ಶುಕ್ರವಾರ, ಏಪ್ರಿಲ್ 16, 2021
31 °C

ಎನ್‌ಆರ್‌ಎಫ್‌ ಸಂಶೋಧನಾ ಕ್ಷೇತ್ರಕ್ಕೆ ಸಕಾರಾತ್ಮಕ ನಡೆ

ಕೆ. ಗಾಯತ್ರಿ Updated:

ಅಕ್ಷರ ಗಾತ್ರ : | |

ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಮಂಡಿಸಿರುವ 2019–20ನೇ ಸಾಲಿನ ಬಜೆಟ್‌, ದೇಶದ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ವಿಚಾರಕ್ಕೆ ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಸಚಿವೆ ಮಾಡಿರುವ ಅತಿ ಮುಖ್ಯವಾದ ಘೋಷಣೆ ಎಂದರೆ ಸಂಶೋಧನೆಗೆ ಉತ್ತೇಜನ ನೀಡಲು ‘ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ’ವನ್ನು (ಎನ್‌ಆರ್‌ಎಫ್‌)’ ಆರಂಭಿಸುವುದು.

‘ದೇಶದಲ್ಲಿ ಸಂಶೋಧನೆಯನ್ನು ಉತ್ತೇಜಿಸಲು, ಹಣ ಒದಗಿಸಲು ಮತ್ತು ಅದನ್ನು ಸಮನ್ವಯಗೊಳಿಸಲು ಎನ್‌ಆರ್‌ಎಫ್‌ ಅನ್ನು ಆರಂಭಿಸಲು ನಾವು ಉದ್ದೇಶಿಸಿದ್ದೇವೆ. ಬೇರೆಬೇರೆ ಸಚಿವಾಲಯಗಳು ಸ್ವತಂತ್ರವಾಗಿ ನೀಡುವ ಸಂಶೋಧನಾ ಅನುದಾನಗಳನ್ನು ಎನ್‌ಆರ್‌ಎಫ್‌ ಸಂಯೋಜನೆ ಮಾಡಲಿದೆ. ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ ಗುರುತಿಸಲಾದ ಕ್ಷೇತ್ರಗಳು ಮತ್ತು ಮೂಲ ವಿಜ್ಞಾನಕ್ಕೆ ಒತ್ತುನೀಡಿ, ಸಂಶೋಧನೆಗಳು ಪುನರಾವರ್ತನೆಗೊಂಡು ಶ್ರಮವು ವ್ಯರ್ಥವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಎನ್‌ಆರ್‌ಎಫ್‌ ಕಾರ್ಯನಿರ್ವಹಿಸಲಿದೆ.

ಎನ್‌ಆರ್‌ಎಫ್‌ಗೆ ಅತ್ಯಂತ ಪ್ರಗತಿಪರ ಮತ್ತು ಸಂಶೋಧನೆಗೆ ಪೂರಕವಾಗುವಂಥ ರೂಪವನ್ನು ನಾವು ನೀಡಲಿದ್ದೇವೆ’ ಎಂದು ನಿರ್ಮಲಾ ಹೇಳಿದ್ದಾರೆ. ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಕಸ್ತೂರಿ ರಂಗನ್‌ ನೇತೃತ್ವದ ಸಮಿತಿಯು ನೀಡಿದ್ದ ಕರಡುವಿನಿಂದ ಪ್ರೇರಣೆ ಪಡೆದು ಈ ಪ್ರಸ್ತಾವವನ್ನು ಘೋಷಿಸಿದಂತೆ ಕಂಡುಬರುತ್ತಿದೆ. ದೇಶದಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಲಭಿಸುತ್ತಿರುವ ಅತಿ ಕನಿಷ್ಠ ಅನುದಾನವನ್ನು ನೋಡಿದರೆ ಇದು ಅತ್ಯುತ್ತಮ ಪ್ರಸ್ತಾವವಾಗಿ ಕಾಣಿಸುತ್ತದೆ. ಭಾರತದಲ್ಲಿ ಶುದ್ಧ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಕ್ಷೇತ್ರಗಳ ಸಂಶೋಧನೆಗಳಿಗೆ ನೀಡುವ ಅನುದಾನದಲ್ಲಿ ಮತ್ತು ಲಭ್ಯವಿರುವ ಸೌಲಭ್ಯಗಳಲ್ಲಿ ಕಾಲಾಂತರದಲ್ಲಿ ಭಾರಿ ಅಂತರ ಸೃಷ್ಟಿಯಾಗಿದೆ.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ (ಕೆ. ಗಾಯತ್ರಿ ಮತ್ತು ಇಂದ್ರಜಿತ್‌ ಬೈರಾಗ್ಯ, 2016), ‘ಸಂಶೋಧನಾ ಕ್ಷೇತ್ರದಲ್ಲಿ ಭಾರತ ಮಾಡುವ ವೆಚ್ಚವು ‘ಬ್ರಿಕ್ಸ್‌’ ರಾಷ್ಟ್ರಗಳು ಮಾಡುವ ಪ್ರಮಾಣಕ್ಕಿಂತಲೂ ತುಂಬಾ ಕಡಿಮೆ ಇದೆ. ಒಟ್ಟಾರೆ ಸಮಾಜ ವಿಜ್ಞಾನ ಕ್ಷೇತ್ರದ ಸಂಶೋಧನೆಗಳಿಗೆ ₹485.82 ಕೋಟಿ ವೆಚ್ಚ ಮಾಡಲಾಗುತ್ತಿದೆ. ಅದರಲ್ಲಿ ₹ 237.7 ಕೋಟಿಯನ್ನು (ಶೇ 48.92) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವೆಚ್ಚ ಮಾಡುತ್ತದೆ. ಉಳಿದ ಹಣದಲ್ಲಿ ₹ 163.89 ಕೋಟಿಯನ್ನು (ಶೇ 33.73) ಕೇಂದ್ರದ ಇತರ ಸಚಿವಾಲಯಗಳು ವೆಚ್ಚ ಮಾಡುತ್ತವೆ. ಎಲ್ಲಾ ರಾಜ್ಯಗಳು ಸೇರಿಕೊಂಡು ಈ ನಿಟ್ಟಿನಲ್ಲಿ ಮಾಡುವ ವೆಚ್ಚ ₹ 84.23 ಕೋಟಿ (ಶೇ 17.33) ಮಾತ್ರ ಎಂದು ಈ ವರದಿ ಹೇಳುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಸಮಾಜ ವಿಜ್ಞಾನ ಕ್ಷೇತ್ರದ ಸಂಶೋಧನೆಗಳಿಗೆ ಮಾಡುವ ಒಟ್ಟು ವೆಚ್ಚದ ಪ್ರಮಾಣವು ಒಟ್ಟಾರೆ ಬಜೆಟ್‌ನ ಶೇ 0.025ನಷ್ಟಿದ್ದರೆ, ವಿಜ್ಞಾನ ಸಂಶೋಧನೆಗಳಿಗೆ ಮಾರುವ ವೆಚ್ಚವು ಶೇ 0.086ರಷ್ಟಿದೆ. ಮಾರುಕಟ್ಟೆ ದರದಲ್ಲಿ ಸಮಾಜ ವಿಜ್ಞಾನದ ಬಜೆಟ್‌ನ ಪ್ರಮಾಣ ಶೇ 0.0062 ರಷ್ಟಿದ್ದರೆ ವಿಜ್ಞಾನ ಕ್ಷೇತ್ರದ ಪ್ರಮಾಣವು ಶೇ 0.21ರಷ್ಟಿದೆ. ಈ ಅಧ್ಯಯನವು ಸ್ಪಷ್ಟಪಡಿಸುವ ಅಂಶವೆಂದರೆ ವಿಜ್ಞಾನ ಸಂಶೋಧನೆ ಇರಲಿ ಸಮಾಜ ವಿಜ್ಞಾನ ಸಂಶೋಧನೆ ಇರಲಿ, ಸರ್ಕಾರ ಮಾಡುವ ವರಚ್ಚ ತೀರಾ ತೀರಾ ಕಡಿಮೆ ಎಂಬುದು.

ಈ ಅಂಶಗಳನ್ನು ಗಮನಿಸಿದಾಗ ಹಣಕಾಸು ಸಚಿವೆ ಎನ್‌ಆರ್‌ಎಫ್‌ ಆರಂಭಿಸುವ ಬಗ್ಗೆ ಮಾಡಿರುವ ಪ್ರಸ್ತಾವವು ಅತಿ ಮುಖ್ಯ ಎನಿಸುವುದಲ್ಲದೆ, ಸಂಶೋಧನಾ ಕ್ಷೇತ್ರಕ್ಕೆ ನೀಡುವ ಅನುದಾನದ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಬೇಕು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಬೇರೆಬೇರೆ ಸಚಿವಾಲಯಗಳು ನೀಡುವ ಅನುದಾನವನ್ನು ಒಟ್ಟುಗೂಡಿಸಿ ಅದಕ್ಕೆ ಹೆಚ್ಚುವರಿಯಾಗಿ ಒಂದಿಷ್ಟು ಅನುದಾನ ನೀಡುವ ಕಾರ್ಯಯೋಜನೆಯು ಒಳ್ಳೆಯದೇ. ಹೆಚ್ಚುವರಿ ಅನುದಾನದ ಪ್ರಮಾಣವನ್ನು ಸ್ಪಷ್ಟಪಡಿಸದಿದ್ದರೂ ಇದು ಒಳ್ಳೆಯ ಪ್ರಸ್ತಾವನೆಯೇ. ಸಂಶೋಧನೆಗಳಿಗಾಗಿ ಎಲ್ಲಾ ಸಚಿವಾಲಯಗಳು ಒಟ್ಟಾಗಿ ಎಷ್ಟು ವೆಚ್ಚ ಮಾಡುತ್ತವೆ ಮತ್ತು ಆ ಹಣವು ಹೇಗೆ ಬಳಕೆಯಾಗುತ್ತದೆ ಎಂಬುದರ ಮೇಲೆ ನಿಗಾ ಇಡುವುದು ಇಂದಿನ ತುರ್ತು ಅಗತ್ಯವಾಗಿದೆ.

ಸಂಶೋಧನಾ ಅನುದಾನದ ದೊಡ್ಡ ಪ್ರಮಾಣವು ದತ್ತಾಂಶ ಕ್ರೋಡೀಕರಣಕ್ಕೆ ವೆಚ್ಚವಾಗುತ್ತದೆ. ದತ್ತಾಂಶ ಸಂಗ್ರಹ ಅಗತ್ಯವೇ ಆಗಿದ್ದರೂ, ಅವುಗಳನ್ನು ಬಳಸಿಕೊಂಡು ವ್ಯವಸ್ಥೆಯ ಕಾರ್ಯವೈಖರಿಯ ಪ್ರಾಯೋಗಿಕ ಅಧ್ಯಯನ ನಡೆಸುವುದು ಅತ್ಯಗತ್ಯ.

ದೇಶದ ಆದ್ಯತೆಗಳಿಗೆ ಅನುಗುಣವಾಗಿ ಸಂಶೋಧನೆಯ ಕ್ಷೇತ್ರಗಳನ್ನು ಗುರುಸಿಸುವ ಬಗ್ಗೆ ಸಚಿವೆ ಮಾತನಾಡಿರುವುದು ಸ್ವಾಗತಾರ್ಹ ಬೆಳವಣಿಗೆ. ಇದು ಸಮಗ್ರ ಮಾಹಿತಿ ಸಹಿತವಾದ ಸಾರ್ವಜನಿಕ ನೀತಿ ನಿರೂಪಣೆಯ ನಿಟ್ಟಿನಲ್ಲಿ ಸರ್ಕಾರಕ್ಕೆ ಸಹಕಾರಿ ಆಗಲಿದೆ. ದೇಶವು ಪ್ರಸಕ್ತ ಇದರ ಕೊರತೆ ಅನುಭವಿಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು