ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದಲ್ಲಿ ಗರಿಗೆದರಿದ ಮೀನು ಕೃಷಿ

Last Updated 14 ಡಿಸೆಂಬರ್ 2020, 4:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಸತತ ಬರ ಪರಿಸ್ಥಿತಿ ಎದುರಿಸುತ್ತಿದ್ದ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆ ಬಿದ್ದಿದೆ. ಕೆರೆ, ಕಲ್ಯಾಣಿ, ಚೆಕ್‌ಡ್ಯಾಂ ಸೇರಿ ಬಹುತೇಕ ಎಲ್ಲ ಜಲಮೂಲಗಳು ಭರ್ತಿಯಾಗಿವೆ. ಮೀನು ಕೃಷಿಗೆ ಹದವಾದ ವಾತಾವರಣ ನಿರ್ಮಾಣವಾಗಿದೆ. ಹೆಚ್ಚು ಪ್ರಮಾಣದ ಮೀನು ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ.

ಮೀನು ಸಾಕಣೆಗೆ ಮೀನುಗಾರಿಕೆ ಇಲಾಖೆ ವ್ಯಾಪ್ತಿಯ ಕೆರೆಗಳ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಗುತ್ತಿಗೆ ನೀಡುವ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಹರಾಜಿನಲ್ಲಿ ಗುತ್ತಿಗೆ ಪಡೆದ ವ್ಯಕ್ತಿಗೆ ಮೀನುಸಾಕಣೆಗೆ ಐದು ವರ್ಷ ಕಾಲಾವಕಾಶ ಸಿಗುತ್ತದೆ. ಹರಾಜು ಮೊತ್ತ ಪ್ರತಿ ವರ್ಷ ಶೇ 5ರಷ್ಟು ಹೆಚ್ಚಳವಾಗುತ್ತದೆ. 2020ರಲ್ಲಿ ಹೊಸ ಹರಾಜು ಪ್ರಕ್ರಿಯೆ ನಡೆದಿಲ್ಲವಾದರೂ, ಹರಾಜು ಮೊತ್ತವನ್ನು ಹೆಚ್ಚಿಸಿ ಗುತ್ತಿಗೆದಾರರಿಗೆ ನೀಡುವ ಕಾರ್ಯ ಪ್ರತಿ ವರ್ಷ ನಡೆಯುತ್ತದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಹಿಂಗಾರು ಮಳೆಗೆ ಜಲಮೂಲ ಭರ್ತಿಯಾಗುವುದು ವಾಡಿಕೆ. ಆದರೆ, ಮುಂಗಾರು ಮಳೆಗೆ ಜಿಲ್ಲೆಯ ಹಲವು ಕೆರೆ, ಕೃಷಿ ಹೊಂಡ, ಚೆಕ್‌ಡ್ಯಾಂಗಳು ತುಂಬಿವೆ. ಜಿಲ್ಲೆಯ ಜಲಾಶಯಗಳಿಗೂ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಮೊಳಕಾಲ್ಮುರು ತಾಲ್ಲೂಕಿನ ರಂಗಯ್ಯನದುರ್ಗ ಜಲಾಶಯಗಳದಲ್ಲಿ ಕೂಡ ಮೀನು ಕೃಷಿ ಗರಿಗೆದರಿದೆ.

ಮೀನು ಕೃಷಿಗೆ ಚಿತ್ರದುರ್ಗ ಸೂಕ್ತ ಪ್ರದೇಶವಲ್ಲ. ಜಲಮೂಲಗಳು ಭರ್ತಿಯಾಗುವಂತಹ ಮಳೆ ಬೀಳುವುದು ಇಲ್ಲಿ ಅಪರೂಪ. ಆದರೂ, ವರ್ಷ ಕಳೆದಂತೆ ಮೀನು ಉತ್ಪಾದನೆ ಜಿಲ್ಲೆಯಲ್ಲಿ ಹೆಚ್ಚಳವಾಗುತ್ತಿದೆ. ಕೆರೆ ಹಾಗೂ ಜಲಾಶಯಗಳಲ್ಲಿ ಮೀನುಗಾರಿಕೆ ನಡೆಸುವವರಲ್ಲಿ ಹೊಸ ಭರವಸೆ ಮೂಡಿದೆ. ಸರಾಸರಿ 60 ಲಕ್ಷ ಬಿತ್ತನೆಯಾಗುತ್ತಿದ್ದ ಮೀನು ಮರಿಗಳ ಸಂಖ್ಯೆ 2019ರಲ್ಲಿ 1.2 ಕೋಟಿಗೆ ಏರಿಕೆಯಾಗಿತ್ತು. ಈ ವರ್ಷವೂ ಇಷ್ಟೇ ಪ್ರಮಾಣದ ಮೀನುಮರಿಗಳ ಬಿತ್ತನೆಯಾಗಿದೆ.

ಜಿಲ್ಲೆಯ ಜಲಮೂಲಗಳಿಗೆ ಅಗತ್ಯವಿರುವ ಮೀನು ಮರಿಗಳ ವಿತರಣೆಯನ್ನು ಮೀನುಗಾರಿಕೆ ಇಲಾಖೆ ಮಾಡಿದೆ. ವಿ.ವಿ.ಸಾಗರ ಮೀನು ಮರಿ ಪಾಲನಾ ಕೇಂದ್ರದಲ್ಲಿ ಮೀನು ಮರಿ ವಿತರಣೆಯಾಗುತ್ತದೆ. ಚಿತ್ರದುರ್ಗದ ತಿಮ್ಮಣ್ಣ ನಾಯಕ ಕೆರೆ ಸಮೀಪದಲ್ಲಿರುವ ಪಾಲನಾ ಕೇಂದ್ರದಿಂದ 50 ಸಾವಿರ ಮೀನು ಮರಿ ವಿತರಿಸಲಾಗಿದೆ. ಹಿರಿಯೂರು ತಾಲ್ಲೂಕು ಮಟ್ಟದ ಪಾಲನಾ ಕೇಂದ್ರದಿಂದ 2.36 ಲಕ್ಷ ಮೀನು ಮರಿಗಳನ್ನು ಒದಗಿಸಲಾಗಿದೆ. ಭದ್ರಾ ಜಲಾಶಯ ಹಾಗೂ ತುಂಗ–ಭದ್ರಾ ಜಲಾಶಯದಿಂದ ಮೀನು ಮೊಟ್ಟೆಗಳನ್ನು ತಂದು ಮರಿ ಉತ್ಪಾದನೆ ಮಾಡಿ ವಿತರಣೆ ಮಾಡಲಾಗುತ್ತದೆ.

ಕಾಟ್ಲ ಮತ್ತು ಗೌರಿ ಮೀನಿಗೆ ಉತ್ತಮ ಬೇಡಿಕೆ ಇದೆ. ಈ ಮೀನುಗಳ ಸಾಕಣೆಗೆ ಬಹುತೇಕರು ಒಲವು ತೋರುತ್ತಾರೆ. ಬಹು ಬೇಗ ಬೆಳೆಯುವ, ಉತ್ತಮ ರುಚಿ ಹೊಂದಿದ ಈ ಎರಡು ತಳಿಯ ಮೀನುಗಳನ್ನೇ ಜನರು ಇಷ್ಟಪಡುತ್ತಾರೆ. ಜಿಲೇಬಿ, ಮೃಗಾಲ್‌, ರೋಹು ಸೇರಿ ಹಲವು ವಿಧದ ಮೀನುಗಳನ್ನು ಸಾಕಣೆ ಮಾಡಲಾಗುತ್ತದೆ. ವಿ.ವಿ.ಸಾಗರದಲ್ಲಿ ಸಿಗುವ ಮೀನಿಗೆ ಭಾರಿ ಬೇಡಿಕೆ ಇದೆ. ತುಮಕೂರು, ಬೆಂಗಳೂರು ಸೇರಿ ಹಲವೆಡೆಗೆ ಇಲ್ಲಿಯ ಮೀನು ರವಾನೆಯಾಗುತ್ತದೆ. ರಂಗಯ್ಯನದುರ್ಗ ಜಲಾಶಯದ ಮೀನು ಆಂಧ್ರಪ್ರದೇಶಕ್ಕೂ ಸಾಗಣೆಯಾಗುತ್ತದೆ. ಗಾಯತ್ರಿ ಜಲಾಶಯ ಹಾಗೂ ಕೆರೆಗಳಲ್ಲಿ ಸಿಗುವ ಮೀನುಗಳು ಸ್ಥಳೀಯ ಹಾಗೂ ಹೊರ ಜಿಲ್ಲೆಯಲ್ಲಿ ಮಾರಾಟವಾಗುತ್ತವೆ.

ವಿ.ವಿ.ಸಾಗರ ಜಲಾಶಯಕ್ಕೆ ಭದ್ರಾ ನೀರು ಹರಿದು ಬರುತ್ತಿದೆ. ಹಲವು ವರ್ಷಗಳ ಬಳಿಕ ಅತಿ ಹೆಚ್ಚು ನೀರು ಸಂಗ್ರಹಣೆ ಆಗಿದೆ. ಗಾಯತ್ರಿ ಜಲಾಶಯಕ್ಕೆ ಬೇಸಿಗೆ ಯಲ್ಲಿ ವಿ.ವಿ.ಸಾಗರದ ನೀರು ಹರಿಸಲಾಗುತ್ತದೆ. ಇದರಿಂದ ಮೀನು ಕೃಷಿಗೆ ಅನುಕೂಲವಾಗಿದೆ. ಹರಾಜು ಪಡೆದ ಕೆರೆ ಭರ್ತಿ ಯಾದ ಬಳಿಕ ಮೀನು ಮರಿಗಳನ್ನು ಬಿಡಲಾಗುತ್ತದೆ. ಸುಮಾರು 8 ತಿಂಗಳವರೆಗೆ ಮೀನು ಕೃಷಿ ನಡೆಯುತ್ತದೆ. ಐದಾರು ಕೆ.ಜಿ. ತೂಗುವಷ್ಟು ಗಾತ್ರದ ಮೀನುಗಳು ಕೆರೆಯಲ್ಲಿ ಸಿಗುತ್ತವೆ.

ವಿ.ವಿ.ಸಾಗರ: 20 ಲಕ್ಷ ಮೀನು ಮರಿ ಬಿತ್ತನೆ

ವರದಿ: ಸುವರ್ಣಾ ಬಸವರಾಜ್‌

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ 20 ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡುವ ಮೂಲಕ ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರರು ಇತಿಹಾಸ ಸೃಷ್ಟಿಸಿದ್ದಾರೆ.

‘ಮೊದಲೆಲ್ಲ ಭದ್ರಾ ಜಲಾಶಯದಿಂದ ಐದು ದಿನದ ಮರಿಗಳನ್ನು ತಂದು ವಾಣಿವಿಲಾಸಪುರದ 40 ಕೊಳಗಳಲ್ಲಿ ಬಿಡಲಾಗುತ್ತಿತ್ತು. ಈ ಮರಿಗಳನ್ನು 35–40 ದಿನ ಪಾಲನೆ ಮಾಡಿ ಕೆರೆ, ಚೆಕ್‌ಡ್ಯಾಂಗಳಿಗೆ ಬಿಡುತ್ತಿದ್ದೆವು. ಭದ್ರಾದಿಂದ ತರುವ ಅತಿ ಚಿಕ್ಕಮರಿಗಳಲ್ಲಿ ಶೇ 30ರಷ್ಟು ಮರಿಗಳು ಮಾತ್ರ ಬಿತ್ತನೆಗೆ ಸಿಗುತ್ತಿದ್ದವು. ಒಂದು ವರ್ಷದಲ್ಲಿ ನಾಲ್ಕು ಬಾರಿ ಬಿತ್ತನೆ ಮಾಡಿದರೆ 25–30 ಲಕ್ಷ ಮರಿ ಸಿಗುತ್ತಿದ್ದವು’ ಎನ್ನುತ್ತಾರೆ ವಿ.ವಿ.ಸಾಗರ ಮೀನು ಪಾಲನಾ ಕೇಂದ್ರದ ಸಹಾಯಕ ನಿರ್ದೇಶಕ ಡಿ.ಎಸ್.ಶ್ರೀನಿವಾಸ್.

‘ಸಾಮಾನ್ಯ ಗೆಂಡೆ (ಕಾಮನ್ ಕಾರ್ಪ್), ಕಾಟ್ಲಾ, ರೂಹು, ಮೃಗಾಲ್ ತಳಿ ಮೀನುಗಳಿವೆ. ಈ ಭಾಗದಲ್ಲಿ ಕಾಟ್ಲಾ ಮತ್ತು ಮೃಗಾಲ್ ತಳಿಗಳಿಗೆ ಹೆಚ್ಚು ಬೇಡಿಕೆ ಇದೆ. ಕಾಟ್ಲಾ ಆರೇಳು ತಿಂಗಳಲ್ಲಿ ಒಂದು ಕೆ.ಜಿ.ಯಷ್ಟು ಬೆಳೆದರೆ, ಬೇರೆ ತಳಿಯ ಮೀನುಗಳು ಒಂದು ಕೆ.ಜಿ ತೂಗಲು ವರ್ಷ ಬೇಕಾಗುತ್ತದೆ. ಕಾಟ್ಲಾ ಮೀನು ನೀರಿನ ಮೇಲಿರುವ ಕಾರಣ ಶಿಕಾರಿ ಸುಲಭ’ ಎನ್ನುತ್ತಾರೆ ಶ್ರೀನಿವಾಸ್.

‘ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿರುವ ಕಾರಣ ಹಿನ್ನೀರಿನ ರಂಗನಾಥಸ್ವಾಮಿ ದೇಗುಲದ ಸಮೀಪ ಎರಡು ಎಕರೆಯ ಏಳು ಕೊಳಗಳಲ್ಲಿ ಮೀನು ಮರಿ ಸಾಕಲಾಗಿದೆ. ಇದರಿಂದ ಸಿಕ್ಕ ಮರಿಗಳನ್ನು ಜಲಾಶಯಕ್ಕೆ ಬಿಡಲಾಗಿದೆ. ಇದೊಂದು ದಾಖಲೆ ಆಗಿದೆ’ ಎಂದು ಮಾಹಿತಿ
ನೀಡಿದರು.

‘ವಾಣಿವಿಲಾಸ ಮತ್ತು ಗಾಯತ್ರಿ ಜಲಾಶಯಗಳಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕಿನ 500 ಕುಟುಂಬಗಳು ಮೀನುಗಾರಿಕೆ ಅವಲಂಬಿಸಿವೆ. ಒಂದು ದೋಣಿಗೆ ₹3,015 ಪರವಾನಗಿ ಶುಲ್ಕವಿದೆ. ಪ್ರತಿ ವರ್ಷ ₹ 8 ಲಕ್ಷದಿಂದ ₹ 10 ಲಕ್ಷ ಆದಾಯ ಸರ್ಕಾರಕ್ಕೆ ಬರುತ್ತಿದೆ’ ಎಂದು ಅವರು ಹೇಳಿದರು.

ಮೀನುಗಾರರ ಕೈ ಹಿಡಿದ ಕೆರೆಗಳು

ವರದಿ: ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ಮುಂಗಾರು ಹಂಗಾಮಿನಲ್ಲಿ ಹೆಚ್ಚು ಮಳೆ ಬಿದ್ದ ಕಾರಣ ಎಂಟು ವರ್ಷಗಳಿಂದ ಬತ್ತಿಹೋಗಿದ್ದ ಹಲವು ಕೆರೆಗಳಿಗೆ ನೀರು ಬಂದಿದೆ. ಇದರಿಂದ ತಾಲ್ಲೂಕಿನಲ್ಲಿ ಮೀನುಗಾರಿಕಾ ಚಟುವಟಿಕೆ ಮತ್ತೆ ಚುರುಕು ಪಡೆದಿದೆ.

ಮೀರಾಸಾಬಿಹಳ್ಳಿ ಗ್ರಾಮದ ರಾಣಿಕೆರೆಯಲ್ಲಿ 10 ಲಕ್ಷ, ನಾಯಕನಹಟ್ಟಿ ಕೆರೆಯಲ್ಲಿ 9 ಲಕ್ಷ, ಸಾಣಿಕೆರೆಯಲ್ಲಿ 2 ಲಕ್ಷ, ದೊಡ್ಡೇರಿ ಕೆರೆಯಲ್ಲಿ 2.5 ಲಕ್ಷ, ಪರಶುರಾಂಪುರ ಕೆರೆ 50 ಸಾವಿರ, ಓಬನಹಳ್ಳಿ 40 ಸಾವಿರ, ಕೊರ್ಲಕುಂಟೆ, ಮಹದೇವಪುರ, ಪಿಲ್ಲಹಳ್ಳಿ, ಸಿದ್ದೇಶ್ವರನದುರ್ಗ, ಕ್ಯಾದಿಗುಂಟೆ, ನಗರಂಗೆರೆ, ಚೌಳೂರು, ದೊಡ್ಡುಳ್ಳಾರ್ತಿ, ಯಾದಲಗಟ್ಟೆ ಸೇರಿದಂತೆ ತಾಲ್ಲೂಕಿನ 22 ಕೆರೆಗಳಲ್ಲಿ ಮೀನುಗಾರಿಕೆ ಇಲಾಖೆ 28.4 ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಿದೆ.

ಲೆಕ್ಕಪತ್ರ, ನಿರ್ವಹಣೆ, ಸಹಕಾರ ಇಲಾಖೆಯಿಂದ ಮರು ನೋಂದಣಿ ಮತ್ತಿತರ ಕಾರಣದಿಂದ ಮುಚ್ಚಿದ್ದ ಮೀನುಗಾರರ ಕ್ಷೇಮಾಭಿವೃದ್ಧಿ ಸೊಸೈಟಿಗಳು ಕೆರೆಗೆ ನೀರು ಬರುತಿದ್ದಂತೆ ಬಾಗಿಲು ತೆರೆದು ಕಾರ್ಯಾರಂಭಗೊಂಡಿವೆ. ಮೀನುಗಾರಿಕೆ ವೃತ್ತಿ ಅವಲಂಬಿಸಿದ್ದವರು ಹಾಗೂ ಬದುಕು ಕಟ್ಟಿಕೊಳ್ಳಲು ವಲಸೆ ಹೋಗಿದ್ದ ಕುಟುಂಬಗಳು ಕೊರೊನಾ ಭೀತಿಯಿಂದ ಮರಳಿ ವೃತ್ತಿಯಲ್ಲಿ ತೊಡಗಿಸಿಕೊಂಡಿವೆ.

ಕರಾವಳಿಯ ಮೀನಿಗಿಂತ ಬಯಲುಸೀಮೆ ಕೆರೆಯ ಮೀನು ರುಚಿ. ಹೀಗಾಗಿ, ಎಲ್ಲೆಡೆ ಮೀನಿಗೆ ಬಾರಿ ಬೇಡಿಕೆ ಇದೆ. ದಾವಣಗೆರೆ, ಶಿವಮೊಗ್ಗ, ಗಂಗಾವತಿ, ಆಂಧ್ರಪ್ರದೇಶದ ಅನಂತಪುರ, ರಾಯದುರ್ಗ ಮತ್ತು ಕಲ್ಯಾಣದುರ್ಗ ಮುಂತಾದ ಮಾರುಕಟ್ಟೆಗೆ ಇಲ್ಲಿನ ಮೀನು ಸಾಗಣೆಯಾಗುತ್ತದೆ.

‘ಕೆರೆಯಲ್ಲಿ ನೀರು ಇರಲಿ, ಬಿಡಲಿ ಮೀನುಗಾರಿಕೆ ಅನುಮತಿಗೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸರ್ಕಾರಕ್ಕೆ ಪಾವತಿಸಬೇಕು. ಬಳಿಕ ಮೀನಿನ ಮರಿಗಳನ್ನು ಕೆರೆಗಳಲ್ಲಿ ಬೆಳೆಸಬೇಕು. ಅತಿ ಹೆಚ್ಚು ಹಣ ವ್ಯಯ ಮಾಡುವ ಮೀನುಗಾರರಿಗೆ ನಿರೀಕ್ಷಿತ ಲಾಭ ದೊರೆಯುವುದು ಕಷ್ಟ. ಆದರೆ, ಈ ಬಾರಿ ಕೆರೆಯಲ್ಲಿ ನೀರು ಇರುವುದರಿಂದ ಜೀವನಕ್ಕೆ ತೊಂದರೆ ಇಲ್ಲ’ ಎನ್ನುತ್ತಾರೆ ಮೀನುಗಾರರ ಕ್ಷೇಮಾಭಿವೃದ್ಧಿ ಸಹಕಾರ ಸಂಘದ ಮಹಾಂತೇಶ್.

‘ತಾಲ್ಲೂಕಿನಲ್ಲಿ ವಾರದಲ್ಲಿ ಎರಡು ದಿನಕ್ಕೆ ಕನಿಷ್ಠ ಎರಡು ಸಾವಿರ ಕೆ.ಜಿ. ಮೀನು ಸಿಗುತ್ತವೆ. ಇದರಿಂದ ಇಲಾಖೆಗೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ’ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತುಳಸಿದಾಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT