ಗುರುವಾರ , ಮೇ 19, 2022
24 °C

ಪಾಲಿಹೌಸ್‌ ಇಲ್ಲದೆ ‘ಜರ್ಬೆರಾ’ ಕಂಪು

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಲಂಕಾರಕ್ಕೆ ಹೆಚ್ಚು ಬಳಕೆಯಾಗುವ ಜರ್ಬೆರಾ ಹೂಗಳನ್ನು ಪಾಲಿಹೌಸ್‌ ಇಲ್ಲದೆ, ತೆರೆದ ಬಯಲಿನಲ್ಲೇ ಬೆಳೆಯಬಹುದಾದ ವಿಧಾನವನ್ನು  ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಪರಿಚಯಿಸಿದೆ.

ಜರ್ಬೆರಾ ನಮ್ಮ ದೇಶದ ಹವಾಮಾನಕ್ಕೆ ಹೊಂದಿಕೊಳ್ಳದ ಬೆಳೆಯಲ್ಲ. ಈ ಕಾರಣಕ್ಕಾಗಿ ಪಾಲಿಹೌಸ್‌ಗಳನ್ನು ನಿರ್ಮಿಸಿ ವಿಶೇಷವಾಗಿ ಬೆಳೆಯಲಾಗುತ್ತಿತ್ತು. ಈವರೆಗೆ ದೇಶದಲ್ಲಿ ಹೈಬ್ರಿಡ್ ತಳಿಯ ಜರ್ಬೆರಾ ಬೆಳೆಯಲಾಗುತ್ತಿತ್ತು. ಈ ಸಂಸ್ಥೆಯು ಜರ್ಬೆರಾದ ದೇಶಿ ತಳಿಗಳನ್ನು ಹೊರತಂದಿದೆ.

‘ಜರ್ಬೆರಾ ಬೆಳೆಯಲು ಪಾಲಿಹೌಸ್‌ ನಿರ್ಮಾಣಕ್ಕೆ ಹೆಚ್ಚು ಖರ್ಚಾಗುತ್ತದೆ. ಗರಿಷ್ಠ ಎಂದರೆ ಒಂದು ಚ.ಮೀಟರ್‌ಗೆ ತಗುಲುವ ವೆಚ್ಚ ₹1,800. ಜೊತೆಗೆ ಹೂವಿನ ಗಿಡದ ಕಾಲಾವಧಿ ಮುಗಿದ ಮೇಲೆ ಹೊಸ ಗಿಡಕ್ಕೆ ಮತ್ತೆ ಬಂಡವಾಳ ಹಾಕಬೇಕು. ಬೆಲೆ ಇದ್ದರಷ್ಟೇ ಬೆಳೆಗಾರರಿಗೆ ಲಾಭ’ ಎಂದು ಐಐಎಚ್‌ಆರ್‌ನ ಹೂವು ಮತ್ತು ಔಷಧೀಯ ಸಸ್ಯಗಳ ವಿಭಾಗದ ಮುಖ್ಯಸ್ಥ ಡಾ.ಸಿ.ಅಶ್ವತ್ಥ್ ತಿಳಿಸಿದರು.

‘ದೇಶದಲ್ಲಿ 800 ಹೆಕ್ಟೇರ್‌ ಪ್ರದೇಶದಲ್ಲಿ ಜರ್ಬೆರಾ ಬೆಳೆಯಲಾಗುತ್ತಿದೆ. ಒಂದು ಹೆಕ್ಟೇರ್‌ಗೆ 66 ಸಾವಿರ ಗಿಡಗಳು ಬೇಕು. ಬಹುತೇಕ ಗಿಡಗಳು ನೆದರ್‌ಲೆಂಡ್‌ನಿಂದ ಬರುತ್ತವೆ. ಹಾಗಾಗಿ ಒಂದು ಗಿಡ ತರಿಸಿಕೊಳ್ಳಲು ಬೆಳೆಗಾರನಿಗೆ ₹40 ಖರ್ಚು ತಗುಲುತ್ತದೆ’ ಎಂದರು.

‘ರೈತರಿಗೆ ಹೆಚ್ಚು ಹೊರೆಯಾಗಿರುವ ಈ ಜರ್ಬೆರಾ ಬೆಳೆಯನ್ನು ಸರಳಗೊಳಿಸಬೇಕೆಂಬ ಉದ್ದೇಶದಿಂದ ದೇಶಿ ತಳಿಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಈ ತಳಿಯ ಹೂಗಳನ್ನು ಬೆಳೆಯಲು ರೈತರಿಗೆ ಈಗ ಪಾಲಿಹೌಸ್‌ ಅನಿವಾರ್ಯವೇ ಅಲ್ಲ. ಇದು ಕಡಿಮೆ ಭೂಮಿಯಲ್ಲಿ ಬೆಳೆದು ಹೆಚ್ಚು ಲಾಭ ಪಡೆಯಬಹುದಾದ ತಳಿ’  ಎಂದು ಮಾಹಿತಿ ನೀಡಿದರು.

‘ಆತ್ಮಿನಿರ್ಭರ ಭಾರತ’ದ ಧ್ಯೇಯದೊಂದಿಗೆ ಸ್ವದೇಶಿ ತಳಿಯನ್ನು ಅಭಿವೃದ್ಧಿಪಡಿಸಿದ್ದೇವೆ. ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಬರುವ ರೈತರಿಗೆ ಇದರ ಮಾಹಿತಿ ನೀಡಲೆಂದು ಸಂಸ್ಥೆಯ ಆವರಣದಲ್ಲಿ ಪ್ರಾತ್ಯಕ್ಷಿಕೆ  ಸಿದ್ಧಪಡಿಸಿದ್ದೇವೆ. ಇದರ ಬಗ್ಗೆ ರೈತರು ಸಂಪೂರ್ಣ ವಿವರ ಪಡೆದುಕೊಳ್ಳಬಹುದು’ ಎಂದರು.

ಗಿಡದಲ್ಲೇ ಸಸಿ ಲಭ್ಯ: ಹೈಬ್ರಿಡ್‌ ತಳಿಯ ಜರ್ಬೆರಾದ ಅವಧಿ ಮುಗಿದರೆ, ಹೊಸ ಸಸಿ ನೆಡಬೇಕು. ಆದರೆ, ದೇಶಿ ತಳಿಯು ಒಂದು ಸಸಿ ಗರಿಷ್ಠ 20 ಹೆಚ್ಚುವರಿ ಸಸಿಗಳನ್ನು ನೀಡುತ್ತದೆ. ಅವುಗಳನ್ನೇ ಮತ್ತೆ ನೆಟ್ಟು ಬೆಳೆಸಬಹುದು. ಹೊಸ ಸಸಿ
ಗಳಿಗಾಗಿ ಬೆಳೆಗಾರರು ಪದೇ ಪದೇ ಬಂಡವಾಳ ಹಾಕಬೇಕಿಲ್ಲ’ ಎಂದೂ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು