ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕೃಷಿಜಾತ್ರೆ!

Last Updated 23 ಸೆಪ್ಟೆಂಬರ್ 2018, 13:18 IST
ಅಕ್ಷರ ಗಾತ್ರ

ಬಿಸಿಲು ಬಿಮ್ಮನೆ ಏರುತ್ತಲಿತ್ತು. ದೂರದೂರುಗಳಿಂದ ಏರಿ ಬಂದ ವಾಹನಗಳನ್ನು ಪಾರ್ಕಿಂಗ್‌ ಜಾಗದಲ್ಲಿ ಹಚ್ಚಿ ಕೃಷಿ ವಿಶ್ವವಿದ್ಯಾಲಯದ ಆವರಣಕ್ಕೆ ಬಿರುಸಿನ ಹೆಜ್ಜೆಯಿಡುತ್ತ ಬಂದ ರೈತಮಂದಿಯ ಬಾಯಿಂದ ಬಂದ ಮಾತು ‘ಮೊದಲೆಲ್ಲಿಂದ ನೋಡೊಣ್ರಲೇ...’. 'ಹಸು ನೋಡೆ ಹೋಗೋಣು...’ ಎಂದವರೇ ಪ್ರವೇಶ ದ್ವಾರದ ಪಕ್ಕದಲ್ಲೇ ಇದ್ದ ಜಾನುವಾರು ಪ್ರದರ್ಶನ ಮಳಿಗೆಗೆ ಲಗ್ಗೆ ಇಟ್ಟರು. ಕೋಳಿ, ಕುರಿ, ನಾಯಿ, ಜರ್ಸಿ ಆಕಳು, ಮುರ್ರಾ ಎಮ್ಮೆ, ಗೂಳಿ, ಕೋಣ, ಕುದುರೆಗಳನ್ನು ಬಾಯಿಬಾಯ್‌ ಬಿಟ್ಕೊಂಡು ನೋಡಿದ್ರು. ಕಟ್ಟುಮಸ್ತಾಗಿದ್ದ ಗೂಳಿ, ಕೋಣ, ಎಮ್ಮೆಗಳನ್ನು ಕಣ್ತುಂಬಿಕೊಂಡರು.

ಅಲ್ಲಿಂದ ಮುಂದೆ ಬಂದರೆ ಹೊಲದಲ್ಲಿ ಸೂರ್ಯಕಾಂತಿ ಹೂಗಳು ಸೆಳೆಯುತ್ತಿದ್ದರೆ ಒಂದಷ್ಟು ಮಂದಿ ಸೀದಾ ಸೂರ್ಯಕಾಂತಿ ತಾಕಿನ ಎದುರು ಹೋಗಿ ನಿಂತವರೆ ಸೆಲ್ಪಿ ಕ್ಲಿಕ್ಕಿಸಿಕೊಂಡರು. ‘ಏ ಬಾರಲೇ, ಫೋಟೊ ತೆಗ್ಸಿಕೊಳ್ಳೋಣು...’ ಎನ್ನುತ್ತ ಗ್ರೂಪ್‌ ಫೋಟೊ ತೆಗೆಸಿಕೊಂಡರು. ಎರಡಾಳೆತ್ತರಕ್ಕೆ ಬೆಳೆದು ನಿಂತಿದ್ದ ಜೋಳದ ತಾಕಿನೆದುರು ಎದೆಯುಬ್ಬಿಸಿ ನಿಂತು ಪೋಸು ಕೊಟ್ಟರು. ಅಲ್ಲೇ ದಾರಿಯಲ್ಲಿ ಬೀಡುಬಿಟ್ಟಿದ್ದ ಸೋಲಾರ್‌ ಪಂಪಿಂಗ್‌ ಘಟಕ ಹೊತ್ತ ವಾಹನವನ್ನು ನೋಡಿ ಇದೇನು ಎಂದು ಪ್ರಶ್ನಿಸಿಕೊಂಡರು. ವಾಹನದಲ್ಲಿದ್ದವರಿಗೆ ಕನ್ನಡ ಬರಲ್ಲ; ನಮ್ಮ ರೈತಮಂದಿಗೆ ಸರಿಯಾಗಿ ಹಿಂದಿ ಬರ್ತಿರಲಿಲ್ಲ. ಬರುತ್ತಿದ್ದ ಅರ್ಧಮರ್ಧ ಹಿಂದಿ ಮಾತಾಡಿ ಆ ಸೋಲಾರ್‌ ಪಂಪಿಂಗ್‌ ಘಟಕ ಮಹಾರಾಷ್ಟ್ರದ ಜಲಗಾಂವ್‌ನಿಂದ ತಂದಿಟ್ಟಿ ರುವುದು ಎಂಬುದನ್ನು ತಿಳಿದುಕೊಂಡರು. ಒಂದಷ್ಟು ಜನ ಹನಿ ನೀರಾವರಿಯ ಮಾಹಿತಿ ಪಡೆದುಕೊಂಡರು. ವಸ್ತು ಪ್ರದರ್ಶನದ ಎಲ್ಲ ಮಳಿಗೆಗಳೂ ಹೆಚ್ಚು ಕಮ್ಮಿ ಕಿಕ್ಕಿರಿದು ತುಂಬಿದ್ದವು. ಸಿರಿಧಾನ್ಯ, ಅವುಗಳಿಂದ ಸಿದ್ಧಪಡಿಸಿದ ತಿನಿಸು, ಹೂವು, ತರಕಾರಿ ಬೀಜಗಳು, ಇಲಿ, ಜಿರಲೆ, ಇರುವೆ, ಹಲ್ಲಿಗಳ ನಿಗ್ರಹಕ್ಕೆ ಸಿಂಪಡಿಸುವ ಸ್ಪ್ರೆಗಳಿಗೆ ಜನ ಮುಗಿಬಿದ್ದಿದ್ದರು. ಕೆಲವರು ದರ ಕೇಳಿ ಸುಮ್ಮನಾದರೆ ಕೆಲವರು ಖರೀದಿಸಿದರು. ನರ್ಸರಿಯಲ್ಲಿ ಸಿದ್ಧಪಡಿಸಲಾದ ಕಬ್ಬಿನ ಸಸಿಗಳು (ಒಂದಕ್ಕೆ ₹2.20) ಅಲ್ಲಿದ್ದವು. ಬೆಳಗಾವಿ ಕಡೆಗಳಿಂದ ಬಂದವರು ಆಸಕ್ತಿಯಿಂದ ಮಾಹಿತಿ ಪಡೆದರು.

ಜಾನುವಾರುಗಳಿಗೆ ಜಲಕೃಷಿ ಮೂಲಕ ಮೇವು ಬೆಳೆಸುವ ಪ್ರಾತ್ಯಕ್ಷಿಕೆ, ಅಡಿಕೆ ಮರಗಳಿಗೆ ಕೊಳೆಮದ್ದು ಹೊಡೆಯಲು ನೂತನ ಯಂತ್ರ, ದೂರದೂರ ನೀರು ಚಿಮ್ಮಿಸುವ ಸ್ಪ್ರಿಂಕ್ಲರ್‌, ಕಡಿಮೆ ಬೆಲೆಗೆ (₹2,800 ರಿಯಾಯಿತಿ ದರ ₹2,200) ಅಭಿವೃದ್ಧಿ ಪಡಿಸಲಾದ ವಾಟರ್‌ ಹೀಟರ್‌ ಹೆಚ್ಚಿನವರನ್ನು ಆಕರ್ಷಿಸಿದವು. ಇನ್ನು ‘ಸೋಲಾರ್‌ ಕ್ಯಾಪ್‌ ವಿತ್‌ ಫ್ಯಾನ್‌’ ಅಂತೂ ನೋಡುಗರಲ್ಲಿ ಕುತೂಹಲ ಹೆಚ್ಚಿಸಿತು. ಡಬ್ಬಿಯಿಂದ ಎಣ್ಣೆಯನ್ನು ತೆಗೆಯುವ ಸರಳ ಸಾಧನ (₹100) ಅಚ್ಚರಿ ಮೂಡಿಸಿತು.

ಯಂತ್ರೋಪಕರಣಗಳನ್ನು ಗಮನದಲ್ಲಿಟ್ಟುಕೊಂಡು ಬಂದವರು, ಹತ್ತಿ, ಜೋಳ, ಕಡಲೆ, ಭತ್ತದ, ರಾಗಿ ಮುಂತಾದ ತಳಿಗಳ ಸುಧಾರಿತ ಬೀಜಗಳನ್ನು ಒಯ್ಯಲೋಸುಗ ಬಂದವರೂ ಇದ್ದರು. ‘ಈ ವರ್ಷ ಬೀಜ ಒಯ್ದರೆ ಇನ್ನು ನಾಲ್ಕು ವರ್ಷ ಇದರಿಂದಲೇ ಬೀಜ ಮಾಡಿ ಬಳಸ್ತೇವೆ. ಮತ್ತೆ ನಾಲ್ಕ ವರ್ಷದ ನಂತ್ರ ಬೇರೆ ಬೀಜ ಒಯ್ತೇವೆ’ ಎಂದರು ಸವದತ್ತಿಯಿಂದ ಬಂದಿದ್ದ ವಿಠ್ಠಲ್‌ ಮತ್ತು ಬಸಪ್ಪ.

ಹಾವೇರಿಯಿಂದ ತಂದಿದ್ದ ಕಂಬಳಿಗೂ ಕೂಡ ಬೇಡಿಕೆ ಕುದುರಿತು. ಫುಟ್‌ಪಾತ್‌ನಲ್ಲೇ ಮಾರುವಷ್ಟು ಬೇಡಿಕೆ ಬಂದರೂ ಪೊಲೀಸಪ್ಪ ಕಂಬಳಿ ವ್ಯಾಪಾರಿಗಳನ್ನು ಅಲ್ಲಿಂದ ತೆರವು ಮಾಡಿಸಿದರು. ಅರಣ್ಯ ಇಲಾಖೆ ಹಾಗೂ ವೈಲ್ಡ್‌ಲೈಫ್‌ ವೆಲ್‌ಫೇರ್‌ ಸೊಸೈಟಿ ವತಿಯಿಂದ ಹಾವುಗಳ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಫಲಪುಷ್ಪ ಪ್ರದರ್ಶನ ಹಾಗೂ ಮತ್ಸ್ಯಮೇಳ ನಿರೀಕ್ಷೆಯಂತೆ ಹೆಚ್ಚಿನ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾದವು.

ತರಕಾರಿಗಳ ವಾದ್ಯಮೇಳ, ತೆಂಗಿನ ಗರಿಯಿಂದ ಸಿದ್ಧಪಡಿಸಿದ ಗಣೇಶ, ಪಿಸ್ತಾ ಸಿಪ್ಪೆಗಳಿಂದ ಅವತರಿಸಿದ ಗೊಂಬೆ, ಫೋಟೊ ಫ್ರೇಮ್‌, ಕನ್ನಡಿ ಮುಂತಾದ ಆಲಂಕಾರಿಕ ಪರಿಕರಗಳು ಯುವತಿಯರನ್ನು, ಮಹಿಳೆಯರನ್ನು ಸೆಳೆದವು. ಬಳಸಿಬಿಟ್ಟ ಟೈರ್‌ಗಳನ್ನು ಬಳಸಿ ಜಗದೀಶ ಭಾವಿಕಟ್ಟಿ ತಯಾರಿಸಿದ ಬೋನ್ಸಾಯ್‌ ಮರಗಳು ಗಮನ ಸೆಳೆದವು. ಅಣಬೆ ಕೃಷಿಯನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT