ಶುಕ್ರವಾರ, ಆಗಸ್ಟ್ 14, 2020
27 °C

ತರಕಾರಿ ಬೆಳೆದು ನಷ್ಟ ಅನುಭವಿಸಿದ ರೈತರು: ಪರ್ಯಾಯ ಬೆಳೆಯತ್ತ ಚಿತ್ತ

ಬಿಳಿಗಿರಿ.ಆರ್ Updated:

ಅಕ್ಷರ ಗಾತ್ರ : | |

Prajavani

ಜಯಪುರ: ಕಷ್ಟಪಟ್ಟು ಬೆಳೆದ ತರಕಾರಿಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಈ ಭಾಗದ ರೈತರು ಪರ್ಯಾಯ ಬೆಳೆಗಳತ್ತ ಗಮನಹರಿಸಿದ್ದಾರೆ.

ಮೈಸೂರು ತಾಲ್ಲೂಕು ಜಯಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳ ರೈತರು ಕೃಷಿಗೆಂದು ಕೊಳವೆಬಾವಿಗಳನ್ನು ಕೊರೆಸಿ ಮೆಣಸಿನಕಾಯಿ, ಬದನೆಕಾಯಿ, ಟೊಮೊಟೊ, ಹಿರೇಕಾಯಿ, ಬೀನ್ಸ್‌, ಕುಂಬಳಕಾಯಿ, ಹಾಗಲಕಾಯಿ ಮುಂತಾದ ತರಕಾರಿ ಬೆಳೆಯುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಸೂಕ್ತ ಮಾರುಕಟ್ಟೆ ದೊರೆಯದ ಕಾರಣ ಅಪಾರ ನಷ್ಟ ಸಂಭವಿಸಿದ್ದರಿಂದ ಈಗ ಪಪ್ಪಾಯ, ಮಾವು, ಸಪೋಟದಂತಹ ತೋಟಗಾರಿಕೆ ಬೆಳೆಯನ್ನು ಬೆಳೆಯಲು ಮುಂದಾಗಿದ್ದಾರೆ.

‘ಈ ಭಾಗದ ಬಹುತೇಕ ರೈತರ ಜಮೀನು ಮಳೆಯಾಶ್ರಿತವಾಗಿದ್ದು, ಬೇಸಿಗೆಯಲ್ಲಿ  ಕೊಳವೆಬಾವಿಗಳಲ್ಲಿ ನೀರು ಬತ್ತುತ್ತಿದ್ದ ಕಾರಣ ಸಾಕಷ್ಟು ಪರದಾಡಬೇಕಾಗಿತ್ತು. ಅಲ್ಲದೇ, ಮಳೆಯನ್ನು ನಂಬಿಕೊಂಡು ದ್ವಿದಳ ಧಾನ್ಯಗಳನ್ನು ಬೆಳೆಯಲು ಮಾತ್ರ ಸಾಧ್ಯವಾಗುತ್ತಿತ್ತು. ಅದಕ್ಕೂ ಬೆಲೆ ಇಲ್ಲದ ಕಾರಣ ತೋಟಗಾರಿಕೆ ಬೆಳೆ ಮಾಡಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ ಮಾವಿನಹಳ್ಳಿ ರಾಮಣ್ಣ.

‘ತರಕಾರಿ ಬೆಳೆದು ನಷ್ಟ ಅನುಭವಿಸಿದ್ದೆ. ಆದ್ದರಿಂದ ವಾರ್ಷಿಕ ಬೆಳೆಯಾದ ಕಬ್ಬನ್ನು ನಾಟಿ ಮಾಡಿದ್ದೇನೆ. ಈಗ ಬೇರಡೆ ಕೆಲಸಕ್ಕೆ ಹೋಗಲು ಅನುಕೂಲವಾಗಿದೆ’ ಎನ್ನುತ್ತಾರೆ ದಾರಿಪುರ ಗ್ರಾಮದ ರೈತ ಬಸವಣ್ಣ.

ಲಾಕ್‌ಡೌನ್ ಸಂಕಷ್ಟದಿಂದ ರೈತರು ಬೆಳೆ ಪದ್ಧತಿಯನ್ನೇ ಬದಲಿಸಿದ್ದಾರೆ. ತರಕಾರಿ ಬೆಳೆಯುವುದನ್ನು ಬಿಟ್ಟಿ 250 ಹೆಕ್ಟೇರ್‌ನಲ್ಲಿ ಕಬ್ಬನ್ನು ನಾಟಿಮಾಡಿದ್ದು, ತೋಟಗಾರಿಕೆ ಇಲಾಖೆಯಿಂದ ರೈತರು ಸಹಾಯಧನ ಪಡೆದು ಪಪ್ಪಾಯ, ಮಾವು, ಸಪೋಟ ಬೆಳೆಯುವತ್ತ ರೈತರು ಗಮನಹರಿಸಿದ್ದಾರೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ವಿನೂತನ್ ‘ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು