ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ಸೇವೆಗೆ ವಜ್ರಮಹೋತ್ಸವ !

Last Updated 9 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಸುಸಜ್ಜಿತವಾದ ಶೆಡ್, ಅದರಲ್ಲಿ 840 ವಿವಿಧ ತಳಿಯ ರಾಸುಗಳು. ಇದರಲ್ಲಿ ಕೆಲವು ರೋಗಬಾಧಿತ, ಮೂರು ಕಾಲುಗಳಿರುವ, ಕುಂಟುತ್ತಿರುವ ಜಾನುವಾರುಗಳು ಇವೆ. ಈ ರಾಸುಗಳ ಜತೆಗೆ ಕುದುರೆಗಳೂ ಇವೆ. ಇವುಗಳಿಗೆ ನಿತ್ಯ ಏಳು ಟನ್ ಹುಲ್ಲು, ಒಂದು ಟನ್ ಕಾಳು, ಹಿಂಡಿ, 25 ಸಾವಿರ ಲೀಟರ್ ನೀರು ಬೇಕು. ಇವುಗಳ ಪಾಲನೆ-ಪೋಷಣೆಗೆ 40 ಮಂದಿ ಕಾರ್ಮಿಕರಿದ್ದಾರೆ. ಅವುಗಳ ಆರೈಕೆಗೆ ಒಬ್ಬ ಪಶುವೈದ್ಯರೂ ಇದ್ದಾರೆ.

ಇದ್ಯಾವುದೋ ಬೃಹತ್ ಹೈನೋದ್ಯಮದ ಚಿತ್ರಣವಲ್ಲ. ಕೊಪ್ಪಳದಲ್ಲಿ ಜೈನ ಸಮುದಾಯದ ನೇತೃತ್ವದಲ್ಲಿ ನಡೆಯುತ್ತಿರುವ ‘ಮಹಾವೀರ ಜೈನ ಗೋ ಶಾಲೆಯ ದೃಶ್ಯ. ಇದು ಇಂದು ನಿನ್ನೆ ಆರಂಭವಾಗಿದ್ದಲ್ಲ. ಸ್ವಾತಂತ್ರ ಪೂರ್ವದಲ್ಲಿ (ನ.3,1944ರಲ್ಲಿ) ಆರಂಭವಾದ ಗೋಶಾಲೆ. ಈಗ 74 ವಸಂತಗಳನ್ನು ಪೂರೈಸಿದೆ. ಅಂದಿನಿಂದ ಇಂದಿನವರೆಗೂ ಸಾವಿರಾರು ಗೋವುಗಳಿಗೆ ಆಶ್ರಯ ನೀಡುತ್ತಾ ಬಂದಿದೆ.

ಹೇಗೆ ಶುರುವಾಯ್ತು ಈ ‘ಶಾಲೆ’

1944ರಲ್ಲಿ ಚಾತುರ್ಮಾಸದ ನಿಮಿತ್ಯ ಪ್ರವಚನಕ್ಕೆಂದು ಜೈನ ಮುನಿಗಳಾದ (ಶ್ವೇತಾಂಬರ) ಗಣೇಶಲಾಲಜಿ ಮಹಾರಾಜ್‌ ಕೊಪ್ಪಳಕ್ಕೆ ಬಂದಿದ್ದರು. ಬರಗಾಲದ ಊರನ್ನು ಕಂಡಿದ್ದ ಮುನಿಗಳು ಪ್ರವಚನ ಮುಗಿಸಿ ಹೊರಡುವಾಗ ಸ್ಥಳೀಯ ಜೈನ ಸಮುದಾಯಕ್ಕೆ ‘ಇಲ್ಲೊಂದು ಗೋಶಾಲೆ ನಿರ್ಮಾಣ ಮಾಡಿ. ಗೋವುಗಳಿದ್ದಲ್ಲಿ ಸಮೃದ್ಧಿ ನೆಲೆಸಿರುತ್ತದೆ’ ಎಂದು ಸೂಚಿಸಿದರು. ‘ನಾವಾರಿಗಾಗದಿದ್ದರೂ ಕೊನೆಪಕ್ಷ ಗೋವುಗಳ ಸಂರಕ್ಷಣೆ ಮಾಡಿಯಾದರೂ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು’ ಎಂಬುದು ಅವರ ಕಿವಿಮಾತಾಗಿತ್ತು.

ಗುರುಗಳ ಆಜ್ಞೆಯಂತೆ ದೀಪಚಂದ ಮೆಹತಾ, ಮಾಣಿಕಚಂದ ಮೆಹತಾ, ಶಾಂತಿಲಾಲ್ ಮೆಹತಾರವರು ಸಾರ್ವಜನಿ
ಕರು ಹಾಗೂ ಜೈನ ಸಮುದಾಯದವರಿಂದ ದೇಣಿಗೆ ಸಂಗ್ರಹಿಸಿ, ನವೆಂಬರ್ 3, 1944ರಂದು ಕೊಪ್ಪಳ ಹೊರವಲಯದ ಬಹದ್ದೂರಬಂಡಿ ರಸ್ತೆ ಪಕ್ಕದಲ್ಲಿ ಜಮೀನು ಖರೀದಿಸಿ ಗೋಶಾಲೆ ಆರಂಭಿಸಿದರು. ಆರಂಭದಲ್ಲಿ 8 ರಿಂದ 10 ಆಕಳುಗಳಿಂದ ಆರಂಭವಾದ ಗೋಶಾಲೆ ಇಂದು 840 ಜಾನುವಾರುಗಳಿಗೆ ಆಸರೆಯಾಗಿದೆ. ಅಂದಿನಿಂದ ಇಂದಿನವರೆಗೆ ಇದೊಂದು ಪೂಜ್ಯನೀಯ ಕಾಯಕವೆಂದು ಮಾಡುತ್ತಾ ಬಂದಿದ್ದಾರೆ.

ಸುವ್ಯವಸ್ಥಿತವಾದ ಸೌಲಭ್ಯಗಳು

ನಾಲ್ಕು ಎಕರೆ ಜಾಗದಲ್ಲಿ ವೈಜ್ಞಾನಿಕ ರೀತಿಯಲ್ಲಿ ಶೆಡ್‍ ನಿರ್ಮಿಸಿದ್ದಾರೆ. ರಾಸುಗಳು ನಿರಾಂತಕವಾಗಿ ನಿಲ್ಲಲು, ಮಲಗಲು, ನೀರು ಕುಡಿಯಲು, ಹುಲ್ಲು ಮೇಯಲು, ಹೊರಗಡೆ ಸುತ್ತಾಡಲು ಅವಕಾಶವಿದೆ. ಗೋಶಾಲೆ ಪಕ್ಕದಲ್ಲಿಯೇ ನಾಲ್ಕು ಎಕರೆ ಜಮೀನಿದೆ. ಅದರಲ್ಲಿ ಹುಲ್ಲು ಬೆಳೆಯುತ್ತಾರೆ. ಬೇಸಿಗೆಯಲ್ಲಿ ಮೇವಿನ ಕೊರತೆಯಾಗದಿರಲೆಂದು ಒಣ ಹುಲ್ಲನ್ನು ಸಂಗ್ರಹಿಸುತ್ತಾರೆ. ಗೋಶಾಲೆಗೆ ಭೇಟಿ ನೀಡಿದರೆ ಬೃಹತ್ ಗಾತ್ರದ ಬಣವೆಗಳು ಕಾಣುತ್ತವೆ. ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಗೂ ಮೇವು ಬೆಳೆಸುವುದಕ್ಕಾಗಿ ಮೂರ್ನಾಲ್ಕು ಕೊಳವೆಬಾವಿಗಳನ್ನು ಕೊರೆಸಿದ್ದಾರೆ.

ದನಗಳ ಮೈ ತೊಳೆದ ನೀರು ಮತ್ತು ಗಂಜಲ ಒಳಚರಂಡಿ ಮೂಲಕ ಹರಿದು ಬಂದು ಮೇವು ಬೆಳೆಯುವ ಜಮೀನಿಗೆ ಸೇರುವಂತೆ ಮಾಡಿದ್ದಾರೆ. ಹೀಗಾಗಿ ಹುಲ್ಲು ಹುಲುಸಾಗಿ ಬೆಳೆಯುತ್ತದೆ. ಪ್ರತಿದಿನ ಕೂಲಿಯಾಳುಗಳು ಶೆಡ್‌ನಲ್ಲಿರುವ ಸಗಣಿ ಗುಡಿಸಿ, ರಾಸುಗಳ ಮೈ ತೊಳೆದು, ಹಾಲು ಕರೆಯುತ್ತಾರೆ. ಅವುಗಳಿಗೆ ಕಾಳು, ಹಿಂಡಿ, ಮೇವನ್ನು ಹಾಕುತ್ತಾರೆ. ರಾಸುಗಳಿಗೆ ರೋಗ ಬಂದರೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲು ಪಶುವೈದ್ಯ ಡಾ. ಶಂಕ್ರಪ್ಪ ಡನಕನಕಲ್ ಅವರು ಸಿದ್ಧರಾಗಿರುತ್ತಾರೆ. 10 ವರ್ಷಗಳಿಂದ ಈ ಗೋಶಾಲೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆದಾಯ – ಖರ್ಚು ವೆಚ್ಚ

840 ರಾಸುಗಳಲ್ಲಿ ಸುಮಾರು 30 ಆಕಳುಗಳು ಹಾಲು ಕೊಡುತ್ತವೆ. ನಿತ್ಯ ಅಂದಾಜು 150 ಲೀಟರ್ ಹಾಲು ಸಂಗ್ರಹವಾಗುತ್ತದೆ. ಸಾರ್ವಜನಿಕರು ಗೋಶಾಲೆಗೆ ಬಂದು ಲೀಟರ್‌ಗೆ ₹40ರಂತೆ ಹಾಲು ಖರೀದಿ ಮಾಡುತ್ತಾರೆ.

ಪ್ರತಿನಿತ್ಯ ಕ್ವಿಂಟಲ್‌ಗಟ್ಟಲೆ ಸಗಣಿ, ಮೇವು ಉಳಿಕೆ ಸೇರಿದ ಸಾವಯವ ಗೊಬ್ಬರ ಉತ್ಪಾದನೆಯಾಗುತ್ತದೆ. ಒಂದು ಟನ್ ಗೊಬ್ಬರಕ್ಕೆ ₹1200 ದರ ನಿಗದಿ ಮಾಡುತ್ತಾರೆ. ಸುತ್ತಮುತ್ತಲಿನ ರೈತರು ಗೋಶಾಲೆಗೆ ಬಂದು ಈ ಗೊಬ್ಬರವನ್ನು ಖರೀದಿಸಿ ತಮ್ಮ ಜಮೀನಿಗೆ ಬಳಸುತ್ತಾರೆ. ಗೋಶಾಲೆ ಸೇವೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ, ಒಮ್ಮೆ ₹22,77,500 ಸಹಾಯಧನ ನೀಡಿದೆ.

ಒಂದು ದಿನಕ್ಕೆ ₹25 ಸಾವಿರದಿಂದ ₹30 ಸಾವಿರವರೆಗೂ ಗೋಶಾಲೆಯ ಖರ್ಚು ಬರುತ್ತದೆ. ಇದರ ನಿರ್ವಹಣೆಗೆ ಸರ್ಕಾರದಿಂದ ಅನುದಾನ ಬರುವುದಿಲ್ಲ. ಜೈನ ಸಮುದಾಯ, ಸಾರ್ವಜನಿಕರು, ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದ ವಿವಿಧ ಭಾಗದಲ್ಲಿರುವ ಜೈನ ಸಮುದಾಯಗಳು ಆರ್ಥಿಕ ನೆರವು ನೀಡುತ್ತವೆ. ಇದರ ಜತೆಗೆ, ಹಾಲು ಮತ್ತು ಗೊಬ್ಬರ ಮಾರಾಟದಿಂದ ಬರುವ ಆದಾಯವನ್ನು ಗೋಶಾಲೆಯ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಸುತ್ತಾರೆ. ಹೀಗಾಗಿ ದೇಣಿಗೆಯಿಂದಲೇ ಈ ಗೋಶಾಲೆ ನಡೆಯುತ್ತಾ ಬಂದಿದೆ. ಅಮಾವಾಸ್ಯೆ, ಹುಣ್ಣಿಮೆ, ಜನ್ಮದಿನ, ಮದುವೆ ಸಮಾರಂಭ, ಮದುವೆ ವಾರ್ಷಿಕೋತ್ಸವದಂದು ಜನರು ಇಲ್ಲಿಗೆ ಬಂದು ಬೆಲ್ಲ, ಕಾಳು, ಹಿಂಡಿಯನ್ನು ತಂದು ತಮ್ಮ ಹೆಸರಿನಲ್ಲಿ ದೇಣಿಗೆ ನೀಡಿ ಹೋಗುತ್ತಾರೆ.

ತೊಂದರೆ– ಕೊರತೆ ಇಲ್ಲ

‘75 ವರ್ಷಗಳಿಂದ ನಡೆಸುತ್ತಿರುವ ಈ ಗೋಶಾಲೆಯಲ್ಲಿ ಗೋವುಗಳಿಗೆ ಒಂದು ದಿನವೂ ಯಾವುದೇ ತೊಂದರೆಯಾಗಿಲ್ಲ. ನಾವೂ ಕೊರತೆ ಮಾಡಿಲ್ಲ. ಎಲ್ಲವೂ ದಾನಿಗಳಿಂದಲೇ ಸುಸೂತ್ರವಾಗಿ ನಡೆಯುತ್ತಾ ಬಂದಿದೆ’ ಎನ್ನುತ್ತಾರೆ ಹಾಲಿ ಶಾಲೆಯ ಅಧ್ಯಕ್ಷ ಅಭಯಕುಮಾರ ಜೈನ್. ದೇಸಿ ಗೋವಿನ ತಳಿಗಳ ಗಂಜಳದಿಂದ ಔಷಧಿ ತಯಾರಿಸುವ ಘಟಕ ಆರಂಭಿಸಬೇಕೆಂಬುದು ಇವರ ಮುಂದಿನ ಯೋಜನೆಯಾಗಿದೆ.

‘ಯಾವುದೇ ತರಹದ ಆಕಳಿರಲಿ, ಹಾಲು ಕೊಡಲಿ, ಕೊಡದಿರಲಿ, ರೋಗದಿಂದ ಬಳಲುತ್ತಿರಲಿ, ಯಾರಿಗಾದರೂ ಬೇಡವಾದಲ್ಲಿ ನಮ್ಮ ಗೋಶಾಲೆಗೆ ತಂದು ಬಿಟ್ಟರೆ ನಾವು ಆರೈಕೆ ಮಾಡುತ್ತೇವೆ’ ಎನ್ನುತ್ತಾರೆ ಗೋಶಾಲೆಯ ಮೇಲ್ವಿಚಾರಕರಾದ ಗೌತಮ್ ಶೇಠ್.

‘ಭೂಮಿಯ ಮೇಲೆ ಜೀವಿಸುವ ಯಾವೊಂದು ಜೀವಿಗೂ ತೊಂದರೆಯಾಗಬಾರದು ಅವು ನಿರಾಂತಕವಾಗಿ ಬದುಕಬೇಕು’ ಎಂಬುದು ಜೈನಧರ್ಮದ ತತ್ವ. ಕೊಪ್ಪಳದ ಜೈನ ಸಮುದಾಯ ಪ್ರಾಣಿಗಳಿಗೆ ಆಸರೆ ನೀಡುವ ಮೂಲಕ ಆ ತತ್ವನ್ನು ಪಾಲಿಸುತ್ತಿದೆ. ಒಂದು ಮಾದರಿ ಗೋ ಶಾಲೆ ಹೇಗಿರಬೇಕು ಎಂಬುದನ್ನು ನೋಡಬೇಕಾದರೆ ಇಲ್ಲಿಗೊಮ್ಮೆ ಭೇಟಿ ಕೊಡಬೇಕು(ಗೋಶಾಲೆ ಸಂಪರ್ಕ ಸಂಖ್ಯೆ: 9448120552).

ಇದೇ ನವೆಂಬರ್ 3ಕ್ಕೆ ಗೋಶಾಲೆ ಆರಂಭವಾಗಿ 75 ವರ್ಷಗಳು ತುಂಬುತ್ತದೆ. ಈ ಹಿನ್ನೆಲೆಯಲ್ಲಿ 75ನೇ ವರ್ಷಾಚರಣೆಯ ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT