ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ ಮುಚ್ಚಿಗೆ ಮಾಡಿ, ಬೆಳೆ ಉಳಿಸಿ

ಸುಲಭ ಉಪಾಯ
Last Updated 18 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಬೇಸಿಗೆ ಆರಂಭವಾಗಿದೆ. ಬಿಸಿಲಿನ ತಾಪಕ್ಕೆ ತೋಟಗಳಲ್ಲಿನ ತೇವಾಂಶ ಆವಿಯಾಗುತ್ತಿದೆ. ಬೆಳೆಗಳು ಒಣಗುವ ಸೂಚನೆಗಳು ಕಾಣಿಸುತ್ತಿವೆ. ಗಿಡ–ಮರಗಳಿಗೆ ಹೇಗೆ ನೀರುಣಿಸಿದರೂ, ಕ್ಷಣಾರ್ಧದಲ್ಲಿ ಆವಿಯಾಗುತ್ತಿದೆ. ಡ್ರಿಪ್‌ನಲ್ಲಿ ನೀರು ಕೊಟ್ಟರೂ, ಗಿಡಗಳ ಬೇರಿಗೆ ತಲುಪುತ್ತಿಲ್ಲ. ಬೇಸಿಗೆ ಮುಗಿಯುವವರೆಗೆ ಬೆಳೆಗಳನ್ನು ಉಳಿಸಿ ಕೊಳ್ಳಬೇಕು. ಹಾಗೆ ತೋಟ ದಲ್ಲಿ ತೇವಾಂಶ ಕಾಪಾಡಿಕೊಳ್ಳಬೇಕು. ಇದು ದೊಡ್ಡ ಸವಾಲು.

ತೋಟದಲ್ಲಿ ತೇವಾಂಶ ರಕ್ಷಿಸಿಕೊಂಡು, ಬೆಳೆ ಉಳಿಸಿಕೊಳ್ಳಲು ಇಲ್ಲಿದೆ ಒಂದಷ್ಟು ಪರಿಹಾರ;

ತೋಟದಲ್ಲಿರುವ ಬೆಳೆಯುಳಿಕೆ, ಉದುರಿದ ಎಲೆಗಳು, ಕಸ, ಕಡ್ಡಿ ಹುಲ್ಲು, ಕಳೆ ಎಲ್ಲವನ್ನು ಸಂಗ್ರಹ ಮಾಡಿ. ನಿಮ್ಮ ಜಮೀನಿನಲ್ಲಿ ಲಭ್ಯವಾ ಗದಿದ್ದರೆ, ಅಕ್ಕಪಕ್ಕದಲ್ಲಿ ಬೆಟ್ಟ, ಕಾಡುಗಳಲ್ಲಿ ಹಸಿರೆಲೆ ಅಥವಾ ಒಣಗಿದ ತ್ಯಾಜ್ಯ ಸಿಕ್ಕರೂ ಸಂಗ್ರಹಿಸಿ ತನ್ನಿ. ಆ ತ್ಯಾಜ್ಯವನ್ನು ತೋಟದಲ್ಲಿ ಬಿಸಿಲು ಬೀಳುವ ಜಾಗದಲ್ಲಿ ಮಣ್ಣು ಕಾಣದಂತೆ ಹರಡಿ.

ಹಣ್ಣಿನ ಗಿಡಗಳು ಸಣ್ಣವಾಗಿದ್ದರೆ (ಬೆಳೆಯುವ ಹಂತದಲ್ಲಿದ್ದರೆ) ಅವುಗಳಿಗೆ ಒಣಗಿದ ತೆಂಗಿನ ಗರಿಗಳಿಂದ ನೆರಳು ಮಾಡಿ. ಗಿಡಗಳ ನಾಲ್ಕೂ ಬದಿಗೆ ತಡಿಕೆಯಾಗಿ ಕಟ್ಟಿ. ಮೇಲಕ್ಕೆ ಚಾವಣಿ ರೀತಿ ಹೊದಿಸಿ. ಇಲ್ಲವೇ, ಸಮೀಪದಲ್ಲಿ ಕತ್ತಾಳೆ ಗಿಡಗಳು ಲಭ್ಯವಾದರೆ, ಅವುಗಳ ಎಲೆಗಳನ್ನು ಜೋಡಿಸಿ, ಸಸಿಗಳಿಗೆ ನೆರಳು ಮಾಡಬಹುದು.

ಪ್ರತಿ ಗಿಡ / ಸಸಿಗಳ ಬುಡದಲ್ಲಿ ತರಗೆಲೆಗಳನ್ನು ಹಂತ ಹಂತವಾಗಿ ಮುಚ್ಚಿಗೆ ಮಾಡಿ. ಒಂದು ಪದರ ಒಣಗಿದ ನಂತರ ತ್ಯಾಜ್ಯಗಳನ್ನು ಹರಡಿ, ಮೇಲಗಡೆ ಮಣ್ಣು ಹಾಕಿ. ನಂತರದ ಪದರದಲ್ಲಿ ತರಗೆಲೆ ಹಾಕಿ. ಕೊನೆಯ ಹಂತ ಅಥವಾ ಪೂರ್ಣ ಮೇಲ್ಭಾಗದಲ್ಲಿ ಹಸಿರೆಲೆಗಳನ್ನೇ ಹೊದಿಸಿ. ಮೇಲ್ಭಾಗದಲ್ಲಿ ಒಣಗಿದ ತ್ಯಾಜ್ಯ ಮುಚ್ಚಿಗೆ ಮಾಡಿದರೆ, ಒಂದೊಮ್ಮೆ ಬೆಂಕಿ ಅನಾಹುತ ಸಂಭವಿಸಿದಾಗ ಗಿಡಗಳಿಗೆ ತೊಂದರೆಯಾಗಬಹುದು.

ಮುಚ್ಚಿಗೆಯಿಂದ ಪ್ರಯೋಜನ

ನೆಲ ಮುಚ್ಚಿಗೆ ಮಾಡುವುದರಿಂದ ತೇವಾಂಶ ರಕ್ಷಣೆ ಮಾತ್ರವಲ್ಲ, ಮಣ್ಣಿನ ಆರೋಗ್ಯವೂ ಉತ್ತಮವಾಗಿರುತ್ತದೆ.

ಮುಚ್ಚಿಗೆ ಮಾಡಿದ ಸಾವಯವ ವಸ್ತುಗಳ ಮೇಲೆ ನೀರು ಹನಿಸುವುದರಿಂದ, ಅವು ಕ್ರಮೇಣ ಅಲ್ಲೇ ಕೊಳೆತು ಗೊಬ್ಬರವಾಗುತ್ತವೆ. ಇದರಿಂದ ಮಣ್ಣಿನಲ್ಲಿ ಸೂಕ್ಷ್ಮಾಣ ಜೀವಿಗಳು ವೃದ್ಧಿಯಾಗಿ, ಬೆಳೆಗಳಿಗೆ ಪೂರಕ ಪೋಷಕಾಂಶ ಒದಗಿಸುತ್ತವೆ.

ತ್ಯಾಜ್ಯ ಮುಚ್ಚಿಗೆಯಿಂದ ತೋಟದ ಮೇಲ್ಮಣ್ಣು ಗಾಳಿ ಅಥವಾ ಮಳೆ ನೀರಿನಿಂದ ಕೊಚ್ಚಿಹೋಗುವುದನ್ನು ತಪ್ಪಿಸಬಹುದು.

ಸಾವಯವ ಅಂಶ ಮಣ್ಣಿಗೆ ಸೇರುವುದರಿಂದ ಮಣ್ಣಿನಲ್ಲಿ ನೀರು ಹಿಡಿದಿಡುವ ಶಕ್ತಿ ಹೆಚ್ಚಾಗಿ, ತೇವಾಂಶ ಧೀರ್ಘಕಾಲ ಇರುತ್ತದೆ.

ಮುಚ್ಚಿಗೆಯಿಂದಾಗಿ ಮಣ್ಣಿನ ರಚನೆ ಸುಧಾರಿಸುತ್ತದೆ. ಮಣ್ಣೊಳಗಿನ ಪದರಗಳಲ್ಲಿ ತಂಪು ವಾತಾವರಣವಿರುತ್ತದೆ. ಇದು ಸೂಕ್ಷ್ಮಾಣು ಜೀವಿಗಳ ವೃದ್ಧಿಗೆ ಅನುಕೂಲ ವಾಗುತ್ತದೆ. ಅವುಗಳ ಚಟುವಟಿಕೆಯೂ ಹೆಚ್ಚಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT