ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೀಕ್ಷಕ ವಿವರಣೆಗಾರ್ತಿ ಸಂದರ್ಶನ: ಅಮೆರಿಕ ಹೆಣ್ದನಿಯಲ್ಲಿ ಕೇಳಿ ಕ್ರಿಕೆಟ್‌ ಬನಿ

ಮಹಾರಾಜ ಟ್ರೋಫಿ ಕ್ರಿಕೆಟ್
Published : 20 ಸೆಪ್ಟೆಂಬರ್ 2024, 23:30 IST
Last Updated : 20 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments
ಅಮೆರಿಕದಲ್ಲಿ ಕ್ರಿಕೆಟ್‌ ಬೆಳೆಯಲು ಭಾರತೀಯರ ಕಾಣಿಕೆ ಪ್ರಮುಖವಾಗಿದೆ. ಇದರಲ್ಲಿ ಮಹಿಳೆಯರ ಪಾತ್ರವೂ ಮುಖ್ಯವಾಗಿದೆ. ಭಾರತದ ಶಿಬಾನಿ ಭಾಸ್ಕರ್ ಅವರು ಆಟಗಾರ್ತಿಯಾಗಿ ಮತ್ತು ಇಂಗ್ಲಿಷ್ ವೀಕ್ಷಕ ವಿವರಣೆಗಾರ್ತಿಯಾಗಿ ಅಮೆರಿಕದ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.

ಬೇಸ್‌ಬಾಲ್, ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್ ಮತ್ತಿತರ ಕ್ರೀಡೆಗಳಲ್ಲಿ ಅಗ್ರಮಾನ್ಯ ಸಾಧನೆ ಮಾಡಿರುವ ಅಮೆರಿಕದಲ್ಲಿ ಈಗ ಕ್ರಿಕೆಟ್ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಭಾರತೀಯರು. ಅಮೆರಿಕದಲ್ಲಿ ಕ್ರಿಕೆಟ್‌ಗಾಗಿ ಹೊಸ ಮಾರುಕಟ್ಟೆಯೊಂದು ಸೃಷ್ಟಿಯಾಗಿದೆ. ಪುರುಷರಷ್ಟೇ ಅಲ್ಲ. ಮಹಿಳೆಯರ ಕ್ರಿಕೆಟ್ ಕೂಡ ಪ್ರವರ್ಧಮಾನಕ್ಕೆ ಬರುತ್ತಿದೆ. 

ಅಮೆರಿಕದ ಕ್ರಿಕೆಟ್‌ನಲ್ಲಿ ಒಂದು ವೈಶಿಷ್ಟ್ಯವಿದೆ. ಸಾಂಪ್ರದಾಯಿಕ ಎದುರಾಳಿಗಳೆಂದೇ ಅಭಿಮಾನಿಗಳ ವಲಯದಲ್ಲಿ ಬಿಂಬಿತವಾಗಿರುವ ಭಾರತ ಮತ್ತು ಪಾಕಿಸ್ತಾನ ದೇಶಗಳು ಅಮೆರಿಕದಲ್ಲಿ ಒಂದು ತಂಡವಾಗಿ ಆಡುವುದೇ ಆ ವಿಶೇಷ. ಅದು ಪುರುಷ ಮತ್ತು ಮಹಿಳಾ ವಿಭಾಗದ ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿದೆ. ಇಂತಹ ವೈವಿಧ್ಯತೆ ಮತ್ತು ಸ್ವಾರಸ್ಯಗಳ ಬಗ್ಗೆ 29 ವರ್ಷದ ಶಿಬಾನಿ ಭಾಸ್ಕರ್ ಅವರು ಇಲ್ಲಿ ಮಾತನಾಡಿದ್ದಾರೆ. ಈಚೆಗೆ ಬೆಂಗಳೂರಿನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ‘ಸ್ಟಾರ್ ಸ್ಪೋರ್ಟ್ಸ್‘ ಇಂಗ್ಲಿಷ್ ವಾಹಿನಿಯಲ್ಲಿ ಕಾಮೆಂಟೆಟರ್ ಆಗಿ ಕಾರ್ಯನಿರ್ವಹಿಸಿದರು. ಅಮೆರಿಕ ಮಹಿಳಾ ತಂಡದಲ್ಲಿ ಸುಮಾರು ಹತ್ತು ವರ್ಷ ಆಡಿರುವ ಶಿಬಾನಿ ವಿಶ್ವದ ಪ್ರಮುಖ ಕ್ರಿಕೆಟ್ ರಾಷ್ಟ್ರಗಳ ಕೆಲವು ಕ್ಲಬ್‌ಗಳಲ್ಲಿ ಆಡಿದ್ದಾರೆ. ಅಮೆರಿಕ ತಂಡದ ನಾಯಕಿಯಾಗಿಯೂ ಅವರು ಆಡಿದ್ದಾರೆ.  ವಿಕೆಟ್‌ಕೀಪರ್ –ಬ್ಯಾಟರ್ ಶಿಬಾನಿ ಅವರು 14 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಕೆಲವು ವರ್ಷಗಳ ಹಿಂದೆ ಗಾಯಗೊಂಡಿದ್ದರಿಂದ ಆಟದಿಂದ ದೂರವುಳಿದಿದ್ದರು. ಆದರೆ ಈಗ ಮತ್ತೆ ಅಮೆರಿಕ ತಂಡಕ್ಕೆ ಮರಳುವ ಸಿದ್ಧತೆಯಲ್ಲಿದ್ದಾರೆ. 

ಪ್ರ

ಈಚೆಗೆ ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಆತಿಥೇಯ ಅಮೆರಿಕ ತಂಡದಲ್ಲಿ ಭಾರತ ಮತ್ತು ಪಾಕ್ ತಂಡಗಳ ಆಟಗಾರರಿದ್ದರು. ಮಹಿಳಾ ತಂಡದಲ್ಲಿಯೂ ಇದೇ ರೀತಿ ಇದೆಯೇ? ಎರಡು ದೇಶಗಳ ನಡುವಣ ವೈರತ್ವ ಇಲ್ಲಿ ಪರಿಣಾಮ ಬೀರುವುದಿಲ್ಲವೇ?

ಅಮೆರಿಕ ತಂಡದಲ್ಲಿ ಭಾರತ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ  ದೇಶಗಳ ಆಟಗಾರರೊಂದಿಗೆ ಸೇರಿ ಆಡುತ್ತೇವೆ. ಈ ವೈವಿಧ್ಯತೆ ಮತ್ತು ಸೌಹಾರ್ದತೆಯೇ ಅಮೆರಿಕ ತಂಡವನ್ನು ಬಲಾಢ್ಯವನ್ನಾಗಿಸಿದೆ. ಮಹಿಳಾ ತಂಡದಲ್ಲಿಯೂ ಭಾರತದ ಆಟಗಾರ್ತಿಯರು ಹೆಚ್ಚು ಸಂಖ್ಯೆಯಲ್ಲಿ
ದ್ದೇವೆ. ಜೊತೆಗೆ ಪಾಕ್, ಶ್ರೀಲಂಕಾ ಮತ್ತು ವೆಸ್ಟ್‌ ಇಂಡೀಸ್ ಮೂಲದವರೂ ಇದ್ದಾರೆ. ವೈವಿಧ್ಯತೆ ಇದೆ. ಆದರೆ ವೈಮನಸ್ಸು ಇಲ್ಲ. ನಮ್ಮೆಲ್ಲರ  ದೇಶ, ಭಾಷೆಗಳು ವಿಭಿನ್ನವಾದರೂ ಒಂದಾಗಿ ಅಮೆರಿಕ ತಂಡಕ್ಕೆ ಆಡುತ್ತೇವೆ. ಆಟದಲ್ಲಿ ಮತ್ತು ಆಟದಾಚೆ ಸೌಹಾರ್ದತೆಯಿಂದಲೇ ಇದ್ದೇವೆ. 

ಪ್ರ

ನಿಮ್ಮ ಕ್ರಿಕೆಟ್ ಪಯಣದ ಕುರಿತು ಹೇಳಿ.

ನಾನು ಅಮೆರಿಕದಲ್ಲಿ ಜನಿಸಿದೆ. ನನ್ನ ಅಪ್ಪ ಅಮೆರಿಕದ ರಾಯಭಾರಿಯಾಗಿದ್ದಾರೆ. ಫಾರಿನ್ ಸರ್ವಿಸ್ ಅಧಿಕಾರಿಯಾಗಿರುವ ಅವರು ಭಾರತವೂ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ನನಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಮೂಡಿತು. ಕೆಲವು ವರ್ಷಗಳ ಕಾಲ ಭಾರತದಲ್ಲಿದ್ದಾಗ ವಯೋಮಿತಿಯ ಕ್ರಿಕೆಟ್‌ನಲ್ಲಿ ಬಂಗಾಳ, ತಮಿಳುನಾಡು ತಂಡಗಳಲ್ಲಿ ಆಡಿದ್ದೆ. ಮುಂಬೈನಲ್ಲಿಯೂ ಆಡಿದ್ದೆ. ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದ ದೇಶಿ ಕ್ಲಬ್‌ಗಳಲ್ಲಿ ಆಡಿದ್ದೇನೆ. 17ನೇ ವಯಸ್ಸಿನಲ್ಲಿ ಅಮೆರಿಕ ಮಹಿಳಾ ತಂಡದಲ್ಲಿ ಪದಾರ್ಪಣೆ ಮಾಡಿದೆ. ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ಆಡಿದೆ.  ನಂತರ ಅಮೆರಿಕ ತಂಡವನ್ನು ಮುನ್ನಡೆಸುವ ಅವಕಾಶವೂ ಸಿಕ್ಕಿತ್ತು.

ಪ್ರ

ಅಮೆರಿಕದಲ್ಲಿ ಈಚೆಗೆ ನಡೆದ ಪುರುಷರ ಟಿ20 ವಿಶ್ವಕಪ್ ಟೂರ್ನಿ ಯಾವ ರೀತಿ ಪ್ರಭಾವ ಬೀರಿದೆ?

ಲಾಸ್‌ ಏಂಜಲೀಸ್‌ನಲ್ಲಿ 2028ರಲ್ಲಿ ನಡೆಯುವ ಒಲಿಂಪಿಕ್ ಕೂಟದಲ್ಲಿ ಕ್ರಿಕೆಟ್ ಸೇರ್ಪಡೆಯಾಗಿದೆ. ಇದು ಅಮೆರಿಕದಲ್ಲಿ ಕ್ರಿಕೆಟ್‌ನತ್ತ ಜನರು ಒಲವು ತೋರಲು ಕಾರಣವಾಗಿದೆ. ಕ್ರಿಕೆಟ್‌ಗೆ ಸಂಬಂಧಿಸಿದ ಸೌಲಭ್ಯಗಳ ಅಭಿವೃದ್ಧಿಗಾಗಿ ಬಹಳಷ್ಟು ಸಂಪನ್ಮೂಲ ಹೂಡಿಕೆಯಾಗುತ್ತಿದೆ. ಅಲ್ಲಿ ಚಳಿಯ ವಾತಾವರಣ ಹೆಚ್ಚು ಇರುವುದರಿಂದ ಒಳಾಂಗಣ ಕ್ರಿಕೆಟ್ ಕ್ರೀಡಾಂಗಣಗಳು ಇವೆ. ಈಗಾಗಲೇ ಫ್ಲಾರಿಡಾದಲ್ಲಿ ಉತ್ತಮ ಸೌಲಭ್ಯಗಳು ಇವೆ. ನ್ಯೂಯಾರ್ಕ್‌ನಲ್ಲಿಯೂ ಕ್ರಿಕೆಟ್ ಕ್ರೀಡಾಂಗಣವಿದೆ.  ಮುಂದಿನ ಒಲಿಂಪಿಕ್ಸ್‌ ನಂತರ ಅಮೆರಿಕದಲ್ಲಿ ಕ್ರಿಕೆಟ್‌ ಬಹಳಷ್ಟು ಜನಪ್ರಿಯವಾಗುವ ನಿರೀಕ್ಷೆ ಇದೆ. ಅಲ್ಲಿಯ ಬೇಸ್‌ಬಾಲ್‌ ಕ್ರೀಡೆಯಷ್ಟೇ ಮಹತ್ವ ಪಡೆಯಬಹುದು.

ಪ್ರ

ಭಾರತದಲ್ಲಿ ಆಡುವ ಆಸೆ ಇದೆಯೇ?

ನಾನು ಅಮೆರಿಕದಲ್ಲಿ ಹುಟ್ಟಿ ಬೆಳೆದಿದ್ದು ಭಾರತ ತಂಡದಲ್ಲಿ ಆಡಲು ಆಗದು. ಆದರೆ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುವ ಗುರಿ ಇದೆ. ಅದರಲ್ಲಿ ಯಾವುದೇ ತಂಡವಾದರೂ ಸರಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಕ್ಕರಂತೂ ಬಹಳ ಖುಷಿ. ಅದಕ್ಕಿರುವ ನಿಷ್ಠಾವಂತ ಅಭಿಮಾನಿ ಬಳಗವು ಬೆರಗು ಮೂಡಿಸುತ್ತದೆ. ನಾನು ಬೆಂಗಳೂರಿಗೆ ಹಲವಾರು ಬಾರಿ ಬಂದಿರುವೆ. ಇಲ್ಲಿಯ ಹವಾಗುಣ ಮತ್ತು ಕ್ರಿಕೆಟ್‌ ಕುರಿತ ಜನರ ಪ್ರೀತಿಯನ್ನು ಮೆಚ್ಚಿಕೊಂಡಿರುವೆ.

ಪ್ರ

ಕ್ರಿಕೆಟ್ ಆಡಲು ಬಯಸುವ ಮಕ್ಕಳಿಗೆ ತಮ್ಮ ಸಲಹೆ ಏನು?

ಕ್ರಿಕೆಟ್‌ ಆಟದ ಜೊತೆಗೆ ನಾವು ಉತ್ತಮ ಅಥ್ಲೀಟ್  ಆಗಿರುವುದು ಮುಖ್ಯ. ಆದ್ದರಿಂದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬೇರೆ ಬೇರೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಓಟ, ಜಿಗಿತ, ಈಜು ಮತ್ತಿತರ ಕ್ರೀಡೆಗಳಲ್ಲಿ ಆಡುವುದರಿಂದ ಕ್ರಿಕೆಟ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಿದೆ. ನಾನು ಕೂಡ ಬಾಲ್ಯದಲ್ಲಿ ಸ್ಕೇಟಿಂಗ್, ಅಥ್ಲೆಟಿಕ್ಸ್‌ನಲ್ಲಿ ಸಕ್ರಿಯವಾಗಿದ್ದೆ. ಈಗ ಕ್ರಿಕೆಟ್ ಅಲ್ಲದೇ ಗಾಲ್ಫ್ ಕೂಡ ಆಡುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT