ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಏನಾದ್ರೂ ಕೇಳ್ಬೋದು’| ಸ್ವಾವಲಂಬಿಯಾಗದೆ ನಿರ್ಧಾರದ ಸ್ವಾತಂತ್ರ್ಯವೆಲ್ಲಿರುತ್ತದೆ?

Last Updated 3 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಯುವಕ. ಪದವಿ ಓದುತ್ತಿದ್ದೇನೆ. ನನ್ನ ಅಕ್ಕನ ಮಗಳನ್ನು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ನಾನು ಅವಳಿಗೆ ತುಂಬಾ ಇಷ್ಟ. ಆದರೆ ಈಗ ಅವರ ಮನೆಯಲ್ಲಿ ಮದುವೆ ಮಾಡಿಕೊ ಅಂತ ಅವಳಿಗೆ ಸಂಬಂಧಗಳನ್ನು ಹುಡುಕುತ್ತಿದ್ದಾರೆ. ಅವಳನ್ನು ಬಿಟ್ಟು ಇರುವುದಕ್ಕೆ ನನಗೆ ಆಗುವುದಿಲ್ಲ. ಈ ಸಮಸ್ಯೆಯಿಂದಾಗಿ ನನಗೆ ಓದುವುದಕ್ಕೂ ಆಗ್ತಾ ಇಲ್ಲ. ಮನೆಯಲ್ಲಿ ಹೇಳಿದಾಗ ಮದುವೆ ಮಾಡಿಕೊಂಡು ಹೋಗು ಅಂದಿದ್ದಾರೆ. ಆ ಹುಡುಗಿ, ನಿನ್ನ ಬಿಟ್ಟರೆ ಬೇರೆ ಯಾರನ್ನೂ ಮದುವೆ ಮಾಡಿಕೊಳ್ಳುವುದಿಲ್ಲ ಅಂತ ಹೇಳುತ್ತಾಳೆ. ನಾನು ಈಗ ಓದಬೇಕೇ? ಅಥವಾ ಅವಳನ್ನು ಮದುವೆ ಮಾಡಿಕೊಬೇಕೇ?

ಹೆಸರು ಊರು ತಿಳಿಸಿಲ್ಲ.

ನಿಮ್ಮ ಪತ್ರದಲ್ಲಿ ಎಲ್ಲ ವಿವರಗಳು ಸ್ಪಷ್ಟವಾಗುವುದಿಲ್ಲ. ಅಕ್ಕನ ಮಗಳೂ ನಿಮ್ಮನ್ನು ಇಷ್ಟಪಡುತ್ತಿದ್ದಾಳೆ ಎಂದಾದರೆ ಅವಳೇಕೆ ತನ್ನ ಅಪ್ಪ ಅಮ್ಮಂದಿರ ಬಳಿ ಮಾತನಾಡುತ್ತಿಲ್ಲ? ನಿಮಗಾಗಿ ಕಾಯುವುದು ಅವಳ ಜವಾಬ್ದಾರಿಯಲ್ಲವೇ? ಹಾಗಾಗಿ ತನ್ನ ಮನೆಯವರನ್ನು ಒಪ್ಪಿಸುವುದೂ ಅವಳಿಗೆ ಸಂಬಂಧಿಸಿದ್ದೇ ಆಗಿರಬೇಕಲ್ಲವೇ? ಅಥವಾ ನೀವೇ ಏಕೆ ನೇರವಾಗಿ ನಿಮ್ಮ ಅಕ್ಕ ಭಾವಂದಿರ ಜೊತೆ ಮಾತನಾಡುತ್ತಿಲ್ಲ? ಮನೆಯಲ್ಲಿ ಮದುವೆ ಮಾಡಿಕೊಂಡು ಹೋಗು ಎಂದು ಹೇಳಿದ್ದಾರೆ ಎಂದರೆ ಅವರು ಸಿಟ್ಟಿನಿಂದ ಹೇಳಿರಬೇಕಲ್ಲವೇ? ಅಂದರೆ ನೀನು ಮದುವೆಯಾಗುವುದಕ್ಕೆ ನಮ್ಮ ಬೆಂಬಲವಿಲ್ಲ, ನಮ್ಮ ಇಷ್ಟಕ್ಕೆ ವಿರುದ್ಧವಾಗಿ ಆದರೆ ಮನೆಯಲ್ಲಿ ಇರುವಂತಿಲ್ಲ ಎನ್ನುವುದು ಅವರ ಮಾತಿನ ಅರ್ಥವೇ? ಹಾಗಿದ್ದರೆ ಜೀವನ ನಿರ್ವಹಣೆ ಹೇಗೆ ಮಾಡುತ್ತೀರಾ? ಈ ಎಲ್ಲಾ ಗೊಂದಲಗಳನ್ನು ಆಚೆಯಿಟ್ಟು ನಿಮ್ಮ ಪರಿಸ್ಥಿತಿಯ ಕುರಿತು ಯೋಚಿಸಿ ನೋಡಿ.

ನಿಮ್ಮಿಬ್ಬರ ಮಧ್ಯೆ ವಯೋಸಹಜ ಆಕರ್ಷಣೆ ಇರುವುದು ನಿಜವೇ ಆಗಿದ್ದರೂ ಅದರಲ್ಲಿ ಏನೂ ಸ್ಪಷ್ಟತೆ ಇಲ್ಲ. ನಿಮ್ಮ ಜೀವನದ ದಾರಿಯ ಕುರಿತಾಗಿ ನೀವಿನ್ನೂ ನಿರ್ಧರಿಸುವ ಸ್ಥಿತಿಯಲ್ಲಿ ಇಲ್ಲ. ನಿರ್ಧಾರದ ಸ್ವಾತಂತ್ರವಿಲ್ಲದಿದ್ದಾಗ ಗೊಂದಲಗಳು ಸಹಜ. ನಿಮ್ಮ ಬದುಕಿನ ದಾರಿಯೇ ನಿಮಗೆ ಗೊತ್ತಿಲ್ಲದಿರುವಾಗ ಮದುವೆಯಾಗಿ ಪತ್ನಿಗೆ ಹೇಗೆ ನ್ಯಾಯ ಒದಗಿಸಲು ಸಾಧ್ಯ? ಹಾಗಾಗಿ ನಿಮ್ಮ ಬದುಕನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳುವುದು. ನಿಮ್ಮ ಪ್ರಥಮ ಆದ್ಯತೆಯಾಗಬೇಕಲ್ಲವೇ? ನಿಮ್ಮಿಬ್ಬರ ಪ್ರೀತಿಯನ್ನು ಎರಡೂ ಕುಟುಂಬದವರಲ್ಲಿ ಇಬ್ಬರೂ ಹೇಳಿಕೊಂಡು ಕೆಲವು ವರ್ಷಗಳ ಸಮಯ ಬೇಕೆಂದು ಕೇಳಿ. ಅಕ್ಕಭಾವಂದಿರನ್ನು ಒಪ್ಪಿಸುವ ಜವಾಬ್ದಾರಿಯನ್ನು ಹುಡುಗಿಗೆ ಒಪ್ಪಿಸಿ. ಒಮ್ಮೆ ಸಾಧ್ಯವಾಗದಿದ್ದರೆ ನಿಮ್ಮ ನೋವು ಹತಾಶೆಗಳನ್ನು ನಿಭಾಯಿಸುವುದು ಹೇಗೆಂದು ಯೋಚಿಸಿ. ವಿದ್ಯಾಭ್ಯಾಸ ಮತ್ತು ಆರ್ಥಿಕ ಸ್ವಾವಲಂಬನೆ ನಿಮ್ಮ ಪ್ರಥಮ ಆದ್ಯತೆಯೆಂದು ನೆನಪಿಸಿಕೊಳ್ಳಿ. ಅಗತ್ಯವಿದ್ದರೆ ಆಪ್ತಸಮಾಲೋಚಕರ ಸಹಾಯ ಪಡೆದುಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT