ಭಾನುವಾರ, ಮೇ 22, 2022
29 °C

ಕೈಹಿಡಿದ ‘ಅರ್ಕಾ ಚೆನ್ನ’ ಕನಕಾಂಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಾಟಿ ಕನಕಾಂಬರ ಬೆಳೆದು ಇಳುವರಿ ಇಲ್ಲದೆ ನಷ್ಟ ಅನುಭವಿಸುತ್ತಿದ್ದ ಮಂಡ್ಯ ಜಿಲ್ಲೆ ಮಳವಳ್ಳಿಯ ಮಹೇಶ್, ಕುಮಾರ್ ಮತ್ತು ಮಂಜು ಎಂಬ ರೈತರು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಅಭಿವೃದ್ದಿಪಡಿಸಿರುವ ‘ಅರ್ಕಾ ಚೆನ್ನ’ ಕನಕಾಂಬರ ಬೆಳೆದು ಕೈ ತುಂಬ ಸಂಪಾದನೆ ಮಾಡಿದ್ದಾರೆ.

ಹೆಸರಘಟ್ಟದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಅರ್ಕಾ ಚೆನ್ನ ತಳಿಯ ಕನಕಾಂಬರ ಹೂಗಳು ನೋಡುಗರ ಗಮನಸೆಳೆದಿವೆ.

‘ಐಐಎಚ್ಆರ್ ವಿಜ್ಞಾನಿ ಡಾ. ಅಶ್ವಥ್ ಅವರಿಂದ ಅರ್ಕಾ ಚೆನ್ನ ತಳಿ ಪಡೆದು ಅರ್ಧ ಎಕರೆ ಹೊಲದಲ್ಲಿ ಬೆಳೆದು ಪ್ರತಿ ವಾರ 60 ಕಿಲೋ ಇಳುವರಿ ಪಡೆಯುತ್ತಿದ್ದೇನೆ. ಈ ತಳಿ ಸೊರಗು ರೋಗ ನಿರೋಧಕ ಶಕ್ತಿ ಹೊಂದಿದ್ದು, ನಾಟಿ ತಳಿಗಿಂತ ದುಪ್ಪಟ್ಟು ಇಳುವರಿ ನೀಡುತ್ತಿದೆ’ ಎಂದು ಮಹೇಶ್ ಹೇಳಿದರು.

‘ನಾಟಿ ಕನಕಾಂಬರ ಬೆಳೆಯಿಂದ ಕಿಲೋಗೆ ₹ 60ರಿಂದ ₹ 100 ಪಡೆಯುತ್ತಿದ್ದರೆ, ಹೊಸ ತಳಿಯಿಂದ ಹಬ್ಬದ ಸಂದರ್ಭಗಳಲ್ಲಿ ₹ 300ರಿಂದ ₹ 1,600 ಪಡೆಯುತ್ತಿದ್ದೇವೆ. ಈ ಸಸಿ ದೀರ್ಘ ಬಾಳಿಕೆ ಹೊಂದಿದ್ದು, ಒಂದು ಬಾರಿ ಸಸಿ ನಾಟಿ ಮಾಡಿದರೆ ಕನಿಷ್ಠ ಆರು ವರ್ಷಗಳವರೆಗೆ ಇಳುವರಿ ಪಡೆಯಬಹುದು’ ಎಂದು ಮಂಜು ತಿಳಿಸಿದರು.

‘ಅರ್ಕಾ ಚೆನ್ನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ, ಮಳವಳ್ಳಿಯ ರೈತರಿಂದ ಸಸಿಗಳನ್ನು ಖರೀದಿಸುತ್ತಿದ್ದೇವೆ. ಕನಕಾಂಬರದ ಆದಾಯದ ಜತೆಗೆ ಮಹೇಶ್ ಮತ್ತು ಅವರ ಗೆಳೆಯರು ಸುಮಾರು ಒಂದು ಲಕ್ಷ ಸಸಿಗಳನ್ನು ಐಐಎಚ್ಆರ್‌ಗೆ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ’ ಎಂದು ಅಶ್ವಥ್ ತಿಳಿಸಿದರು.

‘ಒಂದು ಎಕರೆಗೆ ಆರು ಸಾವಿರ ಸಸಿಗಳನ್ನು ನೆಡಬಹುದು. ಮಹೇಶ್ ತಮ್ಮ ಅರ್ಧ ಎಕರೆ ಹೊಲದಲ್ಲಿ 2 ಸಾವಿರ ಸಸಿ ನೆಟ್ಟು ಪ್ರತಿ ವಾರ 60ರಿಂದ 70 ಕಿಲೋ ಇಳುವರಿ ಪಡೆಯುತ್ತಿದ್ದಾರೆ. ನಾವು ಪ್ರತಿ ಸಾಲುಗಳ ನಡುವೆ ಎರಡು ಅಡಿ ಅಂತರ ಸೂಚಿಸಿದ್ದೇವೆ. ಮಂಡ್ಯದ ರೈತರು ಕೊಯ್ಲು ಮಾಡಲು ಅನುಕೂಲವಾಗುವ ದೃಷ್ಟಿಯಿಂದ ಪ್ರತಿ ಸಾಲುಗಳ ನಡುವೆ 5 ಅಡಿಗಳ ಅಂತರ ನೀಡಿದ್ದಾರೆ. ವಾರದಲ್ಲಿ ಎರಡು ಬಾರಿ ಕೊಯ್ಲು ಮಾಡಬಹುದು’ ಎಂದೂ ಅಶ್ವಥ್ ವಿವರಿಸಿದರು.
‘ಅರ್ಕಾ ಚೆನ್ನಕ್ಕೆ ಬಂದ ಬೇಡಿಕೆ ಮತ್ತು ಹೆಚ್ಚಿನ ಇಳುವರಿ ಗಮನಿಸಿ ಐಐಎಚ್ಆರ್ ಹೊಸ ಸಸಿಯನ್ನು ಅಭಿವೃದ್ದಿಪಡಿಸಿದೆ. ಮಳೆಗಾಲದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುವ ಇನ್ನೊಂದು ಕನಕಾಂಬರ ಗಿಡದ ಸಂಶೋಧನೆ ಆರಂಭಿಕ ಹಂತದಲ್ಲಿದೆ’ ಎಂದು ಅಶ್ವಥ್ ವಿವರಿಸಿದರು.

‘ಪಾಳುಬಿದ್ದ ಪಾಲಿಹೌಸ್‌ಗಳಲ್ಲಿ ಮತ್ತು ಹೊಲದಲ್ಲಿ ಪ್ಲಾಸ್ಟಿಕ್ ಹೊದಿಕೆ ಅಳವಡಿಸಿ ಕೂಡ ಈ ತಳಿಯ ಹೂವನ್ನು ಬೆಳೆಯಬಹುದು. ಸಾವಯವ ಗೊಬ್ಬರ ಬಳಸುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಹನಿ ನೀರಾವರಿ ಮೂಲಕ ಕಡಿಮೆ ನೀರಿನ ಬಳಕೆಯಿಂದ ಈ ಬೆಳೆ ಬೆಳೆಯಬಹುದು. ಬೇರೆ ಹೂವುಗಳಂತೆ ಸೂರ್ಯನ ಬೆಳಕಿಗೆ ಬೇಗ ಬಾಡುವುದಿಲ್ಲ’ ಎಂದೂ ಅಶ್ವಥ್ ಹೇಳುತ್ತಾರೆ.

ತಾರಸಿಗೊಂದು ಅಂದದ ‘ಕೈತೋಟ’

ಬೆಂಗಳೂರು: ನಗರ ವಾಸಿಗಳಿಗೆ ಮನೆಗೊಂದು ಅಂದದ ಕೈತೋಟ ಮಾಡುವುದು ಕಷ್ಟದ ಕೆಲಸ. ಆದರೆ, ಮನೆಯ ತಾರಸಿ ಮೇಲೆ ಚಿಕ್ಕ ಜಾಗದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಸೊಪ್ಪು, ತರಕಾರಿ ಮತ್ತು ಅಲಂಕಾರಿಕ ಪುಷ್ಪಗಳನ್ನು ಬೆಳೆಯುವ ಮಾದರಿಯನ್ನು ಐಐಎಚ್ಆರ್ ಆವರಣದಲ್ಲಿ ನಡೆಯುತ್ತಿರುವ ತೋಟಗಾರಿಕಾ ಮೇಳದಲ್ಲಿ ಪ್ರದರ್ಶಿಸಲಾಗಿದ್ದು, ನೋಡುಗರ ಗಮನಸೆಳೆದಿದೆ.

ತಾರಸಿಯ ಮೇಲೆ ನೂರರಿಂದ ಇನ್ನೂರು ಅಡಿ ಜಾಗ ಇದ್ದರೆ ಗ್ರೋ ಬ್ಯಾಗ್ ಅಥವಾ ಪ್ಲಾಸ್ಟಿಕ್ ಕುಂಡಗಳಲ್ಲಿ ಮಣ್ಣಿನ ಬದಲಾಗಿ ಐಐಎಚ್ಆರ್‌ನ ಅರ್ಕಾ ಸಂವರ್ಧಿತ ಕೋಕೋಪೀಟ್ ಬಳಸಿ ಮಣ್ಣು ರಹಿತ ಕೈತೋಟ ಮಾಡುವ ವಿಧಾನ ಇಲ್ಲಿ ಪರಿಚಯಿಸಲಾಗಿದೆ.

‘ಗ್ರೋಬ್ಯಾಗ್ ಮತ್ತು ಕುಂಡಗಳನ್ನು ರಾಕ್‌ನಲ್ಲಿ ಜೋಡಿಸಿ ಇಟ್ಟರೆ ಕಡಿಮೆ ಜಾಗದಲ್ಲಿ ಹೆಚ್ಚು ತರಕಾರಿ ಬೆಳೆಯಬಹುದು. ಮಣ್ಣು ಬಳಸದ ಕಾರಣ ಹೆಚ್ಚು ತೂಕ ಇರುವುದಿಲ್ಲ. ನಿತ್ಯ ಬಳಕೆಯ ಸೊಪ್ಪುಗಳಾದ ಪುದಿನಾ, ಕೊತ್ತಂಬರಿ, ಪಾಲಕ್, ದಂಟು, ಚಕೋತ, ಹರಿವೆ ಹಾಗೂ ತರಕಾರಿಗಳಾದ ಕ್ಯಾರೆಟ್, ಮೂಲಂಗಿ, ಟೊಮೆಟೊ, ಬದನೆ, ಮೆಣಸಿನಕಾಯಿ ಮತ್ತಿತರ ಗಿಡಗಳನ್ನು ಬೆಳೆಯಬಹುದು’ ಎಂದು ಐಐಎಚ್ಅರ್ ತಾಂತ್ರಿಕ ಅಧಿಕಾರಿ ಓಂಕಾರ್ ನಾಯ್ಕ ತಿಳಿಸಿದರು.

‘ಈ ಕೈತೋಟಕ್ಕೆ ರೋಗ ಮತ್ತು ಕೀಟಗಳ ನಿಯಂತ್ರಣಕ್ಕೆ ನಿಯಮಿತವಾಗಿ ಬೇವಿನ ಸೋಪು ಮತ್ತು ಹೊಂಗೆ ಸೋಪು ಸಿಂಪಡಿಸಿದರೆ ರಾಸಾಯನಿಕ ಮುಕ್ತ ಮಾಡಬಹುದು’ ಎಂದೂ ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು