ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ಜ್ವರ- ನಿಯಂತ್ರಣಕ್ಕಿಂತ ಮುಂಜಾಗ್ರತೆ

Last Updated 30 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಕಾಲುಬಾಯಿ ಜ್ವರ ಅಥವಾ ಗೆರೆಸಲು- ಇದು ವೈರಾಣುವಿನಿಂದ ಬರುವ ಒಂದು ಅಂಟು ಜಾಡ್ಯ. ದನ, ಎಮ್ಮೆ, ಕುರಿ, ಮೇಕೆ ಮತ್ತು ಕಾಡು ಪ್ರಾಣಿಗಳಾದ ಜಿಂಕೆ, ಕಾಡೆಮ್ಮೆ, ಆನೆಯಂತಹ ಪ್ರಾಣಿಗಳೂ ಈ ರೋಗಕ್ಕೆ ತುತ್ತಾಗಬಹುದು. ರೋಗಗ್ರಸ್ಥ ಪ್ರಾಣಿಗಳಲ್ಲಿ ಅತಿಯಾದ ಜ್ವರ, ಬಾಯಿಯ ವಸಡು, ನಾಲಿಗೆ ಮೇಲೆ ಚಿಕ್ಕ ನೀರ್ಗುಳ್ಳೆಗಳಾಗಿ, ಕ್ರಮೇಣ ಈ ಗುಳ್ಳೆಗಳು ಒಡೆದು, ಜೊಲ್ಲು ಸುರಿಸುತ್ತವೆ. ತೀವ್ರತೆ ಹೆಚ್ಚಾಗಿದ್ದಲ್ಲಿ ನಾಲಿಗೆಯ ಮೇಲಿನ ಹುಣ್ಣುಗಳಿಂದಾಗಿ, ನಾಲಿಗೆಯ ಹೊರಪದರ ಕಿತ್ತು ಬರುತ್ತದೆ. ಗೊರಸಿನ ಮಧ್ಯೆ ಹುಣ್ಣುಗಳಾಗಿ ಕುಂಟುವುದು, ಕೆಚ್ಚಲಿನ ಮೇಲೆ ನೀರ್ಗುಳ್ಳೆಗಳಾಗಿ ಹಾಲು ಕರೆಯಲು ಆಗುವುದಿಲ್ಲ. ಜ್ವರದ ತೀವ್ರತೆ ಹೆಚ್ಚಾಗಿದ್ದಲ್ಲಿ ತುಂಬು ಗರ್ಭದ ರಾಸುಗಳಲ್ಲಿ ಗರ್ಭಪಾತವಾಗುತ್ತದೆ.

ಹರಡುವ ಬಗೆ ಹೇಗೆ?

ರೋಗಗ್ರಸ್ಥ ಪ್ರಾಣಿಗಳ ಜೊಲ್ಲು, ಹಾಲು, ಗಂಜಲ, ವೀರ್ಯ, ಸಗಣಿ, ಮೂಗಿನಿಂದ ಈ ವೈರಾಣುಗಳು ಸುಮಾರು 5 ರಿಂದ 11 ದಿನಗಳವರೆಗೆ ಹೊರಹಾಕುತ್ತವೆ. ಕೊಟ್ಟಿಗೆಯಲ್ಲಿ ನಿಂತ ಗಂಜಲದಲ್ಲಿ ಸುಮಾರು 39 ದಿನಗಳವರೆಗೆ, ಒಣರಾಡಿಯಲ್ಲಿ 14 ದಿನಗಳು ಮತ್ತು ಸ್ಲರ‍್ರಿಯಲ್ಲಿ 6 ತಿಂಗಳುಗಳ ಕಾಲ ಉಳಿದಿರುತ್ತವೆ. ಕಲುಷಿತ ನೀರು, ಮೇವು ಮತ್ತು ಗಾಳಿಯ ಮೂಲಕ ಬೇರೆ ರಾಸುಗಳಾಗಿ ಅತಿ ಸುಲಭವಾಗಿ ಹರಡುತ್ತವೆ. ತಣ್ಣನೆಯ ಹವಾಮಾನ ಇಲ್ಲವೇ ಮಳೆಗಾಲದಲ್ಲಿ ಈ ವೈರಾಣುಗಳು ಬಹುದಿನಗಳ ಕಾಲ ಬದುಕಬಲ್ಲವು.

ರಾಸುಗಳ ನಿರ್ವಹಣೆ ಹೇಗೆ?

ರೈತರೇ ಈ ರೋಗವನ್ನು ಲಕ್ಷಣಗಳ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದು. ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಮೊದಲನೆಯದಾಗಿ ರೋಗಗ್ರಸ್ತ ರಾಸುಗಳನ್ನು ಕೂಡಲೇ, ಆರೋಗ್ಯವಂತ ರಾಸುಗಳ ಗುಂಪಿನಿಂದ ಬೇರ್ಪಡಿಸಬೇಕು. ಕಲುಷಿತ ನೀರು/ ಮೇವು ಇದ್ದರೆ, ಅದನ್ನು ತಕ್ಷಣ ವಿಲೇವಾರಿ ಮಾಡಬೇಕು.

ರೋಗ ಪೀಡಿತ ರಾಸುಗಳ ಬಾಯಿ, ಕಾಲುಗಳ ಹುಣ್ಣುಗಳನ್ನು ದಿನಕ್ಕೆ ನಾಲ್ಕೈದು ಬಾರಿ ಸ್ವಲ್ಪ (ಶೇ 0.5)ಅಡುಗೆ ಸೋಡಾ ದ್ರಾವಣದಿಂದ ಸ್ವಚ್ಚಗೊಳಿಸಿ, ಜೇನುತುಪ್ಪವನ್ನು ಬಾಯಿಯ ಒಳಬಾಗದ ಹುಣ್ಣುಗಳಿಗೆ ಲೇಪಿಸಬೇಕು. ಗೊರಸು/ ಕೆಚ್ಚಲು ಹುಣ್ಣುಗಳ ಮೇಲೆ ನೊಣ ಕೂರದಂತೆ ಬೇವಿನಎಣ್ಣೆ ಮತ್ತು ಮುಲಾಮನ್ನು ಹಚ್ಚಬೇಕು. ದನಗಳ ಕೊಟ್ಟಿಗೆಯಲ್ಲಿ ನಿಂತಿರಬಹುದಾದ ಗಂಜಲು/ಸಗಣಿಯನ್ನು ವಿಲೇವಾರಿ ಮಾಡಿ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ. ನಂತರ ವಾಷಿಂಗ್ ಸೋಡಾ ದ್ರಾವಣ ಇಲ್ಲವೆ ಇತರೆ ಅಂಟು ಜಾಡ್ಯ ನಿವಾರಕಗಳಾದ ಸೋಡಿಯಂ ಹೈಡ್ರಾಕ್ಸೈಡ್ (ಶೇ 2), ಸಿಟ್ರಿಕ್ ಆಸಿಡ್ (ಶೇ 0.2), ಅಸಿಟಿಕ್ ಆಸಿಡ್ (ಶೇ 2), ಬ್ಲೀಚಿಂಗ್ ಪುಡಿ ಅಥವಾ 1:200 ಪ್ರಮಾಣದ ವಿರ್ಕಾನ್-ಎಸ್ ದ್ರಾವಣಗಳನ್ನು ಸಿಂಪಡಿಸಬೇಕು. ರೋಗಗ್ರಸ್ತ ಪ್ರಾಣಿಗಳು ಮೇವು ತಿನ್ನಲು ಆಗುವುದಿಲ್ಲ. ಪಶುವೈದ್ಯರ ಸಲಹೆ ಮೇರೆಗೆ ಅವುಗಳಿಗೆ ಮೃದು ಆಹಾರಗಳಾದ, ಗಂಜಿ, ಬಾಳೆಹಣ್ಣು, ರಸಭರಿತ ಹಸಿರು ಹುಲ್ಲನ್ನು ತಿನ್ನಿಸಬೇಕು.

ಮಾರಣಾಂತಿಕವಲ್ಲ, ಎಚ್ಚರಿಕೆ ಬೇಕು

ಈ ರೋಗವು ಮಾರಣಾಂತಿಕವಲ್ಲ. ಆದರೂ ರೋಗ ಬಂದ ರಾಸುಗಳ ಕೆಲಸ ಮತ್ತು ಉತ್ಪಾದನಾ ಸಾಮರ್ಥ್ಯ ಗಣನೀಯವಾಗಿ ಕುಂಠಿತಗೊಳ್ಳುತ್ತದೆ. ಬಿಸಿಲಿನ ತಾಪ ತಾಳುವುದಿಲ್ಲ. ಹಾಲಿನ ಇಳುವರಿಯಲ್ಲಿ ಕಡಿಮೆಯಾಗಿ ಮುಂದೆ ಗರ್ಭ ಧರಿಸುವ ಸಾಮರ್ಥ್ಯವೂ ವಿರಳಗೊಂಡು ಇಡೀ ಪಶುಪಾಲನಾ ಉದ್ದಿಮೆ ಮೇಲೆ ಹೊಡೆತ ಬೀಳುತ್ತದೆ.

4 ತಿಂಗಳು ಮೇಲ್ಪಟ್ಟ ಎಲ್ಲಾ ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ಕೊಡಬಹುದಾಗಿದ್ದು, ಲಸಿಕೆ ಕೊಡಿಸುವ 4-5 ವಾರಗಳ ಮುಂಚೆಯೇ ಅವಶ್ಯಕವಾದ ಜಂತುನಾಶಕ ಔಷಧಿ ಮತ್ತು ಅಗತ್ಯವಿದ್ದಲ್ಲಿ ಖನಿಜ ಮಿಶ್ರಣವನ್ನು ಪಶುವೈದ್ಯರ ಸಲಹೆ ಮೇರೆಗೆ ನೀಡಿದರೆ, ಸದೃಢವಾದ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಯಾವುದೇ ಜಾನುವಾರುವಿಗೆ, ಈ ಲಸಿಕೆಯನ್ನು ಮೊಟ್ಟ ಮೊದಲ ಬಾರಿಗೆ ಕೊಟ್ಟರೆ, ಸುಮಾರು 4 ವಾರಗಳ ನಂತರ ಬೂಸ್ಟರ್ ಲಸಿಕೆಯನ್ನು ಕಡ್ಡಾಯವಾಗಿ ಕೊಡಿಸಲೇಬೇಕು.

ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಿಸಿದರೆ ಪ್ರಾಣಿಗಳಿಗೆ ಜ್ವರ ಬರುತ್ತದೆ, ಗರ್ಭಪಾತವಾಗುತ್ತದೆ. ಲಸಿಕೆ ಹಾಕಿದ ಜಾಗದಲ್ಲಿ ಊತ ಬರುತ್ತದೆ.. ಹೀಗೆ ಹಲವು ತಪ್ಪು ಕಲ್ಪನೆಗಳಿವೆ. ಇಂಥ ಗಾಳಿ ಸುದ್ದಿಗೆ, ಮೂಢನಂಬಿಕೆಗಳಿಗೆ ರೈತರು ಕಿವಿಗೊಡಬೇಡಿ. ಸರ್ಕಾರ ಆಯೋಜಿಸುತ್ತಿರುವ ಕಾಲುಬಾಯಿ ಜ್ವರ ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ತಮ್ಮ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಿ. ಈ ಕಾಯಿಲೆಯಿಂದ ಮುಕ್ತಗೊಳಿಸಿ. ದೇಶಿಯ ಹಾಲು / ಪಶು ಉತ್ಪನ್ನಗಳ ವೃದ್ಧಿಗೆ ನೆರವಾಗಿ. ತಮ್ಮ ಆರ್ಥಿಕ ಸ್ಥಿತಿಯನ್ನೂ ಸದೃಢಗೊಳಿಸಿಕೊಳ್ಳಿ.

ಇದು ರಾಷ್ಟ್ರೀಯ ಕಾರ್ಯಕ್ರಮ

ಕಾಲುಬಾಯಿ ರೋಗ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ 2004ರಲ್ಲಿ ಕಾಲುಬಾಯಿ ರೋಗ ನಿಯಂತ್ರಣ ಯೋಜನೆ ಜಾರಿಗೆ ತಂದಿತು. ಇದನ್ನು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ರೂಪಿಸಿತು. ಉತ್ತರ ಭಾರತದ 54 ಜಿಲ್ಲೆಗಳಲ್ಲಿ ಪ್ರಾರಂಭವಾದ ಈ ಯೋಜನೆ 2011ರಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೂ ವಿಸ್ತರಿಸಿತು. ಈ ಕಾರ್ಯಕ್ರಮದಡಿಯಲ್ಲಿ ವರ್ಷಕ್ಕೆ 2 ಬಾರಿ ಎಲ್ಲಾ ಜಾನುವಾರು ಮತ್ತು ಹಂದಿಗಳಿಗೆ ಕಡ್ಡಾಯವಾಗಿ ಉಚಿತವಾಗಿ ಲಸಿಕೆ ಹಾಕಲಾಗುವುದು. ನಮ್ಮ ರಾಜ್ಯದಲ್ಲಿ ಈಗಾಗಲೇ 15 ಸುತ್ತುಗಳಲ್ಲಿ ಕಾಲುಬಾಯಿ ರೋಗದ ವಿರುದ್ಧ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜಾಗತಿಕ ಮಟ್ಟದಲ್ಲಿ ಈ ರೋಗವನ್ನು ಈಗಾಗಲೇ ಉತ್ತರ ಅಮೆರಿಕ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕದ ಕೆಲವು ರಾಷ್ಟ್ರಗಳು ನಿರ್ಮೂಲನೆ ಮಾಡಿದ್ದು, ನಮ್ಮ ದೇಶದ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳು ಲಸಿಕೆಗಳ ಮೂಲಕ ಈ ರೋಗವನ್ನು ತುಂಬಾ ಪರಿಣಾಮಕಾರಿಯಾಗಿ ಹತೋಟಿಯಲ್ಲಿಟ್ಟಿದ್ದಾರೆ. ನಮ್ಮಲ್ಲೂ ಈ ಪ್ರಯತ್ನವಾಗಬೇಕು. ರೈತರು ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT