ಬೆಂಗಳೂರು: ನಾಡಿನ ಕಲೆ, ಸಾಹಿತ್ಯ, ಭಾಷೆಗಳನ್ನು ಸಂರಕ್ಷಿಸಿ, ಪೋಷಿಸಬೇಕಾದ ಸಾಂಸ್ಕೃತಿಕ ಅಕಾಡೆಮಿಗಳು ಅನುದಾನದ ಕೊರತೆ, ಸ್ವಾಯತ್ತತೆ ಮೊಟಕು ಸೇರಿ ವಿವಿಧ ಕಾರಣಗಳಿಂದ ಮೂಲ ಆಶಯವನ್ನು ಬದಿಗೊತ್ತಿ, ಪ್ರಶಸ್ತಿಗಳ ವಿತರಣೆ, ಪುಸ್ತಕ ಪ್ರಕಟಣೆಗಳಂತಹ ಕಾಯಕಕ್ಕೆ ಸೀಮಿತವಾಗುತ್ತಿವೆ. ಇದರಿಂದಾಗಿ ಈ ಸಂಸ್ಥೆಗಳು ನಾಡಿನ ಕಲೆ ಹಾಗೂ ಕಲಾವಿದರಿಂದ ದೂರವಾಗುತ್ತಿವೆ ಎನ್ನುವ ಅನುಮಾನ ಸಾಂಸ್ಕೃತಿಕ ವಲಯದಲ್ಲಿ ಮೂಡುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ 14 ಅಕಾಡೆಮಿಗಳು ಹಾಗೂ ನಾಲ್ಕು ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ. ನಾಡು–ನುಡಿ, ಸಾಹಿತ್ಯ, ಸಂಸ್ಕೃ ತಿಯ ಜತೆಗೆ ಸಂಗೀತ–ನೃತ್ಯ, ಲಲಿತಕಲೆ, ಜಾನಪದ, ನಾಟಕ, ಯಕ್ಷಗಾನ, ಬಯಲಾಟ, ಶಿಲ್ಪಕಲೆ ಮೊದಲಾದ ಕಲಾ ಪ್ರಕಾರಗಳ ವೈವಿಧ್ಯಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಅಕಾಡೆಮಿಗಳನ್ನು ಸ್ಥಾಪಿಸಲಾಗಿವೆ. ಕಲೆ ಹಾಗೂ ಸಾಹಿತ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದ ಅಕಾಡೆಮಿಗಳು, ಬದಲಾದ ಕಾಲಘಟ್ಟದಲ್ಲಿ ಸ್ವಾಯತ್ತತೆ ಕಳೆದುಕೊಂಡು ಆಡಳಿತಾರೂಢ ಸರ್ಕಾರಗಳ ಕೈಗೊಂಬೆಗಳಾಗಿವೆ ಎಂಬ ಆರೋಪ ಸಾಂಸ್ಕೃತಿಕ ವಲಯದಲ್ಲಿದೆ.
ಅಕಾಡೆಮಿಗಳು ತನ್ನ ಕಾರ್ಯ ಚಟುವಟಿಕೆಗಳಿಂದ ನಾಡಿನ ಸಾಂಸ್ಕೃತಿಕ ಕ್ಷೇತ್ರದ ಗಮನ ಸೆಳೆಯುವ ಬದಲು, ರಾಜಕೀಯ ಲೇಪದಿಂದ ಸಂಕುಚಿತಗೊಳ್ಳುತ್ತಿವೆ. ಅಧ್ಯಕ್ಷರು ಹಾಗೂ ಸದಸ್ಯರ ನೇಮಕದಿಂದ ಹಿಡಿದು, ಪ್ರಶಸ್ತಿಗಳ ಆಯ್ಕೆಯವರೆಗೆ ಆಕ್ಷೇಪಗಳು ಕೇಳಿ ಬರುತ್ತಿವೆ. ಸರ್ಕಾರದ ಹಸ್ತಕ್ಷೇಪ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಆ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು, ಅದಕ್ಕೆ ಒಗ್ಗಿಕೊಂಡವರಿಗೆ ಅಧ್ಯಕ್ಷ ಗಾದಿ ಒಲಿಯುತ್ತಿದೆ. ಈ ‘ಸಂಸ್ಕೃತಿ’ಯು ಮೂಲ ಆಶಯಕ್ಕೆ ಧಕ್ಕೆಯಾಗಿ ಸ್ವಾಯತ್ತತೆ ಮರೀಚಿಕೆಯಾಗಿದೆ ಎನ್ನುವ ಆರೋಪವಿದೆ.
ಈ ಹಿಂದೆ ಅಕಾಡೆಮಿಗಳ ಕಾರ್ಯವ್ಯಾಪ್ತಿ ಅನುಸಾರ ವಾರ್ಷಿಕ ಅನುದಾನ ಒದಗಿಸುತ್ತಿದ್ದ ಸರ್ಕಾರ, ವಿವಿಧ ಯೋಜನೆಗಳಿಗೆ ವಿಶೇಷ ಅನುದಾನವನ್ನೂ ನೀಡುತ್ತಿತ್ತು. 2018ಕ್ಕೂ ಮೊದಲು ಸಾಹಿತ್ಯ, ನಾಟಕ ಸೇರಿ ಪ್ರಮುಖ ಅಕಾಡೆಮಿಗಳಿಗೆ ₹1.5 ಕೋಟಿಗೂ ಅಧಿಕ ವಾರ್ಷಿಕ ಅನುದಾನ ನೀಡಲಾಗುತ್ತಿತ್ತು. ಈಗ ಆ ಅನುದಾನ ₹80 ಲಕ್ಷಕ್ಕೆ ಇಳಿಕೆಯಾಗಿದೆ. ಕೊಂಕಣಿ ಸಾಹಿತ್ಯ ಅಕಾಡೆಮಿಗೆ 2018- 19ನೇ ಸಾಲಿನಲ್ಲಿ ₹70 ಲಕ್ಷ ನೀಡಿದ್ದ ಇಲಾಖೆ, 2019-20ನೇ ಸಾಲಿನಲ್ಲಿ ₹40 ಲಕ್ಷಕ್ಕೆ ಇಳಿಕೆ ಮಾಡಿತ್ತು. ನಂತರದ ಮೂರು ವರ್ಷಗಳು ತಲಾ ₹36 ಲಕ್ಷ ನೀಡಿದೆ. ಇದೇ ರೀತಿ, ಕೊಡವ ಸಾಹಿತ್ಯ ಅಕಾಡೆಮಿ, ಬ್ಯಾರಿ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿಯ ಅನುದಾನದಲ್ಲಿಯೂ ಇಳಿಕೆಯಾಗಿದೆ.
‘ಈಗ ನೀಡಲಾಗುತ್ತಿರುವ ಅನುದಾನದಲ್ಲಿ ದೀರ್ಘಾವಧಿ ಯೋಜನೆಗಳನ್ನು ರೂಪಿಸುವುದು ಕಷ್ಟಸಾಧ್ಯ. ಆದ್ದರಿಂದ ವಾರ್ಷಿಕ ಕಾರ್ಯಚಟುವಟಿಕೆಗಳನ್ನು ಮಾತ್ರ ಮುಂದುವರಿಸುತ್ತಿದ್ದೇವೆ. ಇರುವ ಅನುದಾನದಲ್ಲಿಯೇ ಶಿಬಿರ, ಕಾರ್ಯಾಗಾರಗಳನ್ನು ಮಾಡುತ್ತಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಕಾಡೆಮಿ ಅಧ್ಯಕ್ಷರೊಬ್ಬರು ತಿಳಿಸಿದರು.
ಪ್ರವಾಹ, ಬರಗಾಲ, ಕೋವಿಡ್ ಸೇರಿ ವಿವಿಧ ಕಾರಣಗಳನ್ನು ನೀಡಿ, ಅನುದಾನವನ್ನು ಕಡಿತ ಮಾಡುತ್ತಾ ಬರಲಾಗಿದೆ. ದೀರ್ಘಾವಧಿ ಯೋಜನೆಗಳೂ ಅನುದಾನ ಇಲ್ಲದೆ, ಅರ್ಧಕ್ಕೆ ಕುಂಠಿತವಾಗಿವೆ. ಸದ್ಯ ನೀಡುತ್ತಿರುವ ವಾರ್ಷಿಕ ಅನುದಾನದಲ್ಲಿ ಅರ್ಧದಷ್ಟು ಹಣ ಸಿಬ್ಬಂದಿ ವೇತನ ಸೇರಿ ವಿವಿಧ ಆಡಳಿತಾತ್ಮ ವೆಚ್ಚಕ್ಕೆ ಬಳಕೆಯಾಗುತ್ತಿದೆ. ಇದರಿಂದಾಗಿ ಅಕಾಡೆಮಿಗಳು ಪುಸ್ತಕ ಪ್ರಕಟಣೆ, ಕಾರ್ಯಾಗಾರ, ಶಿಬಿರ, ಪ್ರಶಸ್ತಿ ಪ್ರದಾನದಂತಹ ಚಟುವಟಿಕೆಗಳಿಗೆ ಸೀಮಿತಗೊಳ್ಳುತ್ತಿವೆ. ಸರ್ಕಾರದಿಂದ ನೇಮಕವಾದ ಕಾರ್ಯಕಾರಿ ಸಮಿತಿಗಳು, ಅನುದಾನಕ್ಕೆ ಪಟ್ಟು ಹಿಡಿಯದ ಪರಿಣಾಮ ಅಲ್ಪ ಧನಕ್ಕೆ ತೃಪ್ತಿಕೊಳ್ಳಬೇಕಾಗಿದೆ.
ಕರ್ನಾಟಕ ನಾಟಕ ಅಕಾಡೆಮಿಯು 2018ರಲ್ಲಿ ಹಮ್ಮಿಕೊಂಡಿದ್ದ ರಂಗಭೂಮಿ ವಿಷಯ ವಸ್ತುಗಳ ಡಿಜಿಟಲೀಕರಣ ಈವರೆಗೂ ಪೂರ್ಣಗೊಂಡಿಲ್ಲ. ಇದಕ್ಕೆ ಒಟ್ಟು ₹20 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಗ್ರಾಫಿಕ್ ಸ್ಟುಡಿಯೊದ ಶಂಕುಸ್ಥಾಪನೆ ನೆರವೇರಿ ಏಳು ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ಬೆಂಗಳೂರಿನ ಕಲಾಗ್ರಾಮದಲ್ಲಿರುವ ಗ್ರಾಫಿಕ ಸ್ಟುಡಿಯೊ ಕಟ್ಟಡ ಪಾಳು ಬಿದ್ದಿದೆ. ಇದೇ ರೀತಿ, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಕಲಾವಿದರ ಸಾಕ್ಷ್ಯಚಿತ್ರ ನಿರ್ಮಾಣ ಸೇರಿ ವಿವಿಧ ಯೋಜನೆಗಳು ಅನುದಾನದ ಕೊರತೆ ಎದುರಿಸಿವೆ.
‘ಸಾಂಸ್ಕೃತಿಕ ಕೇಂದ್ರಗಳಲ್ಲಿಯೂ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಇದರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಕಾಡೆಮಿ–ಪ್ರಾಧಿಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಅನುದಾನವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಳ ಮಾಡುತ್ತಾ ಹೋಗುವ ಬದಲು, ಇರುವ ಅನುದಾನವನ್ನೂ ಕಡಿತ ಮಾಡಲಾಗುತ್ತಿದೆ. ಈ ಬಗ್ಗೆ ಅಕಾಡೆಮಿ–ಪ್ರಾಧಿಕಾರಗಳ ಅಧ್ಯಕ್ಷರೂ ಸರ್ಕಾರಗಳ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಇದು ನಮ್ಮ ವಿಪರ್ಯಾಸ’ ಎಂದು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರೂ ಆಗಿರುವ ಲೇಖಕರೊಬ್ಬರು ಬೇಸರ ವ್ಯಕ್ತಪಡಿಸಿದರು.
ಅಧಿಕಾರದ ಅಭದ್ರತೆ: ಸರ್ಕಾರಗಳು ಬದಲಾದಂತೆ ಸಾಂಸ್ಕೃತಿಕ ಅಕಾಡೆಮಿಗಳ ಕಾರ್ಯಕಾರಿ ಸಮಿತಿಯನ್ನೂ ಬದಲಾಯಿಸುವ ಸಂಪ್ರದಾಯ ಪ್ರಾರಂಭವಾಗಿದೆ. ಆದೇಶ ಪ್ರತಿಯಲ್ಲಿಯೇ ‘ಅಧ್ಯಕ್ಷರ ಹಾಗೂ ಸದಸ್ಯರ ಅಧಿಕಾರವಧಿ ಮೂರು ವರ್ಷಗಳು ಅಥವಾ ಮುಂದಿನ ಆದೇಶದವರೆಗೆ’ ಎಂದು ತಿಳಿಸಲಾಗುತ್ತಿದೆ. ಇದರಿಂದಾಗಿ ಕೆಲ ಸಂದರ್ಭದಲ್ಲಿ ಅಕಾಡೆಮಿಗಳ ಕಾರ್ಯಕಾರಿ ಸಮಿತಿಯ ಅಧಿಕಾರವಧಿ ಮೂರು ವರ್ಷಗಳು ಪೂರ್ಣಗೊಳ್ಳುವ ಮುನ್ನವೇ, ಹೊಸ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬರುತ್ತಿದೆ. ಸರ್ಕಾರಗಳು ಅಸ್ಥಿರಗೊಂಡಾಗಲೆಲ್ಲ ಅಕಾಡೆಮಿಗಳ ಅಧ್ಯಕ್ಷರಿಗೂ ಅಧಿಕಾರದ ಅಭದ್ರತೆ ಕಾಡಲಿದೆ. ಇನ್ನೊಂದೆಡೆ, ಅಧಿಕಾರಕ್ಕೇರಿದ ಹೊಸ ಕಾರ್ಯಕಾರಿ ಸಮಿತಿಗಳಿಗೆ ಹಿಂದಿನ ಯೋಜನೆಗಳನ್ನು ಮುಂದುವರಿಸುವ ಖಚಿತತೆಯೂ ಇಲ್ಲವಾಗಿದೆ.
ಕಾರ್ಯಕಾರಿ ಸಮಿತಿಯ ಅಧಿಕಾರವಧಿ ಮುಗಿದ ಬಳಿಕ, ಚುನಾವಣೆ ಸೇರಿ ವಿವಿಧ ಕಾರಣಗಳಿಂದ ಸರ್ಕಾರಗಳು ಹೊಸ ಕಾರ್ಯಕಾರಿ ಸಮಿತಿ ನೇಮಿಸಲು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಕೆಲ ತಿಂಗಳು ಅಥವಾ ವರ್ಷಾನುಗಟ್ಟಲೆ ಕಾರ್ಯಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿ, ನಿಷ್ಕ್ರಿಯವಾಗುತ್ತಿವೆ. ಪರಿಣಾಮ, ಪ್ರಶಸ್ತಿ ಪ್ರದಾನದಂತಹ ವಾರ್ಷಿಕ ಚಟುವಟಿಕೆಗಳು ಸ್ಥಗಿತವಾಗಿ, ಒಮ್ಮೆಲೆಯೇ ಎರಡು ಮೂರು ವರ್ಷಗಳ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ.
ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಅಕಾಡೆಮಿಗಳ ಕಾರ್ಯಕಾರಿ ಸಮಿತಿ ಅವಧಿಯು 2022ರ ಅ.15ರಂದು ಮುಕ್ತಾಯವಾಗಿತ್ತು. ವಿಧಾನಸಭೆ ಚುನಾವಣೆಗೆ ಆಗ ಅರು ತಿಂಗಳು ಉಳಿದಿದ್ದವು. ಆದ್ದರಿಂದ ತಾತ್ಕಾಲಿಕ ಸಮಿತಿ ರಚಿಸುವ ಅಥವಾ ಹಾಲಿ ಸಮಿತಿಯ ಅಧಿಕಾರವಧಿ ವಿಸ್ತರಿಸುವ ಗೋಜಿಗೆ ಸರ್ಕಾರ ಹೋಗಲಿಲ್ಲ. ಬಳಿಕ ಅಧಿಕಾರಕ್ಕೇರಿದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹತ್ತು ತಿಂಗಳಾದ ಬಳಿಕ ನೇಮಕಾತಿ ಪ್ರಕ್ರಿಯೆ ನಡೆಸಿತು. ಇದರಿಂದಾಗಿ ಸುಮಾರು 15 ತಿಂಗಳು ಅಕಾಡೆಮಿಗಳಿಗೆ ಕಾರ್ಯಕಾರಿ ಸಮಿತಿಯೇ ಇರಲಿಲ್ಲ. ಇಲಾಖೆಯ ಜಂಟಿ ನಿರ್ದೇಶಕರೇ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.
‘ಅಕಾಡೆಮಿ–ಪ್ರಾಧಿಕಾರಗಳ ಅಧ್ಯಕ್ಷ ಹುದ್ದೆಗೆ ನಡೆಯುತ್ತಿರುವ ಲಾಬಿ, ರಾಜಕೀಯ ಹಸ್ತಕ್ಷೇಪ ಸೇರಿ ಇತ್ತೀಚಿನ ಬೆಳವಣಿಗೆಗಳು ಬೇಸರವನ್ನುಂಟು ಮಾಡಿದೆ. ರಾಜಕೀಯ ಪಕ್ಷದ ಕಚೇರಿಯಲ್ಲಿ ನಡೆಯುವ ಸಭೆಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳ ಅಧ್ಯಕ್ಷರು ಪಾಲ್ಗೊಳ್ಳುವುದು ವಿಪರ್ಯಾಸ. ಅಧ್ಯಕ್ಷರಾದವರು ಒಂದು ಪಕ್ಷದ ಕಾರ್ಯಕರ್ತರ ರೀತಿ ವರ್ತಿಸಿದರೆ ಅದು ಸಾಂಸ್ಕೃತಿಕ ಜಗತ್ತಾಗದೆ, ರಾಜಕೀಯ ಜಗತ್ತಾಗುತ್ತದೆ. ಪಕ್ಷದವರೂ ಸಾಂಸ್ಕೃತಿಕ ಕೇಂದ್ರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು’ ಎಂದು ಅಕಾಡೆಮಿಯ ಮಾಜಿ ಅಧ್ಯಕ್ಷರೊಬ್ಬರು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗ್ರಾಫಿಕ್ ಸ್ಟುಡಿಯೊ ಕಟ್ಟಡ ಪಾಳು ಬಿದ್ದಿರುವುದು
-ಪ್ರಜಾವಾಣಿ ಚಿತ್ರ
ಜಾರಿಯಾಗದ ಸಾಂಸ್ಕೃತಿಕ ನೀತಿ
ಅಕಾಡೆಮಿ–ಪ್ರಾಧಿಕಾರಗಳಿಗೆ ಸ್ವಾಯತ್ತತೆ ಕಲ್ಪಿಸುವಿಕೆ ಸೇರಿ ರಾಜ್ಯ ಸರ್ಕಾರದ ‘ಸಾಂಸ್ಕೃತಿಕ ನೀತಿ’ ಏನಿರಬೇಕು ಎಂಬುದರ ಕುರಿತು ವರದಿ ಸಿದ್ಧಪಡಿಸಿ ಹತ್ತು ವರ್ಷಗಳಾದರೂ ಶಿಫಾರಸುಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಸಾಂಸ್ಕೃತಿಕ ನೀತಿ ರಚನೆಗೆ ಸಂಬಂಧಿಸಿದಂತೆ 2013ರ ಆ.8ರಂದು ಸಿದ್ದರಾಮಯ್ಯ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರವು ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ‘ಸಮಗ್ರ ಸಾಂಸ್ಕೃತಿಕ ನೀತಿ ನಿರೂಪಣಾ ಸಮಿತಿ’ ರಚಿಸಿತ್ತು. ಈ ಸಮಿತಿಯು 2014ರ ಜೂನ್ 25ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರ ಪರಾಮರ್ಶೆಗೆ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿತ್ತು.
ಸಣ್ಣ ಪುಟ್ಟ ತಿದ್ದುಪಡಿಯೊಂದಿಗೆ ಸಚಿವ ಸಂಪುಟದ ಒಪ್ಪಿಗೆ ಪಡೆದ ಸರ್ಕಾರ, 2017ರ ಅ.10ರಂದು ಶಿಫಾರಸುಗಳ ಜಾರಿಗೆ ಆದೇಶ ಹೊರಡಿಸಿತ್ತು. ಆದರೆ, ಸಮಿತಿ ಮಾಡಿದ್ದ 44 ಶಿಫಾರಸುಗಳ ಪೈಕಿ, ‘ಅಕಾಡೆಮಿಗಳ ಅಧ್ಯಕ್ಷರ ಆಯ್ಕೆಗೆ ಶೋಧನಾ ಸಮಿತಿ ರಚನೆ’ ಸೇರಿ ಕೆಲವೊಂದು ಶಿಫಾರಸುಗಳನ್ನು ಕೈಬಿಡಲಾಗಿತ್ತು. ಇದಕ್ಕೆ ಸಾಂಸ್ಕೃತಿಕ ವಲಯದಲ್ಲಿ ವಿರೋಧವೂ ವ್ಯಕ್ತವಾಗಿತ್ತು. ಸಾಂಸ್ಕೃತಿಕ ನೀತಿಗೆ ಸಂಬಂಧಿಸಿದ ಶಿಫಾರಸುಗಳ ಜಾರಿಗೆ ಸರ್ಕಾರ ಆದೇಶ ಹೊರಡಿಸಿದ್ದರೂ ಬಹುತೇಕ ಶಿಫಾರಸುಗಳು ಕಡತದಲ್ಲಿಯೇ ಇವೆ.
ಸಾಂಸ್ಕೃತಿಕ ನೀತಿಗೆ ಸಂಬಂಧಿಸಿದಂತೆ ಈ ಹಿಂದೆ ಹೊರಡಿಸಿದ ಆದೇಶದಲ್ಲಿ ಅಕಾಡೆಮಿ ಹಾಗೂ ಪ್ರಾಧಿಕಾರಗಳ ನೇಮಕಾತಿ ಹಾಗೂ ಸಬಲೀಕರಣದ ಬಗ್ಗೆ ವಿವರಿಸಲಾಗಿತ್ತು. ‘ಅಧ್ಯಕ್ಷರು ಹಾಗೂ ಸದಸ್ಯರ ಅವಧಿ ಮುಗಿದ ನಂತರವೂ ಹೊಸ ನೇಮಕಾತಿ ಆಗುವವರೆಗೆ ಅವರನ್ನೇ ಮುಂದುವರಿಸಬೇಕು’ ಎಂದು ತಿಳಿಸಲಾಗಿತ್ತು. ಆದರೆ, ಇದು ಪಾಲನೆಯಾಗುತ್ತಿಲ್ಲ.
‘ಇಷ್ಟು ವರ್ಷಗಳಲ್ಲಿ ಕೆಲವೊಂದು ಶಿಫಾರಸುಗಳನ್ನು ಮಾತ್ರ ಜಾರಿ ಮಾಡಲಾಗಿದೆ. ಆಗ ಕಾಂಗ್ರೆಸ್ ಸರ್ಕಾರವೇ ಸಮಿತಿ ರಚಿಸಿ, ವರದಿ ಸ್ವೀಕರಿಸಿತ್ತು. ಮತ್ತೆ ಅದೇ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಈ ಶಿಫಾರಸುಗಳ ಜಾರಿಗೆ ಆದ್ಯತೆ ನೀಡಬೇಕು’ ಎಂದು ಆಗ್ರಹಿಸುತ್ತಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ.
ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಭಾಷೆಗೆ ಸಂಬಂಧಿಸಿದ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಕಾರ್ಯಕಾರಿ ಸಮಿತಿಗಳು, ಆಳುವ ಪಕ್ಷದ ಅಡಿಯಾಳಾಗದೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಕಲೆ ಹಾಗೂ ಕಲಾವಿದರ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕೆನ್ನುವುದು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರ ಒತ್ತಾಸೆ.
ಸಾಂಸ್ಕೃತಿಕ ನೀತಿಯ ಶಿಫಾರಸುಗಳು
ಜಾರಿಯಾಗದ ಪ್ರಮುಖ ಶಿಫಾರಸುಗಳು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಬಲೀಕರಣ ಮತ್ತು ಆಡಳಿತ ವಿಕೇಂದ್ರೀಕರಣ
ಜಾನಪದ ರೆಪರ್ಟರಿಗಳ ಸ್ಥಾಪನೆ
ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆ
ಸೂಫಿ ಸಂಸ್ಕೃತಿ ಮತ್ತು ತತ್ವಪದ ಅಧ್ಯಯನ ಕೇಂದ್ರ ಸ್ಥಾಪನೆ
ಪ್ರಾಕೃತ ಮತ್ತು ಪಾಲಿ ಅಧ್ಯಯನ ಕೇಂದ್ರ ಸ್ಥಾಪನೆ
ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರಕ್ಕೆ ಸ್ವತಂತ್ರ ಅಸ್ತಿತ್ವ (ತಮಿಳುನಾಡು ಮಾದರಿ)
ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಹೊರನಾಡು ಕನ್ನಡಿಗರು
ಅಕಾಡೆಮಿಗಳಿಗೆ ಸಂಪೂರ್ಣ ಸ್ವಾಯತ್ತೆ
ಜಾರಿಯಾದ ಶಿಫಾರಸುಗಳು
ಸಾಂಸ್ಕೃತಿಕ ಸಂಸ್ಥೆಗಳಿಗೆ ಧನಸಹಾಯಕ್ಕೆ ತಜ್ಞರ ಸಮಿತಿ ರಚನೆ
ಕರ್ನಾಟಕ ಯಕ್ಷಗಾನ–ಬಯಲಾಟ ಅಕಾಡೆಮಿ ಬೇರ್ಪಡಿಸುವಿಕೆ
ಯುವಜನ ಸಂಸ್ಕೃತಿ ಶಿಬಿರ
ಸಂಘ–ಸಂಸ್ಥೆಗಳಿಗೆ ಬಿಡುಗಡೆಯಾದ ಅನುದಾನದ ಸದ್ಬಳಕೆ ಬಗ್ಗೆ ಪರಿಶೀಲನೆ
ಪ್ರಶಸ್ತಿಗಳ ವಿತರಣೆಗೆ ಕಾಲ ಬದ್ಧತೆ
ಸಾಹಿತಿ ಕಲಾವಿದರಿಗೆ ಮಾಸಾಶನ
ಶಿಷ್ಯವೇತನ ಮತ್ತು ಫೆಲೋಶಿಪ್ ನೀಡುವಿಕೆ
ಅಕಾಡೆಮಿ, ಪ್ರಾಧಿಕಾರ: ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರ ಒತ್ತಾಯ
ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸ್ವಾಯತ್ತತೆ ಒದಗಿಸಬೇಕು
ಕ್ರಿಯಾಯೋಜನೆಗೆ ಅನುಗುಣವಾಗಿ ಅನುದಾನ ಒದಗಿಸಬೇಕು
ರಾಜಕೀಯ ಪಕ್ಷಗಳ ಹಸ್ತಕ್ಷೇಪ ತಪ್ಪಬೇಕು
ಸರ್ಕಾರಗಳು ಬದಲಾದಂತೆ ಕಾರ್ಯಕಾರಿ ಸಮಿತಿ ಬದಲಾಯಿಸದೆ ಅಧಿಕಾರ ಪೂರ್ಣಗೊಳ್ಳಲು ಅವಕಾಶ ನೀಡಬೇಕು
ಪ್ರಶಸ್ತಿಗಳ ಆಯ್ಕೆಯಲ್ಲಿ ಸರ್ಕಾರದ ಹಸ್ತಕ್ಷೇಪ, ಲಾಬಿಗೆ ಮಣಿಯಬಾರದು
ಆಯಾ ಕ್ಷೇತ್ರದ ಸಾಧಕರು, ಕ್ರಿಯಾಶೀಲರಿಗೆ ಅಧ್ಯಕ್ಷ ಹುದ್ದೆ ನೀಡಬೇಕು
ಅಧ್ಯಕ್ಷರ ನೇಮಕಾತಿಗೆ ಕುಲಪತಿಗಳ ಆಯ್ಕೆಯ ರೀತಿಯಲ್ಲೇ ಒಂದು ಶೋಧನಾ ಸಮಿತಿ ರಚಿಸಿ, ಆಯ್ಕೆ ಮಾಡಬೇಕು
ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯಲ್ಲಿ ಇರುವವರು ರಾಜಕೀಯ ಪಕ್ಷದ ಕಾರ್ಯಕರ್ತರ ರೀತಿ ವರ್ತನೆ ಹಾಗೂ ಯೋಚನೆ ಮಾಡಬಾರದು
‘ಸಾಂಸ್ಕೃತಿಕ ಸ್ವಾಯತ್ತತೆ ಒದಗಿಸಬೇಕು’
ದೇವರಾಜ ಅರಸು ನೇತೃತ್ವದ ಸರ್ಕಾರವು ಸಾಹಿತ್ಯದ ಜೊತೆಗೆ ಜಾನಪದ ಮತ್ತು ಯಕ್ಷಗಾನ, ಸಂಗೀತ ಮತ್ತು ನೃತ್ಯ ಹಾಗೂ ನಾಟಕ ಅಕಾಡೆಮಿಗಳ ರಚನೆಗೆ ನಿರ್ಧಾರ ಕೈಗೊಂಡು ಆದೇಶ ಹೊರಡಿಸಿತು. ಆಗ ಅಕಾಡೆಮಿಗಳ ಕಾರ್ಯ ಸ್ವರೂಪದ ಬಗ್ಗೆ ಒಂದು ‘ಸನ್ನದು’ ಇತ್ತು. ಅದು ಅಕಾಡೆಮಿಗಳಿಗೆ ಸಾಂಸ್ಕೃತಿಕವಾಗಿ ಸಂಪೂರ್ಣ ಸ್ವಾಯತ್ತತೆ ನೀಡಿತ್ತು. ಬಳಿಕ, ಸನ್ನದು ಬದಲಾಯಿಸಿ ಅಕಾಡೆಮಿಗಳ ನಿಯಮಾವಳಿ ರೂಪಿಸಲಾಯಿತು. ಆ ನಿಯಮಾವಳಿಗಳು ಅಕಾಡೆಮಿಗಳಿಗೆ ನಿಯಂತ್ರಣಗಳನ್ನು ಹೇರಿದವು. ಆರ್ಥಿಕ ನಿಯಂತ್ರಣ ಇರಲಿ, ಆದರೆ, ಸಾಂಸ್ಕೃತಿಕ ಸ್ವಾಯತ್ತತೆ ಒದಗಿಸಬೇಕು. ‘ಅಕಾಡೆಮಿ’ ಎನ್ನುವ ಪದವೇ ‘ಅಕಾಡೆಮಿಕ್’ ಕೆಲಸ ಮಾಡಬೇಕೆಂದು ಸೂಚಿಸುತ್ತದೆ. ಪ್ರತಿ ಅಕಾಡೆಮಿಯೂ ಸ್ಥಳೀಯ ಸಂಸ್ಕೃತಿಯ ಆದ್ಯತೆಯೊಂದಿಗೆ ತಮ್ಮ ಕ್ಷೇತ್ರದಲ್ಲಿ ಅಂತರ ರಾಜ್ಯ ಸಂಬಂಧ ಸ್ಥಾಪಿಸಿಕೊಂಡು ಕೊಳು ಕೊಡುಗೆಯ ಕಾರ್ಯಕ್ರಮ ಗಳಿಗೂ ಅವಕಾಶ ಕಲ್ಪಿಸಬೇಕು.–ಬರಗೂರು ರಾಮಚಂದ್ರಪ್ಪ, ಸಾಹಿತಿ
‘ಸರ್ಕಾರದ ಹಸ್ತಕ್ಷೇಪ ಇರಬಾರದು’
ಅಕಾಡೆಮಿಗಳು, ಪ್ರಾಧಿಕಾರಗಳು ಸೇರಿ ಸಾಂಸ್ಕೃತಿಕ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಮಾಡಬಾರದು. ಈ ಕೇಂದ್ರಗಳ ಮೇಲೆ ಸರ್ಕಾರದ ಹಸ್ತಕ್ಷೇಪವೂ ಇರಬಾರದು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹಸ್ತಕ್ಷೇಪ ಕಾಣುತ್ತಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಡೀ ಸರ್ಕಾರಕ್ಕೆ ಮುಖ ಇದ್ದಂತೆ. ಈ ಇಲಾಖೆಯಲ್ಲಿ ದುಂದುವೆಚ್ಚ ಕಡಿಮೆ. ಆದ್ದರಿಂದ ಅನುದಾನ ನೀಡುವಾಗ ಮೀನಾಮೇಷ ಮಾಡಬಾರದು. ನೆಮ್ಮದಿಯ ಜೀವನಕ್ಕೆ ಕಲೆ ಮತ್ತು ಸಾಹಿತ್ಯ ಅಗತ್ಯ. ಅಕಾಡೆಮಿಗಳ ಕ್ರಿಯಾಯೋಜನೆಗಳಿಗೆ ಅನುದಾನ ಅಗತ್ಯವಿದ್ದಲ್ಲಿ ಸರ್ಕಾರ ಒದಗಿಸಬೇಕು.–ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ನಿರ್ದೇಶಕ
‘ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು’
ಅಕಾಡೆಮಿ, ಪ್ರಾಧಿಕಾರಗಳಿಗೆ ಸಂಬಂಧಿಸಿದಂತೆ ನೇಮಕಾತಿಯಿಂದ ಹಿಡಿದು, ಕಾರ್ಯಚಟುವಟಿಕೆವರೆಗೆ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಇದರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ. ವಿಷಯ ತಜ್ಞರು ಈ ಕೇಂದ್ರಗಳನ್ನು ಮುನ್ನಡೆಸಬೇಕು. ಸರ್ಕಾರದ ಹಸ್ತಕ್ಷೇಪ ತಪ್ಪಬೇಕು. ಅವುಗಳಿಗೆ ಪೂರ್ಣ ಪ್ರಮಾಣದಲ್ಲಿ ಸ್ವಾಯತ್ತತೆ ನೀಡಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು.–ವೈ.ಕೆ. ಮುದ್ದುಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ನಿರ್ದೇಶಕ
‘ಸಾಂಸ್ಕೃತಿಕ ನೀತಿ ಜಾರಿಗೊಳಿಸಬೇಕು’
ಅಕಾಡೆಮಿಗಳಿಗೆ ಸ್ವಾಯತ್ತತೆ ಅಗತ್ಯ. ಇದು ಸಾಕಾರವಾಗಲು ಸಾಂಸ್ಕೃತಿಕ ನೀತಿಯ ಶಿಫಾರಸುಗಳನ್ನು ಆದ್ಯತೆ ಮೇರೆಗೆ ಜಾರಿ ಮಾಡಬೇಕು. ಸರ್ಕಾರಗಳು ಬದಲಾದ ಕೂಡಲೇ ಅಕಾಡೆಮಿ ಮುಂತಾದ ಸಾಂಸ್ಕೃತಿಕ ಕೇಂದ್ರಗಳ ನೇಮಕಾತಿಯನ್ನು ರದ್ದು ಮಾಡುವುದು ಅತ್ಯಂತ ಖೇದಕರ. ಬರಗೂರು ಸಮಿತಿ ಶಿಫಾರಸಿನಂತೆ ಸಾಂಸ್ಕೃತಿಕ ಕೇಂದ್ರಗಳ ಅಧ್ಯಕ್ಷರು ತಮ್ಮ ಅವಧಿ ಪೂರೈಸುವುದಕ್ಕೆ ಅನುವು ಮಾಡಿಕೊಡಬೇಕು. ಸಮಿತಿಯ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡು ಆದೇಶ ಹೊರಡಿಸಿದರೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅದನ್ನು ಜಾರಿಗೊಳಿಸದಿರುವುದು ವಿಪರ್ಯಾಸ.–ಜೆ. ಲೋಕೇಶ್, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ
‘ಸೂಕ್ತ ಕ್ರಿಯಾಯೋಜನೆ ರೂಪಿಸಬೇಕು’
ಪ್ರತಿಯೊಂದು ಅಕಾಡೆಮಿ, ಪ್ರಾಧಿಕಾರಗಳಿಗೆ ಅದರದೆಯಾದ ರೂಪುರೇಷೆ, ಕಾರ್ಯಯೋಜನೆ ವ್ಯಾಪ್ತಿ ಇರುತ್ತದೆ. ಮೊದಲು ಬೈಲಾದಲ್ಲಿನ ನಿಯಮಾವಳಿ ಏನಿದೆ ಅನ್ನುವುದನ್ನು ಅರಿತು, ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಕಾರ್ಯಪ್ರವೃತ್ತರಾಗಬೇಕು. ಸ್ವಾಯತ್ತತೆಯನ್ನು ಉಳಿಸಿಕೊಂಡು, ಕಾರ್ಯವ್ಯಾಪ್ತಿಯಡಿ ಕೆಲಸ ಮಾಡಬೇಕು. ಯಾವುದೇ ಪಕ್ಷದ ಹಿಡಿತಕ್ಕೆ ಒಳಗಾಗಬಾರದು. ಸೂಕ್ತ ಕ್ರಿಯಾಯೋಜನೆಯನ್ನು ರೂಪಿಸಬೇಕು. ಅವುಗಳಿಗೆ ಸರ್ಕಾರ ಅಗತ್ಯ ಅನುದಾನ ನೀಡಬೇಕು. ವಾರ್ಷಿಕ ಅನುದಾನದ ಜತೆಗೆ ವಿಶೇಷ ಅನುದಾನ ಪಡೆಯಲು ಅವಕಾಶವಿದೆ. ಆದ್ದರಿಂದ ಯೋಜನೆಗಳಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವರಿಕೆ ಮಾಡಿಸಬೇಕು. ಪ್ರಕಟಿತ ಪುಸ್ತಕಗಳು, ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳಬೇಕು.–ಡಾ. ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.