ಸೋಮವಾರ, ಆಗಸ್ಟ್ 2, 2021
23 °C

Valentine Day | ಕನಸೋ ಇದು... ನನಸೋ ಇದು

ವಾಲೆಂಟೈನ್‌ ಡೇ ಸ್ಪೆಷಲ್‌ Updated:

ಅಕ್ಷರ ಗಾತ್ರ : | |

ಅಂದು ನಮ್ಮೂರಿನ ಜಾತ್ರೆಯಿತ್ತು. ಜಾತ್ರೆಗೆಂದು ದೂರದ ಧಾರವಾಡದಿಂದ ಬಂದ ಸುಂದರಿ ಅವಳು. ಅಪ್ಪ, ಅಮ್ಮ, ತಂಗಿ, ತಮ್ಮಂದಿರೊಡನೆ ಜಾತ್ರೆಗೆ ಅಂತ ಬಂದು, ಒಂದು ವಾರ ಪೂರ್ತಿ ನಮ್ಮ ಮನೆಯಲ್ಲಿಯೇ ಉಳಿದುಕೊಂಡಳು. ಆ ಗುಂಪಿನಲ್ಲಿಯೇ ಎದ್ದು ಆಕರ್ಷಿಣೀಯವಾಗಿ ಮಿಂಚಿನಂತೆ ಹೊಳೆದು ಕಾಣುತ್ತಿದ್ದವಳೇ ಪಾರ್ವತಿ. ಪಾರೂ ಅಂತ. ಹೌದು..ಅವಳೇ.. ಅದೇ ಪಾರ್ವತಿ ನನ್ನ ಕನಸಿನಲ್ಲಿ ಆಗಾಗ ಬಂದು ಕಾಣಿಸಿಕೊಂಡು ನನ್ನ ಮನಸ್ಸನ್ನು ತಟ್ಟಿ, ಎಬ್ಬಿಸಿ, ಶಾಂತ ಸಾಗರದಲ್ಲಿ ಅಲೆಗಳನ್ನೆಬ್ಬಿಸುವ ರೀತಿ ನನ್ನ ಮನಸ್ಸನ್ನು ಹೊಕ್ಕಿ ನೆಲೆಸಿಬಿಟ್ಟವಳು.

ಪ್ರತಿ ದಿನ ಕನಸಿನಲ್ಲಿ ಬರುವುದೇ ಆಯಿತು. ಮನಸ್ಸನ್ನು ಹೊಕ್ಕಿದ್ದೂ ಆಯಿತು. ಆದರೆ, ಒಂದು ದಿನವೂ ನನಗೂ ಅವಳಿಗೂ ಮಾತಿಲ್ಲ. ಕತೆಯಿಲ್ಲ. ಫೋನ್ ಇಲ್ಲ, ಪತ್ರವಿಲ್ಲ. ಆದರೆ ನಮ್ಮ ಮನೆಗೆ ಬಂದಾಗ ನಾನು ಅವಳನ್ನು ಸೂಕ್ಷ್ಮವಾಗಿ ಗಮನಿಸಿದ್ದೆ. ಅದನ್ನೆಲ್ಲ ಕಂಡು ನನ್ನ ಮನದ ಯಾವುದೋ ಮೂಲೆಯಲ್ಲಿ ಎಲ್ಲಿಯೋ ಅವಳಿಗೊಂದು ಸ್ಥಾನ ಮೀಸಲಾಗಿ ಹೋಗಿತ್ತು. ನನ್ನ ಅರಿವಿಗೇ ಬಾರದಂತೆ. ಅದು ಈಗ ಅರ್ಥವಾಗುತ್ತಾ ಬಂತು ಕನಸಿನಲ್ಲಿ ಕಾಡುವ ದೇವತೆ ಅವಳೇ ಎಂದು.

ತಕ್ಷಣ ನಾನು ತಡಮಾಡಲಿಲ್ಲ. ಅವಳ ತಂದೆ ನನ್ನ ಹತ್ತಿರದ ಸಂಬಂಧಿ. ಸಂಬಂಧದಲ್ಲಿ ಮಾವ. ಕೈಗೆ ಲೇಖನಿಯನ್ನು ತೆಗೆದುಕೊಂಡು ಪತ್ರನ್ನು ಬರದೇ ಬಿಟ್ಟೆ. ನನಗೆ ಆ ಮಾವನ ಹತ್ತಿರ ಯಾವ ಮುಜುಗರವಾಗಲಿ, ಭಯವಾಗಲಿ, ಅಂಜಿಕೆಯಾಗಲಿ ಇರಲಿಲ್ಲ. ನನ್ನ ಅಭಿಪ್ರಾಯವನ್ನು ಅವರೆಲ್ಲರ ಕ್ಷೇಮ ಸಮಾಚಾರವನ್ನು ಕೇಳುವ ನೆಪದಲ್ಲಿ ಪಾರ್ವತಿ ನನಗೆ ತುಂಬಾ ಇಷ್ಟವಾಗಿದ್ದಾಳೆ. ಅವಳು ನನ್ನನ್ನು ಇಷ್ಟಪಟ್ಟರೆ ಮಾತ್ರ ಎಂದು ನೇರವಾಗಿಯೇ ಬರೆದು ತಿಳಿಸಿದೆ.

ಕೆಲವೇ ದಿನಗಳಲ್ಲಿ ಅಲ್ಲಿಂದ ಪತ್ರ ತಿರುಗಿ ಬಂತು. ಅದರಲ್ಲಿ ನಮ್ಮ ಮನೆಯರೆಲ್ಲರ ಕ್ಷೇಮ ಸಮಾಚಾರದ ಜೊತೆಗೆ.. ನೀ.. ಒಂದು ಸಾರೆ ನಮ್ಮೂರಿಗೆ ಬಂದು ಹೋಗಬಹುದಲ್ಲಾ?....ಎಂಬ ಅಭಿಲಾಷೆಯಿತ್ತು. ಅದನ್ನು ಓದಿದ ಮೇಲೆ ನನಗೆ ತುಂಬಾ ಸಂತೋಷವಾಯಿತು. ಅಲ್ಲಿಗೆ ಹೋಗಲು ಸಮಯ ಹೊಂದಾಣಿಕೆಯನ್ನು ಮಾಡಿಕೊಂಡು ಅಲ್ಲಿಗೆ ಹೊರಟೇಬಿಟ್ಟೆ. ಅವರಿಗೆ ನಾನು ಅಲ್ಲಿಗೆ ಹೊರಟಿರುವ ವಿಚಾರವನ್ನು ಮುಂಚಿತವಾಗಿ ತಿಳಿಸದೇ ಹೊರಟೆ.

ಅವರ ಮನೆ ತಲುಪಿದಾಗ ಮಧ್ಯಾಹ್ನ 12.00 ಗಂಟೆ ಆಗಿರಬಹುದು. ಬೆಲ್ ಮಾಡಿದೆ..ಬಾಗಿಲು  ತೆರೆಯಿತು,. ಯಾರವರು? ಎಂಬ ಧ್ವನಿ ಬಂದ ಕಡೆ ನೋಡಿದೆ. ಹಾಂ ಹೌದು. ಅವಳೇ. ಬಂದು ಬಾಗಿಲು ತೆರೆದಳು. ನಾನು ಹಾಯ್ ಎಂದೆ. ಅವಳು ಓ. ನೀವಾ ಎಂದು ಆಶ್ಚರ್ಯದಿಂದ, ಒಳಗೆ ಬನ್ನಿ ಎಂದು ಸ್ವಾಗತ ಕೋರಿದಳು. ನಾನು ಒಳಗೆ ಹೋಗಿ ನೋಡಿದೆ, ಮನೆಯಲ್ಲಿ ಅವಳನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ ಅಂತ ತಿಳಿದುಕೊಳ್ಳಲು ತಡವಾಗಲಿಲ್ಲ.. ಎಲ್ಲಿ?..... ನಿಮ್ಮ, ಅಪ್ಪ,ಅಮ್ಮ,ತಂಗಿ, ತಮ್ಮ ಎಂದೆ. ಅವಳು ಅಪ್ಪ, ಅಮ್ಮ ಹೊಲಕ್ಕೆ ಹೋಗಿದ್ದಾರೆ. ತಮ್ಮ, ತಂಗಿ ಸ್ಕೂಲಿಗೆ ಹೋಗಿದ್ದಾರೆ. ಕೂತ್ಕೋಳಿ ಸ್ವಲ್ಪ ಉಪಹಾರ ಮಾಡ್ತಿನಿ. ಅಂತ..ಒಳಗೆ ಹೋದಳು. ನಾನು.. ಅಲ್ಲೆ ಇದ್ದ ಪತ್ರಿಕೆಗಳನ್ನು  ತಗೆದುಕೊಂಡು ಓದುತ್ತಾ ಕುಳಿತುಕೊಂಡೆ.

ಸ್ವಲ್ಪ ಸಮಯದ ನಂತರ ಉಪಹಾರ ತಂದು ಕೊಟ್ಟಳು. ಅದನ್ನು ನಿಧಾನಾಗಿ ತಿನ್ನುತ್ತಾ ನಾನೇ ಮಾತಿಗಿಳಿದೆ. ನಾನು ನಿಮಗೆ ಪತ್ರ ಬರೆದಿದ್ದೆ ಗೊತ್ತಾ ವಿಚಾರ? ಎಂದಾಗ. ನಾಚುತ್ತ ನಾನೇ ತಿರುಗಿ ನಿಮಗೆ ಪತ್ರ ಬರೆದದ್ದು ಎಂದಳು. ನನಗಾಗ ಬಹಳ ಸಂತೋಷವಾಯಿತು. ಆಗ ನಾನು ಯಾದೇ ಅಡ್ಡ – ದಿಡ್ಡಿ ಮಾತಾಡದೇ. ನೇರವಾಗೇ ಅವಳನ್ನು ಕೇಳಿ ಬಿಟ್ಟೆ. ನಿನ್ನನ್ನು ಕಂಡರೆ ನನಗೆ ತುಂಬಾ ಇಷ್ಟ. ನೀನು ಒಪ್ಪಿಕೊಂಡರೆ ನಿನ್ನನ್ನೇ ಮದುವೆಯಾಗಬೇಕೆಂದು ಬಯಸಿದ್ದೇನೆ. ಅದಕ್ಕೆ ನೀನು ಏನು ಹೇಳ್ತೀಯಾ? ಅದಕ್ಕೆ ಅವಳು ತಡಮಾಡದೇ ಉತ್ತರಿಸಿಬಿಟ್ಟಳು. ನಮ್ಮ ಅಪ್ಪ ಹೇಳಿದಂತೆ ಕೇಳ್ತೀನಿ ಅವರು ಈಗಾಗಲೇ ನಿಮ್ಮನ್ನೇ ಅಳಿಯಾ ಅಂತ ತಮ್ಮ ಗೆಳೆಯರಿಗೆಲ್ಲಾ ಹೇಳಿಕೊಂಡಿದ್ದಾರೆ ಎಂದು ನಾಚುತ್ತಾ ಪಕ್ಕದಲ್ಲಿದ್ದ ಸೋಫಾ ಮೇಲೆ ಕುಳಿತುಕೊಂಡಳು. ನಾನು ಆಶ್ಚರ್ಯದಿಂದ..  ಹೌದಾ!!! ಎನ್ನುಷ್ಟರಲ್ಲಿ ಹೇಳಿದಳು, ನಿಮ್ಮ ತಂದೆಯವರೂ ಅಪ್ಪನ ಹತ್ತಿರ ಮಾತಾಡಿದ್ದಾರಂತೆ? ನಿಮಗೆ ತಿಳಿಯದೇ ಎಂದಾಗ ನಾನು, ಪೆಚ್ಚಾಗಿ ಹೋದೆ.

–ಶರಣಯ್ಯ .ಕೆ. ಹಿರೇಮಠ

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು