ಭಾನುವಾರ, ಆಗಸ್ಟ್ 1, 2021
23 °C

ರಕ್ಷಾಬಂಧನಕ್ಕೆ ವರ್ಚುವಲ್ ಆಚರಣೆಯ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಕ್ಷಾಬಂಧನ. ಅಣ್ಣ–ತಂಗಿಯರ ನಡುವಿನ ಬಾಂಧವ್ಯದ ಕೊಂಡಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಭಾತೃತ್ವದ ಹಬ್ಬ. ಅಣ್ಣನಿಗೆ ರಾಖಿ ಕಟ್ಟಿ ಆರ್ಶಿವಾದ ಪಡೆಯುವ ಖುಷಿ ತಂಗಿಯದ್ದಾದರೆ, ಮನಸಾರೆ ತಂಗಿಯನ್ನು ಹಾರೈಸಿ ಉಡುಗೊರೆ ನೀಡುವ ಸಂಭ್ರಮ ಅಣ್ಣನದ್ದು. ಆದರೆ ಈ ವರ್ಷ ಕೋವಿಡ್ ಕಾರಣದಿಂದಾಗಿ ಈ ಸಂಭ್ರಮ ಕೊಂಚ ಕಳೆಗುಂದಿದರೂ ಮಾರುಕಟ್ಟೆಯಲ್ಲಿ ಬಗೆ ಬಗೆಯ ರಾಖಿಗಳು ರಾರಾಜಿಸುತ್ತಿವೆ.

ಈ ವರ್ಷದ ರಾಖಿ ಹಬ್ಬ ಒಬ್ಬರೊಬ್ಬರಲ್ಲೂ ಒಂದೊಂದು ಬಗೆಯ ಭಾವ ಮೂಡಿಸಿದೆ. ‌ಜೊತೆಗೆ ವರ್ಚುವಲ್ ಯುಗದಲ್ಲಿ ಯಾವುದೂ ಅಸಾಧ್ಯ ಎಂಬುದಿಲ್ಲ ಎನ್ನುವುದನ್ನು ರಾಖಿ ಹಬ್ಬ ಸಾಬೀತು ಮಾಡಿದೆ. ಕೊರೊನಾ ನಡುವೆಯೇ ಸಂಭ್ರಮಪಡಲು ಈ ಡಿಜಿಟಲ್‌ ವ್ಯವಸ್ಥೆ ದಾರಿ ಮಾಡಿಕೊಟ್ಟಿದೆ.

ವಿಡಿಯೊ ಕರೆ, ಆನ್‌ಲೈನ್ ಉಡುಗೊರೆ
ಈ ಬಾರಿ ಕೊರೊನಾ ಕಾರಣದಿಂದ ಅಣ್ಣ–ತಂಗಿ ಒಬ್ಬರನ್ನೊಬ್ಬರು ಭೇಟಿಯಾಗುವುದು ಕಷ್ಟ. ಮೊದಲೆಲ್ಲಾ ರಕ್ಷಾಬಂಧನಕ್ಕೆ ತವರುಮನೆಗೆ ಹೋಗಿ ಅಣ್ಣನಿಗೆ ರಾಖಿ ಕಟ್ಟಿ ಆರತಿ ಮಾಡಿ ಆರ್ಶಿವಾದ ಪಡೆಯುತ್ತಿದ್ದ ತಂಗಿ ಈ ವರ್ಷ ವಿಡಿಯೊ ಕರೆ ಮಾಡಿ ಅದರಲ್ಲೇ ಆರ್ಶಿವಾದ ಪಡೆಯುವ ಯೋಚನೆ ಮಾಡಿದ್ದಾಳೆ. ಜೊತೆಗೆ ವಾರಕ್ಕೆ ಮೊದಲೇ ಅಣ್ಣ ವಿಳಾಸಕ್ಕೆ ರಾಖಿ ಕಳುಹಿಸಿದ್ದಾಳೆ. ಅಣ್ಣನೂ ಪ್ರೀತಿಯ ತಂಗಿಗೆಂದೇ ವಾರಕ್ಕೆ ಮೊದಲೇ ಆನ್‌ಲೈನ್‌ನಲ್ಲಿ ಉಡುಗೊರೆ ಆರ್ಡರ್‌ ಮಾಡಿದ್ದಾನೆ. ಜೊತೆಗೆ ರೋಗನಿರೋಧಕ ಔಷಧಿಗಳು, ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳು ಅಣ್ಣ ಕಳುಹಿಸಿದ ಉಡುಗೊರೆಯ ಜೊತೆಯಾಗಿವೆ. ಒಟ್ಟಾರೆ ವಿಡಿಯೊ ಕರೆ ಹಾಗೂ ಆನ್‌ಲೈನ್ ಮೂಲಕವೇ ರಾಖಿ ಹಬ್ಬ ಮುಗಿಸುತ್ತಿದ್ದಾರೆ ಅಣ್–ಣ ತಂಗಿ.

ವರ್ಷಗಳ ಬಳಿಕ ಒಟ್ಟಿಗೆ ರಕ್ಷಾಬಂಧನ ಆಚರಣೆ
ಮಹೇಶ್ ಕೆಲಸದ ಕಾರಣ ದೂರದ ಮುಂಬೈ ಸೇರಿ 15 ವರ್ಷಗಳೇ ಕಳೆದಿದ್ದವು. ಆ ಕಾರಣಕ್ಕೆ ಮಹೇಶ್ ತಂಗಿ ಮಲ್ಲಿಕಾ ಅಣ್ಣನಿಗೆ ಪ್ರತಿ ವರ್ಷ ರಾಖಿ ಪಾರ್ಸೆಲ್ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಅಣ್ಣ–ತಂಗಿ ಇಬ್ಬರೂ ಮನೆ ಸೇರಿದ್ದಾರೆ. ಬಾಲ್ಯದ ದಿನಗಳಲ್ಲಿ ಖುಷಿ ಖುಷಿಯಿಂದ ಆಚರಿಸುತ್ತಿದ್ದ ರಾಖಿ ಹಬ್ಬವನ್ನು ಈಗ ಅದೇ ರೀತಿ ಮತ್ತೆ ಮನೆಯಲ್ಲಿ ಆಚರಿಸುತ್ತಿದ್ದಾರೆ. ‘ಎಷ್ಟೋ ವರ್ಷಗಳ ಕಾಲ ದೂರಾದ ನಮ್ಮ ರಾಖಿ ಹಬ್ಬದ ಖುಷಿ ಈಗ ಕೋವಿಡ್ ಕಾರಣದಿಂದ ಮರಳಿದೆ. ಆ ಕಾರಣಕ್ಕೆ ಸಂತೋಷವಾಗುತ್ತಿದೆ’ ಎನ್ನುತ್ತಾರೆ ಮಲ್ಲಿಕಾ.

ಟೀ ಶರ್ಟ್, ಪರಿಸರ ಸ್ನೇಹಿ ರಾಖಿಗೆ ಬೇಡಿಕೆ
ಕೋವಿಡ್‌ ನಡುವೆಯೂ ಪರಿಸರ ಸ್ನೇಹಿ ರಾಖಿಗೆ ಬೇಡಿಕೆ ಹೆಚ್ಚಿದೆ. ನೈಸರ್ಗಿಕ ಬಣ್ಣದ ಬಳಸಿದ, ಮಣ್ಣಿನಲ್ಲಿ ಸುಲಭವಾಗಿ ಕರಗುವ ಪರಿಸರ ಸ್ನೇಹಿ ರಾಖಿಗಳು ಮಾರುಕಟ್ಟೆಯಲ್ಲಿ ಸ್ಥಾನ ಪ‍ಡೆದಿವೆ. ಮಾರುಕಟ್ಟೆಯ ರಾಖಿಗಳಿಗಿಂತ ಜನರು ಆನ್‌ಲೈನ್ ರಾಖಿ ಖರೀದಿಯ ಮೇಲೆ ಹೆಚ್ಚು ಒಲವು ತೋರಿದ್ದಾರೆ.  ಜೊತೆಗೆ ‘ಐ ಲವ್ ಮೈ ಸಿಸ್ಟರ್‌’‌, ‘ಮೈ ಸಿಸ್ಟರ್ ಈಸ್ ಗ್ರೇಟ್’‌, ‘ಬೆಸ್ಟ್‌ ಬ್ರದರ್ ಆ್ಯಂಡ್ ಸಿಸ್ಟರ್’ ಈ ರೀತಿ ಬರಹಗಳಿರುವ ಟೀ ಶರ್ಟ್‌ಗಳಿಗೂ ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು