ಚೆನ್ನೈ: ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ತಂಡ ಕಳೆದ ಬಾರಿ ಗೆದ್ದಿದ್ದ ಟ್ರೋಫಿಯು, ಇಲ್ಲಿನ ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಕಚೇರಿಯಿಂದ ಕಾಣೆಯಾಗಿದ್ದು, ತೀವ್ರ ಮುಜುಗರಕ್ಕೆ ಒಳಗಾಗಿರುವ ಫೆಡರೇಷನ್, ಈ ಬಗ್ಗೆ ಪೊಲೀಸ್ ಠಾಣೆಗೆ ದೂರನ್ನುಯ ನೀಡಿದೆ.
ಮಾತ್ರವಲ್ಲ, ಅದರ ಪ್ರತಿಕೃತಿಗೆ ಏರ್ಪಾಡು ಮಾಡಿದ್ದು, ಫಿಡೆಯ ಕ್ಷಮೆಯನ್ನೂ ಯಾಚಿಸಿದೆ. ಇದು ರೋಲಿಂಗ್ (ಪರ್ಯಾಯ) ಟ್ರೋಫಿಯಾಗಿದೆ. ಪ್ರಸ್ತುತ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ 45ನೇ ಒಲಿಂಪಿಯಾಡ್‌ನಲ್ಲಿ ಭಾರತ ಪುರುಷರ ತಂಡವು ಚಿನ್ನದ ಪದಕ ಸನಿಹ ಇರುವಾಗಲೇ ಟ್ರೊಫಿ ನಾಪತ್ತೆಯಾಗಿರುವುದು ಬಹಿರಂಗವಾಗಿದೆ.
ಗಾಪ್ರಿನ್‌ದಶ್ವಿಲಿ ಟ್ರೋಫಿಯನ್ನು ಒಲಿಂಪಿಯಾಡ್‌ನಲ್ಲಿ ಒಟ್ಟಾರೆ (ಓಪನ್ ಮತ್ತು ಮಹಿಳೆಯರ ವಿಭಾಗ ಒಳಗೊಂಡು) ಉತ್ತಮ ಪ್ರದರ್ಶನ ನೀಡುವ ತಂಡಕ್ಕೆ ನೀಡಲಾಗುತ್ತಿದೆ. 2022ರಲ್ಲಿ ಚೆನ್ನೈನಲ್ಲಿ ನಡೆದ ಒಲಿಂಪಿಯಡ್‌ನಲ್ಲಿ ಭಾರತ ತಂಡಕ್ಕೆ ಈ ಟ್ರೋಫಿ ಒಲಿದಿತ್ತು.
ಒಂದು ತಿಂಗಳ ಹಿಂದೆ ಟ್ರೋಫಿ ಕಳೆದುಹೋಗಿದೆ. ಹಾಲಿ ಒಲಿಂಪಿಯಾಡ್ ನಡೆಯುತ್ತಿರುವ ಬುಡಾಪೆಸ್ಟ್‌ಗೆ ಈ ಟ್ರೋಫಿಯನ್ನು ಕಳಿಸುವಂತೆ ವಿಶ್ವ ಚೆಸ್ ಫೆಡರೇಷನ್ (ಫಿಡೆ) ಕೇಳಿದಾಗಷ್ಟೇ ಟ್ರೋಫಿ ನಾಪತ್ತೆ ಆಗಿರುವುದು ಗೊತ್ತಾಗಿದೆ ಎಂದು ಎಐಸಿಎಫ್ ಉಪಾಧ್ಯಕ್ಷ ಅನಿಲ್ ಕುಮಾರ್ ರಾಯ್‌ಝಾದಾ ಪಿಟಿಐಗೆ ತಿಳಿಸಿದ್ದಾರೆ.