ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಹೊಂಡದಲ್ಲಿ ಮೀನು ಸಾಕಿ ಯಶಸ್ವಿಯಾದ ಯುವಕ

ಆರು ತಿಂಗಳಲ್ಲಿ ಮುಕ್ಕಾಲು ಕೆಜಿ ಬೆಳೆದ ವಿಶೇಷ ತಳಿಯ ಮೀನುಗಳು, 3 ಕ್ವಿಂಟಲ್ ಇಳುವರಿ
Last Updated 10 ಜುಲೈ 2021, 3:53 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಚಿತ್ರಹಳ್ಳಿಯ ರೈತ ವಸಂತಕುಮಾರ್ ತಮ್ಮ ತೋಟದ ಕೃಷಿಹೊಂಡದಲ್ಲಿ ಮೀನು ಸಾಕಣೆ ಮಾಡಿ ಉತ್ತಮ ಇಳುವರಿ ಪಡೆದಿದ್ದಾರೆ.

ಕೃಷಿ ಇಲಾಖೆಯಿಂದ ಆತ್ಮ ಯೋಜನೆಯಲ್ಲಿ ಪಾಕು, ರೂಪ್ ಚಂದ್ ಹಾಗೂ ಗಿಫ್ಟ್ ತಿಲಾಫಿಯ (ಜಿಲೇಬಿ) ತಳಿಯ 1 ಸಾವಿರ ಮೀನು ಮರಿಗಳನ್ನು ನೀಡಿದ್ದು, ಆರು ತಿಂಗಳಲ್ಲಿ ಅರ್ಧದಿಂದ ಮುಕ್ಕಾಲು ಕೆ.ಜಿ ಬೆಳೆದಿವೆ. 3 ಕ್ವಿಂಟಲ್‌ದಿಂದ 4 ಕ್ವಿಂಟಲ್‌ವರೆಗೆ ಇಳುವರಿ ಬರುವ ನಿರೀಕ್ಷೆ ಇದೆ. ಪ್ರತಿ ಕೆ.ಜಿಗೆ ₹ 120 ದರದಲ್ಲಿ ಮಾರಾಟ ಮಾಡಿದರೆ ಸುಮಾರು ₹ 40,000 ಆದಾಯ ಬರುವ ನಿರೀಕ್ಷೆ ಇದೆ.

ಮುಕ್ಕಾಲು ಕೆಜಿ ತೂಕ ಇರುವ ಗಿಫ್ಟ್ ತಿಲಾಫಿಯ (ಜಿಲೇಬಿ)ಮೀನು
ಮುಕ್ಕಾಲು ಕೆಜಿ ತೂಕ ಇರುವ ಗಿಫ್ಟ್ ತಿಲಾಫಿಯ (ಜಿಲೇಬಿ)ಮೀನು

‘ಅಡಿಕೆ ತೋಟಕ್ಕೆ ನೀರು ಹರಿಸಲು 18 ಮೀಟರ್ ಅಗಲ, 18 ಮೀಟರ್ ಉದ್ದ ಹಾಗೂ 3 ಮೀಟರ್ ಆಳದ ಕೃಷಿ ಹೊಂಡ ನಿರ್ಮಿಸಿದ್ದೆವು. ವಿದ್ಯುತ್ ಇದ್ದಾಗ ಕೃಷಿ ಹೊಂಡಕ್ಕೆ ನೀರು ತುಂಬಿಸಿಕೊಳ್ಳುತ್ತಿದ್ದೆವು. ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆಯ ಮೇರೆಗೆ ಆರು ತಿಂಗಳ ಹಿಂದೆ ಕೃಷಿ ಹೊಂಡಕ್ಕೆ ಮೀನುಮರಿ ಬಿಟ್ಟಿದ್ದೆ. ಮೀನು ಮರಿಗಳನ್ನು ಪಕ್ಷಿಗಳಿಂದ ಕಾಪಾಡಲು ಕೃಷಿಹೊಂಡದ ಮೇಲೆ ಬಲೆ ಅಳವಡಿಸಿದ್ದೇವೆ. ಇದಕ್ಕೆ ನಾಲ್ಕೈದು ಸಾವಿರ ಖರ್ಚಾಗಿದೆ.

₹ 1,850 ನೀಡಿ 45 ಕೆ.ಜಿ ಮೀನಿನ ಆಹಾರ ತಂದು ನಿತ್ಯ ಅರ್ಧ ಕೆ.ಜಿ ಹಾಕುತ್ತಿದ್ದೆ. ಇಷ್ಟು ಬಿಟ್ಟರೆ ಬೇರೆ ಏನೂ ಖರ್ಚು ಮಾಡಿಲ್ಲ. ನಿತ್ಯ ಕೃಷಿ ಹೊಂಡದ ನೀರನ್ನು ತೋಟಕ್ಕೆ ಹಾಯಿಸುತ್ತೇವೆ. ದಿನಕ್ಕೆ 3 ಗಂಟೆ ವಿದ್ಯುತ್ ಬಂದರೆ ಸುಮಾರು 2 ಅಡಿ ನೀರು ಮಾತ್ರ ಖಾಲಿ ಆಗುತ್ತಿತ್ತು. ಮತ್ತೆ ಹೊಸ ನೀರು ಬಿಟ್ಟು ಕೃಷಿ ಹೊಂಡ ತುಂಬಿಸುತ್ತಿದ್ದೆವು’ ಎನ್ನುತ್ತಾರೆ ವಸಂತ ಕುಮಾರ್.

‘ಪಾಕು ಹಾಗೂ ರೂಪ್ ಚಂದ್ ನಮ್ಮ ರಾಜ್ಯಕ್ಕೆ ಹೊಸ ತಳಿಗಳು. ಈ ತಳಿಯ ಮೀನುಗಳನ್ನು ಚೆನ್ನೈನಿಂದ ತರಿಸಿ ಸಾಕಲಾಗಿದೆ. ಈ ತಳಿಯ ಮೀನುಗಳು ಕಡಿಮೆ ಅವಧಿಯಲ್ಲಿ ಹೆಚ್ಚು ಬೆಳವಣಿಗೆ ಆಗುತ್ತವೆ. ಕಡಿಮೆ ಜಾಗದಲ್ಲಿ ತಳಿಯ ಹೆಚ್ಚು ಮೀನುಗಳನ್ನು ಸಾಕಬಹುದು. ಆತ್ಮಯೋಜನೆಯಲ್ಲಿ ರೈತರಿಗೆ ಉಚಿತವಾಗಿ ಮೀನುಮರಿ ಗಳನ್ನು ವಿತರಿಸಲಾಗಿದೆ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ
ಎನ್.ವಿ. ಪ್ರಕಾಶ್.

ಮೀನು ಮಾರಾಟ ಇಂದು

‘ರೈತ ವಸಂತಕುಮಾರ್ ಅವರ ತೋಟದಲ್ಲಿ ಜುಲೈ 10ರಂದು ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆಯಿಂದ ಮೀನು ಸಾಕಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಕೃಷಿ ಹೊಂಡದಲ್ಲಿ ಸಾಕಿದ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುವುದು. ಮಾರಾಟಗಾರರು ಕಡಿಮೆ ಬೆಲೆಗೆ ಮೀನು ಖರೀದಿಸುವುದರಿಂದ ನಾವೇ ನೇರವಾಗಿ ಮಾರಾಟ ಮಾಡುತ್ತಿದ್ದೇವೆ. ಬೇರೆ ಕಡೆ ₹ 180ರಿಂದ ₹ 200ಕ್ಕೆ ಒಂದು ಕೆ.ಜಿ ಮೀನು ಮಾರಾಟ ಮಾಡುತ್ತಿದ್ದು, ನಾವು ₹ 120 ದರ ನಿಗದಿ ಮಾಡಿದ್ದೇವೆ’ ಎಂದು ರೈತ ವಸಂತಕುಮಾರ್ ತಿಳಿಸಿದ್ದಾರೆ.

----

ಕೃಷಿ ಹೊಂಡದಲ್ಲಿ ವರ್ಷಪೂರ್ತಿ ನೀರು ತುಂಬಿರುತ್ತಿತ್ತು. ಕಡಿಮೆ ಖರ್ಚಿನಲ್ಲಿ ಮೀನು ಬೆಳೆದಿದ್ದು, ಹೆಚ್ಚು ಲಾಭ ಬರುವ ನಿರೀಕ್ಷೆ ಇದೆ.

-ಎಸ್. ವಸಂತ ಕುಮಾರ್, ಚಿತ್ರಹಳ್ಳಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT