ಸೋಮವಾರ, ಮಾರ್ಚ್ 1, 2021
28 °C
ಪರಿನಿಬ್ಬಾಣ ದಿನಾಚರಣೆಯಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿಕೆ

ನುಡಿ ಮೂಲಕ ಅಂಬೇಡ್ಕರ್‌ ಆರಾಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ನೀರು ಹೀರಿ ದುಂಪೆಯಂತಾಗಿರುವ ನಾಯಕರನ್ನು ನಿರ್ಮೂಲನೆ ಮಾಡದಿದ್ದರೆ ಅವರಿಂದ ಸಮಾಜಕ್ಕೆ ನಿರಂತರ ದ್ರೋಹವಾಗುತ್ತಲೇ ಇರುತ್ತದೆ. ಇದರ ವಿರುದ್ಧ ಜನ ಜಾಗೃತರಾಗಬೇಕು’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣ ಸಂಸ್ಥೆಯು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆಯಲ್ಲಿ ಮಾತನಾಡಿ, ‘ಅಂಬೇಡ್ಕರ್ ಅವರನ್ನು ನುಡಿ ಮೂಲಕವೇ ಆರಾಧಿಸಬೇಕು. ಬರಹಗಳ ಆಧ್ಯಯನದಿಂದ ಮಾತ್ರ ಅವರನ್ನು ಆರ್ಥ ಮಾಡಿಕೊಳ್ಳಲು ಸಾಧ್ಯ’ ಎಂದರು.

‘ಅಂಬೇಡ್ಕರ್ ಅಂದರೆ ಅಕ್ಷರ, ನುಡಿ. ಕ್ರಿಯಾಶೀಲ ಹೋರಾಟ ಗುಣದ ಮೂಲಕ ಅವರನ್ನು ಸ್ಮರಿಸಬೇಕು. ತನ್ನನ್ನು ಮರೆತರೂ ಪರವಾಗಿಲ್ಲ. ಆದರೆ, ಅಸಮಾನತೆಯ ವಿರುದ್ಧದ ಹೋರಾಟದ ರಥವನ್ನು ತನ್ನ ಅನುಯಾಯಿಗಳು ಮುಂದೆ ಎಳೆದುಕೊಂಡು ಹೋಗಬೇಕೆಂದು ಅಂಬೇಡ್ಕರ್ ಹೇಳಿದ್ದರು’ ಎಂದು ಸ್ಮರಿಸಿದರು.

‘ಅಂಬೇಡ್ಕರ್ ಬರಹಗಳನ್ನು ನಾವು ಯಾವ ರೀತಿ ಪೂಜಿಸಬೇಕೋ ಆ ರೀತಿ ಮಾಡುತ್ತಿಲ್ಲ. ಅಂಬೇಡ್ಕರ್‌ರನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಪರಿನಿಬ್ಬಾಣದ ದಿನದ ಮಹತ್ವದ ಅರಿವು ಅಗತ್ಯ. ಇತಿಹಾಸದಲ್ಲಿ ಈ ದಿನಕ್ಕೆ ಶಕ್ತಿ ಇದೆ. ಇಂದಲ್ಲಾ ನಾಳೆ ಪ್ರತಿಯೊಬ್ಬರೂ ಸಂಗಮಿಸುವ ಬಿಂದುವಾಗಿ ಈ ದಿನವನ್ನು ಆಚರಣೆ ಮಾಡುತ್ತಾರೆ’ ಎಂದು ತಿಳಿಸಿದರು.

ಅಂಬೇಡ್ಕರ್‌ಗೆ ಅವಮಾನ: ‘ಮನುಷ್ಯ ಜಾತಿ, ಉಪಜಾತಿಗಳ ಮೂಲಕ ಸಮುದಾಯವನ್ನು ಸಾಯಿಸುವ ಕೆಲಸ ಮಾಡುತ್ತಿದ್ದಾನೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್‌ಗೆ ಪಟ್ಟಿ ಮಾಡಲಾಗದಷ್ಟು ಅವಮಾನವಾಗಿದೆ. ಶೋಷಿತರು ವಂಚನೆಗೆ ಒಳಗಾಗುವುದನ್ನು ತಡೆಯಲು ಅಂಬೇಡ್ಕರ್ ಮಾರ್ಗದರ್ಶನದಲ್ಲಿ ಹೋರಾಟ ನಡೆಸುವ ಅಗತ್ಯವಿದೆ. ಅವರ ಆದರ್ಶ ನಿರಂತರ. ಅವರ ಭಾಷಣವನ್ನು ಪ್ರತಿನಿತ್ಯ ಕುರಾನ್ ಪಠಿಸುವಂತೆ ಓದಿ ಅರ್ಥ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

ಸರ್ಕಾರಗಳ ಅನೀತಿ: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ಅಂಬೇಡ್ಕರ್‌ರ ಆಶಯವಾಗಿತ್ತು. ಈಗ ಶಿಕ್ಷಣ ಉಳ್ಳವರ ಪಾಲಾಗುತ್ತಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಇದಕ್ಕೆಲ್ಲಾ ಸರ್ಕಾರಗಳ ಅನೀತಿ ಕಾರಣ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಾತಿಪದ್ಧತಿ ಇರಲಿಲ್ಲ: ‘ಪೂರ್ವಜರ ವೇದಗಳ ಆಧಾರದ ಪ್ರಕಾರ ದೇಶದಲ್ಲಿ ಈ ಹಿಂದೆ ಜಾತಿಪದ್ಧತಿ ಇರಲಿಲ್ಲ. ಬದಲಾದ ಸನ್ನಿವೇಶದಲ್ಲಿ ಜಾತಿಪದ್ಧತಿ ಆಚರಣೆಗೆ ಬಂದಿದೆ’ ಎಂದು ಸಾಹಿತಿ ಕೆ.ಪ್ರಕಾಶ್ ಕಳವಳ ವ್ಯಕ್ತಪಡಿಸಿದರು.

‘ಪುರೋಹಿತಶಾಹಿಗಳು ವರ್ಣ ಪದ್ಧತಿ ಅನುಸರಿಸುತ್ತಿದ್ದ ಸಂದರ್ಭದಲ್ಲಿ ಜಾತಿ ಹುಟ್ಟಿಕೊಂಡಿತು. ಆ ನಂತರ ಕುಲ ಕಸುಬುಗಳ ಆಧಾರದಲ್ಲಿ ಜಾತಿಗಳ ವಿಂಗಡಣೆಯಾಯಿತು. ಆಧುನಿಕ ಕಸುಬು, ಕೈಗಾರಿಕೆ, ಕೃಷಿ, ತಂತ್ರಗಾರಿಕೆಯಿಂದ ಮೋಘಲ್‌ರ ಆಳ್ವಿಕೆಯಲೂ ಜಾತಿ ತಾರತಮ್ಯ ಇತ್ತು’ ಎಂದರು.

‘ಇತ್ತೀಚಿನ ದಿನಗಳಲ್ಲಿ ಎಸ್ಸಿ ಎಂಬುದು ಪ್ರಶ್ನೆಯಾಗಿಲ್ಲ. ವಿಭಜನೆಯ ಹಂತದಲ್ಲಿ ಪರಿಗಣಿಸುತ್ತಿದ್ದು, ಆಯಾ ಜಾತಿಯಲ್ಲಿ ಶ್ರೀಮಂತರನ್ನು ನಾಯಕರನ್ನಾಗಿ ಬಿಂಬಿಸುವ ಮೂಲಕ ಬಡವರು ಶೋಷಣೆಗೆ ಒಳಗಾಗುತ್ತಿದ್ದಾರೆ. ಶೋಷಿತರು ಈ ಬಗ್ಗೆ ಜಾಗೃತರಾಗಬೇಕು’ ಎಂದು ಸಲಹೆ ನೀಡಿದರು.

‘ರತ್ತೂ ಕಂಡಂತೆ ಅಂಬೇಡ್ಕರ್‌ರ ಕೊನೆಯ ದಿನಗಳು’ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ರಾಜ್ಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸರ್ಕಾರಿ ನೌಕರರ ಒಕ್ಕೂಟದ ಉಪಾಧ್ಯಕ್ಷ ನಾಗಸಿದ್ಧಾರ್ಥ ಹೊಲೆಯಾರ್ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು