ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕ್ಯಾಂಪಸ್‌ ಟು ಕಮ್ಯುನಿಟಿ' ತಂಡದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ

ಅರಳುವ ಹೂಗಳಿಗೆ ಭಿತ್ತಿ ಚಿತ್ತಾರ
Last Updated 26 ಸೆಪ್ಟೆಂಬರ್ 2019, 4:16 IST
ಅಕ್ಷರ ಗಾತ್ರ

ಕಣ್ಣರಳಿಸಿ, ನಗುಮುಖದಿಂದ ಸ್ವಾಗತಿಸುವ ಮಿಕ್ಕಿ ಮೌಸ್‌, ಪಕ್ಕದಲ್ಲೇ ಮುದನೀಡುವ ಪ್ರಕೃತಿ ಚಿತ್ರ. ಪರಿಸರ ಕಾಳಜಿಯ ಸಂದೇಶ ಸೇರಿದಂತೆ, ಪಠ್ಯದ ವಿಷಯವೆಲ್ಲ ಗೋಡೆಯಲ್ಲಿ ಅರಳಿದೆ. ‘ಬನ್ನಿ ಇದು ಒಂದನೇ ತರಗತಿ’ ಎಂದು ದೂರದಲ್ಲೇ ಗೊತ್ತಾಗಿ ಬಿಡುತ್ತದೆ.

ಇದೇ ಸಾಲಿನಲ್ಲಿ ಮುಂದೆಸಸಿಗಳ ಬೆಳವಣಿಗೆ, ಹೂವು, ಕಾಂಡದ ಚಿತ್ರಗಳಿವೆ.ಮನುಷ್ಯನ ದೇಹರಚನೆ, ಕಾರ್ಯ ವಿಧಾನದ ಚಿತ್ರಗಳು, ಸೌರಮಂಡಲ, ಜಾನಪದ ಕಲೆ, ದೇಶಭಕ್ತರು, ಕವಿಗಳ ಚಿತ್ರಗಳೂ ಕಾಣುತ್ತವೆ. ಇವುಗಳನ್ನು ಐದರಿಂದ ಏಳನೇ ತರಗತಿ ಮಕ್ಕಳಿಗಾಗಿ ಬರೆಯಲಾಗಿದೆ. ಹೀಗೆ ಬಣ್ಣ, ಚಿತ್ರಗಳು ವರ್ಷಪೂರ್ತಿ ಚಿಣ್ಣರ ಮನಸ್ಸು ಮುದಗೊಳಿಸುತ್ತಲೇ ಕಲಿಕೆಗೆ ಪ್ರೇರೇಪಿಸುತ್ತವೆ.

ಇದೆಲ್ಲಾ ಬೆಂಗಳೂರಿನ ಜಕ್ಕರಾಯನಕೆರೆ ಸರ್ಕಾರಿ ಶಾಲೆ ಆವರಣದ ಸುಂದರ ನೋಟ. ಈ ಸರ್ಕಾರಿ ಶಾಲೆಯ ಸೌಂದರ್ಯ ವೃದ್ಧಿಯ ಕೈಕಂರ್ಯಕ್ಕೆ ನಿಂತವರು ‘ಕ್ಯಾಂಪಸ್‌ ಟು ಕಮ್ಯುನಿಟಿ’ ತಂಡ. ಈ ತಂಡ, ಜಕ್ಕರಾಯನಕೆರೆ ಶಾಲೆಯನ್ನಷ್ಟೇ ಅಲ್ಲ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿರುವ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಂಕಲ್ಪ ಮಾಡಿದೆ. ಇಂಥ ಕ್ರಿಯಾಶೀಲ ತಂಡವನ್ನು ಮುನ್ನಡೆಸುತ್ತಿದ್ದಾರೆ ರಘು ಪೂಜಾರ್.

ಈ ಟೀಂನಲ್ಲಿರುವ ಸದಸ್ಯರೇ ಶಾಲೆಗಳಿಗೆ ಸುಣ್ಣ–ಬಣ್ಣ ಮಾಡುತ್ತಾರೆ. ಶಾಲೆಗಳ ಗೋಡೆ ಮೇಲೆ ಚಿತ್ರ ಬಿಡಿಸುತ್ತಾರೆ. ಹೀಗಾಗಿ, ಸುಣ್ಣ – ಬಣ್ಣ ಕಾಣದ ಅನೇಕ ಸರ್ಕಾರಿ ಶಾಲೆಗಳು ಈಗ ಕಳೆಗಟ್ಟಿವೆ. ಈ ತಂಡದೊಂದಿಗೆ ಶಾಲೆಗಳಿಗೆ ಬಣ್ಣ ತುಂಬಲು ಶಾಲಾ ಮಕ್ಕಳೂ ಪೈಪೋಟಿಗಿಳಿದಿದ್ದಾರೆ. ಸ್ಥಳೀಯ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳೂ ಕೈಜೋಡಿಸಿದ್ದಾರೆ. ದೃಶ್ಯಕಲೆಯ ವಿದ್ಯಾರ್ಥಿಗಳ ಸಾಥ್ ಕೂಡ ಇದಕ್ಕಿದೆ. ಹೀಗೆ ವಿವಿಧ ಕ್ಷೇತ್ರಗಳ 200 ಜನ ಈ ತಂಡದಲ್ಲಿದ್ದಾರೆ.

ವಾರಾಂತ್ಯದ ದಿನ ಈ ತಂಡ ಯಾವುದಾದರೂ ಸರ್ಕಾರಿ ಶಾಲೆ ಮುಂದೆ ಹಾಜರಾಗುತ್ತದೆ. ಯುವಕರ ಪರಿಶ್ರಮ ನೋಡಿ, ಗ್ರಾಮಸ್ಥರು ಕೈಲಾದಷ್ಟು ನೆರವು ನೀಡುತ್ತಾರೆ. ಬಣ್ಣ, ಸಾಮಗ್ರಿ ಒದಗಿಸಿ ಕೊಡುತ್ತಾರೆ. ತಂಡದ ಸದಸ್ಯರಿಗೆ ಊಟ, ವಸತಿ ಕಲ್ಪಿಸಿದರಷ್ಟೇ ಸಾಕು. ಯಾವುದೇ ವಂತಿಗೆ ನೀಡಬೇಕಿಲ್ಲ. ಊರಿನ ಹಳೆ ವಿದ್ಯಾರ್ಥಿಗಳ ನೆರವು ಸಿಕ್ಕರೆ ‌ಈ ಕೆಲಸ ಇನ್ನಷ್ಟು ಸಲೀಸು. ಶಾಲೆ ಅಭಿವೃದ್ಧಿಗೆ ಶ್ರಮಿಸುವ ಕಾಳಜಿಯಿಂದ ಈ ತಂಡದ ಸದಸ್ಯರು ಆ ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಸಂಘಟಿಸಿ, ಅವರಿಗೆ ಜವಾಬ್ದಾರಿ ವಹಿಸುತ್ತಾರೆ.

ಗ್ರಾಮಸ್ಥರ ಸ್ಪಂದನೆ

ಮುಳಬಾಗಿಲು ತಾಲ್ಲೂಕಿನ ಮಂಚಗಾನಹಳ್ಳಿ ಸರ್ಕಾರಿ ಶಾಲೆ ಈ ತಂಡ ಆಯ್ಕೆ ಮಾಡಿಕೊಂಡ ಮೊದಲ ಶಾಲೆ. ಇವರ ಪರಿಶ್ರಮ ದಿಂದ ಇಡೀ ಶಾಲೆಯ ಚಿತ್ರಣವೇ ಬದಲಾಗಿದೆ. ಅಚ್ಚರಿಗೊಂಡ ಗ್ರಾಮಸ್ಥರೇ ತಮ್ಮ ಮಕ್ಕಳನ್ನು ಕಾನ್ವೆಂಟ್‌ಗೆ ಬದಲು ಸರ್ಕಾರಿ ಶಾಲೆಗೆ ದಾಖಲಿಸಿದ್ದಾರೆ. ಶಾಲೆಗೆ ಬೇಕಾದ ಉಪಕರಣಗಳನ್ನು ಒದಗಿಸಿ ಔದಾರ್ಯ ಮೆರೆದಿದ್ದಾರೆ. ಈ ಶಾಲೆ ಮಾದರಿಯಾಗಿ ರೂಪಗೊಳ್ಳಲು ಖುದ್ದು ಗ್ರಾಮಸ್ಥರ ಸಹಕಾರವೂ ಇದೆ.

ಸುಣ್ಣ – ಬಣ್ಣದಿಂದ ಕಂಗೊಳಿಸುತ್ತಿರುವ ದೇವನಹಳ್ಳಿ ತಾಲ್ಲೂಕಿನ ಬಿಜ್ಜವಾರ, ಕೋರಮಂಗಲ ಶಾಲೆಗಳಲ್ಲಿ ಈಗ ದಾಖಲಾತಿ ಹೆಚ್ಚಳಗೊಂಡಿದೆ. ಗ್ರಾಮಸ್ಥರೇ ಸೇರಿ ಶಾಲೆಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ನುರಿತ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರೆ. ಹೊಸಕೋಟೆ ತಾಲ್ಲೂಕಿನ ಭಕ್ತರಹಳ್ಳಿ, ನಡುವತ್ತಿ ಶಾಲೆಗಳು ಆಕರ್ಷಣೆಯ ಕೇಂದ್ರಗಳಾಗಿವೆ. ಮಾಲೂರು ತಾಲ್ಲೂಕಿನ ಹುಳದೇನಹಳ್ಳಿ ಶಾಲೆಯಲ್ಲಿ ಈ ತಂಡದ ಶ್ರಮ ಕಂಡು ಆ ಊರಿನ 1000 ಮಂದಿ ಹಳೆ ವಿದ್ಯಾರ್ಥಿಗಳು ‘ಎಲ್ಲಿಂದಲೋ ಬಂದವರು ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿರುವಾಗ ಇದೇ ಶಾಲೆ ವಿದ್ಯಾರ್ಥಿಗಳಾದ ನಾವು ಏಕೆ ಸ್ಪಂದಿಸಬಾರದು’ ಎನ್ನುವ ಕಾಳಜಿಯಿಂದ ಶಾಲೆ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾರೆ.

ಮೈಸೂರು ಜಿಲ್ಲೆ ಎಚ್‌.ಡಿ ಕೋಟೆ ತಾಲ್ಲೂಕಿನ ಡಿ.ಬಿ ಕುಪ್ಪೆ ಆದಿವಾಸಿಗಳ ಕುಗ್ರಾಮ. ಅಲ್ಲಿನ ಸರ್ಕಾರ ಶಾಲೆ ಅಭಿವೃದ್ಧಿಗೆ ಗ್ರಾಮಸ್ಥರ ನೆರವು ನಿರೀಕ್ಷೆ ಮಾಡಲು ಸಾಧ್ಯವಿರಲಿಲ್ಲ. ಅಂತಹ ಸಂದರ್ಭದಲ್ಲಿ ತಂಡದ ಸದಸ್ಯರೇ ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಯನ್ನು ಅಭಿವೃದ್ಧಿಗೊಳಿಸಿದ್ದಾರೆ. ಮುಂದೆ ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕದ ಕೆಲ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವ ಚಿಂತನೆಯೂ ಇದೆ.

ಇಲ್ಲಿಗೆ ಮುಗಿಯಲಿಲ್ಲ

ಶಾಲಾ ಮಕ್ಕಳಿಗೆ ವೈದ್ಯಕೀಯ ಶಿಬಿರ, ಮಾನಸಿಕ ತೊಳಲಾಟಕ್ಕೆ ಕೌನ್ಸೆಲಿಂಗ್‌, ವಿಜ್ಞಾನದ ‍ಪ್ರಾಯೋಗಿಕ ಕಲಿಕೆಗೆ ಈ ತಂಡದ ಸದಸ್ಯರು ನೆರವಾಗುತ್ತಾರೆ. ಪಠ್ಯಪುಸ್ತಕ, ವಿಜ್ಞಾನ ಪರಿಕರ, ವೈದ್ಯಕೀಯ ಕಿಟ್‌, ನೋಟ್‌ ಪುಸ್ತಕಗಳ ಸಹಾಯವನ್ನೂ ನೀಡುತ್ತಾರೆ. ಹವಾಮಾನ, ನೀರಿನ ಸಂರಕ್ಷಣೆ, ಮಳೆ ನೀರು ಸಂಗ್ರಹ ಪದ್ಧತಿಯ ಮಹತ್ವದ ಬಗ್ಗೆಯೂ ಅರಿವು ಮೂಡಿಸುತ್ತಾರೆ.

ಸಮುದಾಯದ ಸಹಭಾಗಿತ್ವ

ಮಹಾತ್ಮಗಾಂಧಿ ಅವರ 150ನೇ ಜನ್ಮದಿನದ ಅಂಗವಾಗಿ 150 ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚುವ ಉದ್ದೇಶವನ್ನು ಈ ತಂಡ ಹೊಂದಿದೆ. ಸಾವಿರ ಮಂದಿ ಕಲಾವಿದರು, ಎನ್ಎ‌ಸ್ಎಸ್‌ ವಿದ್ಯಾರ್ಥಿಗಳ ಈ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ 20 ಶಾಲೆ, ದೇವನಹಳ್ಳಿ ತಾಲ್ಲೂಕಿನಲ್ಲಿ 15, ದೊಡ್ಡಬಳ್ಳಾಪುರ 6, ಆನೇಕಲ್ 5, ಬನ್ನೇರುಘಟ್ಟ ಸುತ್ತಲಿನಲ್ಲಿ 6 ಶಾಲೆ, ನೆಲಮಂಗಲ 15, ಹೊಸಕೋಟೆ 10, ಮಾಲೂರು13, ಕೋಲಾರ 10, ಕನಕಪುರ, ರಾಮನಗರ, ಮಾಗಡಿ, ಚನ್ನಪಟ್ಟಣ ತಾಲ್ಲೂಕುಗಳಲ್ಲಿ ತಲಾ 5 ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದೆ.

‘ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆ ಇಲ್ಲ. ಒಂದಿಷ್ಟು ಮೂಲ ಸೌಕರ್ಯ ಕಲ್ಪಿಸಿ, ಅಂದಗೊಳಿಸಿದರೆ ದಾಖಲಾತಿ ತಾನಾಗಿಯೇ ಹೆಚ್ಚಾಗುತ್ತದೆ’. ಹೀಗೆಂದು ಜಕ್ಕರಾಯನಕೆರೆ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಹೊನ್ನಚನ್ನೇಗೌಡ ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಇರಲಿಲ್ಲ.

ಶಾಲೆ – ಕಾಲೇಜುಗಳನ್ನು ಸರ್ಕಾರ ದತ್ತು ತೆಗೆದುಕೊಳ್ಳಬೇಕು. ಅಭಿವೃದ್ಧಿ ಹೊಂದಿದ ಶಾಲೆಯನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸವಾಗಬೇಕು ಎನ್ನುವುದು ಈ ತಂಡದ ಮಹೇಶ್‌, ಪುನೀತ್‌, ಪೂಜಿತಾ, ಪ್ರೇಮ್, ಪ್ರವೀಣ್‌, ಶಾರದಾ, ಪೂರ್ಣಿಮಾ, ಶಿವಪ್ರಸಾದ್‌, ಮಲ್ಲನಗೌಡ, ಗುರು ಪ್ರಸಾದ್, ಸುನಿಲ್, ವೆಂಕಟ್‌, ಲಕ್ಷ್ಮಿ ಅಭಿಪ್ರಾಯ ಪಡುತ್ತಾರೆ.

‘ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸಂದಿಗ್ಧ ಕಾಲಘಟ್ಟದಲ್ಲಿ ನಾವಿದ್ದೇವೆ. ಕಳವಳ ಪ‍ಡಬೇಕಿಲ್ಲ’ ಎನ್ನುವ ರಘು ಪೂಜಾರ್ ಹೊಸ ಕನಸೊಂದನ್ನು ಬಿತ್ತಿದ್ದಾರೆ. ಈ ಕೆಲಸ ಎಲ್ಲೆಡೆ ಸಾಗಲಿ.

ಸಂಪರ್ಕ: 9900355900

ಚಿತ್ರಗಳು ಮತ್ತು ವಿಡಿಯೊ: ಕೃಷ್ಣಕುಮಾರ್ ಪಿ. ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT