ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಯಾಗಿ ಸುರಿದ ಮಳೆಗೆ ಹೆಚ್ಚಿದ ತೇವಾಂಶ: ಕೊಳೆತ ಈರುಳ್ಳಿ, ಕಂಗೆಟ್ಟ ರೈತ

ಅತಿಯಾಗಿ ಸುರಿದ ಮಳೆಗೆ ಹೆಚ್ಚಿದ ತೇವಾಂಶ
Last Updated 19 ಸೆಪ್ಟೆಂಬರ್ 2021, 2:35 IST
ಅಕ್ಷರ ಗಾತ್ರ

ಚಿತ್ರದುರ್ಗ: ನಿರೀಕ್ಷೆ ಮೀರಿ ಸುರಿದ ಮಳೆಯಿಂದ ಕಾಣಿಸಿಕೊಂಡ ಕೊಳೆರೋಗಕ್ಕೆ ಈರುಳ್ಳಿ ಸಂಪೂರ್ಣ ಹಾಳಾಗುತ್ತಿದೆ. ಇಳುವರಿ ಹಾಗೂ ಬೆಲೆ ಕುಸಿತದಿಂದ ಕಂಗೆಟ್ಟ ಬೆಳೆಗಾರರು ಈರುಳ್ಳಿ ಕೀಳುವ ಬದಲು ಜಮೀನಿನಲ್ಲೇ ನಾಶಪಡಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿ ದರ ದಿಢೀರ್‌ ಕುಸಿತ ಕಂಡಿದೆ. ಒಂದು ಕೆ.ಜಿ. ಈರುಳ್ಳಿಗೆ ₹ 2 ಕೂಡ ಸಿಗುತ್ತಿಲ್ಲ. ಮಾರುಕಟ್ಟೆಗೆ ಸಾಗಣೆ ಮಾಡಿದ ವೆಚ್ಚವೂ ಮೈಮೇಲೆ ಬರುತ್ತಿದೆ. ಇದರಿಂದ ಬೇಸರಗೊಂಡ ರೈತರು ಟ್ರ್ಯಾಕ್ಟರ್‌ ಮೂಲಕ ಈರುಳ್ಳಿ ಬೆಳೆ ನಾಶಪಡಿಸುತ್ತಿದ್ದಾರೆ. ಮತ್ತೆ ಕೆಲವರು ತಿಪ್ಪೆಗೆ, ಜಾನುವಾರುಗಳಿಗೆ ಹಾಕುತ್ತಿದ್ದಾರೆ.

ರಾಜ್ಯದ ವಾಣಿಜ್ಯ ಬೆಳೆಗಳಲ್ಲಿ ಈರುಳ್ಳಿಗೆ ಪ್ರಮುಖ ಸ್ಥಾನವಿದೆ. ಚಿತ್ರದುರ್ಗ, ಗದಗ, ದಾವಣಗೆರೆ, ಬಾಗ
ಕೋಟೆ, ಧಾರವಾಡ, ವಿಜಯಪುರ, ಹಾವೇರಿ ಜಿಲ್ಲೆಗಳು ಸೇರಿ ರಾಜ್ಯದಲ್ಲಿ ಅಂದಾಜು 1.4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಕಳೆದ ವರ್ಷ ಈರುಳ್ಳಿಗೆ ಭಾರಿ ಬೆಲೆ ಬಂದಿದ್ದರಿಂದ ರೈತರು ಉತ್ಸಾಹದಿಂದಲೇ ಬಿತ್ತನೆ ಮಾಡಿದ್ದರು.

ಜುಲೈ ಮತ್ತು ಆಗಸ್ಟ್‌ತಿಂಗಳಲ್ಲಿ ಸುರಿದ ಮಳೆ ಈರುಳ್ಳಿಯನ್ನು ಕೊಳೆಯುವಂತೆ ಮಾಡಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಈರುಳ್ಳಿ ನೀರು ಹಿಡಿದಿದೆ. ಇದರಿಂದ ಕಾಣಿಸಿಕೊಂಡ ಕೊಳೆರೋಗಕ್ಕೆ ರೈತರು ಕಂಗಾಲಾ
ಗಿದ್ದರು. ಕೀಟನಾಶಕ ಸಿಂಪಡಿಸಿ ರೋಗ ಗುಣಪಡಿಸಲು ಪ್ರಯತ್ನಿಸಿದ್ದರು. ಕಟಾವಿಗೂ ಮೊದಲೇ ಗೆಡ್ಡೆ ಕೊಳೆತು ಹೋಗಿದೆ. ಮೇಲ್ನೋಟಕ್ಕೆ ಉತ್ತಮವಾಗಿ ಕಾಣುವ ಈರುಳ್ಳಿ ಗೆಡ್ಡೆಯ ಒಳಭಾಗ ಸಂಪೂರ್ಣ ಹಾಳಾಗಿದೆ.

ಕೊಳೆ ರೋಗ ಹಾಗೂ ನೇರಳೆಮಚ್ಚೆ ರೋಗದಿಂದ ಈರುಳ್ಳಿ ಇಳುವರಿ ಕುಸಿದಿದೆ. ಚಿಕ್ಕ ಗಾತ್ರದ ಈರುಳ್ಳಿ ನೋಡಿದ ವ್ಯಾಪಾರಿಗಳು ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಚಿತ್ರದುರ್ಗದ ಬೆಳೆಗಾರರು ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಆಶ್ರಯಿಸಿದ್ದಾರೆ. ಇಲ್ಲಿ ದೊಡ್ಡ ಗಾತ್ರದ ಈರುಳ್ಳಿಯನ್ನು ಮಾತ್ರ ಖರೀದಿ ಮಾಡಲಾಗುತ್ತಿದೆ. ಕಳಪೆ ನೆಪ ಹೇಳಿ 60 ಕೆ.ಜಿ ತೂಕದ ಚೀಲವನ್ನು ₹ 100 ದರ ನಿಗದಿ ಮಾಡಲಾಗುತ್ತಿದೆ.

ಬಿತ್ತನೆ ಈರುಳ್ಳಿ ಬೀಜ, ರಸಗೊಬ್ಬರ ಹಾಗೂ ಕೀಟನಾಶಕದ ಬೆಲೆ ಏರಿಕೆಯಾದ ಪರಿಣಾಮ ಪ್ರಸಕ್ತ ವರ್ಷ ಈರುಳ್ಳಿ ಉತ್ಪಾದನಾ ವೆಚ್ಚ ದ್ವಿಗುಣಗೊಂಡಿದೆ. ಪ್ರತಿ ಕೆ.ಜಿ. ಈರುಳ್ಳಿ ಬೀಜಕ್ಕೆ ₹ 2,500ರಿಂದ ₹ 3 ಸಾವಿರ ತೆತ್ತು ರೈತರು ಬಿತ್ತನೆ ಮಾಡಿದ್ದರು. ಪ್ರತಿ ಎಕರೆಗೆ ರೈತರು ಸರಾಸರಿ ₹ 40 ಸಾವಿರ ವೆಚ್ಚ ಮಾಡಿದ್ದಾರೆ.

***

ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದೇನೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ನಿಗದಿ ಮಾಡಲಾಗುತ್ತಿದೆ. ಬೆಳೆಗೆ ಮಾಡಿದ ವೆಚ್ಚ ಕೂಡ ಕೈಗೆ ಸಿಗುತ್ತಿಲ್ಲ

ಅಜಯ್‌, ಗೊಲ್ಲಹಳ್ಳಿ, ಚಳ್ಳಕೆರೆ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT