ಶುಕ್ರವಾರ, ಏಪ್ರಿಲ್ 23, 2021
22 °C
ಶಿವಣ್ಣ ಅವರ ವ್ಯವಸಾಯಕ್ಕೆ ಮಗನ ಸಾಥ್‌, ಮೂರೂವರೆ ಎಕರೆಯಲ್ಲಿ ವಿವಿಧ ಕೃಷಿ

ಕೃಷಿ ಉತ್ಸಾಹಕ್ಕೆ ಅಡ್ಡಿಯಾಗದ ಅಂಗವೈಕಲ್ಯ

ರವಿ ಎನ್‌. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಆಧುನಿಕ ಯುಗದಲ್ಲಿ ಜನರು ಕೃಷಿ ಕಾಯಕ ತೊರೆದು ನಗರದತ್ತ ಮುಖ ಮಾಡುತ್ತಿರುವ ಸಂದರ್ಭದಲ್ಲಿ ಅಂಗವೈಕಲ್ಯವನ್ನು ಹೊಂದಿರುವ ಹಿರಿಯ ಜೀವವೊಂದು ವ್ಯವಸಾಯದಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಾ ಇತರರಿಗೆ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಬಂದೀಗೌಡನ ಹಳ್ಳಿಯ ಶಿವಣ್ಣ ಅವರಿಗೆ ಈಗ 66 ವರ್ಷ. 1980ರಲ್ಲಿ ಕಾಯಿಮಟ್ಟೆ ಮಿಷನ್‌ಗೆ ಕೆಲಸ ನಿರ್ವಹಿಸುತ್ತಿದ್ದಾಗ ಎಡಗೈ ಕಳೆದುಕೊಂಡರು. ಒಂದು ಕೈ ಇಲ್ಲದಿದ್ದರೂ ಅವರ ಕೃಷಿ ಉತ್ಸಾಹ ಕಡಿಮೆಯಾಗಿಲ್ಲ. ವ್ಯವಸಾಯದ  ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಾರೆ.

ಶಿವಣ್ಣ ಅವರಿಗೆ ಕೃಷಿ ಚಟುವಟಿಕೆಗಳಲ್ಲಿ ಮಗ ಮಹದೇವಸ್ವಾಮಿ ಅವರು ಜೊತೆ ನೀಡುತ್ತಾರೆ. ಇವರು ಕೂಡ ಅಂಗವಿಕಲರು. ಪೋಲಿಯೊ ಅವರನ್ನು ಬಾಧಿಸಿದೆ. ಅವರ ಎಡಗಾಲಿನ ಉದ್ದ ಬಲಗಾಲಿಗಿಂತ ಕಡಿಮೆ ಇರುವುದರಿಂದ ನಡೆದಾಡಲು ಕಷ್ಟಪಡುತ್ತಾರೆ. ಇವರು ಅಂಗವಿಕಲ ಸ್ವಯಂಸೇವಾ ಸಂಸ್ಥೆಯೊಂದರಲ್ಲಿಯೂ ಕೆಲಸ ಮಾಡುತ್ತಾರೆ.

ಶಿವಣ್ಣ ಅವರು ತಮ್ಮ 3 ಎಕರೆ 31 ಗುಂಟೆ ಜಮೀನಿನಲ್ಲಿ 50 ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಒಂದು ಎಕರೆ ಕಬ್ಬು, ಮತ್ತೊಂದು ಎಕರೆಯಲ್ಲಿ ಮುಸುಕಿನ ಜೋಳ ಹಾಗೂ ಮುಕ್ಕಾಲು ಎಕರೆಯಲ್ಲಿ ಅರಿಸಿನ ಬೆಳೆದಿದ್ದಾರೆ.

ಕೃಷಿಗೆ ಕೊಳವೆಬಾವಿ ನೀರನ್ನೇ ಅವಲಂಬಿಸಿದ್ದಾರೆ. 540 ಅಡಿ ಆಳದಲ್ಲಿ ಅವರಿಗೆ ಎರಡೂವರೆ ನೀರು ಸಿಕ್ಕಿದೆ. ಎಲ್ಲ ಬೆಳೆಗಳಿಗೂ ಇದರಿಂದಲೇ ನೀರು ಹಾಯಿಸುತ್ತಾರೆ. 

‘ಹಿಂದೆ ಮಳೆಯಾಶ್ರಿತ ಪ್ರದೇಶವಾಗಿದ್ದ ಈ ಕೃಷಿಭೂಮಿಯಲ್ಲಿ ಹುರಳಿ, ಅಲಸಂದೆ, ರಾಗಿ ಬೆಳೆಯುತ್ತಿದ್ದೆವು. 10 ವರ್ಷಗಳ ಹಿಂದೆ ₹ 80 ಸಾವಿರ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದಾಗ ನೀರು ಸಿಕ್ಕಿತು. ಆ ನಂತರ ಕಬ್ಬು, ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದೇವೆ’ ಎಂದು ಶಿವಣ್ಣ ‘ಪ್ರಜಾವಾಣಿ’ಗೆ ಹೇಳಿದರು.

‘ಕಳೆದ ವರ್ಷ ₹ 30ರಿಂದ ₹ 50 ಸಾವಿರ ಖರ್ಚು ಮಾಡಿ 80 ಟನ್‌ ಕಬ್ಬು ಬೆಳೆದು ₹ 1.50 ಲಕ್ಷ ಬಂದಿತ್ತು. ಈ ಹಣಕ್ಕೆ ಸ್ವಲ್ಪ ಹಣ ಸೇರಿಸಿ 8 ತಿಂಗಳ ಹಿಂದೆ ಮತ್ತೆ 1 ಎಕರೆ ಕೃಷಿ ಭೂಮಿ ಖರೀದಿಸಿ ತರಕಾರಿ ಬೆಳೆ ಬೆಳೆಯುತ್ತಿದ್ದೇನೆ. ಕೂಲಿಕಾರರಿಂದ ಕೆಲಸ ಮಾಡಿಸುವುದು ಕಷ್ಟದ ಕೆಲಸ. ಹೀಗಾಗಿ, ಮಗ ನಾನು ಇಬ್ಬರೇ ಕೃಷಿ ಕೆಲಸ ನಿರ್ವಹಿಸುತ್ತೇವೆ. ವಾರ್ಷಿಕವಾಗಿ ₹ 60ರಿಂದ ₹ 80 ಸಾವಿರ ಆದಾಯ ಸಿಗುತ್ತಿದೆ’ ಎಂದರು.

‘ಕೃಷಿ ನಮ್ಮ ಕುಟುಂಬದ ಕಸುಬು. ನನ್ನ ಜೀವನವೂ ವ್ಯವಸಾಯದಿಂದಲೇ ಸಾಗುತ್ತಿದೆ. ಬೇರೊಬ್ಬರ ಬಳಿ ಕೆಲಸ ನಿರ್ವಹಿಸಿ ₹ 50 ಸಾವಿರ ಸಂಬಳ ತೆಗೆದುಕೊಳ್ಳಬಹುದು. ಕೆಲಸ ಮಾಡದಿದ್ದರೆ ಕೆಲಸದಿಂದ ತೆಗೆಯಬಹುದು. ಆದರೆ, ಕೃಷಿಯಲ್ಲಿ ನಿರತರಾದ ರೈತರಿಗೆ ಯಾರೊಬ್ಬರೂ ಕೆಲಸದಿಂದ ತೆಗೆಯುವುದಿಲ್ಲ. ಸ್ವಾಭಿಮಾನದಿಂದ ಬದುಕಬಹುದು’ ಎಂದು ಶಿವಣ್ಣ ಹೆಮ್ಮೆಪಡುತ್ತಾರೆ.

ಕೃಷಿ ಇಲಾಖೆ ಮಾಹಿತಿ ಕೊಡಬೇಕು

‘ಅಂಗವಿಕಲ ರೈತರಿಗೆ ಅನೇಕ ಸವಲತ್ತುಗಳು ಕೃಷಿ ಇಲಾಖೆಯಲ್ಲಿ ಇರುತ್ತವೆ. ಆಯಾ ವರ್ಷದಲ್ಲಿ ಸರ್ಕಾರದಿಂದ ಇಲಾಖೆಗೆ ಸಿಗುವಂತಹ ಅನುದಾನ ಹಾಗೂ ಯೋಜನೆಗಳನ್ನು ವಿಶೇಷವಾಗಿ ಅಂಗವಿಕಲ ರೈತರಿಗಾಗಿಯೇ ಇರುವಂತಹ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡುವ ಅಗತ್ಯವಿದೆ’ ಎಂದು ಮಹದೇವಸ್ವಾಮಿ ಹೇಳುತ್ತಾರೆ.

ಯಾರನ್ನೂ ಅವಲಂಬಿಸಬಾರದು: ‘ಸರ್ಕಾರ ಕೊಟ್ಟಷ್ಟು ಬೆಲೆ ಕೊಡಲಿ ಬಿಡಲಿ. ರಾಗಿ, ಜೋಳ, ತರಕಾರಿ ಸಮೃದ್ಧವಾಗಿ ಬೆಳೆದು ನಾವೇ ಮಾರಾಟ ಮಾಡಬಹುದು. ಒಂದೊಂದು ಸರ್ಕಾರ ಒಂದೊಂದು ಬೆಲೆ ನಿರ್ಧರಿಸುತ್ತವೆ. ನಂಬಿ ಕುಳಿತುಕೊಳ್ಳಬಾರದು. ನಮ್ಮ ಕಾಯಕವನ್ನು ನಾವು ಮುಂದುವರಿಸಬೇಕು’ ಎನ್ನುತ್ತಾರೆ ಶಿವಣ್ಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು