ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಒಳನೋಟ | ಅರಣ್ಯೀಕರಣ ಪ್ರಚಾರಕ್ಕೆ ಮಾತ್ರ?
ಒಳನೋಟ | ಅರಣ್ಯೀಕರಣ ಪ್ರಚಾರಕ್ಕೆ ಮಾತ್ರ?
Published 24 ಆಗಸ್ಟ್ 2024, 23:30 IST
Last Updated 24 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಬೀದರ್‌: ಬಯಲು ಪ್ರದೇಶದಲ್ಲಿ ನೆಡಲು, ನಾಗರಿಕರಿಗೆ ವಿತರಿಸಲು ತೆಗೆದುಕೊಂಡು ಹೋಗಿದ್ದ ನೂರಾರು ಸಸಿಗಳು ರಸ್ತೆಯ ಅಕ್ಕಪಕ್ಕ ಅನಾಥವಾಗಿ ಬಿದ್ದಿದ್ದವು. ಇದನ್ನು ನೋಡಿ ಸ್ಥಳೀಯರು ಆಕ್ಷೇಪಿಸಿದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಅಲ್ಲಿಗೆ ದೌಡಾಯಿಸಿ ಬಂದರು. ಆನಂತರ ಸಸಿಗಳನ್ನು ನೆಟ್ಟು, ಜನರಿಗೂ ವಿತರಿಸಿದರು. ಕೆಲ ದಿನಗಳ ಹಿಂದೆ ಬೀದರ್‌ ತಾಲ್ಲೂಕಿನ ಅಮಲಾಪುರ, ಶಹಾಪುರ ಸಮೀಪ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತು. ಬೀದರ್‌ ಹೊರವಲಯದಲ್ಲಿರುವ ರೇಷ್ಮೆ ಇಲಾಖೆಗೆ ಸೇರಿದ ನಾಲ್ಕೈದು ಎಕರೆ ಜಾಗದಲ್ಲಿ ಹೋದ ವರ್ಷ ವನಮಹೋತ್ಸವಕ್ಕೆ ನೂರಾರು ಸಸಿಗಳನ್ನು ನೆಡಲಾಗಿತ್ತು.

ಈಗ ಅವುಗಳೆಲ್ಲ ಎತ್ತರಕ್ಕೆ ಬೆಳೆದಿವೆ. ಇಡೀ ಪ್ರದೇಶ ಹಸಿರಿನಿಂದ ನಳನಳಿಸುತ್ತಿದೆ. ಅಲ್ಲಿನ ಸಿಬ್ಬಂದಿ ಅವುಗಳನ್ನು ಜತನದಿಂದ ಪೋಷಿಸುತ್ತಿರುವುದರ ಫಲವಿದು. ಈ ಪ್ರದೇಶ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ನಿತ್ಯ ಇದರ ಸನಿಹದಿಂದಲೇ ಓಡಾಡುತ್ತಾರೆ. ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆಯವರು ಇಲ್ಲಿಂದಲೇ ವನ ಮಹೋತ್ಸವಕ್ಕೆ ಚಾಲನೆ ಕೊಟ್ಟು, ಅದರ ಮೇಲೆ ವಿಶೇಷ ನಿಗಾ ಇರಿಸಿದ್ದಾರೆ. ಈ ಎಲ್ಲಾ ಕಾರಣದಿಂದ ಇಲ್ಲಿ ನೆಟ್ಟಿರುವ ಗಿಡಗಳನ್ನು ಉತ್ತಮ ರೀತಿಯಲ್ಲಿ ಪೋಷಿಸಲಾಗುತ್ತಿದೆ.

ಈ ಮೇಲಿನ ಎರಡೂ ತಾಣಗಳಲ್ಲಿ ನಡೆದ ಬೆಳವಣಿಗೆಗಳನ್ನು ಗಮನಿಸಿದರೆ ಅರಣ್ಯೀಕರಣ ಯಾವ ರೀತಿಯಲ್ಲಿ ನಡೆಯುತ್ತಿದೆ ಎನ್ನುವುದನ್ನು ಯಾರು ಬೇಕಾದರೂ ಅಂದಾಜಿಸಬಹುದು.

ಮುಖ್ಯರಸ್ತೆಯಿಂದ ದೂರ ಇರುವ, ಸುಲಭವಾಗಿ ಅಲ್ಲಿಗೆ ತಲುಪಲಾಗದ ಸ್ಥಳಗಳಲ್ಲಿ ಸಸಿಗಳ ಪೋಷಣೆ ಹೇಳಿಕೊಳ್ಳುವ ರೀತಿಯಲ್ಲಿ ಆಗುತ್ತಿಲ್ಲ. ಕೆಲವೇ ವರ್ಷಗಳ ಹಿಂದೆ ಬೀದರ್‌ ತಾಲ್ಲೂಕಿನ ಚೊಂಡಿ, ಅಲಿಯಾಬಾದ್‌, ಮಲ್ಕಾಪುರ ಹೊರವಲಯದಲ್ಲಿ ಸಾಕಷ್ಟು ಗಿಡಗಳನ್ನು ನೆಡಲಾಗಿತ್ತು. ಆದರೆ, ಅಲ್ಲಿ ಹಸಿರು ಹೆಚ್ಚಾಗಿಲ್ಲ. ಬಹುತೇಕ ಗಿಡಗಳು ಸತ್ತಿವೆ. ಇನ್ನು, ಪ್ರತಿ ವರ್ಷ ಮಳೆಗಾಲ ಬರುತ್ತಿದ್ದಂತೆ ಪಟ್ಟಣ, ನಗರ ಪ್ರದೇಶಗಳಲ್ಲಿ ವಿಶೇಷವಾಗಿ ರಸ್ತೆಗಳ ಉದ್ದಕ್ಕೂ ಸಸಿಗಳನ್ನು ನೆಡಲಾಗುತ್ತಿದೆ. ಆದರೆ, ಅವು ಬೆಳೆಯುತ್ತಿಲ್ಲ. ನೆಟ್ಟ ಜಾಗದಲ್ಲಿಯೇ ಪದೇ ಪದೇ ಏಕೆ ಸಸಿಗಳನ್ನು ನೆಡುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಹಿಂದೆ ನೆಟ್ಟ ಸಸಿಗಳು ಎಲ್ಲಿಗೆ ಹೋದವು? ಪ್ರತಿ ವರ್ಷ ಸಸಿ ನೆಟ್ಟರೂ ಹಸಿರೇಕೆ ಹೆಚ್ಚಾಗುತ್ತಿಲ್ಲ? ಎಂಬ ಪ್ರಶ್ನೆ ಗಳಿಗೆ ಸರಿಯಾದ ಉತ್ತರ ಸಿಗದ ಕಾರಣದಿಂದಲೇ ಅರಣ್ಯೀಕರಣ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಅನುಮಾನ ಮೂಡುತ್ತದೆ. ಅರಣ್ಯೀಕರಣ ವಿಷಯ ದಲ್ಲಿ ಅರಣ್ಯ ಇಲಾಖೆ ಗಂಭೀರವಾಗಿಲ್ಲ ಎನ್ನುವುದನ್ನು ಇದು ಎತ್ತಿ ತೋರಿಸುತ್ತದೆ. ಅಧಿಕಾರಿಗಳ ಧೋರಣೆ ಅರಿತ ಅರಣ್ಯ ಸಚಿವರು, ಸವಿವರವಾದ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಕಳೆದ ಎರಡು ದಶಕಗಳ ಅವಧಿಯಲ್ಲಿ ಅರಣ್ಯ ಇಲಾಖೆಯಲ್ಲಾಗಿರುವ ಬೆಳವಣಿಗೆಗಳನ್ನು ನೋಡಿದಾಗ ನಿರಾಸೆಯೇ ಹೆಚ್ಚು ಎದ್ದು ಕಾಣುತ್ತದೆ. ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಾಜ್ಯದಲ್ಲಿ ಸಸಿಗಳನ್ನು ನೆಡಲಾಗುತ್ತಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಹಸಿರಿನ ಪ್ರಮಾಣ ಕೂಡ ದ್ವಿಗುಣವಾಗುತ್ತ ಹೋಗಬೇಕಿತ್ತು. ಆದರೆ, ಇದು ವಿರುದ್ಧ ದಿಕ್ಕಿಗೆ ಹೋಗುತ್ತಿದೆ! ಎರಡು ದಶಕಗಳ ಹಿಂದೆ ರಾಜ್ಯದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ ಶೇ 22.61ರಷ್ಟಿತ್ತು. 2023ನೇ ಸಾಲಿಗೆ ಬರು ಬರುತ್ತ ಶೇ 21.21ಕ್ಕೆ ಕುಸಿದಿದೆ.

2002ರ ಅಂಕಿ–ಅಂಶಗಳ ಪ್ರಕಾರ, ರಾಜ್ಯದಲ್ಲಿ ಶೇ 22.61ರಷ್ಟು ಅರಣ್ಯ ಪ್ರದೇಶದ ಹರವು ಇತ್ತು. ಒಟ್ಟು 43,35,645 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ ಹರಡಿಕೊಂಡಿತ್ತು. 2023ನೇ ಸಾಲಿಗೆ ಇದು 40,67,822 ಹೆಕ್ಟೇರ್‌ಗೆ ಕುಸಿದಿದೆ. ಇದರಲ್ಲಿ ಒಂದು ಅಚ್ಚರಿಯ ಸಂಗತಿ ಏನೆಂದರೆ 2023ರ ಏಪ್ರಿಲ್‌ನಿಂದ ಡಿಸೆಂಬರ್‌ ಅವಧಿಯಲ್ಲಿ 2,892 ಹೆಕ್ಟೇರ್‌ ಅರಣ್ಯ ಪ್ರದೇಶ ಹೊಸದಾಗಿ ಸೇರ್ಪಡೆಯಾಗಿದೆ ಎನ್ನುವುದು ಸಮಾಧಾನಕರ ಸಂಗತಿ. ಹೀಗಿದ್ದರೂ ಒಟ್ಟಾರೆ ಅರಣ್ಯ ಪ್ರದೇಶದ ವಿಸ್ತಾರ ಶೇ 21.21ಕ್ಕೆ ಇಳಿಕೆಯಾಗಿದೆ. ಇದು ಎರಡು ದಶಕಗಳ ಹಿಂದಿನ ಒಟ್ಟು ಅರಣ್ಯ ಪ್ರದೇಶಕ್ಕಿಂತಲೂ ಕಡಿಮೆ. ರಾಜ್ಯದಲ್ಲಿ ಅರಣ್ಯೀಕರಣ ಕಳೆದ ಎರಡು ದಶಕಗಳಲ್ಲಿ ಯಾವ ರೀತಿಯಲ್ಲಿ ನಡೆಯುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

2023ನೇ ಸಾಲಿನಿಂದ ಅರಣ್ಯ ಇಲಾಖೆಯು, ಪ್ರತಿ ವರ್ಷ ರಾಜ್ಯದಲ್ಲಿ 5 ಕೋಟಿ ಸಸಿಗಳನ್ನು ನೆಡುವುದಾಗಿ ಘೋಷಿಸಿತ್ತು. ಬರುವ ಐದು ವರ್ಷಗಳಲ್ಲಿ ಹೊಸದಾಗಿ ಒಟ್ಟು 25 ಕೋಟಿ ಸಸಿಗಳನ್ನು ಹಚ್ಚಿ, ರಾಜ್ಯದ ಹಸಿರಿನ ಪ್ರಮಾಣ ಹೆಚ್ಚಿಸುವುದಾಗಿ ತಿಳಿಸಿದೆ. ಆದರೆ, ಹೋದ ವರ್ಷ ನೆಟ್ಟ ಒಟ್ಟು 5 ಕೋಟಿ ಸಸಿಗಳಲ್ಲಿ ಎಷ್ಟು ಬೆಳೆದಿವೆ, ಎಷ್ಟು ಹಾಳಾಗಿವೆ ಎನ್ನುವುದರ ಅಂಕಿ ಅಂಶ ಅರಣ್ಯ ಇಲಾಖೆಯ ಬಳಿಯೇ ಇಲ್ಲ! ಅರಣ್ಯ ಇಲಾಖೆಯ ಪ್ರಕಾರ, ನೂರು ಗಿಡಗಳನ್ನು ನೆಟ್ಟರೆ ಅದರಲ್ಲಿ ಎಂಬತ್ತು ಗಿಡಗಳು ಬದುಕುಳಿಯುತ್ತವೆ. ಆದರೆ, ವಾಸ್ತವ ಪರಿಸ್ಥಿತಿ ಹಾಗಿಲ್ಲ. ಇಪ್ಪತ್ತು ಗಿಡ ಉಳಿದರೆ ಹೆಚ್ಚು ಎನಿಸುತ್ತಿದೆ. ಅರಣ್ಯೀಕರಣ ಸಮರ್ಪಕವಾಗಿ ನಡೆದಿದ್ದರೆ ರಾಜ್ಯದ ಅನೇಕ ಬಯಲು ಪ್ರದೇಶಗಳು ಇಷ್ಟೊತ್ತಿಗೆ ಹಸಿರಿನಿಂದ ನಳನಳಿಸುತ್ತಿದ್ದವು. ಆ ಕೆಲಸ ಆಗಿಲ್ಲ. ಇನ್ನು, ಖಾಸಗಿಯವರಿಗೆ ಕೊಡುವ ಸಸಿಗಳ ಲೆಕ್ಕವನ್ನು ಅರಣ್ಯ ಇಲಾಖೆ ಇಡುತ್ತಿಲ್ಲ.

ವಿಜಯಪುರವು ರಾಜ್ಯದಲ್ಲಿಯೇ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ. ದಶಕಗಳಿಂದಲೂ ವಿಜಯಪುರಕ್ಕೆ ಹಸಿರಿನ ಹೊದಿಕೆ ಹಾಸುವ ಮಾತುಗಳನ್ನು ಆಡಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಆ ಕೆಲಸವೇ ಆಗಿಲ್ಲ. ಹಾಗೆ ನೋಡಿದರೆ ಕಳೆದ ಎರಡು ದಶಕಗಳಲ್ಲಿ ವಿಜಯಪುರದ ಹೆಚ್ಚಿನ ಭಾಗಗಳಿಗೆ ಕಾಲುವೆಗಳ ಮೂಲಕ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಪರಿಣಾಮಕಾರಿಯಾಗಿ ಅದನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ, ಅದೇ ನೀರನ್ನು ಬಳಸಿಕೊಂಡು ಅರಣ್ಯ ಪ್ರದೇಶದ ವಿಸ್ತಾರ ಹೆಚ್ಚಿಸುವ ಕೆಲಸವಾಗಿಲ್ಲ. ರಾಜ್ಯದ ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಹುತೇಕ ಭಾಗಗಳು ಈಗಲೂ ಹಸಿರಿನಿಂದ ವಂಚಿತವಾಗಿವೆ. ಇದನ್ನೆಲ್ಲ ಗಮನಿಸಿದರೆ ಅರಣ್ಯೀಕರಣ ಪ್ರಚಾರಕ್ಕೆ ಸೀಮಿತವಾಯಿತೇ ಎಂಬ ಅನುಮಾನ ಕಾಡದಿರದು.

ಹಸಿರೇಕೆ ಹೆಚ್ಚಾಗುತ್ತಿಲ್ಲ?

ರಾಜ್ಯದಲ್ಲಿ ಅರಣ್ಯ ಪ್ರದೇಶವನ್ನು ವಿವಿಧ ಉದ್ದೇಶಗಳಿಗೆ ಬಿಟ್ಟು ಕೊಡಲಾಗುತ್ತಿದೆ. ಹೀಗಾಗಿ ಸಹಜವಾಗಿಯೇ ಹಸಿರಿನ ಪ್ರಮಾಣ ಹೆಚ್ಚಾಗುತ್ತಿಲ್ಲ. ಅರಣ್ಯ ಇಲಾಖೆಯ ಪ್ರಕಾರ, 2023ರ ಏಪ್ರಿಲ್‌ನಿಂದ ಡಿಸೆಂಬರ್‌ ತನಕ ರಾಜ್ಯದಲ್ಲಿ 120.06 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಹಸ್ತಾಂತರಿಸಲಾಗಿದೆ. ಇದರಲ್ಲಿ ಹೆಚ್ಚಿನ ಭಾಗವನ್ನು ರೈಲ್ವೆ ಯೋಜನೆಗಳು ಮತ್ತು ಗಣಿಗಾರಿಕೆಗೆ ಬಿಟ್ಟುಕೊಡಲಾಗಿದೆ. 65.83 ಹೆಕ್ಟೇರ್‌ ಪ್ರದೇಶ ರೈಲ್ವೆ ಯೋಜನೆಗಳು, 53.67 ಹೆಕ್ಟೇರ್‌ ಗಣಿಗಾರಿಕೆಗೆ ಬಿಡಲಾಗಿದೆ. ಹೀಗೆ ಕಳೆದ ಎರಡು ದಶಕಗಳ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಮಾರ್ಗಗಳು ಸೇರಿದಂತೆ ಇತರೆ ದೊಡ್ಡ ಯೋಜನೆಗಳು ಅರಣ್ಯ ಪ್ರದೇಶದಲ್ಲಿ ನಡೆದಿವೆ. ಇದರ ಪರಿಣಾಮವಾಗಿ ಹಸಿರಿನ ಹೊದಿಕೆ ಕುಗ್ಗುತ್ತಿದೆ.

ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಒತ್ತುವರಿ, ಬೆಂಕಿ ಅವಘಡಗಳಿಂದಲೂ ಹಸಿರು ನಾಶವಾಗುತ್ತಿದೆ. ಮಂಗಳೂರು, ಕುಂದಾಪುರ ಅರಣ್ಯ ವಿಭಾಗ, ಭಾಗಶಃ ಶಿವಮೊಗ್ಗ ಮತ್ತು ಚಿಕ್ಕಮಗಳೂರು, ಅರಣ್ಯ ವಿಭಾಗ ಹೊಂದಿರುವ ಮಂಗಳೂರು ಅರಣ್ಯ ವೃತ್ತದಲ್ಲಿ ಪ್ರಸ್ತುತ ಶೇ 28ರಷ್ಟು ಅರಣ್ಯ ಪ್ರದೇಶ ಇದೆ. ಒತ್ತುವರಿ ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ. ಇನ್ನು, ಬೀದರ್‌ ಜಿಲ್ಲೆಯೊಂದರಲ್ಲಿಯೇ ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶ ಒತ್ತುವರಿಯಾಗಿದೆ. ಸುಮಾರು 200 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಅತಿಕ್ರಮಣ ತೆರವುಗೊಳಿಸಿರುವ ಅರಣ್ಯ ಇಲಾಖೆ ಅದನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಈ ಸಮಸ್ಯೆ ಇದೆ. ಆದರೆ, ಒತ್ತುವರಿ ತೆರವುಗೊಳಿಸುವಲ್ಲಿ ಅರಣ್ಯ ಇಲಾಖೆ ಹಿಂದೆ ಬಿದ್ದಿದೆ ಎಂಬುದು ಪರಿಸರವಾದಿಗಳ ಆರೋಪ. ಇತ್ತೀಚಿನ ಸಿಎಜಿ ವರದಿ ಕೂಡ ಇದಕ್ಕೆ ಆಕ್ಷೇಪ ಎತ್ತಿದೆ.

ಸಿಎಜಿ ಆಕ್ಷೇಪ

ಹೈಕೋರ್ಟ್‌ ನಿರ್ದೇಶನವಿದ್ದರೂ ಅರಣ್ಯ ಇಲಾಖೆಯು 22,173 ಎಕರೆಯಷ್ಟು ಅರಣ್ಯ ಜಮೀನಿನ ಒತ್ತುವರಿ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಒತ್ತುವರಿ ತೆರವಿನಲ್ಲಿ ಇಲಾಖೆ ಹಿಂದೆ ಬಿದ್ದಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇಲಾಖೆಗಳ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಲೆಕ್ಕಪರಿಶೋಧನಾ ವರದಿ ಈ ಮಾಹಿತಿ ಒಳಗೊಂಡಿದೆ. ಅರಣ್ಯ ಪ್ರದೇಶದ ಒತ್ತುವರಿಗೆ ಸಂಬಂಧಿಸಿದಂತೆ 4,026 ಪ್ರಕರಣಗಳು ಇಲಾಖೆಯಲ್ಲಿ ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಒಟ್ಟು 29,688 ಎಕರೆಗಳಷ್ಟು ಅರಣ್ಯ ಜಮೀನಿನ ಒತ್ತುವರಿಯಾಗಿತ್ತು. ಎಲ್ಲ ಪ್ರಕರಣಗಳಲ್ಲಿ 2016ರ ಜೂನ್‌ ತನಕ ಒತ್ತುವರಿ ಸಂಪೂರ್ಣ ತೆರವುಗೊಳಿಸಲಾಗುವುದು ಎಂದು ಇಲಾಖೆ ಹೈಕೋರ್ಟ್‌ಗೆ ತಿಳಿಸಿತ್ತು. ಕ್ರಿಯಾ ಯೋಜನೆ ಕೂಡ ಸಲ್ಲಿಸಿತ್ತು. ಆದರೆ, 2022ರ ಮಾರ್ಚ್‌ ಅಂತ್ಯದವರೆಗೆ ಇಲಾಖೆಯು 7,515 ಎಕರೆ ಒತ್ತುವರಿ ತೆರವುಗೊಳಿಸಿದೆ. ತೆರವು ಮಾಡಬೇಕಿದ್ದ ಒಟ್ಟು ಒತ್ತುವರಿಯಲ್ಲಿ ಇದು ಶೇ 25.31ರಷ್ಟು. ಇನ್ನೂ ಶೇ 74.69ರಷ್ಟು ಅರಣ್ಯ ಜಮೀನು ಒತ್ತುವರಿಯಾಗಿಯೇ ಇದೆ ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಅಘನಾಶಿನಿ ನದಿಯ ಕಣಿವೆ ಮತ್ತು ನಿತ್ಯಹರಿದ್ವರ್ಣ ಕಾಡಿನ ವಿಹಂಗಮ ನೋಟ

ಅಘನಾಶಿನಿ ನದಿಯ ಕಣಿವೆ ಮತ್ತು ನಿತ್ಯಹರಿದ್ವರ್ಣ ಕಾಡಿನ ವಿಹಂಗಮ ನೋಟ

ಅರಣ್ಯ ಜಮೀನಿನ ಒತ್ತುವರಿ ಪ್ರಕರಣಗಳಲ್ಲಿ ಒತ್ತುವರಿಯನ್ನು ಸಕ್ರಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದರೆ, ತೆರವು ಕಾರ್ಯಾಚರಣೆ ನಡೆಸುವಂತಿಲ್ಲ ಎಂದು 2015ರ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಸಕ್ರಮ ಅರ್ಜಿ ತಿರಸ್ಕೃತವಾದರೆ ತೆರವು ಕಾರ್ಯ ನಡೆಸಬೇಕು ಎಂದೂ ಹೇಳಿತ್ತು. ಆದರೆ, ಹೀಗೆ ಸಕ್ರಮ ಅರ್ಜಿ ತಿರಸ್ಕೃತವಾಗಿದ್ದರೂ 2,965 ಎಕರೆಗಳಷ್ಟು ಅರಣ್ಯ ಜಮೀನಿನ ಒತ್ತುವರಿ ತೆರವು ಮಾಡಿಲ್ಲ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.

ಬಿಳಿಗಿರಿರಂಗನ ಹುಲಿ ಸಂರಕ್ಷಣಾರಣ್ಯದಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಒತ್ತುವರಿಯಾದ ಜಮೀನಿನ ಪ್ರಮಾಣವನ್ನು ಗುರುತಿಸಿ ಎರಡು ವರ್ಷವಾಗಿದೆ. ಆದರೆ ಎರಡೂ ಇಲಾಖೆಯಗಳು ಒತ್ತುವರಿ ತೆರವು ಮಾಡುವ ಕೆಲಸರನ್ನೇ ಇನ್ನೂ ಆರಂಭಿಸಿಲ್ಲ. 

ಬೆಂಕಿಯಿಂದ ರಕ್ಷಣೆಯ ಸವಾಲು

ಉಷ್ಣಾಂಶ ಹೆಚ್ಚಾಗಿರುವ ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರಿನ ಹೆಚ್ಚಿನ ಭಾಗ ಹುಲ್ಲುಗಾವಲಿದೆ. ಇಲ್ಲಿ ನೆಟ್ಟ ಗಿಡಗಳನ್ನು ಬೇಸಿಗೆಯಲ್ಲಿ ಬೆಂಕಿಯಿಂದ ಅರಣ್ಯ ರಕ್ಷಿಸುವುದೇ ದೊಡ್ಡ ಸವಾಲಾಗಿದೆ.

ಕುರುಚಲು ಕಾಡು, ಒಣ ಎಲೆ ಉದುರುವ ಪ್ರದೇಶ ಜಾಸ್ತಿ ಇರುವುದರಿಂದ ಒಂದು ಕಡೆ ಬೆಂಕಿ ಹೊತ್ತಿಕೊಂಡರೆ ಎಲ್ಲ ಕಡೆಗಳಿಗೆ ವೇಗವಾಗಿ ಹರಡುತ್ತದೆ. ತ್ವರಿತ ಗತಿಯಲ್ಲಿ ನಿಯಂತ್ರಿಸುವ ವಿಧಾನಗಳು ಅರಣ್ಯ ಇಲಾಖೆಯ ಬಳಿ ಇಲ್ಲ. ‘ಫೈರ್‌ ಲೈನ್‌’ಗಷ್ಟೇ ತಂತ್ರಕಷ್ಟೇ ಇದು ಸೀಮಿತವಾಗಿದೆ. ಪ್ರತಿ ವರ್ಷ ನೂರಾರು ಹೆಕ್ಟೇರ್‌ ಪ್ರದೇಶ ಬೆಂಕಿಯಿಂದ ಹಾನಿಯಾಗುತ್ತಿದೆ. ಹಲವಾರು ಪ್ರಾಣಿ, ಪಕ್ಷಿಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗುತ್ತಿವೆ. 2023–24ನೇ ಸಾಲಿನಲ್ಲೇ ಎರಡು ಸಾವಿರಕ್ಕೂ ಹೆಚ್ಚು ಬೆಂಕಿ ಹೊತ್ತಿಕೊಂಡ ಪ್ರಕರಣಗಳು ವರದಿಯಾಗಿವೆ. ಸುಮಾರು ಮೂರು ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶಕ್ಕೆ ಹಾನಿಯಾಗಿದೆ ಎನ್ನುತ್ತವೆ ಅರಣ್ಯ ಇಲಾಖೆಯ ಮೂಲಗಳು.

‘ಬೆಂಕಿ ಕಾಣಿಸಿಕೊಂಡ ತಕ್ಷಣಕ್ಕೆ ನಿಯಂತ್ರಿಸಲು ಅರಣ್ಯ ಇಲಾಖೆಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲ. ಬೆಂಕಿ ನಂದಿಸುವ ಕೆಲಸವೂ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಕಾಡು ನಾಶವಾಗಿರುವ ಕಡೆ ಅರಣ್ಯ ಇಲಾಖೆಯಿಂದ ಗಿಡ ನೆಟ್ಟು ಸುಮ್ಮನಾಗುತ್ತಾರೆ. ನಂತರ ಅವುಗಳ ಪೋಷಣೆ ಮರೆಯುತ್ತಾರೆ’ ಎಂದು ಪರಿಸರವಾದಿ ಬಿ.ವಿ.ಗುಂಡಪ್ಪ ಬೇಸರದಿಂದ ಹೇಳುತ್ತಾರೆ.

ತಾಪಮಾನ ಏರಿಕೆ, ಭೂಕುಸಿತ

ಅರಣ್ಯೀಕರಣ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರದ ಕಾರಣ ತಾಪಮಾನ ಹೆಚ್ಚಳ, ಭೂಕುಸಿತದಂತಹ ಘಟನೆಗಳು ಕೂಡ ರಾಜ್ಯದಲ್ಲಿ ಹೆಚ್ಚಾಗಿ ಸಂಭವಿಸುತ್ತಿವೆ. ಇತ್ತೀಚೆಗೆ ಉತ್ತರ ಕನ್ನಡದಲ್ಲಿ ಭೂಕುಸಿತ ಉಂಟಾಗಿರುವುದು ತಾಜಾ ನಿದರ್ಶನ. ಉತ್ತರ ಕನ್ನಡದಲ್ಲಿ ಗುಡ್ಡಗಳೆಲ್ಲ ಗಿಡ, ಮರಗಳಿಂದ ಕೂಡಿರುತ್ತವೆ. ಆದರೆ, ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದರಿಂದ ಅರಣ್ಯ ನಾಶವಾಗುತ್ತಿದೆ. ಗುಡ್ಡಗಳೆಲ್ಲ ಬೋಳಾಗಿ, ಭೂಮಿಯನ್ನು ಹಿಡಿದಿಟ್ಟುಕೊಳ್ಳುವ ಬೇರುಗಳಿಲ್ಲದೆ ಭೂಕುಸಿತಗಳು ಉಂಟಾಗುತ್ತಿವೆ. 

ಇನ್ನು, ರಾಜ್ಯದ ತಾಪಮಾನ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಈ ಹಿಂದೆ ಉತ್ತರ ಕರ್ನಾಟಕ, ಬಯಲು ಸೀಮೆಯ ಜಿಲ್ಲೆಗಳಲ್ಲಿ ಹೆಚ್ಚಿನ ಬಿಸಿಲು ಇರುತ್ತಿತ್ತು. ಈ ವರ್ಷ ಬೇಸಿಗೆಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ ಗಡಿಯನ್ನು ದಾಟಿತ್ತು. ಹಳೆ ಮೈಸೂರು, ಮಲೆನಾಡು ಕೂಡ ಇದಕ್ಕೆ ಹೊರತಾಗಿಲ್ಲ. ಬೇಸಿಗೆಯಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಹೆಚ್ಚು ಕಡಿಮೆ ಒಂದೇ ಪರಿಸ್ಥಿತಿ ಎನ್ನುವಂತಾಗಿದೆ. ಹಸಿರು ಪ್ರದೇಶ ದಿನೇ ದಿನೇ ಕಡಿಮೆ ಆಗುತ್ತಿರುವುದರ ಪರಿಣಾಮವಿದು ಎನ್ನುತ್ತಾರೆ ಪರಿಸರವಾದಿಗಳು.

ಎಷ್ಟಿರಬೇಕು ಅರಣ್ಯ ಪ್ರದೇಶ?

ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯ ಪ್ರಕಾರ, ಕರ್ನಾಟಕ ರಾಜ್ಯದಲ್ಲಿ ಒಟ್ಟು ಭೂ ಭಾಗದ ಶೇ 33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ರಾಜ್ಯದಲ್ಲಿ ಸದ್ಯ ಶೇ 21.21ರಷ್ಟು ಅರಣ್ಯ ಪ್ರದೇಶವಿದೆ. ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದರೆ, ವಿಜಯಪುರದಲ್ಲಿ ಅತಿ ಕಡಿಮೆ ಇದೆ. ಕಳೆದ ಎರಡು ದಶಕಗಳ ಅವಧಿಯಲ್ಲಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಇದೇ ವೇಗದಲ್ಲಿ ನಡೆದರೆ ಶೇ 33ರಷ್ಟು ಹಸಿರಿನ ಹೊದಿಕೆ ಗುರಿ ಈಡೇರುವುದು ಕಷ್ಟ. ಈಗಿರುವ ಅರಣ್ಯ ಪ್ರದೇಶ ಉಳಿಸಿಕೊಂಡು ಹೋಗುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಪರಿಸರ ತಜ್ಞರು.

‘ಒಂದು ಕಡಿದರೆ ಹತ್ತು ನೆಡಬೇಕು’

‘ಸ್ವಾತಂತ್ರ್ಯ ಸಿಕ್ಕಾಗ ಧಾರವಾಡ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಶೇ 38 ಇತ್ತು. ಈಗ ಶೇ 9.1ರಷ್ಟಿದೆ. ಅಭಿವೃದ್ಧಿಯ ಹೆಸರಿನಲ್ಲಿ ವೃಕ್ಷಗಳ ಹನನ ಇದಕ್ಕೆ ಕಾರಣ. ಒಂದು ವೃಕ್ಷ ಕಡಿದರೆ 10 ಗಿಡ ನೆಟ್ಟು ಬೆಳೆಸಬೇಕು ಎಂಬ ನಿಯಮ ಇದೆ. ಆದರೆ, ಅದು ಪಾಲನೆಯಾಗುತ್ತಿಲ್ಲ’ ಎನ್ನುತ್ತಾರೆ ಧಾರವಾಡದ ‘ನೇಚರ್‌ ಫಸ್ಟ್‌ ಇಕೋ ವಿಲೇಜ್‌’ ಅಧ್ಯಕ್ಷ ಪಿ.ವಿ.ಹಿರೇಮಠ.

ಅರಣ್ಯ ಇಲಾಖೆ ನರ್ಸರಿಗಳಲ್ಲಿ ಲಕ್ಷಗಟ್ಟಲೇ ಗಿಡ ಬೆಳೆಸಿ ಹಂಚುತ್ತಾರೆ. ಈ ಕಾರ್ಯಕ್ಕೆ ಸರ್ಕಾರ ಅನುದಾನ ನೀಡುತ್ತದೆ. ಎಷ್ಟು ಲಕ್ಷ ಗಿಡಗಳನ್ನು ಹಂಚಲಾಗಿದೆ ಎಂಬ ದಾಖಲೆ ಅರಣ್ಯ ಇಲಾಖೆಯಲ್ಲಿ ಇದೆ. ಆದರೆ, ಹಂಚಿದ ನಂತರ ಆ ಗಿಡಗಳ ಸ್ಥಿತಿಗತಿ ಕುರಿತ ಮಾಹಿತಿ, ದಾಖಲೆ ಇಲ್ಲ. ಸ್ಥಳೀಯ ಆಡಳಿತಗಳು ಗಿಡ ನೆಟ್ಟು ಬೆಳೆಸುವ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ. ಮರಗಳು ಕಡಿಮೆಯಾದರೆ ಆಮ್ಲಜನಕ ಕೊರತೆಗೆ ಎಡೆಮಾಡುತ್ತದೆ. ಬರಗಾಲ, ನೆರೆಗಾಲ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಪಾಲಿಕೆ ಮತ್ತು ಅರಣ್ಯ ಇಲಾಖೆಯವರು ಪ್ರತಿಯೊಂದು ಉದ್ಯಾನದಲ್ಲಿ ‘ಟ್ರೀ ಪಾರ್ಕ್‌’ ಅಭಿವೃದ್ಧಿ ಪಡಿಸಬೇಕು. ಆಮ್ಲಜನಕ ಹೆಚ್ಚು ನೀಡುವ, ಪಕ್ಷಿ ಸಂಕುಲಕ್ಕೆ ಆಹಾರ ನೀಡುವ ಗಿಡಗಳನ್ನು ರಸ್ತೆ ಬದಿಗಳಲ್ಲಿ ನೆಟ್ಟು ಪೋಷಿಸಬೇಕು ಎಂದು ಸಲಹೆ ನೀಡುವರು.

ಅರಣ್ಯೀಕರಣಕ್ಕೆ ನೆಡುತೋಪು

ಬಳ್ಳಾರಿ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ‘ಟ್ರೀ ಪಾರ್ಕ್‌’ ಮೂಲಕ ಅರಣ್ಯೀಕರಣ ಮಾಡುತ್ತಿದೆ. ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನಗಳನ್ನು ಮಾಡಲಾಗಿದೆ. ಜಿಲ್ಲೆಗೆ ಕೆಎಂಇಆರ್‌ಸಿ ಮೂಲಕ ಅರಣ್ಯೀಕರಣಕ್ಕೆ ಸಾಕಷ್ಟು ಹಣ ಹರಿದು ಬರುತ್ತಿದೆ. ಇದನ್ನು ಬಳಸಿ ಹಸಿರೀಕರಣ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ‘ಕಾಂಪನ್ಸೇಟರಿ ಅಫಾರೆಸ್ಟೇಷನ್‌’ (ಯೋಜನೆಯೊಂದಕ್ಕೆ ಹಾನಿಯಾದ ಅರಣ್ಯಕ್ಕೆ ಪ್ರತಿಯಾಗಿ ಬೇರೆ ಕಡೆ ಬೆಳೆಸಲಾಗುವ ಕಾಡು) ಅಡಿಯಲ್ಲಿ ಜಿಲ್ಲೆಯ ಸಂಡೂರಿನಲ್ಲಿ ಅರಣ್ಯೀಕರಣ ಮಾಡಲಾಗುತ್ತಿದೆ. ಮಿಂಚೇರಿ ಗುಡ್ಡಗಳಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗಿದೆ.

‘ಬಳ್ಳಾರಿಯ ಬೆಳಗಲ್‌ ಕ್ರಾಸ್‌ನಲ್ಲಿ ಸಸ್ಯಕ್ಷೇತ್ರ, ಸಂಡೂರಿನ ರಾಘಾಪುರ, ಅಂಕಮ್ಮನಾಳ, ರಾರಾವಿ, ಮಿಟ್ಟೆಸೂಗೂರು, ಅಗಸನೂರು, ದೇಶನೂರು, ದರೋಜಿಗಳಲ್ಲಿ ನೆಡುತೋಪುಗಳನ್ನು ನೆಟ್ಟು ಪೋಷಣೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ನೆಡುತೋಪುಗಳನ್ನು ಅರಣ್ಯ ಇಲಾಖೆ ಉತ್ತಮವಾಗಿ ನಿರ್ವಹಿಸುತ್ತಿದೆ’ ಎನ್ನುತ್ತಾರೆ ಪರಿಸರವಾದಿ ಸಮದ್‌ ಕೊಟ್ಟೂರು.

ಕಲಬುರಗಿಯ ಕೇಸರಟಗಿ ಬಳಿ ಸಾಮಾಜಿಕ ಅರಣ್ಯ ವಲಯ ಇಲಾಖೆಯ ಆವಣದಲ್ಲಿ ಮಹಿಳಾ ಸಿಬ್ಬಂದಿಯರು ಸಸಿಗಳನ್ನು ಆರೈಕೆ ಮಾಡುತ್ತಿರುವುದು–ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್

ಕಲಬುರಗಿಯ ಕೇಸರಟಗಿ ಬಳಿ ಸಾಮಾಜಿಕ ಅರಣ್ಯ ವಲಯ ಇಲಾಖೆಯ ಆವಣದಲ್ಲಿ ಮಹಿಳಾ ಸಿಬ್ಬಂದಿಯರು ಸಸಿಗಳನ್ನು ಆರೈಕೆ ಮಾಡುತ್ತಿರುವುದು–ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್


ರಾಜ್ಯ ಹೈಕೋರ್ಟ್‌ ಆದೇಶವಿದ್ದರೂ ಅರಣ್ಯ ಇಲಾಖೆ 22,173 ಎಕರೆಯಷ್ಟು ಅರಣ್ಯ ಭೂಮಿಯ ಒತ್ತುವರಿ ತೆರವು ಮಾಡಿಲ್ಲ. ಇದರಲ್ಲಿ ಹಲವು ಪ್ರಕರಣ ವಿವಿಧ ನ್ಯಾಯಾಲಯದಲ್ಲಿ ಇತ್ಯರ್ಥವಾಗಿಲ್ಲ. ಇಲಾಖೆಯ ಸಚಿವರ ಸೂಚನೆ ಪ್ರಕಾರ ಒತ್ತುವರಿ ತೆರವಿಗೆ ಚುರುಕು ದೊರಕಿದೆ. ಆದರೆ ನೆಟ್ಟ ಗಿಡಗಳನ್ನು ಕನಿಷ್ಠ ಮೂರ್ನಾಲ್ಕು ವರ್ಷ ನೀರು ಹಾಕಿ ನಿಗಾ ವಹಿಸದಿದ್ದರೆ ಕೇಂದ್ರ ಅರಣ್ಯ ಇಲಾಖೆಯ ಗುರಿಯಂತೆ ರಾಜ್ಯದಲ್ಲಿ ಅರಣ್ಯ ಈಗಿರುವ ಶೇ 21.21ರಿಂದ ಶೇ 33ಕ್ಕೆ ಏರುವುದು ಸಾಧ್ಯವೇ? ಅರಣ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಅರಣ್ಯ ವಿಸ್ತೀರ್ಣ ಏರಿಸಲು ಇಚ್ಛಾಶಕ್ತಿ ಪ್ರದರ್ಶಿಸದಿದ್ದರೆ ಗುರು ಮುಟ್ಟುವುದು ಅಸಾಧ್ಯ.

‘ಗೋಲ್‌ಮಾಲ್‌ ಶಂಕೆ’

ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಎಷ್ಟು ಸಸಿಗಳನ್ನು ಬೆಳೆಯಲಾಗುತ್ತದೆ? ಎಷ್ಟು ವಿತರಿಸಲಾಗುತ್ತದೆ? ನೆಟ್ಟ ಸಸಿಗಳಲ್ಲಿ ಎಷ್ಟು ಬೆಳೆಯುತ್ತವೆ? ಎಷ್ಟು ಹಾಳಾಗುತ್ತವೆ? ಇದಕ್ಕಾಗಿ ಮಾಡುವ ಖರ್ಚು ಎಷ್ಟು? ಎಂಬ ಬಗ್ಗೆ ಅರಣ್ಯ ಇಲಾಖೆಯಲ್ಲಿ ನಿಖರ ಮಾಹಿತಿಯೇ ಲಭ್ಯ ಇಲ್ಲ! ಇದರಲ್ಲಿ ದೊಡ್ಡಮಟ್ಟದಲ್ಲಿ ಗೋಲ್‌ಮಾಲ್‌ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ.

ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆಯವರು ಇತ್ತೀಚೆಗೆ ನಡೆಸಿದ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಪ್ರಶ್ನಿಸಿದಾಗ, ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಬರಲಿಲ್ಲ. ‘ರಾಜ್ಯದಲ್ಲಿ ಈವರೆಗೆ ನಡೆದಿರುವ ಸಸಿ ನೆಡುವ ಕಾರ್ಯಕ್ರಮಗಳಲ್ಲಿ ಎಷ್ಟು ಸಸಿಗಳನ್ನು ನೆಡಲಾಗಿದೆ. ಎಷ್ಟು ಬೆಳೆದಿವೆ, ಇವುಗಳಿಗೆ ಮಾಡಿದ ಖರ್ಚು ಎಷ್ಟು? ಗಿಡಗಳನ್ನು ಬೆಳೆಸಲು ಕೆಂಪು ಮಣ್ಣಿನ ಖರೀದಿಗೆ ವೆಚ್ಚ ಮಾಡಿದ್ದೆಷ್ಟು, ಗುಂಡಿ ತೋಡಲು ಖರ್ಚು ಮಾಡಿದ್ದೆಷ್ಟು, ಸಸಿಗಳನ್ನು ಇಡಲು ಪಾಲಿಥೀನ್‌ಗೆ ಮಾಡಿದ ಖರ್ಚು ಎಷ್ಟು ಎಂಬ ಸಮಗ್ರ ಮಾಹಿತಿಯನ್ನು ಆಗಸ್ಟ್‌ 31 ರೊಳಗೆ ನೀಡಬೇಕು’ ಎಂದು ಸಚಿವ ಖಂಡ್ರೆ ಅವರು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

ಅಧಿಕಾರಿಗಳು ಪ್ರತಿ ವರ್ಷ 3 ಕೋಟಿಯಿಂದ 5 ಕೋಟಿ ಸಸಿಗಳನ್ನು ನೆಡುತ್ತಿರುವುದಾಗಿ ಮಾಹಿತಿ ನೀಡುತ್ತಾರೆ. ಈ ಕುರಿತು ನಿಖರವಾದ ಮಾಹಿತಿ ನೀಡುವಂತೆ ಸಚಿವರು ಸೂಚಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು, ಸಚಿವರ ದಾರಿತಪ್ಪಿಸುವ ಪ್ರಯತ್ನ ನಡೆಸಿದ್ದರಿಂದ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಪಶ್ಚಿಮಘಟ್ಟ ಹಸಿರು ಹೊದಿಕೆ’ ಕಾರ್ಯಕ್ರಮ

150ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಎನ್‌ಇಸಿಎಫ್) ಪ್ರತಿವರ್ಷ ಜೂನ್‌ನಿಂದ ಆಗಸ್ಟ್‌ ತಿಂಗಳವರೆಗೆ ಪ್ರತಿ ಭಾನುವಾರ ‘ಪಶ್ಚಿಮಘಟ್ಟ ಹಸಿರು ಹೊದಿಕೆ’ ಕಾರ್ಯಕ್ರಮ ಆಯೋಜಿಸುತ್ತದೆ.

‘ವಕೀಲರು, ವೈದ್ಯರು, ಉದ್ಯಮಿಗಳು, ಸರ್ಕಾರಿ ನೌಕರರು, ವಿದ್ಯಾರ್ಥಿಗಳನ್ನು ಒಳಗೊಂಡಿರುವ ಸಂಘಟನೆಯ ಸದಸ್ಯರು, ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಾಡಂಚಿನ ಪ್ರದೇಶ, ರಕ್ಷಿತಾರಣ್ಯದಲ್ಲಿ ಗಿಡಗಳನ್ನು ನೆಡುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬನೂ ಕಾರ್ಮಿಕನಾಗಿ ದುಡಿಯುವುದು ಸಂಘಟನೆಯ ನಿಯಮಗಳಲ್ಲೊಂದು. ಕಾಡುಪ್ರಾಣಿಗಳಿಗೆ ಕಾಡಿನಲ್ಲೇ ಆಹಾರ ಸಿಗಬೇಕು. ಪ್ರಾಣಿಗಳು ಆಹಾರ ಹುಡುಕಿಕೊಂಡು ನಾಡಿಗೆ ಬರಬಾರದು ಎಂಬುದು ಈ ಅಭಿಯಾನದ ಉದ್ದೇಶ. ಹೀಗಾಗಿ, ಸಿಂಗಾಪುರ ಚೆರ್‍ರಿ, ಪುನರ್ಪುಳಿ, ನೇರಳೆ, ಮಾವು, ಹಲಸು ಮೊದಲಾದ ಹಣ್ಣಿನ ಗಿಡಗಳನ್ನು ನಾಟಿ ಮಾಡುತ್ತೇವೆ. ಈವರೆಗೆ ನಾಟಿ ಮಾಡಿರುವ ಗಿಡಗಳ ಸಂಖ್ಯೆ 30 ಸಾವಿರ ದಾಟಿದೆ. ಈ ವರ್ಷ ಗಿಡಗಳ ನಾಟಿ ಜೊತೆಗೆ ಇರುವ ಗಿಡ–ಮರಗಳ ರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ’ ಎನ್ನುತ್ತಾರೆ ಎನ್‌ಇಸಿಎಫ್ ಕಾರ್ಯದರ್ಶಿ ಶಶಿಧರ್ ಶೆಟ್ಟಿ.

‘ಜ್ಞಾನ–ಸಹಭಾಗಿತ್ವದ ಕೊರತೆ’

‘ಕಳೆದ ಸುಮಾರು 230 ವರ್ಷಗಳ ಸುದೀರ್ಘ ಅನುಭವದ ಪಾಠ, ಪರಿಣಾಮಕಾರಿ ಅಳವಡಿಕೆ ಆಗಿಲ್ಲ. ಹಿಂದೆಲ್ಲ ನಮ್ಮ ನೆಲದ ಅನುಭವಗಳನ್ನು ಪುಸ್ತಕವಾಗಿ ಬರೆಯುತ್ತಿದ್ದ ಹಳೆಯ ತಲೆಮಾರಿನ ಅಧಿಕಾರಿಗಳ ವಿಧಾನ ಈಗಿನವರಿಗೆ ಗೊತ್ತೇ ಇಲ್ಲ. ಅರಣ್ಯ ಇಲಾಖೆ ಈಗ ಸಸಿ ನೆಡುವ ಲೆಕ್ಕದಲ್ಲಿ ಮುಳುಗಿ ಕಲಿಕೆ ಮರೆತಿದೆ. ಜನ ಸಂಪರ್ಕ ಕಳೆದುಕೊಂಡಿದೆ. ಸ್ವತಃ ಓಡಾಡಿ ಗಳಿಸಬೇಕಾದ ಅರಣ್ಯ ಜ್ಞಾನದ ಕೊಂಡಿ ಕಳಚಿದೆ. ಕಾಲು ದಾರಿಯ ಕಾರ್ಯಕರ್ತರ ಕೊರತೆಯಿಂದ ಯೋಜನೆ ಸೋತಿದೆ. ಸಸಿ ನೆಡುವ ಸರಳ ತಂತ್ರ ಅಳವಡಿಸಿ ಗೆಲ್ಲುವ ದಾರಿ ಇದೆ. ಅರಣ್ಯೀಕರಣ ಸ್ಥಳೀಯ ಜ್ಞಾನ, ಸಹಭಾಗಿತ್ವ ಕೊರತೆಯಿಂದ ಸೋಲುತ್ತಿದೆ’ ಎನ್ನುತ್ತಾರೆ ಪರಿಸರ ಬರಹಗಾರ ಶಿವಾನಂದ ಕಳವೆ.

ಆಗಸ್ಟ್‌ನೊಳಗೆ ಬಹಿರಂಗ: ಖಂಡ್ರೆ

‘2003ರಲ್ಲಿ ರಾಜ್ಯದಲ್ಲಿ ಐದು ಕೋಟಿ ಸಸಿಗಳನ್ನು ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅವುಗಳಿಗೆ ಜಿಯೋ ಟ್ಯಾಗ್‌ ಮಾಡಿ ಆಗಸ್ಟ್‌ ತಿಂಗಳೊಳಗೆ ಮಾಹಿತಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರ ವರದಿ ಕೈಸೇರಿದ ನಂತರ ಮಾಧ್ಯಮದವರಿಗೆ ಬಹಿರಂಗಪಡಿಸಲಾಗುವುದು. ಪರಿಸರಕ್ಕೆ ಪೂರಕವಾದ ಸಸಿಗಳನ್ನು ನೆಡಬೇಕು. ಸಸಿಗಳನ್ನು ನೆಟ್ಟಿದ್ದೇವೆ ಎನ್ನುವ ಸುಳ್ಳು ಮಾಹಿತಿ ನೀಡಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಅರಣ್ಯ ಇಲಾಖೆಯ ಪ್ರಮುಖ ಯೋಜನೆಗಳು...
  • ರಾಜ್ಯದಲ್ಲಿ ಪ್ರತಿ ವರ್ಷ ಐದು ಕೋಟಿ ಹೊಸದಾಗಿ ಸಸಿಗಳನ್ನು ನೆಡುವುದು

  • ನೆಡುತೋಪುಗಳಿಗೆ ಹೆಚ್ಚಿನ ಒತ್ತು ಹಾಗೂ ನಿರ್ವಹಣೆ

  • ಸಾಧ್ಯವಾದಷ್ಟು ಹೆಚ್ಚಿನ ಕಡೆಗಳಲ್ಲಿ ಟ್ರೀ ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸುವುದು

  • ಬೋಳು ಗುಡ್ಡ, ಬಯಲು ಪ್ರದೇಶಗಳನ್ನು ಹಸಿರಾಗಿಸಲು ಪ್ರಾಮುಖ್ಯತೆ

ಪೂರಕ ಮಾಹಿತಿ: ಎಸ್‌. ರವಿಪ್ರಕಾಶ್‌, ಮೈಲಾರಿ ಲಿಂಗಪ್ಪ, ಸಂಧ್ಯಾ ಹೆಗಡೆ, ಬಿ.ಜೆ. ಧನ್ಯಪ್ರಸಾದ

ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT