ನೆನಪಿನ ದೋಣಿಯಲ್ಲಿ ತೇಲಿದ ‘ವಿಜಯಾ ಹೈಸ್ಕೂಲ್‌’

7

ನೆನಪಿನ ದೋಣಿಯಲ್ಲಿ ತೇಲಿದ ‘ವಿಜಯಾ ಹೈಸ್ಕೂಲ್‌’

Published:
Updated:
Prajavani

ಬೆಂಗಳೂರು: ‘ನೋಡೋ ನಮ್‌ ಸುಪ್ರಿತಾ ಸ್ವಲ್ಪಾನೂ ಬದಲಾದಂತೆ ಕಾಣೋದೇ ಇಲ್ಲ, ಹಾಗೇ ಇದ್ದಾಳಲ್ಲ’ ಎಂದು ಒಬ್ಬರು ಹೇಳಿದಾಗ, ‘ಸವಿತಾನೂ ಅಷ್ಟೇ ಕಣೋ’ ಎಂದಿತು ಮತ್ತೊಂದು ಧ್ವನಿ. 

38 ವರ್ಷಗಳ ಬಳಿಕ ಅಲ್ಲಿ ಸೇರಿದ್ದ ಬಹುತೇಕ ಸ್ನೇಹಿತರು ತಮ್ಮ ಪ್ರೌಢಶಾಲಾ ಕಲಿಕೆಯ ದಿನಗಳನ್ನು ಮೆಲುಕು ಹಾಕಿದರು. ಗೆಳೆಯ–ಗೆಳತಿಯರು ತುಂಟತನಗಳನ್ನು ನೆನಪಿಸಿಕೊಂಡರು. ವಿದ್ಯೆ ಕಲಿಸಿದ ಮೇಷ್ಟ್ರುಗಳಿಗೆ ಗುರುವಂದನೆ ಸಲ್ಲಿಸಿದರು.

ವಿಜಯಾ ಹೈಸ್ಕೂಲ್‌ನ (ವಿಎಚ್‌ಎಸ್‌) 1978–81ನೇ ಸಾಲಿನ ಸಹಪಾಠಿಗಳು ಆಯೋಜಿಸಿದ್ದ 'ಗುರುವಂದನಾ ಮತ್ತು ಸ್ನೇಹ ಮಿಲನ' ಕಾರ್ಯಕ್ರಮದ ಚಿತ್ರಣವಿದು.

ಆ ಸಾಲಿನ ವಿದ್ಯಾರ್ಥಿನಿಯಾಗಿದ್ದ ಈಗ ಗಾಯಕಿಯಾಗಿರುವ ಅಂಜಲಿ ಹಳಿಯಾಳ್‌ ಶಾಲಾ ದಿನಗಳ ಪ್ರಾರ್ಥನಾ ಗೀತೆಗಳೊಂದಿಗೆ ಸಮಾರಂಭಕ್ಕೆ ನಾಂದಿ ಹಾಡಿದರು. ಅಂದಿನ ಕಾಲಕ್ಕೆ ಸಂಗೀತ ಶಿಕ್ಷಕಿಯಾಗಿದ್ದ ಎಸ್‌.ಗೀತಾ ಬಂದಿದ್ದರು. ಕಲಿಸುತ್ತಿದ್ದ ‘ಹೇ ಮಾಲಿಕ್‌ ತೇರೆ ಬಂದೇ ಹಮ್‌’ ಗೀತೆಯನ್ನು ಹಾಡುತ್ತ, ಸಭಾಂಗಣವನ್ನೇ ಸಂಗೀತ ಪಾಠದ ತರಗತಿಯನ್ನಾಗಿಸಿದರು. ಅವರ ಹಾಡಿಗೆ, ಪ್ರಾರ್ಥನೆಗಳಿಗೆ ಹಳೆಯ ವಿದ್ಯಾರ್ಥಿಗಳೆಲ್ಲ ಗುನುಗುತ್ತ ಧ್ವನಿಗೂಡಿಸಿದರು.

‘ನಮ್ಮ ಶಾಲೆಯಲ್ಲಿ ಪಠ್ಯಬೋಧನೆ ಮಾತ್ರವಲ್ಲದೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಹತ್ತನೇ ತರಗತಿಯ ರಾಜ್ಯಮಟ್ಟದ ವಾರ್ಷಿಕ ಪರೀಕ್ಷೆಯ ಮೊದಲ 10 ರ್‍ಯಾಂಕ್ ವಿದ್ಯಾರ್ಥಿಗಳಲ್ಲಿ ನಮ್ಮ ವಿಎಚ್‌ಎಸ್‌ನ ಒಂದಿಬ್ಬರಾದರು ಇದ್ದೇ ಇರುತ್ತಿದ್ದರು’ ಎಂದು ಹಳೆಯ ವಿದ್ಯಾರ್ಥಿ ಅಮರನಾಥ್‌ ನೆನಪಿಸಿಕೊಂಡರು. 

‘ಬೆಳಗಿನ ಪ್ರಾರ್ಥನೆಯ ವೇಳೆ ವಾಚಿಸುತ್ತಿದ್ದ ಸುದ್ದಿಗಳು ನಮಗೆ ಸಾಮಾಜಿಕ ವಿದ್ಯಮಾನಗಳನ್ನು ತಿಳಿಸುತ್ತಿದ್ದವು. ಹೇಳುತ್ತಿದ್ದ ಸುಭಾಷಿತಗಳು ಆದರ್ಶಗಳನ್ನು ಕಲಿಸಿದವು’ ಎಂದು ಈಗ ವಾಸ್ತುಶಿಲ್ಪ ತಜ್ಞೆ ಆಗಿರುವ ಮೀರಾ ಸ್ಮರಿಸಿಕೊಂಡರು.

ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಈ ಕೂಟದಲ್ಲಿ ಭಾಗವಹಿಸಲೆಂದೇ ಬಂದಿದ್ದರು. ಮಾಡುತ್ತಿರುವ ಕೆಲಸ ಮತ್ತು ಮಕ್ಕಳ ವಿದ್ಯಾಭ್ಯಾಸ, ವಿವಾಹದ ಕುರಿತು ಮಾತುಕತೆಗಳನ್ನು ನಡೆಸಿದರು.

ವಿಎಚ್‌ಎಸ್‌ ಪುನರ್ಮಿಲನ ಕೂಟದ ಸಂಚಾಲಕ ಅನಿಲ್‌ ಗೌಡ,'ಸಾಮಾಜಿಕ ಮಾಧ್ಯಮದ ಸಂಪರ್ಕದಿಂದಾಗಿ ಕೇವಲ 2 ವಾರಗಳಲ್ಲಿ ಇಷ್ಟೊಂದು ಸಂಗಡಿಗರು ಒಟ್ಟುಗೂಡಿದ್ದಾರೆ. ನಾವು ಪದವಿಗಳನ್ನು ಗಳಿಸಿಕೊಂಡು, ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ, ಇಂತಹ ಮಿಲನಗಳೇ ಹೆಚ್ಚು ಸಂತಸ ನೀಡುತ್ತವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !