ಚೆಂಡು ಹೂವಿನಿಂದ ‘ಅಂದ’ವಾದ ಕೃಷಿ

ಗುರುವಾರ , ಜೂಲೈ 18, 2019
24 °C
ಪರ್ಯಾಯದತ್ತ ಮುಖ ಮಾಡಿದ ಬಿಎಸ್‌ಸಿ ವಿದ್ಯಾರ್ಥಿ

ಚೆಂಡು ಹೂವಿನಿಂದ ‘ಅಂದ’ವಾದ ಕೃಷಿ

Published:
Updated:
Prajavani

ಚಿಕ್ಕೋಡಿ: ನಗರೀಕರಣ, ಜಾಗತೀಕರಣದ ಪರಿಣಾಮವಾಗಿ ಕೃಷಿ ಸಂಸ್ಕೃತಿ ಅವಸಾನದತ್ತ ಸಾಗುತ್ತಿದೆ. ಯುವಜನರು ಶ್ರಮ ಸಂಸ್ಕೃತಿಯಿಂದ ವಿಮುಖರಾಗಿ, ನಗರಗಳತ್ತ ಮುಖ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಇಲ್ಲಿನ ಯುವಕನೊಬ್ಬ ಶಿಕ್ಷಣದೊಂದಿಗೆ ಆಧುನಿಕ ಕೃಷಿಯನ್ನೂ ಕೈಗೊಂಡು ಕುಟುಂಬವು ಆರ್ಥಿಕ ಸ್ವಾವಲಂಬನೆ ಸಾಧಿಸುವಲ್ಲಿ ನೆರವಾಗಿದ್ದಾರೆ.

ನಿಪ್ಪಾಣಿ ತಾಲ್ಲೂಕಿನ ಭೋಜ ಗ್ರಾಮದ ವರ್ಧಮಾನ ಪಾಟೀಲ ಈ ಕೃಷಿ ಸಾಧಕ. ಬಿಎಸ್‌ಸಿ ಶಿಕ್ಷಣ ಪಡೆಯುತ್ತಿರುವ ಅವರು, ತಂದೆ ಬೆಳೆಯುತ್ತಿದ್ದ ಸಾಂಪ್ರದಾಯಿಕ ಕಬ್ಬು ಬೆಳೆಗೆ ಪರ್ಯಾಯವಾಗಿ ಒಂದು ಎಕರೆ ಪ್ರದೇಶದಲ್ಲಿ ಚೆಂಡು ಹೂ ಬೆಳೆದು ನಾಲ್ಕು ತಿಂಗಳ ಅವಧಿಯಲ್ಲಿ ಖರ್ಚು ವೆಚ್ಚ ಕಳೆದು ₹ 1 ಲಕ್ಷ ಆದಾಯ ಗಳಿಸಿ, ಗಮನಸೆಳೆದಿದ್ದಾರೆ; ಮಾದರಿಯಾಗಿದ್ದಾರೆ.

ಅವರ ಕುಟುಂಬ ಹೊಂದಿರುವುದು ಎರಡೂವರೆ ಎಕರೆ ಜಮೀನು. ದೂಧ್‌ಗಂಗಾ ನದಿಯಿಂದ ನೀರಾವರಿ ಸೌಕರ್ಯ ಹೊಂದಿದೆ. ಈ ಭಾಗದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಕಬ್ಬು ಬೆಳೆಯುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪ, ನ್ಯಾಯಯುತ ಬೆಲೆ ದೊರೆಯದೆ ಇರುವುದು, ಕಟಾವು ಸಮಸ್ಯೆ ಮೊದಲಾದ ಸಮಸ್ಯೆಗಳಿಂದ ನಿರೀಕ್ಷಿತ ಆದಾಯ ಸಿಗುತ್ತಿರಲಿಲ್ಲ. ಕಬ್ಬು ಬೆಳೆಗೆ ಪರ್ಯಾಯವಾಗಿ ಬೇರೊಂದು ಬೆಳೆ ಬೆಳೆದು ಅಲ್ಪ ಅವಧಿಯಲ್ಲಿ ಅಧಿಕ ಲಾಭ ಗಳಿಸುವ ಉದ್ದೇಶದೊಂದಿಗೆ ತಂದೆ ರಾಜಗೌಡ ಪಾಟೀಲ, ತಾಯಿ ಶೋಭಾ, ಗೆಳೆಯರೊಂದಿಗೆ ಮಾರ್ಗದರ್ಶನದಲ್ಲಿ ಅವರು, ಒಂದು ಎಕರೆಯಲ್ಲಿ ಕೋಲ್ಕತ್ತಾ ಭಗವಾ ಗೋಲ್ಡ್‌ ತಳಿಯ ಚೆಂಡು ಹೂ ಬೆಳೆದು ಲಾಭದತ್ತ ಮುನ್ನಡೆದಿದ್ದಾರೆ.

‘ಬಿಎಸ್‌ಸಿ ಶಿಕ್ಷಣ ಪಡೆಯುತ್ತಿರುವ ನಾನು, ಚೆಂಡು ಹೂವು ಬೆಳೆಯುವ ಸಂಕಲ್ಪ ಮಾಡಿದೆ. ಮೊದಲಿಗೆ ಭೂಮಿಯನ್ನು ನೇಗಿಲಿನಿಂದ ಉಳುಮೆ ಮಾಡಿ, ನಾಲ್ಕು ಅಡಿಗಳ ಅಂತರದಲ್ಲಿ ಸಾಲು ಮಾಡಿಸಿದೆ. ಸಾಲಿನ ಉಬ್ಬಿನಲ್ಲಿ ಎರಡು ಅಡಿ ಅಂತರದಲ್ಲಿ ಫೆ. 27ರಂದು ಚೆಂಡು ಹೂವು ಸಸಿಗಳನ್ನು ನೆಡಲಾಯಿತು. ನಾಟಿ ನಂತರ 24;24;0 ರಸಗೊಬ್ಬರ ನೀಡಿದೆವು. ಬೆಳೆ ಬೆಳವಣಿಗೆ ರೋಗನಿವಾರಕ ಔಷಧಿಗಳ ಸಿಂಪಡಿಸಿದೆವು. ಪ್ರತಿ ವಾರಕ್ಕೊಮ್ಮೆ ನೀರುಣಿಸಲಾಗುತ್ತಿತ್ತು. 45 ದಿನಗಳ ನಂತರ ಹೂವು ಬಿಡಲಾರಂಭಿಸಿದವು’ ಎಂದು ವರ್ಧಮಾನ ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.

‘2 ದಿನಗಳಿಗೊಮ್ಮೆ ಹೂ ಕಟಾವು ಮಾಡಿ ಮುಂಬೈ ಮಾರುಕಟ್ಟೆಗೆ ಕಳುಹಿಸಿದ್ದೇನೆ. ಇದುವರೆಗೆ 8 ಟನ್ ಇಳುವರಿ ಬಂದಿದೆ. ಖರ್ಚು ವೆಚ್ಚ ಕಳೆದು 4 ತಿಂಗಳಿನಲ್ಲಿ ಲಕ್ಷ ರೂಪಾಯಿ ಆದಾಯ ಬಂದಿದೆ’ ಎಂದು ತಿಳಿಸಿದರು.

‘ಕಬ್ಬು ಒಂದು ವರ್ಷದ ಬೆಳೆಯಾಗಿದ್ದು, ಪ್ರಕೃತಿ ವಿಕೋಪ, ಅವೈಜ್ಞಾನಿಕ ಬೆಲೆ ಮೊದಲಾದ ಕಾರಣಗಳಿಂದಾಗಿ ಕಬ್ಬು ಬೆಳೆ ನಿರೀಕ್ಷಿತ ಆದಾಯ ತಂದು ಕೊಡುತ್ತಿಲ್ಲ. ಇದರಿಂದಾಗಿ ಪರ್ಯಾಯ ಬೆಳೆ ಬೆಳೆಯುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಬೆಳೆದಿರುವ ಚೆಂಡು ಹೂವು ಕೃಷಿ ಕೊಂಚ ಕಷ್ಟಕರವಾದರೂ ಲಾಭದಾಯಕ ಎನಿಸಿದೆ’ ಎಂದು ಮಾಹಿತಿ ನೀಡಿದರು. ಸಂಪರ್ಕಕ್ಕೆ ಮೊ:8050959090.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !