನ್ನು ಮಾಡುವ ಮುನ್ನ ಮಾಹಿತಿ ಸಂಗ್ರಹಿಸುವುದು ಸೂಕ್ತ. ವಿಚಾರ ಸ್ಪಷ್ಟತೆ ಸಮಂಜಸ ನಿರ್ಧಾರಗಳಿಗೆ ಸಹಕಾರಿ. ಪ್ರಸ್ತುತ ಜಾಲತಾಣಗಳು ಮಾಹಿತಿಯ ಮಹಾಪೂರವನ್ನೇ ಹರಿಸಬಲ್ಲವು. ಇದರಲ್ಲಿ ಕಾಳು-ಜೊಳ್ಳುಗಳ ವಿವೇಚನೆ ಇರಬೇಕು. ತಜ್ಞರ ಸೋಗು ಹಾಕಿ ದಾರಿ ತಪ್ಪಿಸಬಲ್ಲ ವ್ಯಕ್ತಿಗಳು ಜಾಲತಾಣಗಳಲ್ಲಿ ದೊರೆಯುತ್ತಾರೆ. ಹೀಗಾಗಿ, ಯಾವುದೇ ಮಾಹಿತಿ ಹುಡುಕುವಾಗ ಅಧಿಕೃತ ಸ್ರೋತಗಳ ತಿಳಿವಳಿಕೆ ಮುಖ್ಯ. ಕೋರಾ, ರೆಡಿಟ್ ಮೊದಲಾದ ಜಾಲತಾಣಗಳು ಜನರ ವೈಯಕ್ತಿಕ ಅನುಭವಗಳನ್ನು ದಾಖಲಿಸುತ್ತವೆ. ನಮ್ಮನ್ನು ಸದ್ಯಕ್ಕೆ ಕಾಡುತ್ತಿರುವ ಸಮಸ್ಯೆಯನ್ನು ಈಗಾಗಲೇ ಸಫಲವಾಗಿ ಪರಿಹರಿಸಿಕೊಂಡವರ ಅನುಭವಗಳು ಹೊಸ ಹೊಳಹುಗಳನ್ನು ನೀಡಬಲ್ಲವು. ಇಂತಹ ಸಲಹೆಗಳನ್ನು ಯಥಾವತ್ತಾಗಿ ಪಾಲಿಸುವುದಕ್ಕಿಂತಲೂ, ನಮ್ಮ ಸಂದರ್ಭಗಳಿಗೆ ಅವುಗಳನ್ನು ಹೊಂದಿಸಿಕೊಳ್ಳುವುದು ಸಮಂಜಸ.

ನಿರ್ಧಾರಗಳನ್ನು ಕೈಗೊಳ್ಳುವಾಗ ಸಂಬಂಧಿಸಿದ ವ್ಯಕ್ತಿಗಳ ಜೊತೆಗೆ ಚರ್ಚಿಸುವುದು ಸಮಸ್ಯೆಯನ್ನು ಹಗುರವಾಗಿಸುತ್ತದೆ. ಚರ್ಚೆಗೆ ಮುನ್ನ ನಿರ್ಧಾರದ ಆಯಾಮಗಳ ತಿಳಿವಳಿಕೆ ಇರಬೇಕು. ಚರ್ಚೆಯ ನಂತರ ಅಂತಿಮ ನಿರ್ಧಾರಕ್ಕೆ ಸ್ವಲ್ಪ ಸಮಯ ನೀಡಬೇಕು. ತೀರಾ ಆಪ್ತರಾದ, ನಂಬಿಕೆಗೆ ಅರ್ಹರಾದ, ವಿಷಯದ ಅನುಭವವಿರುವ ಬೆರಳೆಣಿಕೆಯ ಮಂದಿಯ ಜೊತೆಗೆ ಮಾತ್ರ ಚರ್ಚಿಸುವುದು ಸೂಕ್ತ. ಇಂತಹ ಚರ್ಚೆಗಳಿಂದಲೂ ನಿರ್ಧಾರ ಆಗಲಿಲ್ಲವೆನಿಸಿದರೆ, ಮೂರನೆಯ ವ್ಯಕ್ತಿಯ ದೃಷ್ಟಿಯಿಂದ ವಿವೇಚಿಸಬಲ್ಲ ತಜ್ಞರ ಸಲಹೆ ಪಡೆಯಬಹುದು. ಉದಾಹರಣೆಗೆ, ಆಸ್ತಿ ಖರೀದಿಯ ವಿಚಾರದಲ್ಲಿ ‘ನಮ್ಮ ಆದಾಯದ ಮಟ್ಟವನ್ನು ಅನುಸರಿಸಿ ಅದಕ್ಕೆ ಕೈ ಹಾಕಬಹುದೇ’ ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳುವುದು ಸುಲಭವಲ್ಲ. ಇಂತಹ ಸಂದರ್ಭದಲ್ಲಿ ಹಣಕಾಸು ತಜ್ಞರ ಸಲಹೆ ನೆರವಾಗಬಲ್ಲದು.

ಯಾವುದಾದರೂ ನಿರ್ಧಾರ ಕೈಗೊಂಡರೆ, ಅದನ್ನು ಬದಲಿಸಬಹುದಾದ ಸಾಧ್ಯತೆಗಳ ಬಗ್ಗೆಯೂ ತಿಳಿದಿರಬೇಕು. ಉದಾಹರಣೆಗೆ, ಹೆಚ್ಚಿನ ಆದಾಯದ ಆಲೋಚನೆಯಿಂದ ಸಂಜೆಯ ವೇಳೆ ಅರೆಕಾಲಿಕ ನೌಕರಿಗೆ ಸೇರಬಹುದು. ಇದರಿಂದ ಆದಾಯ ಹೆಚ್ಚುತ್ತದೆಯಾದರೂ, ಕುಟುಂಬದ ಜೊತೆ ಕಳೆಯುವ ಸಮಯ ಕಡಿಮೆಯಾಗುತ್ತದೆ. ಇದು ಕೌಟುಂಬಿಕ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಈಗ ಎರಡೂ ಪರಿಣಾಮಗಳು ಸ್ಪಷ್ಟವಾಗಿರುವುದರಿಂದ, ಈ ವಿಷಯದ ಕುರಿತಾಗಿ ಮತ್ತೊಮ್ಮೆ ಆಲೋಚಿಸಿ, ಸೂಕ್ತವೆನಿಸುವ ನಿರ್ಧಾರ ಮಾಡಬಹುದು.

‘ಹಸಿವು, ಕೋಪ, ಮತ್ತು ದುಃಖದ ಸಂದರ್ಭಗಳಲ್ಲಿ ನಿರ್ಧಾರಗಳನ್ನು ಮಾಡಬಾರದು’ ಎನ್ನುವ ಮಾತಿದೆ. ತರ್ಕಬದ್ಧವಾಗಿ ನಿರ್ಧರಿಸಬೇಕಾದ ವಿಷಯವನ್ನು ಭಾವನಾತ್ಮಕವಾಗಿ ಆಲೋಚಿಸಿ ಪೇಚಿಗೆ ಈಡಾದವರಿದ್ದಾರೆ. ಸಣ್ಣದಾಗಲಿ, ದೊಡ್ಡದಾಗಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ಶಾಂತ ಮನಃಸ್ಥಿತಿಯಲ್ಲಿ ಇರಬೇಕಾದ್ದು ಮುಖ್ಯ. ಉದ್ವಿಗ್ನ ಮನಸ್ಸು ಹಲವಾರು ಸೂಕ್ಷ್ಮಗಳಿಗೆ ಕುರುಡಾಗಿರುತ್ತದೆ. ಶಾಂತ ವಾತಾವರಣದಲ್ಲಿ, ಕೆಲನಿಮಿಷಗಳ ದೀರ್ಘವಾಗಿ ಉಸಿರಾಡಿದರೆ ಮನಸ್ಸು ನಿರಾಳವಾಗಿ, ಆಲೋಚನೆಗಳು ಸ್ಪಷ್ಟವಾಗುತ್ತವೆ. ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವ ಹಲವಾರು ಮಂದಿ ಇಂತಹ ಪದ್ಧತಿಗಳನ್ನು ಅನುಸರಿಸುತ್ತಾರೆ.

ನಿರ್ಧಾರಗಳಿಗೆ ಮುನ್ನ ‘ಇದನ್ನು ಏಕೆ ಮಾಡುತ್ತಿದ್ದೇನೆ’ ಎನ್ನುವ ಪ್ರಶ್ನೆಯನ್ನು ನಾಲ್ಕೈದು ಬಾರಿ ಮನನ ಮಾಡಿದರೆ ಸರಿಯಾದ ಹಿನ್ನೆಲೆ ಒದಗುತ್ತದೆ. ಪರಸ್ಪರ ಸಂಬಂಧವಿಲ್ಲದ ವಿಷಯಗಳು ತಲೆಯಲ್ಲಿ ಮೂಡಿ ಗೌಜಿ ಎಬ್ಬಿಸಬಹುದು. ಇವುಗಳಲ್ಲಿ ನಿರ್ಧಾರಗಳಿಗೆ ಪೂರಕವಲ್ಲದ ಆಲೋಚನೆಗಳೂ ಇರುತ್ತವೆ. ಅವು ನಿರ್ಧಾರದ ದಾರಿಯನ್ನು ಮಬ್ಬಾಗಿಸಬಹುದು. ಕ್ರಮಬದ್ಧವಿಧಾನದಲ್ಲಿ ಆಲೋಚಿಸಿದಾಗ ಅಪ್ರಸ್ತುತವಾದ ವಿಷಯಗಳು ಚಿಂತನೆಯ ಹಾದಿಯಿಂದ ದೂರಾಗುತ್ತವೆ. ಸರಿಯಾದ ದಿಶೆಯಲ್ಲಿ ಗಮನ ಹರಿದಾಗ ನಿರ್ಧಾರಗಳು ಸುಲಭವಾಗುತ್ತವೆ.

ನಿರ್ಧಾರಗಳ ವೇಳೆ ನಮ್ಮ ಆಯ್ಕೆಗಳನ್ನು ಬರೆದಿಟ್ಟುಕೊಳ್ಳುವುದು ಸೂಕ್ತ. ಕೆಲವೊಮ್ಮೆ ಪ್ರಬಲವೆನಿಸಿದ ಆಯ್ಕೆಗಿಂತಲೂ ಪಟ್ಟಿಯಲ್ಲಿನ ಮತ್ತೊಂದು ಉತ್ತಮ ಅನಿಸಬಹುದು. ಆಯ್ಕೆಗಳು ಒಂದೆಡೆ ಮೂಡಿದಾಗ ಪ್ರಾಬಲ್ಯ-ದೌರ್ಬಲ್ಯಗಳ ವಿವೇಚನೆ ಬರುತ್ತದೆ. ಸಮಂಜಸವಲ್ಲವೆನಿಸಿದ ಆಯ್ಕೆಯನ್ನು ತೆಗೆದುಹಾಕುವ ಕೆಲಸವನ್ನು ಮನಸ್ಸಿನಲ್ಲಿ ಮಾಡುವುದು ಕಷ್ಟ. ಚಿಂತನೆಯ ಅವಗಾಹನೆಗೆ ಬಾರದಿದ್ದ ಆಯ್ಕೆಗಳು ಪಟ್ಟಿಯನ್ನು ನೋಡುವಾಗ ತೋಚಬಹುದು. ಆರಂಭಿಕ ಪಟ್ಟಿ ದೊಡ್ಡದಿದ್ದರೆ, ಅನಗತ್ಯ ಆಯ್ಕೆಗಳನ್ನು ತ್ವರಿತವಾಗಿ ನಿವಾರಿಸಿಕೊಂಡು, ಪ್ರಾಯೋಗಿಕವಾದುದ್ದನ್ನು ಮಾತ್ರ ಉಳಿಸಿಕೊಳ್ಳಬೇಕು.

ಎರಡು-ಮೂರು ಆಯ್ಕೆಗಳ ಪೈಕಿ ಯಾವೊಂದನ್ನೂ ನಿರ್ಧರಿಸಲು ಸಾಧ್ಯವಾಗುತ್ತಿಲ್ಲವೆನಿಸಿದಾಗ, ಒಂದೊಂದು ಆಯ್ಕೆಯ ಲಾಭ-ನಷ್ಟಗಳನ್ನು ಪಟ್ಟಿ ಮಾಡಬೇಕು. ಲಾಭವೆನಿಸಿದ ಅಂಶಕ್ಕೆ ಅಂಕಗಳನ್ನು ನೀಡಬಹುದು; ನಷ್ಟವೆನಿಸಿದ ಅಂಶಕ್ಕೆ ಋಣ-ಅಂಕಗಳನ್ನು ನೀಡಬಹುದು. ಅಂಕಗಳನ್ನು ನೀಡುವಾಗ ಮುಕ್ತಮನಸ್ಸಿನಿಂದ ಪ್ರಾಮಾಣಿಕವಾಗಿ ವರ್ತಿಸುವುದು ಮುಖ್ಯ. ಅಂತಿಮವಾಗಿ ಯಾವ ಆಯ್ಕೆಯ ಅಂಕಗಳು ಅಧಿಕವೋ, ಅದನ್ನು ಪರಿಗಣಿಸಬಹುದು. ಪ್ರಮುಖ ನಿರ್ಧಾರಗಳಿಗೆ ಸಾಕಷ್ಟು ಕಾಲಾವಕಾಶ ನೀಡಬೇಕು. ಹಠಾತ್ ನಿರ್ಧಾರಗಳು ಅಪರೂಪಕ್ಕೆ ಮಾತ್ರ ಸರಿಯಾಗಿರುತ್ತವೆ. ತಾರ್ಕಿಕ ಆಲೋಚನೆಯಿಂದ ಮೂಡಿದ ನಿರ್ಧಾರಗಳು ಸಮಂಜಸವಾಗಿರುವ ಸಾಧ್ಯತೆಗಳು ಅಧಿಕ.

ನಿರ್ಧಾರ ಮಾಡಿ ಮುನ್ನಡೆದಾಗ ಯಾವುದಾದರೂ ಕಾರಣಕ್ಕೆ ಕೆಲಸ ಕೈಗೂಡದಿದ್ದರೆ, ನಂತರದ ಒಳ್ಳೆಯ ಆಯ್ಕೆ ಯಾವುದು ಎಂಬ ಆಲೋಚನೆ ಒಳಿತು. ನಿಯಂತ್ರಣದಲ್ಲಿ ಇಲ್ಲದಿರುವ ಪ್ರಭಾವಗಳು ಕೆಲಸ ಕೆಡಿಸಬಹುದು. ಆಗ ಹಿನ್ನಡೆಯುವುದಕ್ಕಿಂತಲೂ, ಸ್ವಲ್ಪ ಕಡಿಮೆ ಪರಿಣಾಮದ ಆಯ್ಕೆಯನ್ನು ಒಪ್ಪಿಕೊಳ್ಳುವುದು ಕೆಲಸದ ದೃಷ್ಟಿಯಿಂದ ಸೂಕ್ತ. ನಿರ್ಧಾರ ಮಾಡಿದ ಅದರ ಯಾವುದೇ ಪರಿಣಾಮವನ್ನೂ ಒಗ್ಗಿಸಿಕೊಳ್ಳುವ ಮನಃಸ್ಥಿತಿ ಬೆಳೆಯಬೇಕು. ಪ್ರತಿಯೊಂದು ಒಳ್ಳೆಯ ನಿರ್ಧಾರವೂ ನಮ್ಮ ಆತ್ಮವಿಶ್ವಾಸ ವೃದ್ಧಿಸಿದರೆ, ಪ್ರತಿ ತಪ್ಪು ನಿರ್ಧಾರವೂ ನಮ್ಮ ಜೀವನಕ್ಕೆ ಒಳಿತಿನ ಪಾಠವನ್ನು ಕಲಿಸುತ್ತದೆ ಎನ್ನುವ ಸತ್ಯವನ್ನು ಮನಗಾಣುವುದೇ ಅರಿವಿನ ವಿಸ್ತಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT