ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳಸಿಯ ಘಮಲು..ಗೆಣಸಿನ ಸವಿ…

'ಒಪ್ಪಂದ ಕೃಷಿ’ಯಲ್ಲಿ
Last Updated 16 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ರೈತ ಮುದಿಗೌಡ್ರ ಗಣೇಶಗೌಡ, ಸದಾ ಹೊಸ ಹೊಸ ಪ್ರಯೋಗಳನ್ನು ಮಾಡುತ್ತಿರುತ್ತಾರೆ. ಅದು ಉಪಕಸು ಬಿರಲಿ, ವ್ಯವಹಾರವಿರಲಿ ಅಥವಾ ಕೃಷಿ ಕ್ಷೇತ್ರವಿರಲಿ. ಎಲ್ಲವುದರಲ್ಲೂ ಅವರು ಹೊಸತನ ಹುಡುಕುತ್ತಿರುತ್ತಾರೆ.

ಈ ಮೊದಲು, ವೈಜ್ಞಾನಿಕ ರೀತಿಯಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದರು‌. ಅದರಲ್ಲಿ ಯಶಸ್ಸು ಸಿಕ್ಕಿದ್ದರಿಂದ ಸುದೀರ್ಘ ಕಾಲ ಅದೇ ಉದ್ಯಮವನ್ನೇ ಮುಖ್ಯ ವೃತ್ತಿಯಾಗಿಸಿಕೊಂಡಿದ್ದರು. ಕುಕ್ಕಟ ಉದ್ಯಮ ನಷ್ಟದ ಹಾದಿ ಹಿಡಿದಾಗ, ಕೃಷಿಯತ್ತ ಹೊರಳಿದರು. ತನ್ನ ಮೂರು ಎಕರೆ ಜಮೀನಿನಲ್ಲಿ ಕೃಷಿ ಮಾಡಲು ಮುಂದಾದರು.

ಕೃಷಿಯತ್ತ ಹೆಜ್ಜೆ ಇಟ್ಟಾಗ, ಹೊಸಪೇಟೆ ಗೆಳೆಯರೊಬ್ಬರು ತುಳಸಿ, ಪುದೀನದಂತಹ ಬೆಳೆಗಳನ್ನು ಒಪ್ಪಂದದ ಕೃಷಿ ಪದ್ಧತಿಯಲ್ಲಿ ಬೆಳೆಯುವುದಕ್ಕೆ ಸಲಹೆ ನೀಡಿದರು. ಅಷ್ಟೇ ಅಲ್ಲ, ಈ ಬೆಳೆ ಖರೀದಿಸುವ ಕಂಪನಿಗಳ ಬಗ್ಗೆಯೂ ಮಾಹಿತಿ ನೀಡಿದರು. ಆ ಸಲಹೆ ಮೇರೆಗೆ ಬೆಂಗಳೂರಿನ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡು ತುಳಸಿ ಮತ್ತು ಪುದೀನ ಬೆಳೆ ಬೆಳೆಯಲು ಶುರು ಮಾಡಿದರು.

ಹೀಗೆ ಐದು ವರ್ಷಗಳ‌ ಹಿಂದೆ ಮೂರು ಎಕರೆಯಿಂದ ಆರಂಭವಾದ ತುಳಸಿ, ಪುದೀನ ‘ಒಪ್ಪಂದ ಕೃಷಿ’, ಈಗ 15 ಎಕರೆ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುವಷ್ಟರ ಮಟ್ಟಿಗೆ ವಿಸ್ತಾರವಾಗಿದೆ. ಹಂತ ಹಂತವಾಗಿ ತುಳಸಿ ಬೆಳೆಯುವ ಪ್ರಮಾಣವನ್ನು ವಿಸ್ತಿರಿಸಿದ್ದಾರೆ. ಕಳೆದ ವರ್ಷದವರೆಗೂ ಪುದೀನ, ನುಗ್ಗೆ ಬೆಳೆಯುತ್ತಿದ್ದರು. ಈಗ ನಿಲ್ಲಿಸಿದ್ದಾರೆ. ಈ ವರ್ಷ ಏಳು ಎಕರೆಯಲ್ಲಿ ತುಳಸಿ ಮತ್ತು ಎಂಟು ಎಕರೆಯಲ್ಲಿ ಗೆಣಸು ಬೆಳಯುತ್ತಿದ್ದಾರೆ‌.

ನೀರಿನ ಆಸರೆಗಾಗಿ ಮೂರು ಕೊಳವೆಬಾವಿಗಳಿವೆ. ಅವುಗಳಲ್ಲಿ ನೀರು ಚೆನ್ನಾಗಿದೆ. ಸದ್ಯಕ್ಕೆ ಅವರಿಗೆ ಕೃಷಿ ಕಾರ್ಮಿಕರದ್ದು ದೊಡ್ಡ ಸಮಸ್ಯೆ ಯಾಗಿದೆ. ವಿಶೇಷವಾಗಿ ತುಳಸಿ ಕೊಯ್ಲಿನ ವೇಳೆ ಈ ಸಮಸ್ಯೆ ಬಹುವಾಗಿ ಕಾಡುತ್ತದೆ. ಆದರೂ, ಐದಾರು ಮಂದಿ ಕಾರ್ಮಿಕರನ್ನು ಹೇಗೋ ಹೊಂದಿಸಿಕೊಳ್ಳುತ್ತಾರೆ.

ಏಳು ಎಕರೆಯಲ್ಲಿ ತುಳಸಿ

ಎರಡು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡು ಕೃಷಿ ಮಾಡು ತ್ತಿದ್ದಾರೆ. ಒಪ್ಪಂದ ಮಾಡಿಕೊಂಡ ಕಂಪನಿಗಳೇ ಬೀಜ ಕೊಡು ತ್ತಾರೆ. ಏಪ್ರಿಲ್ – ಮೇ ತಿಂಗಳಲ್ಲಿ ತುಳಸಿ ಬೀಜವನ್ನು ಮಡಿಗೆ ಚೆಲ್ಲಿ ಸಸಿ ಮಾಡು ತ್ತಾರೆ. ಒಂದು ಹದ ಮಳೆಯಾಗುತ್ತಿದ್ದಂತೆ ಜಮೀನಿನಲ್ಲಿ ಸಸಿ ನಾಟಿ ಮಾಡುತ್ತಾರೆ.

ಸದ್ಯ ಐದು ಎಕರೆಯಲ್ಲಿ ರಾಮ ತುಳಸಿ, ಎರಡು ಎಕರೆಯಲ್ಲಿ ಕೃಷ್ಣ ತುಳಸಿ ಬೆಳೆದಿದ್ದಾರೆ. ರಾಮ ತುಳಸಿ ಸಸಿಗಳು ನಾಟಿ ಮಾಡಿದ 45 ದಿನಗಳಿಗೆ ಫಸಲು ಬರಲು ಪ್ರಾರಂಭವಾಗುತ್ತವೆ.

ಕೃಷ್ಣ ತುಳಸಿಯನ್ನು 25 ದಿನಕ್ಕೊಮ್ಮೆ ಎಲೆ ಕಟಾವು ಮಾಡುತ್ತಾರೆ. ಪ್ರತಿ ಎಕರೆಗೆ 2 ರಿಂದ 3 ಕ್ವಿಂಟಲ್ ಎಲೆ ಸಿಗುತ್ತದೆ. ಹೀಗೆ ಪ್ರತಿ 25 ದಿನಕ್ಕೊಮ್ಮೆಯಂತೆ 10 ಬಾರಿ ಕಟಾವು ಮಾಡುತ್ತಿದ್ದು, 20 ರಿಂದ 25 ಕ್ವಿಂಟಲ್ ಇಳುವರಿ ಬರುತ್ತದೆ. ಬೆಂಗಳೂರಿನ ಫಲದ ಆರ್ಗೆನಿಕ್ ರಿಸರ್ಚ್ ಫೌಂಡೇಶನ್ ನವರು ಪ್ರತಿ ಕ್ವಿಂಟಲ್ ಗೆ 7500 ರೂ.ಗಳಂತೆ ದರ ನಿಗದಿಪಡಿಸಿ ಕ್ಷೇತ್ರಕ್ಕೇ ಬಂದು ಖರೀದಿಸುತ್ತಾರೆ.

ರಾಮ ತುಳಸಿಯನ್ನು ಕಾಂಡ ಸಮೇತ ಪ್ರತಿ ಎರಡು ತಿಂಗಳಿಗೊಮ್ಮೆ ವರ್ಷಕ್ಕೆ 5 ಬಾರಿ ಕಟಾವು ಮಾಡುತ್ತಾರೆ. ಪ್ರತಿ ಎಕರೆಗೆ 5 ಟನ್ ಸರಾಸರಿಯಂತೆ ವರ್ಷಕ್ಕೆ 25 ಟನ್ ತುಳಸಿ ಬೆಳೆಯುತ್ತಾರೆ. ಒಪ್ಪಂದದಂತೆ ಬೆಂಗಳೂರಿನ ನ್ಯಾಚುರಲ್ ರೆಮಿಡಿಸ್ ಕಂಪನಿಗೆ ಪ್ರತಿ ಟನ್ ತುಳಸಿಗೆ ರೂ 36,000 ಗಳಂತೆ ಮಾರಾಟ ಮಾಡುತ್ತಾರೆ.

‘ಮೂರು ವರ್ಷಗಳ ಹಿಂದೆ ಫಲದಾ ಕಂಪನಿ ನಮ್ಮ ಜಮೀನಿನ ತುಳಸಿಯನ್ನು ಪರೀಕ್ಷಿಸಿ ಪ್ರಮಾಣಪತ್ರ ನೀಡಿದೆ. ಫಸಲಿನ ಗುಣಮಟ್ಟ ಪರಿಶೀಲಿಸಿಯೇ, ಬೆಳೆ ಖರೀದಿಸುತ್ತದೆ. ಇಲ್ಲಿವರೆಗೂ ಒಮ್ಮೆಯೂ ನಮ್ಮ ತುಳಸಿಯನ್ನು ಕಂಪನಿ ತಿರಸ್ಕರಿಸಿಲ್ಲ’ ಎನ್ನುತ್ತಾರೆ ಗಣೇಶಗೌಡ.

ಸಾವಯವ ಪದ್ಧತಿಯಲ್ಲಿ ತುಳಸಿ

ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವ ಗಣೇಶಗೌಡರು, ತಮ್ಮ ಹೊಲದ ಬೆಳೆಗಳಿಗೆ ಅಗತ್ಯವಾದಷ್ಟು ಎರೆಹುಳು ಗೊಬ್ಬರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಜತೆಗೆ, ಅಗತ್ಯವಿರುವಷ್ಟು ಕೊಟ್ಟಿಗೆ ಗೊಬ್ಬರವನ್ನು ಹೊರಗಡೆಯಿಂದ ಖರೀದಿಸುತ್ತಾರೆ. ಯಾವ ಬೆಳೆಗೂ ರಸಗೊಬ್ಬರ ಕೀಟನಾಶಕ ಬಳಸುವುದಿಲ್ಲ. ಬದಲಿಗೆ ಜೀವಾಮೃತ ತಯಾರಿಸಿ ಬೆಳೆಗಳಿಗೆ ಸಿಂಪಡಿಸುತ್ತಾರೆ.

‘ಇಷ್ಟಕ್ಕೂ ತುಳಸಿಗೆ ಫಂಗಸ್‌ ಬಿಟ್ಟು ಯಾವುದೇ ರೋಗ ಬಾಧೆ ಇಲ್ಲ. ಹೀಗಾಗಿ ರಸ ಗೊಬ್ಬರ, ಕೀಟನಾಶಕದ ಖರ್ಚು ಶೂನ್ಯ. ಉಳುಮೆ, ನಾಟಿ, ನಿರ್ವಹಣೆ ಖರ್ಚು ನೋಡಿಕೊಂಡರೆ ಮುಗಿಯಿತು. ನಮ್ಮದು ಖರ್ಚಿಲ್ಲದ ಬೇಸಾಯ, ಶ್ರಮಕ್ಕೆ ತಕ್ಕ ಆದಾಯ’ ಎಂದು ನಗುತ್ತಾರೆ ಗಣೇಶಗೌಡ.

ಗುತ್ತಿಗೆ ಪಡೆದ 8 ಎಕರೆ ಜಮೀನಿನಲ್ಲಿ ಗೆಣಸು ಬೆಳೆದಿದ್ದಾರೆ. ಇದೇ ವರ್ಷ ಜುಲೈನಲ್ಲಿ ನಾಟಿ ಮಾಡಿದ್ದ ಗೆಣಸು ಸದ್ಯ ಕಟಾವಿಗೆ ಬಂದಿದೆ. ಎಕರೆಗೆ 6 ಟನ್ ನಂತೆ 50 ಟನ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ಇದರ ಖರೀದಿಗೂ ಬೆಲೆ ನಿಗದಿಯಾಗಿದೆ. ಈ ಕಂಪನಿಯವರು ಗೆಣಸಿನ ಗೆಡ್ಡೆ ಜತೆಗೆ, ಸೊಪ್ಪು ಸಹಿತ ಖರೀದಸುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ.

ತುಳಸಿ ಜತೆ ಬೆಳೆ ವೈವಿಧ್ಯ

ಒಪ್ಪಂದ ಕೃಷಿಯಾದರೂ, ಗಣೇಶ ಅವರು ಏಕ ಬೆಳೆ ಬೆಳೆದಿಲ್ಲ. ಪ್ರಮುಖ ಬೆಳೆಗಳ ಜತೆಗೆ, ಜಮೀನಿನ ಒಂದು ಭಾಗದಲ್ಲಿ ತೆಂಗು, ನಿಂಬೆ, ಕರಿಬೇವು, ಪೇರಲ, ಸಪೋಟ ಗಿಡಗಳಿವೆ. ಅಡಿಕೆ, ನೋನಿ ಗಿಡಗಳನ್ನು ಪ್ರಾಯೋಗಿಕವಾಗಿ ಬೆಳೆಸಿದ್ದಾರೆ.

ವಾಣಿಜ್ಯ ಬೆಳೆ, ಆಹಾರ ಬೆಳೆ, ಸಾವಯವ ಕೃಷಿ.. ಹೀಗೆ ವೈವಿಧ್ಯ ಮಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ಗಣೇಶ್ ಅವರ ಜಮೀನಿಗೆ ಇತ್ತೀಚೆಗೆ ಅಮೆರಿಕದ ಒಂದು ತಂಡ ಭೇಟಿ ನೀಡಿ, ಕೃಷಿ ಚಟುವಟಿಕೆಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದೆ. ತುಳಸಿ ಕೃಷಿ ಕುರಿತು ಮಾಹಿತಿಗಾಗಿ ಗಣೇಶ ಗೌಡ ಅವರ ಸಂಪರ್ಕ ಸಂಖ್ಯೆ 9148746448.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT