ಶನಿವಾರ, ಸೆಪ್ಟೆಂಬರ್ 26, 2020
26 °C
ರಾಜ್ಯದಲ್ಲಿ ಶೇ 33ರಷ್ಟು ಪ್ರಗತಿ: ವಿಜಯಪುರ ಪ್ರಥಮ, ಕೊಡಗು ಜಿಲ್ಲೆಗೆ ಕೊನೆಯ ಸ್ಥಾನ

ಬೆಳೆ ಸಮೀಕ್ಷೆಗೆ ಅನ್ನದಾತರ ನಿರಾಸಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ರಾಜ್ಯದಲ್ಲಿ ಶೇ 32.95ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದು, ನೂತನ ಯೋಜನೆಗೆ ಅನ್ನದಾತರಿಂದ ನಿರೀಕ್ಷಿತ ಮಟ್ಟದಲ್ಲಿ ಒಲವು ವ್ಯಕ್ತವಾಗಿಲ್ಲ.

ಕೃಷಿ ಇಲಾಖೆಯು 2020–21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿವರ ದಾಖಲಿಸಲು ‘ರೈತರ ಬೆಳೆ ಸಮೀಕ್ಷೆ ಆ್ಯಪ್‌’ ಅಭಿವೃದ್ಧಿಪಡಿಸಿತ್ತು. ಈ ತಂತ್ರಾಂಶದ ಮೂಲಕ ರೈತರೇ ತಮ್ಮ ಜಮೀನಿನಲ್ಲಿ ನಿಂತು ಬೆಳೆಯ ಫೋಟೊ ತೆಗೆದು, ವಿವರ ದಾಖಲಿಸಲು ಪ್ರಥಮ ಬಾರಿಗೆ ಅವಕಾಶ ನೀಡಲಾಗಿತ್ತು. ರಾಜ್ಯದ ಒಟ್ಟಾರೆ 2.12 ಕೋಟಿ ಪ್ಲಾಟ್‌ಗಳಲ್ಲಿ ಇದುವರೆಗೆ 69 ಲಕ್ಷ ಪ್ಲಾಟ್‌ಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ. ಇನ್ನು ಮೂರು ದಿನ ಮಾತ್ರ (ಸೆ.10ರ ಕಡೆಯ ದಿನ) ಕಾಲಾವಕಾಶವಿದೆ.

ಬೆಳೆ ಸಮೀಕ್ಷೆ ಕಾರ್ಯಕ್ಕೆ ಆ.10ರಂದು ಚಾಲನೆ ನೀಡಿ, ಆ.24ರೊಳಗೆ ರಾಜ್ಯದ ಎಲ್ಲ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಯ ವಿವರಗಳನ್ನು ದಾಖಲಿ ಸಲು ಕೃಷಿ ಇಲಾಖೆ ಅವಕಾಶ ನೀಡಿತ್ತು. ಸಮೀಕ್ಷೆ ಕಾರ್ಯ ಪೂರ್ಣಗೊಳ್ಳದ ಕಾರಣ ಮತ್ತೆ ಸೆ.10ರವರೆಗೆ ಅವಧಿ ವಿಸ್ತರಿಸಲಾಗಿತ್ತು. ಅಂಡ್ರಾಯ್ಡ್‌ ಫೋನ್‌ ಸೌಲಭ್ಯವಿಲ್ಲದವರಿಗೆ, ರೈತರ ಪರವಾಗಿ ಖಾಸಗಿ ನಿವಾಸಿಗಳ (ಪಿ.ಆರ್‌) ಮೂಲಕ ಅಪ್‌ಲೋಡ್‌ ಮಾಡಲೂ ಅವಕಾಶ ಕಲ್ಪಿಸಲಾಗಿತ್ತು. ಆದರೂ ಪ್ರಗತಿ ಸಾಧ್ಯವಾಗಿಲ್ಲ.

ವಿಜಯಪುರ ಪ್ರಥಮ: ವಿಜಯಪುರ (ಶೇ 58.32), ಬಾಗಲಕೋಟೆ (ಶೇ 56.12), ದಾವಣಗೆರೆ (ಶೇ 54.46) ಜಿಲ್ಲೆಗಳು ಹೆಚ್ಚು ಪ್ರಗತಿ ಸಾಧಿಸಿದ ಮೊದಲ ಮೂರು ಸ್ಥಾನದಲ್ಲಿವೆ. ಕೊಡಗು (ಶೇ 11.57), ಉಡುಪಿ (ಶೇ 14.32), ಬೆಂಗಳೂರು ನಗರ (ಶೇ 14.52) ಜಿಲ್ಲೆಗಳು ಕೊನೆಯ ಮೂರು ಸ್ಥಾನದಲ್ಲಿವೆ. ಹಾವೇರಿ ಜಿಲ್ಲೆಯಲ್ಲಿ ಶೇ 43.25ರಷ್ಟು ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.

ನೆಟ್‌ವರ್ಕ್‌ ಸಮಸ್ಯೆ:‘ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್‌ ಸಮಸ್ಯೆ ಗಂಭೀರವಾಗಿದೆ. ಎಲ್ಲ ರೈತರ ಬಳಿ ಅಂಡ್ರಾಯ್ಡ್‌ ಮೊಬೈಲ್‌ಗಳಿಲ್ಲ. ಕೆಲವು ರೈತರಿಗೆ ತಾಂತ್ರಿಕ ಜ್ಞಾನದ ಕೊರತೆ ಇದೆ. ಕೃಷಿ ಇಲಾಖೆಯು ರೈತರಿಗೆ ತರಬೇತಿಯನ್ನೇ ನೀಡಿಲ್ಲ. ಹೀಗಾಗಿ ಬೆಳೆ ಸಮೀಕ್ಷೆ ಕಾರ್ಯ ಕುಂಠಿತಗೊಂಡಿದೆ’ ಎಂದು ರೈತ ಮುಖಂಡ ರಾಮಣ್ಣ ಕೆಂಚೆಳ್ಳೇರ ದೂರಿದರು. 

***

ರೈತರಿಗೆ ತಾಂತ್ರಿಕ ತರಬೇತಿ ನೀಡಬೇಕು. ನಿಮ್ಮ ಬೆಳೆ– ನಿಮ್ಮ ಹಕ್ಕು ಎಂದು ಕೃಷಿ ಇಲಾಖೆ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಮಲ್ಲಿಕಾರ್ಜುನ ಬಳ್ಳಾರಿ

– ರೈತ ಮುಖಂಡ, ಹಾವೇರಿ

***

ಪ್ರಥಮ ಬಾರಿಗೆ ರೈತರೇ ಬೆಳೆ ಸಮೀಕ್ಷೆ ಮಾಡಿದ್ದು ಆಶಾದಾಯಕ ಬೆಳವಣಿಗೆ. ಸೆ.10ರ ನಂತರ ಬಾಕಿ ಕಾರ್ಯವನ್ನು ಪಿ.ಆರ್‌.ಗಳಿಂದ ಮಾಡಿಸುತ್ತೇವೆ

– ಮಂಜುನಾಥ ಕೃಷಿ ಜಂಟಿ ನಿರ್ದೇಶಕ, ಹಾವೇರಿ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು