ಬುಧವಾರ, ಆಗಸ್ಟ್ 4, 2021
27 °C

Valentine Day | ನಿನ್ನ ಹಣೆಯ ಕುಂಕುಮವಾಗಲು ಅನುಮತಿ ಕೊಡುವೆಯಾ ಗೆಳತಿ?

ವಾಲೆಂಟೈನ್‌ ಡೇ ಸ್ಪೆಷಲ್‌ Updated:

ಅಕ್ಷರ ಗಾತ್ರ : | |

ಸುಮ್ಮನೆ ಎರಡು ದಿನ ನಿದ್ದೆ ಬಂದಂತೆ ನಟಿಸಿ ಎದ್ದರೆ ಸಾಕು ಅವಳ ಹುಟ್ಟುಹಬ್ಬ ಕಾದು ನಿಂತಂತಿತ್ತು. ಅದು ಅವಳನ್ನು ಖುಷಿಯಾಗಿರಿಸಲು ನನಗೆ ಸಿಕ್ಕ ಮತ್ತೊಂದು ಬೋನಸ್ ಡೇ. ಅವತ್ತು ಮೊದಲ ಬಾರಿಗೆ ‘ನಾನೇಕೆ ಇವಳನ್ನು ಪ್ರೀತಿಸಲಿಲ್ಲ?’ ಅನ್ನಿಸಿಬಿಟ್ಟಿತ್ತು. ಒಲವಿನ ಗುಣಕಾರ ನನ್ನೊಳಗೆ ಲೆಕ್ಕಗಳನ್ನು ಹೂಡುತ್ತಲೇ ಇತ್ತು. ಆ ಕುರಿತು ದಿನವಿಡೀ ಕೂತು ಯೋಚಿಸಿದ್ದೆ.

ಬರ್ತಡೇಗೆ ಒಲವನ್ನೇ ಸರ್ಪ್ರೈಸ್ ಆಗಿ ನೀಡುವ ಮಿಂಚೊಂದು ಹಾಗೆ ಹೊಳೆದು ಹೋಗಿತ್ತು. ನಾನು ಭಯಂಕರ ಸರ್ಪ್ರೈಸ್‌ವಾದಿ. ಒಲವನ್ನು ಅವಳ ಮುಂದಿಟ್ಟು ‘ನೋಡು, ಇದು ಬದುಕು; ಇದೇ ಬದುಕು. ಅದರ ಬಂಡಿಯನ್ನು ನಾವಿಬ್ಬರಲ್ಲದೆ ಮತ್ಯಾರು ಜೋಡಿಯಾಗಿ ಎಳೆದಾರು!?’ ಅನ್ನುವ ಒಂದುವರೆ ಸಾಲಿನ ವಾಕ್ಯವನ್ನು ದಿನಪೂರ್ತಿ ಸಾವಿರ ಬಾರಿ ನನ್ನಲ್ಲಿ ಹೇಳಿಕೊಂಡಿದ್ದೆ.

ಈಗ ಅವಳ ಹುಟ್ಟುಹಬ್ಬ ಎದುರಾದಾಗಲೆಲ್ಲಾ  ಆ ನೆನಪುಗಳು ಅಲೆಅಲೆಯಾಗಿ ಬಂದು ತಾಗಿ ತಾಗಿ ಹೋಗುತ್ತವೆ. ಹೀಗೆ ಸಾಲು ಸಾಲುಗಳಲ್ಲಿ ಬರೆದುಕೊಂಡು ಖುಷಿಯಾಗುತ್ತೇನೆ. ಅಸಲಿಗೆ ನಾವಿನ್ನೂ ಪ್ರೇಮಿಗಳಾಗಿರಲಿಲ್ಲ. ಆದರೆ ನಮ್ಮ ನಡುವೆ ‘ಬೆಸ್ಟ್’ ಅನ್ನಬಹುದಾದ ಒಂದು ಹಿತವಾದ ಗೆಳೆತನವಿತ್ತು.

ಹುಟ್ಟಿದ ದಿನದ ಕಾರಣಕ್ಕೆ ಅಂದು ನಾವಿಬ್ಬರೂ ಒಂದು ದೇವಸ್ಥಾನದ ಮುಂದೆ ನಿಂತಿದ್ದೆವು. ಇಬ್ಬರೂ ಜೊತೆಯಾಗಿ ಹಣ್ಣುಕಾಯಿಕೊಳ್ಳುವಾಗ ಅವಳಿಗೊಂದು ಮೊಳ ಕನಕಾಂಬರ ಕೊಡಿಸಿದ್ದೆ. ಆಗ ಕೇಳಿದ್ದಳು ನೋಡಿ ಹೂ ಮಾರುವ ಅಜ್ಜಿ ‘ಯಾವಾಗಪ್ಪ ಮದುವೆ?’ ನನ್ನೊಳಗೆ ತಾಳಲಾಗದ ನಗು,  ಅವಳ ಮುಖ ಪೂರ್ಣ ಕೆಂಪಾಗಿತ್ತು.

ಇಬ್ಬರ ಮನಸೊಳಗೆ ತೂಗುತ್ತಿದ್ದ ಉಯ್ಯಾಲೆಗೆ ಅಜ್ಜಿ ಪ್ರೀತಿಯ ಹೆಸರಿಟ್ಟಿದ್ದಳು. ಆದರೆ ಬರೇ ಫ್ರೆಂಡ್ಸ್ ಅಷ್ಟೇ ಅಂದುಕೊಂಡು, ಹೀಗೆ ತಿರುಗಾಡಿಕೊಂಡು, ತೆಕ್ಕೆಗಟ್ಟಲೆ ತರ್ಲೆ ಮಾಡಿಕೊಂಡಿದ್ದೆವು ಅಷ್ಟೇ. ಆದರೆ ಅಜ್ಜಿ ಬಿತ್ತಿದ ಮಾತು ಅವಳ ಮುಖವನ್ನು ಕೆಂಪಾಗಿಸಿತ್ತು. ನನ್ನ ಹೃದಯ ಕುದುರೆಯಂತೆ ಓಡತೊಡಗಿತ್ತು. ಅವಳು ಲಜ್ಜೆಯಿಂದ ತಲೆ ಬಾಗಿಸಿದಾಗ ಅದೆಷ್ಟು ಚಂದ ಕಾಣುತ್ತಿದ್ದಳು ಗೊತ್ತಾ?

ದೇವರ ಮುಂದೆ ನಿಂತು ಕಣ್ಮುಚ್ಚಿದಾಗ ಅವಳ ಲಜ್ಜೆಯ ಮುಖವೇ ನೆನಪಾಗುತ್ತಿತ್ತು. ಎದುರಾದ ಪೂಜಾರಿ ‘ಏನಪ್ಪಾ ನಿಮ್ಮಿಬ್ಬರ ಹೆಸರಲ್ಲಿ ಅರ್ಚನೆನಾ?’ ಅಂದಾಗ, ‘ಇಲ್ಲ ಇಲ್ಲ ಅವಳ ಹೆಸರಲ್ಲಿ ಮಾತ್ರ’ ಅಂತ ಬಾಯಿಗೆ ಬಂದದ್ದನ್ನು ನಾನು ಹೇಳಲಿಲ್ಲ. ಹೇಳಲು ನನ್ನಿಂದಾಗಲಿಲ್ಲ. ಜೋಡಿ ಹೆಸರಲ್ಲಿ ಅರ್ಚನೆ ಮುಗಿದಿತ್ತು. ಆಚೆ ಬಂದು ದೀಪಾಲೇ ಕಂಬದ ಬಳಿ ನಿಂತಾಗ ಅಲ್ಲಿ ಕುಂಕುಮವನ್ನು  ಹಿಡಿಗಟ್ಟಲೆ ಸುರಿಯಲಾಗಿತ್ತು. ಕುಂಕುಮವನ್ನು ಹಣೆಗೆ ಇಟ್ಟುಕೊಳ್ಳಲು ಚಾಚಿದ ಕೈ ನನ್ನ ಹಣೆಗೆ ಹೋಗದೆ ಅವಳ ಹಣೆಯ ಹಾದಿ ಹಿಡಿದಿತ್ತು. ಅವಳ ಕೈ ಹಿಡಿದುಕೊಂಡು ಹಣೆಗೆ ಕುಂಕುಮ ಇಟ್ಟು ಬಿಟ್ಟೆ.

‘ಇಂದು ಹಿಡಿದ ಇದೇ ಕೈಯನ್ನು ಇನ್ನೆಂದೂ ಬಿಡಲಾರೆ. ನಿನ್ನ ಅನುಮತಿ ಇದ್ದರೆ ಸದಾ ನಿನ್ನ ಹಣೆಯ ಕುಂಕುಮವಾಗ್ತೀನಿ’ ಅಂತ ಥೇಟ್ ಹಳೆ ಸಿನಿಮಾದ ರೀತಿ ಒಂದು ಡೈಲಾಗ್ ಹೇಳಿಬಿಟ್ಟಿದ್ದೆ. ನನಗೆ ನನ್ನ ಮೇಲೆ ಆಶ್ಚರ್ಯ, ನಾನೆಷ್ಟು ಬೆವೆತು ಹೋಗಿದ್ದೇನೊ! ಸ್ನೇಹ ಸಂಬಂಧಗಳ ನಡುವೆ ಒಂದು ಪ್ರೀತಿಯ ಶಿಶು ಜನಿಸಿ ಬಿಟ್ಟಿತ್ತು.

ಆಡಿದ ಮಾತುಗಳು ನನ್ನ ಶಕ್ತಿಯನ್ನು ವಸೂಲಿ ಮಾಡಿ ಹಾಕಿ ಗಂಟಲಲ್ಲಿ ಪಸೆಯನ್ನು ನುಂಗಿ ಹಾಕಿದ್ದವು. ನನ್ನ ಮಾತಿಗೆ ಅವಳು ಪ್ರತಿಯಾಡದೆ ತಲೆ ಬಗ್ಗಿಸಿ ನನ್ನ ಭುಜಕ್ಕೆ ಒರಗಿಕೊಂಡಳು. ಆಗ ನನಗೆ ಇಡೀ ಬದುಕು ಗೆದ್ದ ಸಂಭ್ರಮ. ಸ್ನೇಹ-ಪ್ರೀತಿಗಳನ್ನು ಸಮಾನಾಗಿ ಉಂಡವರು ನಾವು. ನಾವೆಷ್ಟು ಲಕ್ಕಿ ಅಲ್ವಾ? ಬರುವ ಹದಿನಾಲ್ಕಕ್ಕೆ ನಮ್ಮ ಪ್ರೀತಿಗೆ ಐದು ವರ್ಷ. ಅಂಬೆಗಾಲನಿಟ್ಟು ಬೆಳೆದೆ ಈಗ ಗೋಡೆ ಹಿಡಿದು ನಡೆಯುವ ತುಂಟತನ ನಮ್ಮ ಪ್ರೀತಿಗೆ.

ಅಂದು ಅದೇ ಅಜ್ಜಿಗೆ, ಅದೇ ಪೂಜಾರಿಗೆ, ಆ ಕುಂಕುಮಕ್ಕೆ ಮತ್ತು ದೇವರಿಗೆ ಸಾಲು ಸಾಲು ಧನ್ಯವಾದಗಳನ್ನು ಹೇಳಲಿದ್ದೇನೆ. ಆಕೆಯನ್ನು ಕೊಟ್ಟ ಈ ಬದುಕಿಗಂತೂ ಸಾವಿರ-ಸಾವಿರ ಥ್ಯಾಂಕ್ಸ್!

–ಸದಾಶಿವ್ ಸೊರಟೂರು

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು