ಮಂಗಳವಾರ, ಮಾರ್ಚ್ 2, 2021
23 °C
ರಾಜಕೀಯ ಧ್ರುವೀಕರಣದಲ್ಲಿ ದಾಳವಾಗಿರುವ ತೈಲ ದಾಸ್ಯದಿಂದ ಸದ್ಯ ಬಿಡುಗಡೆ ಇಲ್ಲ

ಎಣೆ ಇಲ್ಲದ ಭಾರತದ ತೈಲ ಬವಣೆ

ಟಿ.ಆರ್. ಅನಂತರಾಮು Updated:

ಅಕ್ಷರ ಗಾತ್ರ : | |

Prajavani

ದೊಡ್ಡ ಪ್ರಮಾಣದಲ್ಲಿ ತೈಲ ಉತ್ಪಾದಿಸುವ ನೂರು ದೇಶಗಳ ಪೈಕಿ ಭಾರತದ ಹೆಸರು ಎಂದೂ ಇರಲಿಲ್ಲ, ಈಗಲೂ ಇಲ್ಲ. ಇದಕ್ಕೆ ವಿರುದ್ಧವಾಗಿ, ತೈಲ ಬಳಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಚೀನಾ, ಅಮೆರಿಕದ ನಂತರ ಮೂರನೆಯ ಸ್ಥಾನ ಭಾರತಕ್ಕೆ. ದಿನವೊಂದಕ್ಕೆ
ಭಾರತದ ವಾಹನಗಳಿಗೆ ಸುಮಾರು 50 ಲಕ್ಷ ಬ್ಯಾರೆಲ್ ತೈಲ ಬೇಕು. ಬ್ಯಾರೆಲ್ ಎನ್ನುವುದು ತೈಲದ ಬಳಕೆಗೆ ಬಳಸುವ ಮಾನಕ- ನಮ್ಮ ಲೆಕ್ಕದಲ್ಲಿ 150 ಲೀಟರ್. ಚೀನಾದ ಪರಿಸ್ಥಿತಿಯೂ ಅಷ್ಟೆ. ನಮಗಿಂತ ಎರಡು ಪಟ್ಟು ತೈಲ ಬೇಕು.

ಈ ಎರಡೂ ದೇಶಗಳು ತೈಲಾಧಿಪತಿಗಳ ಬಳಿ ನಿರಂತರವಾಗಿ ತಟ್ಟೆ ಹಿಡಿಯಲೇಬೇಕು. ತೈಲ, ಪ್ರಗತಿಯ ಚಕ್ರವನ್ನೇ ಉರುಳಿಸುತ್ತಿದೆ ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತಿದೆ. ಸಂಪನ್ಮೂಲದ ಪ್ರಶ್ನೆ ಬಂದಾಗ, ಯಾವ ದೇಶವೂ ಎಲ್ಲ ಸಂಪನ್ಮೂಲದಲ್ಲೂ ಸ್ವಾವಲಂಬಿ
ಯಲ್ಲ. ಕಚ್ಚಾ ತೈಲದ ವಿಚಾರದಲ್ಲಿ ಭಾರತ ಶೇಕಡ 82ರಷ್ಟು ಪಾಲು ಅವಲಂಬಿ. ಅಂಕಲೇಶ್ವರ, ಬಾಂಬೆ ಹೈ ಮತ್ತಿತರ ಮೂಲಗಳಿಂದ ಎತ್ತುತ್ತಿರುವ ತೈಲವನ್ನೆಲ್ಲ ಸಂಗ್ರಹಿಸಿದರೆ ವರ್ಷಕ್ಕೆ ಏಳು ಲಕ್ಷ ಬ್ಯಾರೆಲ್ ಉತ್ಪಾದನೆ ಅಷ್ಟೆ. ರಾವಣಾಸುರನ ಹೊಟ್ಟೆಗೆ ಅರೆಕಾಸು ಮಜ್ಜಿಗೆ.

ಮುಂದೆ ಈ ಚಿತ್ರಣ ಬದಲಾಗಬಹುದೇ? ಖಂಡಿತಾ ಬದಲಾಗುತ್ತದೆ ಎಂದು ‘ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ’ ಈ ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಿರುವ ವಿವಿಧ ದೇಶಗಳ ಶಕ್ತಿ ಸಂಪನ್ಮೂಲಗಳ ಬಳಕೆಯ ಗ್ರಾಫ್ ಖಚಿತಪಡಿಸುತ್ತದೆ. ಬದಲಾವಣೆ ಎಂದರೆ
ಅದು ಏರುಮುಖದ ಬೆಳವಣಿಗೆ. ಭಾರತವೊಂದಕ್ಕೆ 2040ರ ಹೊತ್ತಿಗೆ ದಿನವಹಿ ಒಂದು ಕೋಟಿ ಬ್ಯಾರೆಲ್ ಕಚ್ಚಾ ತೈಲ ಬೇಕಾಗುತ್ತದೆಂದು ಮುನ್ನೋಟ ನೀಡಿದೆ. ಈ ವರದಿ ವಸ್ತುನಿಷ್ಠವಾಗಿದೆ, ಎಲ್ಲೂ ಉತ್ಪ್ರೇಕ್ಷೆ ಇಲ್ಲ.

ಈಗಿನ ದರದಲ್ಲೇ ನವೀಕರಿಸಬಹುದಾದ ಇಂಧನವನ್ನು ಬಳಸಿದರೂ ತೈಲಕ್ಕೆ ಸಡ್ಡುಹೊಡೆದು ನಿಲ್ಲುವ ತಾಕತ್ತು ಈ ಯಾವ ಇಂಧನಕ್ಕೂ ಇಲ್ಲ ಎನ್ನುವುದು ಸ್ಪಷ್ಟ; ತೈಲದ ಅವಲಂಬನೆ ಅನಿವಾರ್ಯ. ಈ ವರದಿ ಎರಡು ಕಾರಣಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಮುಂದಿನ ಇಪ್ಪತ್ತು ವರ್ಷಗಳಲ್ಲಿ ಭಾರತದಲ್ಲಿ ಮಧ್ಯಮ ವರ್ಗದ ಕೊಳ್ಳುವ ಶಕ್ತಿ ಸಾಕಷ್ಟು ಹೆಚ್ಚುತ್ತದೆ. ಇದರ ಅರ್ಥ ಸಹಜವಾಗಿಯೇ ಮೋಟಾರು ವಾಹನಗಳ ಖರೀದಿಯ ಭರಾಟೆಯನ್ನು ತೀವ್ರವಾಗಿಸುತ್ತದೆ. ಜೊತೆಗೆ ಜನಸಂಖ್ಯಾ ಹೆಚ್ಚಳ ಅದೇ ಪ್ರಮಾಣದಲ್ಲಿ ಶಕ್ತಿಯ ಬೇಡಿಕೆಯನ್ನು ಬಯಸುತ್ತದೆ.

ತೈಲದ ವಿಚಾರದಲ್ಲಿ ‘ಆಯಿಲ್ ಪಾಲಿಟಿಕ್ಸ್’ ಖಂಡಖಂಡಗಳನ್ನೇ ನಡುಗಿಸುತ್ತಿದೆ. ಅಮೆರಿಕದ ಯಜಮಾನಿಕೆ ಇಲ್ಲೂ ಇದೆ. 2015ರ ಒಪ್ಪಂದದಂತೆ ಪರಮಾಣು ಅಸ್ತ್ರ ತಯಾರಿಕೆಗೆ ಇರಾನ್ ತೊಡಗುವಂತಿಲ್ಲ. ಒಪ್ಪಂದವನ್ನು ಮುರಿದಿದೆ ಎಂದು ಟ್ರಂಪ್ ನೇತೃತ್ವದ ಸರ್ಕಾರ ಕಳೆದ ವರ್ಷದ ನವೆಂಬರ್‌ನಲ್ಲಿ ಇರಾನ್ ಮೇಲೆ ನಿರ್ಬಂಧ ವಿಧಿಸಿತು. ತೈಲ ಆಮದನ್ನೂ ನಿಷೇಧಿಸಿತು. ಪರಿಣಾಮ ಎಂದರೆ, ಇರಾನ್ ದಿನವಹಿ 10 ಲಕ್ಷ ಬ್ಯಾರೆಲ್ ತೈಲದ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕಾಯಿತು. ಅಂತರ ರಾಷ್ಟ್ರೀಯ ತೈಲ ಮಾರುಕಟ್ಟೆ ತುಸು ಅಲ್ಲಾಡಿತು. ಅಮೆರಿಕ ಈ ನಿರ್ಬಂಧವನ್ನು ಭಾರತವೂ ಸೇರಿದಂತೆ ಎಂಟು ದೇಶಗಳಿಗೆ ಸಡಿಲಿಸಿತು.

ಈಗ ಅಮೆರಿಕ, ಲ್ಯಾಟಿನ್ ದೇಶಗಳಲ್ಲಿ ಎದ್ದುಕಾಣುವ ವೆನಿಜುವೆಲಾದ ಮೇಲೆ ನಿರ್ಬಂಧ ಹೇರಿದೆ. ದಕ್ಷಿಣ ಅಮೆರಿಕದ ತಲೆಯ ಮೇಲೆ ಕಿರೀಟದಂತಿರುವ ಆ ದೇಶದಲ್ಲಿ ಕರ್ನಾಟಕದ ಅರ್ಧದಷ್ಟು ಜನಸಂಖ್ಯೆ ಇದೆ. ಹೆಚ್ಚಿನ ಪಾಲು ಎಚ್.ಐ.ವಿ ಪೀಡಿತರು. ಆದರೇನಂತೆ? ತೈಲದ ಉತ್ಪಾದನೆಯಲ್ಲಿ ಅದು ಸೌದಿ ಅರೇಬಿಯಾವನ್ನು ಹಿಂದಕ್ಕೆ ತಳ್ಳಿ ನಂಬರ್ ಒನ್ ಪಟ್ಟಕ್ಕೆ ಏರಿದೆ. ಜಗತ್ತಿನ ಶೇಕಡ 20 ಭಾಗದ ತೈಲ ಸಂಪನ್ಮೂಲ ಈ ಪುಟ್ಟ ದೇಶದ ನೆಲದಡಿ ಇದೆ. 1,000 ಶತಕೋಟಿ ಬ್ಯಾರೆಲ್ ತೈಲ ಇದೆ ಎಂದು ಅಂದಾಜು. ಭಾರತ ಕೂಡ ವೆನಿಜುವೆಲಾದ ತೈಲ ಆಮದು ಮಾಡಿಕೊಳ್ಳುತ್ತಿದೆ. ಬಹು ದೂರವಿದ್ದರೂ, ಸಾಗಣೆಯ ಖರ್ಚು ಹೆಚ್ಚು ಬಂದರೂ ಅದನ್ನೆಲ್ಲ ನಿಭಾಯಿಸಿದೆ. ಕಾರಣ ಅಲ್ಲಿನ ಕಚ್ಚಾ ತೈಲದ ಬೆಲೆ. ಬ್ಯಾರೆಲ್ ಒಂದಕ್ಕೆ ಸುಮಾರು 50 ಡಾಲರ್ ಅಷ್ಟೆ. ಆದರೆ ನಿಸರ್ಗ ಒಂದು ಕೊಕ್ಕೆ ಇಟ್ಟಿದೆ. ಈ ಅಪಾರ ತೈಲದಲ್ಲಿ ಗಂಧಕ ಬೆರೆತಿದೆ. ಹೀಗಾಗಿ ಅದು ‘ಮಂದ ತೈಲ’ ಎನ್ನಿಸಿಕೊಂಡಿದೆ. ಗಂಧಕಾಂಶವನ್ನು ಸಂಸ್ಕರಿಸಿ ತೆಗೆದುಹಾಕುವುದು ಕೂಡ ವಿಶೇಷ ತಂತ್ರವನ್ನು ಬಯಸುತ್ತದೆ. ಭಾರತ ಇದಕ್ಕೆ ಸಿದ್ಧವಾಗಿದೆ. ಸದ್ಯದಲ್ಲಿ ದಿನವಹಿ 2.80 ಲಕ್ಷ ಬ್ಯಾರೆಲ್ ತೈಲ ಅಲ್ಲಿಂದ ನಮಗೆ ಬರುತ್ತಿದೆ. ಹಾಗೆಯೇ 4.50 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಅಮೆರಿಕಕ್ಕೆ ರಫ್ತಾಗುತ್ತಿದೆ.

ವೆನಿಜುವೆಲಾದ ಈಗಿನ ಅಧ್ಯಕ್ಷ ಮದೂರೊ 2018ರ ಚುನಾವಣೆಯಲ್ಲಿ ಅನೈತಿಕವಾಗಿ ಗೆದ್ದು ದೇಶದ ಆರ್ಥಿಕ ಸ್ಥಿತಿಯನ್ನು ದಿವಾಳಿ ಎಬ್ಬಿಸಿದ ಎಂದು ಆರೋಪಿಸಿ ಅಮೆರಿಕ, ಅಲ್ಲಿನ ನ್ಯಾಷನಲ್ ಅಸೆಂಬ್ಲಿಯ ಜುಯಾಡೋ ಅವರನ್ನು ಅಧ್ಯಕ್ಷ ಎಂದು ಪರಿಗಣಿಸಿದೆ. ಇದರ ಪರಿಣಾಮ, ಅಮೆರಿಕಕ್ಕೆ ಹೋಗಬೇಕಾದ 4.50 ಲಕ್ಷ ಬ್ಯಾರೆಲ್ ತೈಲ ಹಡಗಿನಲ್ಲೇ ಕೂತಿದೆ. ಭಾರತ ಮತ್ತು ಚೀನಾದ ಲೆಕ್ಕಾಚಾರವೇ ಬೇರೆ. ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಕೂಟದಲ್ಲಿ (ಒಪೆಕ್) ವೆನಿಜುವೆಲಾ ಕೂಡ ಸೇರಿದೆ. ಆದರೆ, ಬೆಲೆ ನಿಯಂತ್ರಣದ ವಿಚಾರವಾಗಿ ತನ್ನ ಹಕ್ಕನ್ನು ಉಳಿಸಿಕೊಂಡಿದೆ. ಆ ಹೆಚ್ಚುವರಿ ತೈಲದ ಮೇಲೆ ಭಾರತ ಮತ್ತು ಚೀನಾ ಕಣ್ಣಿಟ್ಟಿವೆ. ಚೀನಾ ಆ ದೇಶಕ್ಕೆ ಯಥೇಚ್ಛ ಸಾಲ ಕೊಟ್ಟು ಕಚ್ಚಾ ತೈಲದ ರೂಪದಲ್ಲಿ ಹಿಂತಿರುಗಿಸುವ ಒಪ್ಪಂದ ಮಾಡಿಕೊಂಡಿದೆ. ರಷ್ಯಾವು ವೆನಿಜುವೆಲಾದ ರಾಜಕೀಯದಲ್ಲಿ ಆಸಕ್ತಿ
ವಹಿಸಿ, ಮದೂರೊಗೆ ಮಾನ್ಯತೆ ಕೊಟ್ಟಿದೆ. ಈ ರಾಜಕೀಯ ಧ್ರುವೀಕರಣದಲ್ಲಿ ತೈಲ ದಾಳವಾಗಿದೆ.

ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಕೂಟ ತೈಲದ ಬೆಲೆಯಲ್ಲಿ ಹಠಾತ್ ಏರಿಕೆ ಮಾಡಿ ಆರ್ಥಿಕತೆಯನ್ನೇ ಅಲ್ಲಾಡಿಸುತ್ತಿದೆ ಎಂದು ಭಾರತ ಮತ್ತು ಚೀನಾ ಅಸಮಾಧಾನ ತೋರಿವೆ. ಈ ಹಿನ್ನೆಲೆಯಲ್ಲಿ, ತೈಲ ಕೊಳ್ಳುವ ಕ್ಲಬ್ ಸ್ಥಾಪಿಸಲು ಮುಂದಾಗಿವೆ. ತಮ್ಮ ತೈಲದ ಬೇಡಿಕೆಗಾಗಿ ಅಮೆರಿಕದಿಂದ ಆಮದು ಮಾಡಿಕೊಂಡರೆ ಹೇಗೆ ಎಂದು ಯೋಚಿಸುತ್ತಿವೆ. ಆದರೆ, ಇದೂ ಅಷ್ಟು ಸುಲಭವಲ್ಲ. ಅಮೆರಿಕ ಯಾವ ದೇಶಕ್ಕೆ ನಿರ್ಬಂಧ ಹೇರುತ್ತದೋ ತಿಳಿಯದು. ಆಗ ಅಮೆರಿಕವನ್ನು ಬೆಂಬಲಿಸಲೇಬೇಕಾಗುತ್ತದೆ, ‘ಬಾಣಲೆಯಿಂದ ಬೆಂಕಿಗೆ ಜಿಗಿದಂತೆ’. ಇದೊಂದು ಬಗೆಯ ತೈಲ ದಾಸ್ಯ. ಇದರಿಂದ ಸದ್ಯಕ್ಕೆ ಬಿಡುಗಡೆ ಇಲ್ಲ.

ನಮ್ಮ ದೇಶದಲ್ಲಿ ವರ್ಷಕ್ಕೆ ಎರಡೂವರೆ ಕೋಟಿ ವಾಹನಗಳು ಹೊರಬರುತ್ತಿವೆ. ಕಳೆದ ವರ್ಷ ಪೆಟ್ರೋಲಿನ ಆಮದಿಗಾಗಿ ಮೀಸಲಿಟ್ಟ ಹಣ ಒಂಬತ್ತು ಲಕ್ಷ ಕೋಟಿ ರೂಪಾಯಿ. ‘ಪ್ಯಾರಿಸ್ ಒಪ್ಪಂದ’ದಂತೆ 2025ರ ವೇಳೆಗೆ ಎಲ್ಲ ದೇಶಗಳೂ ಕನಿಷ್ಠ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಭೂಉಷ್ಣತೆಯನ್ನು ತಗ್ಗಿಸಬೇಕು- ಅಂದರೆ ಉಷ್ಣವರ್ಧಕ ಅನಿಲಗಳ ಪ್ರಮಾಣವನ್ನು ನಿಯಂತ್ರಿಸಬೇಕು. ಭಾರತವೂ ಇದಕ್ಕೆ ಒಪ್ಪಿದೆ.
ಆದರೆ ಈ ಸ್ಥಿತಿಯಲ್ಲಿ ಅನುಷ್ಠಾನ ಹೇಗೆ? ಡೆಡ್‍ಲೈನನ್ನೇ ಮುಂದೆ ಹಾಕಿದರೆ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು