ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳನಳಿಸುತ್ತಿದೆ ಬೆಳೆ

ಅಮೃತ ಭೂಮಿ 32
Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ನೋಡನೋಡುತ್ತಿದ್ದಂತೆ ಇವರ 16 ಎಕರೆ ತೋಟ ಮಾದರಿ ತೋಟವಾಯಿತು. ಅನೇಕ ಬೆಳೆಗಳಿಗೆ ಇದು ಪ್ರಯೋಗಶಾಲೆಯೂ ಆಯಿತು. ತೆಂಗು, ಬಾಳೆ, ಕಬ್ಬು, ಅಡಿಕೆ, ಶುಂಠಿ, ಕಾಫಿ, ಶ್ರೀಪದ್ಧತಿಯಲ್ಲಿ ಭತ್ತ ... ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ಬೆಳೆಗಳ ರಾಶಿ ಇವರ ತೋಟದಲ್ಲಿ ಕುಣಿದಾಡಿತು. ದೂರ ದೂರದಿಂದ ರೈತರು ಬಂದು ಇವರ ಕೃಷಿ ವಿಧಾನ ನೋಡಿ ಹಾಡಿ ಹೊಗಳತೊಡಗಿದರು.

ಇದು ಹಾಸನ ತಾಲ್ಲೂಕಿನ ಅಕ್ಕಿಗೂಡು ಹನುಮೇಗೌಡರು ಅವರ ತೋಟದ ಕಥೆ. ಇವರ ಈ ಪರಿಯ ಯಶಸ್ಸಿಗೆ ಕಾರಣ ನೈಸರ್ಗಿಕ ಕೃಷಿ. ಸುಮಾರು ಎರಡು ದಶಕಗಳ ಹಿಂದೆ ನೈಸರ್ಗಿಕ ಕೃಷಿಕ ಪಾಳೇಕರ ಅವರ ಸಹಜ ಕೃಷಿಯಿಂದ ಆಕರ್ಷಿತರಾಗಿದ್ದ ತಮ್ಮ ತೋಟದಲ್ಲಿ ಈ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರು. ಅವರ ನಂತರ ಸೊಸೆ ಭಾರತಿ ವಿಜಯ್ ತೋಟ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಾರೆ.

`ಮಾವನಂತೆ ತೋಟ ನೋಡಿಕೊಳ್ಳಲಾಗುವುದಿಲ್ಲ' ಎಂದು ಹೇಳುತ್ತಲೇ ತೋಟವನ್ನು ಕಾಳಜಿಯಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. `ಈವರೆಗೆ ತೋಟದಲ್ಲಿ ಸ್ವಲ್ಪವೂ ರಸಗೊಬ್ಬರ ಬಳಸಿಲ್ಲ. ಹೊಂಗೆ, ಕಹಿಬೇವು ಮುಂತಾದ ಕಹಿ ಎಲೆಗಳು, ಗೋಮೂತ್ರ ಮುಂತಾದವುಗಳ ಮಿಶ್ರಣದ ಕೀಟನಾಶಕವನ್ನು ನಾನೇ ತಯಾರಿಸಿ ಸಿಂಪಡಣೆ ಮಾಡುತ್ತೇನೆ. ಬರಗಾಲದಿಂದಾಗಿ ನೀರಿಲ್ಲ ಎಂಬ ಕೊರತೆ ಬಿಟ್ಟರೆ ನಮ್ಮ ತೋಟದಲ್ಲಿ ನುಸಿಪೀಡೆಯಾಗಲಿ, ಗರಿ ಒಣಗುವ ರೋಗವಾಗಲಿ,  ಕೀಟಗಳ ಬಾಧೆಯಾಗಲಿ ಇಲ್ಲ' ಎನ್ನುತ್ತಾರೆ ಭಾರತಿ.

ಹೆಚ್ಚಿದ ತೊಂದರೆ
`ಹಾಸನ ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಸರಿಯಾಗಿ ಮಳೆಯಾಗಿಲ್ಲ. ಕಳೆದ ವರ್ಷ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಎಂದೂ ಬತ್ತದ ಕೆರೆ ಕೂಡ ಈ ವರ್ಷ ಒಂದು ಹನಿ ನೀರಿಲ್ಲದಂತೆ ಬತ್ತಿವೆ. ಈ ವೈಪರೀತ್ಯದ ಪರಿಣಾಮ ಈ ತೋಟದ ಮೇಲೂ ಉಂಟಾಗಿದೆ. ಕಳ್ಳರ ಕಾಟ ಹೆಚ್ಚಾಗಿದೆ. ಅಡಿಕೆ ಮಧ್ಯೆ ನೆಟ್ಟಿದ್ದ ಕಾಫಿ ಗಿಡಗಳನ್ನು ಕದ್ದು ಹೋಗಿದ್ದಾರೆ. ನೀರಿಲ್ಲದೆ ಬಾಳೆ ತೋಟ ಒಣಗಿದೆ. ಅನೇಕ ಅಡಿಕೆ ಮರಗಳೂ ಸತ್ತಿವೆ.

ಈ ವರ್ಷವೂ ಈವರೆಗೆ ಈ ಭಾಗದಲ್ಲಿ ಮಳೆಯಾಗಿಲ್ಲ' ಎಂದು ಭಾರತಿ ವಿಷಾದದಿಂದ ನುಡಿಯುತ್ತಾರೆ. ಆದರೆ ಇದರ ನಡುವೆಯೂ ನೈಸರ್ಗಿಕ ಕೃಷಿಯನ್ನು ಕೈಬಿಟ್ಟಿಲ್ಲ ಎನ್ನುವ ಹೆಮ್ಮೆಯೂ ಅವರದ್ದು. `ನಾನು ಮದುವೆಯಾಗಿ ಬಂದಂದಿನಿಂದ ಈವರೆಗಿನ 21 ವರ್ಷದಲ್ಲಿ ನಮ್ಮೂರಿನ `ಅಂಬುಗ' ಕೆರೆ ಬತ್ತಿದ್ದನ್ನು ನೋಡಿಯೇ ಇಲ್ಲ. 365 ದಿನಗಳಲ್ಲೂ ನಮ್ಮ ತೋಟದ ಪಕ್ಕದ ತೊರೆಯಲ್ಲಿ ನೀರು ಹರಿಯುತ್ತಿತ್ತು.

ಈ ವರ್ಷ ಮೊದಲ ಬಾರಿ ಕೆರೆ ಖಾಲಿಯಾಗಿದೆ. ಊರವರೆಲ್ಲರೂ ತಮ್ಮ ಹೊಲಗಳಿಗೆ ಕೆರೆಯ ಮಣ್ಣನ್ನು ಹಾಕಿಸಿದ್ದಾರೆ. ನೈಸರ್ಗಿಕ ಕೃಷಿಯಿಂದಾಗಿ ನಮ್ಮ ತೋಟದ ಮಣ್ಣು ಇನ್ನೂ ಫಲವತ್ತತೆ ಉಳಿಸಿಕೊಂಡಿದ್ದು ಕೆರೆಯ ಮಣ್ಣಿನ ಅಗತ್ಯ ಬೀಳಲಿಲ್ಲ' ಎನ್ನುತ್ತಾರೆ.

ಹನುಮೇಗೌಡರು ಇದ್ದಾಗ ಮಾಡಿದ ಅನೇಕ ಪ್ರಯೋಗಗಳನ್ನು ಈಗ ಇವರು ಕೈಬಿಟ್ಟಿದ್ದಾರೆ. ಕೂಲಿ ಜನರು ಸಿಗದೆ ಭತ್ತ ಬೆಳೆಯುವುದು ಕಷ್ಟವಾಗಿದೆ. `ಮಳೆಯ ಕೊರತೆ ಒಂದೆಡೆಯಾದರೆ ಇರುವ ಕೊಳವೆ ಬಾವಿಯಿಂದ ನೀರೆತ್ತಲು ವಿದ್ಯುತ್ ಸಹ ಇರುವುದಿಲ್ಲ. ಇಂಥ ಸ್ಥಿತಿಯಲ್ಲಿ ತೋಟ ಉಳಿಸಿಕೊಂಡಿದ್ದೇ ಸಾಹಸವಾಗಿತ್ತು.

ತೋಟದಲ್ಲಿ ಫಸಲು ಕಡಿಮೆಯಾಗಿ ಈ ವರ್ಷ ಯಾವುದಾದರೂ ವಾಣಿಜ್ಯ ಬೆಳೆಯ ಅವಲಂಬನೆ ಅನಿವಾರ್ಯವಾಗಿದೆ. ಈ ವರ್ಷ ಜೋಳ ಬಿತ್ತುವ ಚಿಂತನೆ ಮಾಡಿದ್ದೇವೆ, ಆದರೆ ನೈಸರ್ಗಿಕ ಕೃಷಿಯಿಂದ ವಿಮುಖರಾಗುವುದಿಲ್ಲ' ಎನ್ನುವುದು ಭಾರತಿ ಅವರ ಸ್ಪಷ್ಟ ನುಡಿ. ಇರುವ ಎರಡು ಹಸುಗಳ ಗೊಬ್ಬರ, ಗೋಮೂತ್ರ ಬಳಸಿಕೊಂಡೇ ಇಡೀ ತೋಟವನ್ನು ನಿರ್ವಹಣೆ ಮಾಡಿದ್ದು ಇವರ ಸಾಧನೆ.

ಬಂಪರ್ ಮೆಣಸು
ಮಳೆಯ ಅಭಾವದಿಂದ ಎಲ್ಲ ಬೆಳೆಗಳೂ ಕಡಿಮೆಯಾಗಿದ್ದರೂ ಕಾಳು ಮೆಣಸು ಮಾತ್ರ ಬಂಪರ್ ಬೆಳೆ ಕೊಟ್ಟಿದೆ. ತೋಟದಲ್ಲಿದ್ದ ಅನೇಕ ಬಳ್ಳಿಗಳು ಸತ್ತಿದ್ದವು. ಆದರೆ ಉಳಿದಿದ್ದ ಬಳ್ಳಿಗಳು ಒಳ್ಳೆಯ ಫಸಲು ನೀಡಿವೆ. ಜತೆಗೆ ಈ ವರ್ಷ ಉತ್ತಮ ಬೆಲೆಯೂ ಲಭಿಸಿದೆ. ಸಾಮಾನ್ಯವಾಗಿ ಈ ಭಾಗದ ಕಾಳುಮೆಣಸಿನಲ್ಲಿ ಜೊಳ್ಳು ಇರುತ್ತದೆ ಎಂಬ ಕಾರಣಕ್ಕೆ ಸ್ವಲ್ಪ ಕಡಿಮೆ ಬೆಲೆ ಲಭಿಸುತ್ತದೆ. ಆದರೆ ಇವರು ತಮ್ಮ ಉತ್ಪನ್ನವನ್ನು ಮಾರಾಟಕ್ಕಾಗಿ ಮೂಡಿಗೆರೆಗೆ ಒಯ್ದಿದ್ದರು. ಅಲ್ಲಿ `ಗ್ರೇಡ್- 1' ಮೆಣಸು ಎಂದು ಪರಿಗಣಿಸಿ ಗರಿಷ್ಠ ಬೆಲೆ ನೀಡಿದ್ದಾರೆ.

[object Object]

ಭಾರತಿ ಅವರು ರೈತ ಸಂಘದ ನೇತೃತ್ವದಲ್ಲಿ ಬ್ರೆಝಿಲ್, ದಕ್ಷಿಣ ಆಫ್ರಿಕಾ ಮುಂತಾದ ರಾಷ್ಟ್ರಗಳಿಗೆ ಹೋಗಿ ನೈಸರ್ಗಿಕ ಕೃಷಿಯ ಪ್ರಚಾರ ಮಾಡಿ ಬಂದಿದ್ದಾರೆ. ನೈಸರ್ಗಿಕ ಕೃಷಿ ಪದ್ಧತಿಯನ್ನು ಅಲ್ಲಿನ ಜನರಿಗೆ ತಿಳಿಸುವುದರ ಜತೆಗೆ ಭಾರತೀಯ ಕೃಷಿಕ ಹೆಣ್ಣುಮಕ್ಕಳು ಅನುಭವಿಸುವ ಕಷ್ಟಗಳನ್ನು ಹೇಳಿಕೊಳ್ಳಲು ಸಹ ಅವರು ಆ ವೇದಿಕೆಯನ್ನು ಬಳಸಿಕೊಂಡಿದ್ದಾರೆ.

`ಬ್ರೆಝಿಲ್‌ನಲ್ಲಿ ನನ್ನ ಭಾಷಣ ಮುಗಿದ ಬಳಿಕ ಅಲ್ಲಿನ ಮಹಿಳೆಯರೆಲ್ಲರೂ ಜೈಕಾರ ಹಾಕಿದಂತೆ ಅವರ ಭಾಷೆಯಲ್ಲಿ ಏನನ್ನೋ ಹೇಳುತ್ತಿದ್ದರು. ಅದೇನೆಂದು ಭಾಷಾಂತರಕಾರರನ್ನು ಕೇಳಿದೆ. `ಭಾರತೀಯ ಮಹಿಳೆಯರಿಗೆ ಅವರು ಬೆಂಬಲ ನೀಡುತ್ತಿದ್ದಾರೆ' ಎಂದು ತಿಳಿಸಿದರು. ಅದನ್ನು ಕೇಳಿ ನಿಜಕ್ಕೂ ಸಂತಸವಾಯಿತು ಎಂದರು ಭಾರತಿ.
-ಉದಯ ಯು. ಚಿತ್ರಗಳು: ಅತೀಖುರ್ ರೆಹಮಾನ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT