ಬೆಳಗಾವಿ: ರಾಜ್ಯದ ಬಂದಿಖಾನೆಗಳಲ್ಲಿ ಕೈದಿಗೆ ಪ್ರತಿ ದಿನ ಸಿಗುವ ಕೂಲಿ ₹520. ಉದ್ಯೋಗ ಖಾತ್ರಿಯಡಿ ಕಾರ್ಮಿಕರ ದಿನಗೂಲಿ ₹ 349. ಆದರೆ, ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರ ಸಂಬಳ ಲೆಕ್ಕಹಾಕಿದರೆ ದಿನಕ್ಕೆ ₹ 333!
‘ಅಪರಾಧಿಗಳ ಕೂಲಿ ಹೆಚ್ಚಳ ಮಾಡುವ ಸರ್ಕಾರವು ನಾಡು ಕಟ್ಟುವ ಶಿಕ್ಷಕರನ್ನು ಕೀಳಾಗಿ ಕಾಣುತ್ತದೆ. ಕೈದಿಗಳಿಗಿಂತ ಕಡಿಮೆ ಸಂಬಳ ನಮ್ಮದು’ ಎಂಬ ಬೇಸರ ಅತಿಥಿ ಶಿಕ್ಷಕರದ್ದು.
‘ಅತಿಥಿ ಶಿಕ್ಷಕ– ಬೋಧಕ ಎನ್ನುವುದು ‘ಅರೆ ಉದ್ಯೋಗ’ದ ಜ್ವಲಂತ ನಿದರ್ಶನ. ಬಿ.ಎ, ಡಿ.ಇಡಿ, ಬಿ.ಇಡಿ, ಎಂ.ಎ, ಎಂ.ಎಸ್ಸಿಯಂತಹ ವಿದ್ಯಾರ್ಹತೆ ನೆಟ್, ಕೆ–ಸೆಟ್ ಮುಂತಾದ ಅರ್ಹತಾ ಪರೀಕ್ಷೆಗಳಲ್ಲಿ ತೇರ್ಗಡೆಯಾದರೂ ದಿನಗೂಲಿಗಿಂತ ಕಡಿಮೆ ಸಂಬಳ ಪಡೆಯುತ್ತೇವೆ. ಕಾಯಂ ಶಿಕ್ಷಕರ ವೇತನದ ಅರ್ಧ ಕೊಟ್ಟರೂ ಗೌರವದಿಂದ ಬದುಕುತ್ತೇವೆ’ ಎಂಬುದು ಅವರ ಅಪೇಕ್ಷೆ.
‘ಅತ್ತ ಮಕ್ಕಳ ಕೈಯ್ಯಾಗ ಹತ್ತು ಪೈಸೆ ಕೊಡುವಷ್ಟೂ ಶಕ್ತಿ ಇಲ್ಲರಿ. ನಮಗೆ ಭವಿಷ್ಯ ಇಲ್ಲ. ಭವಿಷ್ಯದ ಪ್ರಜೆಗಳನ್ನು ಹೆಂಗ್ ತಯ್ಯಾರು ಮಾಡೋದರಿ’ ಎಂಬ ನೋವು ಅತಿಥಿ ಶಿಕ್ಷಕರಾದ ಅಶೋಕ ಮತ್ತು ಗಿರಿಜಾ ದಂಪತಿಗೆ ಕಾಡುತ್ತಿದೆ.
ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಿಂದ ವಿಶ್ವವಿದ್ಯಾಲಯಗಳವರೆಗೆ ಎಲ್ಲವೂ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿವೆ. ಕಳೆದ ಎರಡು ದಶಕಗಳಲ್ಲಿ ಶೈಕ್ಷಣಿಕ ಸುಧಾರಣೆಗೆ ಸರ್ಕಾರಗಳು ಅನುದಾನ ನೀರಿನಂತೆ ಹರಿಸಿವೆ. ಹತ್ತಾರು ಯೋಜನೆ ಜಾರಿಗೊಳಿಸಿವೆ. ಆದರೆ, ತುರ್ತಾಗಿ ಅಗತ್ಯವಿರುವ ಶಿಕ್ಷಕರನ್ನೇ ನೇಮಿಸಿಲ್ಲ. ಇದರಿಂದ ಇಡೀ ಶಿಕ್ಷಣ ವ್ಯವಸ್ಥೆಯ ಬೇರುಗಳೇ ಸಡಿಲಗೊಂಡಿವೆ. ಹಂತಹಂತವಾಗಿ ದುರ್ಬಲಗೊಳ್ಳುತ್ತಿದೆ.
ಈ ವರ್ಷ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 33,863 ಶಿಕ್ಷಕರು ಮತ್ತು ಪ್ರೌಢಶಾಲೆಗಳಲ್ಲಿ 8,954 ವಿಷಯ ಶಿಕ್ಷಕರ ಕೊರತೆ ಇದೆ. ಇದನ್ನು ನೀಗಿಸಲು ಪ್ರಾಥಮಿಕ ಶಾಲೆಗಳಿಗೆ 34,600 ಅತಿಥಿ ಶಿಕ್ಷಕರ ಮತ್ತು ಪ್ರೌಢಶಾಲೆಗಳಿಗೆ 10 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಇದು ಕಾಲೇಜು, ವಿಶ್ವವಿದ್ಯಾಲಯಕ್ಕೂ ವಿಸ್ತರಿಸಿದೆ. ಇದರಿಂದ ಒಟ್ಟಾರೆ ಶಿಕ್ಷಣ ವ್ಯವಸ್ಥೆಗೆ ‘ಅತಿಥಿ ಶಿಕ್ಷಕ’ ಎನ್ನುವ ವರ್ಗವೇ ಆಧಾರವಾಗಿದೆ.
ಊಟ, ಬಟ್ಟೆ, ಬೂಟು, ಪುಸ್ತಕ, ಹಾಲು, ಚೀಲ... ಎಲ್ಲವನ್ನೂ ನೀಡಿ ಮನೆ ಬಾಗಲಿಗೆ ಹೋಗಿ ಕರೆದರೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವವರಿಲ್ಲ. ಇನ್ನೊಂದೆಡೆ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಡೊನೇಷನ್ ಸುರಿದು ಖಾಸಗಿ ಶಾಲೆಗೆ ಸೇರಿಸುವ ಪಾಲಕರಿದ್ದಾರೆ. ಈ ವೈರುಧ್ಯಕ್ಕೆ ಶಿಕ್ಷಕ ಸಂಪನ್ಮೂಲದ ಕೊರತೆಯೂ ಕಾರಣ ಎಂಬ ಮಾತು ಶಿಕ್ಷಣ ವಲಯದಲ್ಲಿದೆ.
‘ಅತಿಥಿ ಶಿಕ್ಷಕರನ್ನು ಗೌರವದಿಂದ ನಡೆಸಿಕೊಳ್ಳದ ಸರ್ಕಾರವು ಸೂಕ್ತ ರೀತಿ ಸಂಬಳ, ಸೌಲಭ್ಯ ನೀಡುತ್ತಿಲ್ಲ. ಅವರಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಆಗದು. ಅದಕ್ಕೆ ಸರ್ಕಾರಿ ಶಾಲೆಗಳ ಫಲಿತಾಂಶ ಕುಸಿಯುತ್ತಿದೆ’ ಎಂಬ ವಾದವೂ ಇದೆ. ಇದಕ್ಕೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಸ್‌ಎಸ್ಎಲ್‌ಸಿ ಫಲಿತಾಂಶವೇ ಉದಾಹರಣೆ. ಕೆಲ ವರ್ಷಗಳ ಹಿಂದೆ ರಾಜ್ಯದ ಮೊದಲ ಐದು ಸ್ಥಾನಗಳಲ್ಲಿ ಇರುತ್ತಿದ್ದ ಚಿಕ್ಕೋಡಿ 2021-22ರಲ್ಲಿ 16ನೇ ಸ್ಥಾನ, 2022-23ರಲ್ಲಿ 12ನೇ ಸ್ಥಾನ ಮತ್ತು 2023-24ನೇ ಸಾಲಿನಲ್ಲಿ 25ನೇ ಸ್ಥಾನಕ್ಕೆ ಕುಸಿಯಿತು.
‘ಕೆಲಸದಲ್ಲಿ ನೈಪುಣ್ಯ ಮತ್ತು ಉತ್ತಮ ವಿದ್ಯಾರ್ಹತೆಯುಳ್ಳ ಅತಿಥಿ ಶಿಕ್ಷಕರನ್ನೇ ಅಮಾನವೀಯವಾಗಿ ಕಾಣಲಾಗುತ್ತದೆ. ಇದು ತಾರತಮ್ಯ ಅಲ್ಲದೇ ಮತ್ತೇನೂ ಅಲ್ಲ’ ಎಂದು ಶಿಕ್ಷಣ ತಜ್ಞ, ಬೆಂಗಳೂರಿನ ಶ್ರೀಪಾದ ಭಟ್ ಹೇಳುತ್ತಾರೆ.
ಇದಕ್ಕೆ ದನಿಗೂಡಿಸುವ ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ. ಶಿಶುಪಾಲ ಎಸ್, ‘ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸುವ ಸರ್ಕಾರಕ್ಕೆ ಅತಿಥಿ ಉಪನ್ಯಾಸಕರ ಎಂಬ ಪರಿಕಲ್ಪನೆ ತೊಡೆದು ಹಾಕಲು ಆಗುತ್ತಿಲ್ಲ. ಉದ್ಯೋಗ ಅಭದ್ರತೆ ಇರುವಾಗ, ಶೈಕ್ಷಣಿಕ ಅನನ್ಯತೆ ಕಾಪಾಡುವಂತೆ ಅವರಿಗೆ ಹೇಳುವುದು ಎಷ್ಟು ಸರಿ’ ಎಂದು ಪ್ರಶ್ನಿಸುತ್ತಾರೆ.
ಕಾಯಂ ಉಪನ್ಯಾಸಕರು ಇಲ್ಲದ್ದಕ್ಕೆ ಆಗಿರುವ ಸಮಸ್ಯೆ ವಿವರಿಸುವ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ, ‘ಕಾಯಂ ಉಪನ್ಯಾಸಕರಿಲ್ಲದೇ ಅಭ್ಯಾಸ ನಡೆಸಬಹುದು. ಆದರೆ, ಅಧ್ಯಯನ ಮತ್ತು ಸಂಶೋಧನೆ ಕಷ್ಟ. ನೈಜ ಸಂಶೋಧನೆಗಳ ಕೊರತೆಗೆ ಇದೇ ಕಾರಣ’ ಎನ್ನುತ್ತಾರೆ. ಈ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 352 ಕಾಲೇಜುಗಳಿವೆ. ಸಂಗೊಳ್ಳಿ ರಾಯಣ್ಣ ಪದವಿ ಕಾಲೇಜಿನಲ್ಲೇ 57 ಅತಿಥಿ ಉಪನ್ಯಾಸಕರು ಇದ್ದಾರೆ.
ಶಾಲೆಗಳಲ್ಲಿ ಶಿಕ್ಷಕರಿಗೆ ಮತ್ತು ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಿಗೆ ಬೇಡಿಕೆ ಇದೆ. ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಆದರೆ, ಬೇಡಿಕೆ ಮತ್ತು ಪೂರೈಕೆ ನಡುವೆ ಅಸಮತೋಲನವಿದೆ. ಅತಿಥಿ ಪದ್ಧತಿಯಿಂದ ಗುರು ಪರಂಪರೆಯ ಕೊಂಡಿ ಕಳಚಿದೆ ಎಂಬ ಅಭಿಪ್ರಾಯವೂ ಇದೆ.
‘30 ವರ್ಷಗಳಿಂದ ಉಪನ್ಯಾಸಕರ ನೇಮಕವೇ ಆಗಿಲ್ಲ. 20 ವರ್ಷ ಸೇವೆ ಸಲ್ಲಿಸಿದ ಬಳಿಕ ಒಬ್ಬ ಉಪನ್ಯಾಸಕ ವಿಭಾಗದ ಮುಖ್ಯಸ್ಥ ಆಗುತ್ತಿದ್ದರು. ಆ ಸರಣಿಯೇ ಕಳಚಿದ್ದು ಅಪಾಯಕಾರಿ. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಒಂದು ಕಾಲದಲ್ಲಿ 300ಕ್ಕೂ ಹೆಚ್ಚು ಕಾಯಂ ಉಪನ್ಯಾಸಕರಿದ್ದೆವು. ಈಗ 38 ಮಂದಿ ಮಾತ್ರ ಇದ್ದೇವೆ. ಒಂದು ಪ್ರದೇಶವನ್ನು ಹಾಳು ಮಾಡಲು ಯುದ್ಧ ಸಾರಬೇಕಿಲ್ಲ. ಅಲ್ಲಿನ ವಿಶ್ವವಿದ್ಯಾಲಯ ನಾಶಪಡಿಸಿದರೆ ಸಾಕು ಎಂಬುದು ಚಿಂತಕರ ಮಾತು. ಇದು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೂ ಅನ್ವಯವಾಗುತ್ತದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಹೇಳುತ್ತಾರೆ.
ಕಾಯಂ ಶಿಕ್ಷಕರ ನೇಮಕಾತಿಗೆ ಸಿಇಟಿಗೂ ಮುನ್ನ ಟಿಇಟಿ ನಡೆಯುತ್ತದೆ. ಒಂದು ಸಾಮಾನ್ಯ ಪ್ರವೇಶ, ಇನ್ನೊಂದು ಅರ್ಹತಾ ಪರೀಕ್ಷೆ. ಡಿ.ಇಡಿ, ಬಿ.ಎ, ಬಿ.ಇಡಿ ಆದ ಬಳಿಕವೂ ಅರ್ಹತೆಯ ಮಾಪನ ನಡೆಯುತ್ತದೆ. ಆದರೆ, ಇವೆರಡೂ ಪರೀಕ್ಷೆಗಳು ಅತಿಥಿ ಶಿಕ್ಷಕರು ಅಥವಾ ಉಪನ್ಯಾಸಕರಿಗೆ ಅನ್ವಯ ಆಗುವುದಿಲ್ಲ. ಅವರ ಅರ್ಹತೆ, ಸಾಮರ್ಥ್ಯ, ಕೌಶಲ, ಮಾನಸಿಕ ಬೆಳವಣಿಗೆ ಎಲ್ಲವನ್ನೂ ಪರೀಕ್ಷಿಸುವುದಿಲ್ಲ. ಸಂಬಳದ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ.
‘ಉತ್ಪಾದನಾ ಕೇಂದ್ರಕ್ಕೆ ಹೆಚ್ಚು ಆದ್ಯತೆ ನೀಡುವ ಸರ್ಕಾರಕ್ಕೆ ಶಿಕ್ಷಣ ಎಂಬುದು ಅನುತ್ಪಾದನಾ ಕೇಂದ್ರ. ದೇಶದ ಅಭಿವೃದ್ಧಿಗೆ ಶಿಕ್ಷಣವೇ ಮೂಲಬೇರು ಎಂಬುದನ್ನು ಮರೆತಿದೆ. ಕೆಲ ವಿಶ್ವವಿದ್ಯಾಲಯಗಳ ವಿವಿಧ ವಿಭಾಗಗಳಿಗೆ ಅತಿಥಿ ಉಪನ್ಯಾಸಕರೇ ಆಧಾರ. ಇದು ಒಳ್ಳೆಯ ಬೆಳವಣಿಯಲ್ಲ. ಇಂದಿನ ಕೊರತೆ ನೀಗಿಸೋಣ; ಭವಿಷ್ಯದ್ದು ಆಮೇಲೆ ಯೋಚಿಸೋಣ ಎಂಬ ಧೋರಣೆಯೇ ಈ ಬೆಳವಣಿಗೆಗೆ ಕಾರಣ’ ಎನ್ನುತ್ತಾರೆ ಅತಿಥಿ ಉಪನ್ಯಾಸಕ ಜಗಪ್ಪ ತಳವಾರ.
‘ಅತಿಥಿ ಶಿಕ್ಷಕರದ್ದು ಒಂದರ್ಥದಲ್ಲಿ ಏನನ್ನೂ ಹೇಳಲಾಗದ ಮತ್ತು ತೋರಲಾಗದ ಮೌನ ರೋದನ. ₹50 ಸಾವಿರ ಪಡೆಯುವ ಕಾಯಂ ಶಿಕ್ಷಕನನ್ನು ನೇಮಿಸಿಕೊಳ್ಳುವ ಬದಲು ₹10 ಸಾವಿರ ಸಂಬಳಕ್ಕೆ ಒಬ್ಬರಂತೆ ಐವರನ್ನು ನೇಮಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವೇ ಪ್ರಧಾನವಾಗಿದೆ. ಶಿಕ್ಷಕರಿಗೆ ವಿದ್ಯಾರ್ಥಿಗಳು, ಶಾಲೆ ಮತ್ತು ಪಾಲಕರ ಮೇಲೆ ಹಿಡಿತ ಇರಬೇಕು. ಆದರೆ, ಅದು ಅತಿಥಿ ಶಿಕ್ಷಕರಿಗೆ ಸಾಧ್ಯವಾಗುತ್ತಿಲ್ಲ. ಎಷ್ಟೇ ಆದರೂ ಅವರು ತಾತ್ಕಾಲಿಕ ಎಂಬ ಅಸಡ್ಡೆ ವಿದ್ಯಾರ್ಥಿಗಳು ಅಲ್ಲದೇ ಪಾಲಕರಲ್ಲೂ ಇದೆ’ ಎಂಬ ಬೇಸರ ಅತಿಥಿ ಶಿಕ್ಷಕರದ್ದು.
‘ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರಿಗೆ ಮೂಲವೇತನವೇ ₹50,800 ಇದೆ. ಒಟ್ಟಾರೆ ₹3 ಲಕ್ಷದವರೆಗೆ ಸಂಬಳ. ಆದರೆ, ಅತಿಥಿ ಉಪನ್ಯಾಸಕರಿಗೆ ಒಟ್ಟಾರೆ ವೇತನವೇ ಗರಿಷ್ಠ ₹35 ಸಾವಿರ. ಈ ಇಬ್ಬರ ಮಧ್ಯೆ ಸಮಾನವಾದ ಶ್ರಮ, ಫಲಿತಾಂಶ ಹೇಗೆ ನಿರೀಕ್ಷಿಸಲು ಸಾಧ್ಯ? ಸಂಶೋಧಕರನ್ನು ಹುಟ್ಟು ಹಾಕಬೇಕಿದ್ದ ವಿಶ್ವವಿದ್ಯಾಲಯಗಳು ನಿರುದ್ಯೋಗಿಗಳನ್ನು ತಯಾರಿಸುವ ಕಾರ್ಖಾನೆಗಳಾಗಿವೆ’ ಎಂಬ ಆತಂಕ ಅತಿಥಿ ಉಪನ್ಯಾಸಕರದ್ದು.
ಗುಲಬರ್ಗಾ ವಿಶ್ವವಿದ್ಯಾಲಯದ ಹಿಂದಿ, ಮರಾಠಿ, ಸಂಗೀತ, ಲಲಿತಕಲೆ, ಇತಿಹಾಸ, ಎಂಎಸ್‌ಡಬ್ಲ್ಯು, ಸಮಾಜಶಾಸ್ತ್ರ ರಾಜನೀತಿ ಶಾಸ್ತ್ರ, ಕಾನೂನು, ದೈಹಿಕ ಶಿಕ್ಷಣ, ಸೂಕ್ಷ್ಮಜೀವಿ ವಿಜ್ಞಾನ, ಸಸ್ಯ ವಿಜ್ಞಾನ, ಲೈಬ್ರರಿ ಸೈನ್ಸ್ ವಿಭಾಗಗಳಲ್ಲಿ ಒಬ್ಬರೂ ಖಾಯಂ ಸಿಬ್ಬಂದಿ ಇಲ್ಲ. ಕನ್ನಡ, ಉರ್ದು, ಕಂಪ್ಯೂಟರ್ ಸೈನ್ಸ್, ಪರಿಸರ ವಿಜ್ಞಾನ, ವಿಭಾಗಗಳಲ್ಲಿ ಒಬ್ಬೊಬ್ಬರು; ಇಂಗ್ಲಿಷ್, ಎಲೆಕ್ಟ್ರಾನಿಕ್ಸ್, ರಸಾಯನಶಾಸ್ತ್ರ ವಿಭಾಗಗಳಲ್ಲಿ ತಲಾ ಇಬ್ಬರು ಉಪನ್ಯಾಸಕರು ಮಾತ್ರ ಇದ್ದಾರೆ. ಇದೇ ರೀತಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸ್ಥಿತಿಯೂ ಆಗಿದೆ. ಒಟ್ಟಾರೆಯಾಗಿ ವಿಶ್ವವಿದ್ಯಾಲಯಗಳು ಶೇ 70ರಷ್ಟು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿವೆ.
‘ಅತಿಥಿ ಉಪನ್ಯಾಸಕರ ನೇಮಕಾತಿ ವಿಶ್ವವಿದ್ಯಾಲಯಗಳ ಅನುದಾನ ಆಯೋಗದ (ಯುಜಿಸಿ) ನಿಯಮಕ್ಕೆ ವಿರುದ್ಧವಿದೆ. ಆದರೆ, 2005ರಿಂದಲೂ ಸರ್ಕಾರಗಳು ಈ ನಿಯಮ ಗಾಳಿಗೆ ತೂರುತ್ತಲೇ ಬಂದಿವೆ. ಯುಜಿಸಿ ನಿಯಮದಂತೆ ತಮ್ಮನ್ನೇ ಕಾಯಂ ಮಾಡಿಕೊಳ್ಳಬೇಕು’ ಎಂದು ಕೋರಿ 53 ಅತಿಥಿ ಉಪನ್ಯಾಸಕರು ಹೈಕೋರ್ಟ್ ಮೊರೆ ಹೋಗಿದ್ದರು. ಅಗತ್ಯಕ್ಕೆ ಅನುಗುಣವಾಗಿ ಇವರನ್ನೇ ನೇಮಿಸಿಕೊಳ್ಳಿ ಎಂದು ಹೈಕೋರ್ಟ್ 2022ರಲ್ಲಿ ಆದೇಶ ನೀಡಿದೆ. ಆದರೆ, ಸರ್ಕಾರ ಇದಕ್ಕೆ ಹಿಂಬದಿ ಬರಹ ಬರೆದುಕೊಟ್ಟಿದೆ. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಮಾತ್ರ ನೇಮಿಸಿಕೊಳ್ಳಲಾಗುವುದು ಎಂದು ಹೇಳಿ ಜವಾಬ್ದಾರಿಯಿಂದ ನುಣಿಚಿಕೊಂಡಿದೆ’ ಎಂದು ಹೋರಾಟಗಾರರು ಹೇಳುತ್ತಾರೆ.
ಚಿತ್ರ: ಭಾವು ಪತ್ತಾರ್
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಅಧೀನದ ವಸತಿ ಶಾಲೆಗಳಲ್ಲಿ ಸುಮಾರು 2,000 ಅತಿಥಿ ಶಿಕ್ಷಕರು, 220 ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಸೇರಿ 3,500ಕ್ಕೂ ಹೆಚ್ಚು ಜನ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಾರೆ. ಕಾಯಂ ಶಿಕ್ಷಕರಿಗಿಂತ ಹೆಚ್ಚಿನ ಆಸಕ್ತಿ ವಹಿಸಿ ಬೋಧಿಸುತ್ತಿದ್ದರೂ ಶ್ರಮಕ್ಕೆ ತಕ್ಕಷ್ಟು ಪ್ರತಿಫಲ ಸಿಗುತ್ತಿಲ್ಲ. ಇದರ ನೇರ ಪರಿಣಾಮ ವಿದ್ಯಾರ್ಥಿಗಳ ಕಲಿಕೆ ಮೇಲೆ ಬೀರುತ್ತಿದೆ.
‘ಕಾಯಂ ಶಿಕ್ಷಕರಷ್ಟೇ ಕಾರ್ಯವನ್ನು ನಾವೂ ಮಾಡುತ್ತಿದ್ದೇವೆ. ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ತರಗತಿಗಳ ಬೋಧನೆ ಮಾಡಿ, ಸಂಜೆ 5ರಿಂದ ರಾತ್ರಿ 8ರ ವರೆಗೆ ಮಾಸ್ಟರ್ ಆನ್ ಡ್ಯೂಟಿ (ಎಂಒಡಿ) ನಿರ್ವಹಿಸುತ್ತೇವೆ. ಸರ್ಕಾರ ತಿಂಗಳಿಗೆ ₹13 ಸಾವಿರ ಗೌರವಧನ ಕೊಡುತ್ತದೆ. ದುಬಾರಿ ದಿನಗಳಲ್ಲಿ ಇದು ಸಾಲುವುದಿಲ್ಲ. ಫಲಿತಾಂಶದಲ್ಲಿ ವ್ಯತ್ಯಾಸವಾದರೆ ಅತಿಥಿ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡುತ್ತಾರೆ’ ಎಂದು ಅತಿಥಿ ಶಿಕ್ಷಕ ಸತೀಶ ಯಳಸಂಗಿ ಮತ್ತು ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಬೇಸರದಿಂದ ನುಡಿದರು.
ಅತಿಥಿ ಶಿಕ್ಷಕರು ಅಥವಾ ಉಪನ್ಯಾಸಕರಾದ ಮಹಿಳೆಯರ ಸಂಕಷ್ಟ ಹೇಳತೀರದು. ಹೆರಿಗೆ ರಜೆ ಸೇರಿ ಯಾವ ಸೌಲಭ್ಯ ಇಲ್ಲ. ಕುಟುಂಬ ನಿರ್ವಹಣೆಗೆ ಬೇರೆ ದಾರಿ ಇಲ್ಲದ ಅನೇಕರು ಹಸುಗೂಸು ಎತ್ತಿಕೊಂಡು ಕಾಲೇಜಿಗೆ ಹೋಗುತ್ತಾರೆ.
‘ದೇಶದ ಭವಿಷ್ಯ ಭದ್ರಗೊಳಿಸುವ ಪ್ರಜೆಗಳನ್ನು ರೂಪಿಸುವ ಉಪನ್ಯಾಕರ ಬದುಕೇ ಅಭದ್ರವಾಗಿದೆ. ಮಹಿಳೆಯರು ಕೆಲಸದ ಜತೆಗೆ ಅತ್ತೆ, ಮಾವ, ಗಂಡ, ಮಕ್ಕಳು ಎಲ್ಲರನ್ನೂ ನಿಭಾಯಿಸಲೇಬೇಕು. ಬೇರೆ ಊರುಗಳಿಗೆ ಹೋಗಿ ಬರಲು ಕಷ್ಟವಾಗುತ್ತದೆ. ಪ್ರಯಾಣದಲ್ಲಿಯೇ ಬಹುಪಾಲು ಸಮಯ ಕಳೆದು ಹೋಗುವುದರಿಂದ ಒತ್ತಡಕ್ಕೆ ಸಿಲುಕಿದ್ದೇವೆ’ ಎಂದು ಹೊಸದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಿ.ಎಂ.ಮಮತಾ ತಿಳಿಸಿದರು.
‘ಖಾಸಗಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವವರಿಗೂ ಭವಿಷ್ಯ ನಿಧಿ, ಹೆರಿಗೆ ರಜೆ, ಇತರೆ ರಜೆ ಸೌಲಭ್ಯವಿದೆ. ಆದರೆ, ನಮಗೆ ಇಲ್ಲ. ಹೆರಿಗೆ ಸಂದರ್ಭದಲ್ಲಿ ಕೆಲಸಕ್ಕೆ ತೆರಳಲು ಸಾಧ್ಯವಾಗದ ಕಾರಣ ಹಲವರು ಕುಟುಂಬ ನಿಭಾಯಿಸಲು ಹೆಣಗಾಡುತ್ತಾರೆ. ಮಗುವಿನ ಲಾಲನೆ–ಪಾಲನೆಗೆ ಹಣ ಬೇಕು. ಆದರೆ, ನಮ್ಮ ಬಳಿ ಹಣ ಇರಲ್ಲ’ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತವರೂರು ಮೈಸೂರು ತಾಲ್ಲೂಕಿನ ಸಿದ್ದರಾಮನ ಹುಂಡಿಯಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಈ ವರ್ಷ ಪ್ರಾಥಮಿಕ ಹಾಗೂ ಪ್ರೌಢಶಾಲೆ ಎರಡೂ ಸೇರಿ ವಿದ್ಯಾರ್ಥಿಗಳ ಸಂಖ್ಯೆ 1,000ಕ್ಕೆ ಸಮೀಪಿಸಿದೆ. ಸ್ಮಾರ್ಟ್‌ಕ್ಲಾಸ್ ಸೌಕರ್ಯವಿದೆ. ಆದರೆ, ಪಾಠ ಮಾಡಲು ಅಗತ್ಯ ಪ್ರಮಾಣದಲ್ಲಿ ಕಾಯಂ ಶಿಕ್ಷಕರೇ ಇಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಠ ವೇತನ ಕಾಯ್ದೆ ಜಾರಿಗೊಳಿಸಿವೆ. ಅದರಂತೆ ದಿನಕ್ಕೆ ಕನಿಷ್ಠ 6 ಗಂಟೆ ದುಡಿಯುವ ವ್ಯಕ್ತಿಗೆ ತಿಂಗಳಿಗೆ ಕನಿಷ್ಠ ₹18 ಸಾವಿರದಿಂದ ₹21 ಸಾವಿರ ವೇತನ ನಿಗದಿಪಡಿಸಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ದುಡಿಮೆ ಮಾಡುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ಕಾರ ನಿಗದಿಪಡಿಸಿದ ಗೌರವ ಧನ ₹10 ಸಾವಿರ. ಇತರೆ ಕಾರ್ಮಿಕರಿಗೆ ಸಿಗುವಷ್ಟು ಕನಿಷ್ಠ ವೇತನವೂ ಸಿಗುವುದಿಲ್ಲ.
‘ಅಲ್ಪ ವೇತನದ ಕಾರಣಕ್ಕೆ ಅತಿಥಿ ಶಿಕ್ಷಕರು ಬೇರೆ ಬೇರೆ ಉದ್ಯೋಗಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಮಕ್ಕಳ ಕಲಿಕೆಗೆ ಸಂಪೂರ್ಣವಾಗಿ ಗಮನ ಹರಿಸುತ್ತಿಲ್ಲ. ಇದು ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಅತಿಥಿ ಶಿಕ್ಷಕರು ಹೆಚ್ಚಿರುವ ಶಾಲೆಗಳಲ್ಲಿ ಫಲಿತಾಂಶವೂ ಏರುಪೇರಾಗುತ್ತಿದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಹಂತಹಂತವಾಗಿ ಅತಿಥಿ ಶಿಕ್ಷಕ ಎನ್ನುವ ವ್ಯವಸ್ಥೆಯನ್ನು ತೆಗೆದು ಕಾಲಿ ಇರುವ ಜಾಗಕ್ಕೆ ಕಾಯಂ ಶಿಕ್ಷಕ ಅಥವಾ ಉಪನ್ಯಾಸಕರನ್ನು ನೇಮಿಸಿಕೊಳ್ಳದಿದ್ದರೆ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಅವ್ಯವಸ್ಥೆಯತ್ತ ಹೋಗಲಿದೆ. ಇದಕ್ಕೆ ರಾಜ್ಯ ಸರ್ಕಾರವೇ ಉತ್ತರ ಹುಡುಕಬೇಕು.
ಪೂರಕ ಮಾಹಿತಿ: ಆರ್.ಜಿತೇಂದ್ರ, ಮಲ್ಲಿಕಾರ್ಜುನ ನಾಲವಾರ, ಅನಿತಾ ಎಚ್, ವಿಕ್ರಂ ಕಾಂತಿಕೆರೆ, ಚಂದ್ರಹಾಸ ಹಿರೇಮಳಲಿ
ಸರ್ಕಾರ ನಮ್ಮನ್ನು ಪಾಠ ಕಲಿಸುವ ಯಂತ್ರದಂತೆ ಕಾಣುತ್ತಿದೆ ಹೊರತು ಶಿಕ್ಷಕ ಎಂದು ಪರಿಗಣಿಸುತ್ತಿಲ್ಲ. ಕಾಯಂ ಶಿಕ್ಷಕರಷ್ಟೇ ಪ್ರಾಮಾಣಿಕ ಕೆಲಸ ನಾವೂ ಮಾಡುತ್ತಿದ್ದೇವೆ. ಆದರೆ ವೇತನ ಇಲ್ಲಎಚ್.ಎಸ್. ಹನುಮಂತ ಅಧ್ಯಕ್ಷ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘ
ಹಲವರಿಗೆ 40 ವರ್ಷವಾದರೂ ಮದುವೆಯಾಗಿಲ್ಲ. ಚಿಲ್ಲರೆ ವೇತನಕ್ಕೆ ದುಡಿಯುವವರಿಗೆ ಯಾರು ಹೆಣ್ಣು ಕೊಡುತ್ತಾರೆ? ನಮ್ಮ ಆತ್ಮಗೌರವ ಕಾಪಾಡಲು ಸರ್ಕಾರ ಮನಸ್ಸು ಮಾಡಬೇಕುಬಸವರಾಜ ಕರಡಿಗುಡ್ಡ ಪ್ರಧಾನ ಕಾರ್ಯದರ್ಶಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘ
ವರ್ಷಪೂರ್ತಿ ಒಂದೂ ರಜೆ ಇಲ್ಲ. ಹೆರಿಗೆ ರಜೆ ಇಲ್ಲ. ಅಪಘಾತವಾದರೂ ವಿಶ್ರಾಂತಿಗೆ ಅವಕಾಶವಿಲ್ಲ. ನಿವೃತ್ತಿವರೆಗೆ ಅತಿಥಿ ಶಿಕ್ಷಕಿ– ಉಪನ್ಯಾಸಕಿ ಆಗಿಯೇ ದುಡಿಯಲು ಸಾಧ್ಯವೇ ಇಲ್ಲ.ಟಿ.ಲೋಲಾಕ್ಷಿ ಸಂಘಟನಾ ಕಾರ್ಯದರ್ಶಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘ
ಪ್ರತಿ ಬಾರಿ ಬೇರೆಬೇರೆ ಶಾಲೆಗಳಿಗೆ ನೇಮಕಾತಿ ಬಯಸಿ ಅಲೆಯಬೇಕಿದೆ. ಶಿಕ್ಷಕರಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಲು 3 ತಿಂಗಳು ಬೇಕು. ಗುಣಮಟ್ಟದ ಮೇಲೂ ದುಷ್ಟಪರಿಣಾಮ ಬೀರುತ್ತದೆಅಶೋಕ ಪೋಳಾ ಅತಿಥಿ ಶಿಕ್ಷಕ ಕಲಬುರಗಿ
ಎಲ್ಲರಿಗೂ ಸರ್ಕಾರಿ ನೌಕರಿ ಕೊಡಲು ಸಾಧ್ಯವಿಲ್ಲ ನಿಜ. ಆದರೆ ಶೇ 80ರಷ್ಟು ಅತಿಥಿಗಳನ್ನೇ ಇಟ್ಟುಕೊಂಡು ಗುಣಮಟ್ಟ ಕಾಯ್ದುಕೊಳ್ಳಲು ಹೇಗೆ ಸಾಧ್ಯ? ಸರ್ಕಾರ ಈ ಗಂಭೀರತೆ ಅರಿಯಬೇಕುಜಗಪ್ಪ ತಳವಾರ ಅತಿಥಿ ಉಪನ್ಯಾಸಕ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕಮಲಾಪುರ ಕಲುಬುರಗಿ ಜಿಲ್ಲೆ
ಒಳಕ್ಕೆ ಕ್ಯಾರಿಕೇಚರ್ ಸುತ್ತ ಬಳಸಲು... ‘ಅತಿಥಿಗಳ’ ಬೇಡಿಕೆ..
* ಸೇವಾ ಅಥವಾ ಉದ್ಯೋಗ ಭದ್ರತೆ ಕಲ್ಪಿಸಬೇಕು
* ಅತಿಥಿ ಶಿಕ್ಷಕ ಬದಲು ಗೌರವ ಅಥವಾ ಅರೆಕಾಲಿಕ ಶಿಕ್ಷಕ ಎನ್ನಬೇಕು
* 9 ತಿಂಗಳಿಗೆ ಸೀಮಿತಗೊಳಿಸದೇ ಬೇಸಿಗೆ ರಜೆಯಲ್ಲೂ ಸಂಬಳ ನೀಡಬೇಕು
* ಪ್ರತಿ ತಿಂಗಳ ಸಂಬಳ ಬ್ಯಾಂಕ್ ಖಾತೆಗೆ ಜಮೆ ಆಗಬೇಕು
* ನೇಮಕಾತಿಯಲ್ಲಿ ಮೆರಿಟ್ ಪದ್ಧತಿ ಕೈಬಿಟ್ಟು ಸೇವಾಧಾರಿತ ಮಾಡಬೇಕು
* ಶೇ 5 ರಷ್ಟು ಕೃಪಾಂಕ ನೀಡಬೇಕು
* ಪ್ರತಿ ವರ್ಷ ಸೇವಾ ದೃಢೀಕರಣ ಪ್ರಮಾಣಪತ್ರ ನೀಡಬೇಕು
* ರಜೆಯೂ ಸೇರಿ ಕಾಯಂ ಶಿಕ್ಷಕರಿಗೆ ಇರುವ ಎಲ್ಲ ಸೌಲಭ್ಯ ನೀಡಬೇಕು.
* ಮಧ್ಯದಲ್ಲೇ ವರ್ಗಾವಣೆ ಅಥವಾ ಬೇರೆ ಶಿಕ್ಷಕರ ಕಾರಣಕ್ಕೆ ಇದ್ದವರನ್ನು ವಜಾ ತೆಗೆಯಬಾರದು.
ಶಿಕ್ಷಣ ತಜ್ಞರ ಅಭಿಮತ
ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಟ ಕಲಿತ ವಿಷಯಗಳನ್ನು ಸಮಾಜಕ್ಕಾಗಿ ಬಳಸುವುದು ಮತ್ತು ಬೆರೆಯುವುದೇ ಶಿಕ್ಷಣ ಆಗಬೇಕು. ಅತಿಥಿ ಶಿಕ್ಷಕರು ಅಸ್ತಿತ್ವ ಉಳಿಸಿಕೊಂಡು ಜೀವನ ನಿರ್ವಹಿಸಲು ಹೆಣಗಾಡುತ್ತಿದ್ದಾರೆ. ಶೈಕ್ಷಣಿಕ ಅನನ್ಯತೆಯನ್ನು ಸೂಕ್ಷ್ಮವಾಗಿ ವಿಂಗಡಿಸಿದರೆ ಶಿಕ್ಷಣವು ಬದುಕಿಗೆ ವಿದ್ಯೆಯು ಸಂಸ್ಕಾರಕ್ಕೆ ಸಂಬಂಧಪಟ್ಟಿದೆ.– ಎ.ಎಂ.ನರಹರಿ ನಿವೃತ್ತ ಉಪನ್ಯಾಸಕ ಸಾಗರ
ಅನನ್ಯತೆ ಮರೀಚಿಕೆ ಈಗಿನ ಸ್ವರೂಪದಲ್ಲಿ ಶೈಕ್ಷಣಿಕ ಅನನ್ಯತೆಯನ್ನು ಉಳಿಸಿಕೊಳ್ಳಲು ಅತಿಥಿ ಶಿಕ್ಷಕರು ಏನಾದರೂ ಮಾಡಬಲ್ಲರು ಎಂದು ಬಯಸುವುದು ಸರಿಯಲ್ಲ. ಇದಕ್ಕೆ ಪ್ರತ್ಯೇಕವಾದ ಚಿಂತನಾ ಶಾಖೆಯನ್ನೇ ಅಸ್ತಿತ್ವಕ್ಕೆ ತರಬೇಕಾದ ಅಗತ್ಯವಿದೆ. ಅವರ ಬದುಕಿಗೆ ಭದ್ರತೆ ಕಲ್ಪಿಸಲು ಆದ್ಯತೆ ನೀಡಬೇಕಿದೆ.–ಚೈತ್ರ ಸಹಪ್ರಾಧ್ಯಾಪಕ ಮತ್ತಿಘಟ್ಟ ಬೆಂಗಳೂರು
ಬದುಕಿನ ಅನುಭವ ಇಲ್ಲ ಕೇವಲ ಅಕ್ಷರಜ್ಞಾನದ ಕಡೆಗೆ ಮಾತ್ರ ಗಮನ ನೀಡುವುದರಿಂದ ಈಗ ಶಿಕ್ಷಣದಲ್ಲಿ ನಿಜ ಜೀವನದ ಪರಿಚಯ ಆಗುತ್ತಿಲ್ಲ. ಕಲಿಯುವವರಿಗೂ ಕಲಿಸುವರಿಗೂ ಬದುಕಿನ ಅನುಭವ ಇಲ್ಲ. ಪಠ್ಯವನ್ನು ಮೀರಿ ಹೊರಗಿನ ಪ್ರಪಂಚವನ್ನು ತೋರಿಸುವ ಕೆಲಸ ಆಗಬೇಕು.–ಮಹಾಬಲೇಶ್ವರ ರಾವ್ ಸಮನ್ವಯಾಧಿಕಾರಿ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯ ಉಡುಪಿ
ಅಂಕಿ ಅಂಶಗಳು
ಅತಿಥಿ ಶಿಕ್ಷಕ– ಉಪನ್ಯಾಸಕ: ಯಾರಿಗೆ ಎಷ್ಟು ಸಂಬಳ
₹10,000-ಪ್ರಾಥಮಿಕ ಶಾಲಾ ಶಿಕ್ಷಕರು₹10,500-ಪ್ರೌಢಶಾಲೆ ಶಿಕ್ಷಕರು
₹12,000-ಪಿಯು ಉಪನ್ಯಾಸಕರು
₹35,000-ಪದವಿ ಉಪನ್ಯಾಸಕರು
₹16,500-ವಸತಿ ಶಾಲೆಗಳ ಅತಿಥಿ ಶಿಕ್ಷಕರು
₹8,600-ವಸತಿ ಶಾಲೆಗಳ ಹೊರಗುತ್ತಿಗೆ ಶಿಕ್ಷಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.